ಫೆ.13ರಿಂದ 17ರವರೆಗೆ ಬೆಂಗಳೂರಿನಲ್ಲಿ ಕಣ್ತುಂಬಿಕೊಳ್ಳಬಹುದು ಲೋಹದ ಹಕ್ಕಿಗಳ ಹಾರಾಟ

ಬೆಂಗಳೂರು: ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಐದು ದಿನಗಳ ಕಾಲ ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಗದಿಯಂತೆ ಫೆಬ್ರವರಿ 13 ರಿಂದ 17ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ 110 ವಿದೇಶಿ ಸೇರಿದಂತೆ 809 ಪ್ರದರ್ಶಕರು ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ದೇಶೀಯ ವಿಮಾನಯಾನ ಕ್ಷೇತ್ರ ಒಳಗೊಂಡು ಏಷ್ಯಾ ಖಂಡದಲ್ಲೇ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಕಾರ್ಯಕ್ರಮದ 14ನೇ ಆವೃತ್ತಿ ಲೋಹದ ಹಕ್ಕಿಗಳ ಹಾರಾಟದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ 9.30 ಕ್ಕೆ ಉದ್ಘಾಟಿಸಲಿದ್ದಾರೆ ಇಂದು ಸಂಜೆ ಪ್ರಧಾನಿ ನಗರಕ್ಕೆ ಆಗಮಿಸುತ್ತಿದ್ದಾರೆ.

ಜಾಗತಿಕ ವಾಯುಯಾನ ಉದ್ಯಮದಲ್ಲಿ ಒಂದು ಪ್ರಮುಖ ಪ್ರದರ್ಶನ ಇದಾಗಿದ್ದು, ಸುಮಾರು 35,000 ಚದರ ಮೀಟರ್ ಪ್ರದೇಶದಲ್ಲಿ ನಡೆಯುತ್ತದೆ, ಉದ್ಯಮಕ್ಕೆ ಅದರ ಸಾಮರ್ಥ್ಯಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.

ಇದನ್ನು ಓದಿ: 83 ತೇಜಸ್ ಯುದ್ಧ ವಿಮಾನ ಖರೀದಿ : HAL ಜೊತೆ ಒಪ್ಪಂದ

ಯುದ್ದ ವಿಮಾನ, ಪ್ರಯಾಣಿಕರ ವಿಮಾನ, ಹೆಲಿಕಾಪ್ಟರ್‌ ಗಳು, ಮಾನವರಹಿತ ಗುಪ್ತಚರ ವಿಮಾನ, ರೆಡಾರ್‌ ಗಳು ಮತ್ತು ಏರೋ ಸ್ಪೇಸ್ ಮತ್ತು ರಕ್ಷಣಾ ಕಂಪನಿಗಳ ಆಧುನೀಕ ಉಪಕರಣಗಳ ದೊಡ್ಡ ಪ್ರದರ್ಶನ ಮತ್ತು ವ್ಯಾಪಾರ ಮೇಳ ನಡೆಯಲಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್ ) ಸುಧಾರಿತ ಲೈಟ್ ಹೆಲಿಕಾಪ್ಟರ್, ಪ್ರಚಂಡ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ ನ ರೂಪಾಂತರಗಳನ್ನು ಒಳಗೊಂಡಿರುವ 15 ಹೆಲಿಕಾಪ್ಟರ್‌ಗಳು ಪ್ರದರ್ಶಿಸಲಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸೆ ಅಭಿವೃದ್ಧಿಪಡಿಸಿದ ಗುಪ್ತಚರ, ಕಣ್ಗಾವಲು, ಮತ್ತು ವಿಚಕ್ಷಣ ಅಗತ್ಯತೆ ಪೂರೈಸುವ ತಪಾಸ್ ಹೆಸರಿನ ಮಾನವ ರಹಿತ ವೈಮಾನಿಕ ವಾಹಕ ಹಾರಾಟ ನಡೆಸಲಿದೆ. ಇದು 28000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಗರಿಷ್ಠ 350 ಕೆಜಿ ವರೆಗೆ ವಿವಿಧ ಭಾರದ ವಸ್ತುಗಳನ್ನು ಸಹ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಡಿಆರ್‌ಡಿಒ ಪೆವಿಲಿಯನ್‍ನಲ್ಲಿ ಯುದ್ಧ ವಿಮಾನ ಮತ್ತು ಯುಎವಿಗಳು, ಕ್ಷಿಪಣಿಗಳು ಮತ್ತು ಕಾರ್ಯತಂತ್ರದ ವ್ಯವಸ್ಥೆಗಳು, ವಾಯುಗಾಮಿ ಕಣ್ಗಾವಲು ವ್ಯವಸ್ಥೆ ಮತ್ತು ಸೆನ್ಸರ್‌ ಗಳು ಎಲೆಕ್ಟ್ರಾನಿಕ್ ವಾರ್‍ಫೇರ್ ಮತ್ತು ಸಂವಹನ ವ್ಯವಸ್ಥೆಗಳು ಸೇರಿದಂತೆ 12 ವಲಯಗಳಾಗಿ ವರ್ಗೀಕರಿಸಲಾದ 330 ಉತ್ಪನ್ನಗಳನ್ನು ಪ್ರದರ್ಶನಕ್ಕೆ ಸಜ್ಜುಗೊಂಡಿವೆ.

ಇದನ್ನು ಓದಿ: ಯುದ್ಧನೌಕೆಗೆ ಮಹಿಳೆಯರ ನಿಯೋಜನೆ: ನೌಕಾಪಡೆಯಿಂದ ಐತಿಹಾಸಿಕ ಕ್ರಮ

ರಕ್ಷಣಾ ಸಚಿವಾಲಯವು ಫೆಬ್ರವರಿ 13 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಂಪನಿಗಳ ಸಿಇಒಗಳೊಂದಿಗೆ ಸಭೆಯನ್ನು ನಡೆಸಲಿದ್ದಾರೆ. ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್‌ ವೇದಿಕೆಯಾಗಿ ರೂಪಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಲೋಹದ ಹಕ್ಕಿಗಳ ಹಾರಾಟದ ವೀಕ್ಷಣೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕ್ರಮ ನಡೆಯಲಿರುವ ಯಲಹಂಕ ವಾಯುನೆಲೆಗೆ ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸಲಿರುವ ಹಿನ್ನೆಲೆಯಲ್ಲಿ 10 ಹೆಚ್ಚುವರಿ ಬಸ್ ಬಿಡಲು ಬಿಎಂಟಿಸಿ ಮುಂದಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *