ದಕ್ಷಿಣ ಕನ್ನಡ: ರಾಷ್ಟ್ರಧ್ವಜ ಹಾರಿಸುವ ಅಶೋಕ ಸ್ಥಂಭದಲ್ಲಿ ಆರೆಸ್ಸೆಸ್‌ನ ಕೇಸರಿ ಬಾವುಟ ಹಾರಿಸಿದ ಘಟನೆ ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಈ ಕೃತ್ಯ ನಡೆಸಿ ದಿನಗಳಾದರೂ ಕಾಲೇಜು ಆಡಳಿತ ಮಂಡಳಿ ಈವರೆಗೂ ಯಾವುದೆ ಪೊಲೀಸ್ ದೂರು ದಾಖಲಿಸದೆ ಕೃತ್ಯಕ್ಕೆ ಸಹಮತ ವ್ಯಕ್ತಪಡಿಸಿದೆಯೆ ಎಂಬ ಅನುಮಾನವನ್ನು ನಾಗರಿಕ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ವ್ಯಕ್ತಪಡಿಸಿವೆ.
ಬಾಬರಿ ಮಸೀದಿ ಒಡೆದು ಕಟ್ಟಲಾಗಿರುವ ರಾಮ ಮಂದಿರ ಕಟ್ಟಡದ ಉದ್ಘಾಟನೆಯ ದಿನವಾದ ಜನವರಿ 22ರ ಸೋಮವಾರದಂದು ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕಿಡಿಗೇಡಿಗಳು ಕಾಲೇಜಿನ ಆವರಣದಲ್ಲಿ ಅಶೋಕ ಸ್ತಂಭದಲ್ಲಿ ಆರೆಸ್ಸೆಸ್ ಧ್ವಜ ಹಾರಿಸಿದ್ದಾರೆ. ಈ ಕೃತ್ಯದ ಚಿತ್ರ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಪುಣೆ | ‘ಜೈ ಶ್ರೀ ರಾಮ್’ ಕೂಗುತ್ತಾ ಎಫ್‌ಟಿಐಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಹಿಂದುತ್ವದ ಗುಂಪು
ಘಟನೆಗೆ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಗೆ ಶ್ರೀನಿವಾಸ್ ಕಾಲೇಜಿನ ಆಡಳಿತ ಮಂಡಳಿ ಕೂಡಾ ಪ್ರೇರಣೆ ನೀಡಿದೆ ಎಂದು ಆರೋಪಿಸಿದ್ದಾರೆ. “ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಸಹಬಾಳ್ವೆಯ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಕಾಲೇಜಿನಲ್ಲಿ ಧರ್ಮಾಂಧತೆ, ಮತೀಯತೆಗೆ ಬೆಂಬಲ ಕೊಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ತೀವ್ರ ಕಣ್ಗಾವಳು ಇಡಬೇಕು” ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು, “ರಾಷ್ಟ್ರ ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಆದರೆ ಅದೇ ರಾಷ್ಟ್ರ ಲಾಂಛನವಿರುವ ಧ್ವಜ ಸ್ಥಂಭದಲ್ಲಿ ಕೇಸರಿ ಬಾವುಟ ಹಾರಿಸಿರುವುದು ದೇಶ ವಿರೋಧಿ ಕೃತ್ಯವಾಗಿರುತ್ತದೆ. ಆದ್ದರಿಂದ ರಾಷ್ಟ್ರ ಧ್ವಜ ಹಾರಿಸಲು ಸೀಮಿತವಾಗಿರುವ ರಾಷ್ಟ್ರ ಲಾಂಛನವಿರುವ ಧ್ವಜ ಸ್ತಂಭ ರಲ್ಲಿ ಕೇಸರಿ ಧ್ವಜ ಹಾರಿಸಿ ದೇಶ ವಿರೋಧಿ ಕೃತ್ಯ ಎಸಗಲು ಕಿಡಿಗೇಡಿಗಳಿಗೆ ಪ್ರೇರಣೆ ನೀಡಿದ ಶ್ರೀನಿವಾಸ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಘಟನೆ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಕಾಲೇಜಿನ ರಿಜಿಸ್ಟ್ರಾರ್, “ಈ ಘಟನೆಯ ವಿವರ ಸರಿಯಾಗಿ ತಿಳಿದಿಲ್ಲ. ಅದರ ಬಗ್ಗೆ ವಿವರ ನೀಡಲು ಕೇಳಿದ್ದೇವೆ. ವಿದ್ಯಾರ್ಥಿಗಳ ನಡುವೆ ಗೊಂದಲು ಉಂಟಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: #ಮಂಗಳೂರು – ರಾಷ್ಟ್ರ ಧ್ವಜ ಹಾರಿಸುವ ಅಶೋಕ ಸ್ಥಂಬದಲ್ಲಿ #ಆರೆಸ್ಸೆಸ್ ಬಾವುಟ ಹಾರಿಸಿದ ಕಿಡಿಗೇಡಿಗಳು