ಸಿಂದಗಿ: ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನನ್ನ ಕಣ್ಣಾರೆ ಜನರ ಅಭೂತಪೂರ್ವ ಬೆಂಬಲ ನೋಡಿದೆ. ನಾನು ನನ್ನ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ಇದ್ದುದ್ದಕ್ಕಿಂತ ಹೆಚ್ಚಿನ ಪ್ರೋತ್ಸಾಹವನ್ನು ಇಲ್ಲಿನ ಜನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಣದಲ್ಲಿದ್ದ ಅನೇಕ ಅಭ್ಯರ್ಥಿಗಳು ಅಶೋಕ್ ಮನಗೂಳಿ ಅವರೇ ತಮ್ಮ ತಂದೆ ಸ್ಥಾನವನ್ನು ತುಂಬಬೇಕು ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿರುವ ಕಾಂಗ್ರೆಸ್ ಪಕ್ಷದ ಸಮೂಹ ಅಶೋಕ್ ಮನಗೂಳಿ ಅವರ ಹಿಂದೆ ನಿಂತಿದೆ. ಮನಗೂಳಿ ಅವರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಸಿಂದಗಿ ಕ್ಷೇತ್ರದ ಜನರ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಜನ ಬಿಜೆಪಿ ಆಡಳಿತ ನೋಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಶಾಸಕರ ಆಡಳಿತದ ಅವಶ್ಯಕತೆ ಇದೆ ಎಂದು ಜನ ಭಾವಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಕಾಂಗ್ರೆಸ್ ಅಧ್ಯಕ್ಷೆಯಾಗಿ ಪೂರ್ಣವಧಿವರೆಗೆ ಪೂರೈಸಲು ಸೋನಿಯಾ ಗಾಂಧಿ ಇಚ್ಛೆ
ಸಿಂದಗಿ ರೀತಿಯಲ್ಲೇ ಹಾನಗಲ್ ಕ್ಷೇತ್ರದಲ್ಲಿಯೂ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಅಲ್ಲಿ ಬಿಜೆಪಿಯಲ್ಲಿನ ಗೊಂದಲವನ್ನು ಎಲ್ಲರೂ ನೋಡಿದ್ದಾರೆ. ಎರಡೂ ಕ್ಷೇತ್ರದಲ್ಲೂ ನಾವು ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದು, ಶುಭವಾರ್ತೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ನಮ್ಮದು ನೀತಿ ಮೇಲೆ ರಾಜಕಾರಣ:
ಸಿಂದಗಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ಮಾಡುತ್ತೇವೆ. ಅಲ್ಪಸಂಖ್ಯಾತರು ಪ್ರಜ್ಞಾವಂತ ಮತದಾರರು. ಯಾರಿಗೆ ಮತ ಹಾಕಿದರೆ ಅನುಕೂಲ ಎಂಬುದು ಅವರಿಗೆ ಗೊತ್ತಿದೆ. ಕೇವಲ ಒಂದು ವರ್ಗ ಎಂಬುದಿಲ್ಲ. ಎದುರಾಳಿ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತವೆ. ಅದಕ್ಕೆ ಮತದಾರ ತಕ್ಕ ಹಾಗೂ ಸೂಕ್ಷ್ಮ ಉತ್ತರ ನೀಡುತ್ತಾನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತರಿಗೆ ಮನ್ನಣೆ ಇಲ್ಲ ಎಂಬ ಸಿಎಂ ಇಬ್ರಾಹಿಂ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ, ಅವರ ಮಾತುಗಳನ್ನು ನಾನು ನೋಡಿಲ್ಲ, ಕೇಳಿಲ್ಲ. ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಮನಗೂಳಿ ಅವರನ್ನು ಭೇಟಿಯಾಗಿದ್ದಕ್ಕೆ ಅವರ ಪುತ್ರನೇ ಸಾಕ್ಷಿ:
ಮನಗೂಳಿ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ಸುಳ್ಳು ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಮನಗೂಳಿ ಅವರು ಇಂದು ನಮ್ಮ ಜತೆ ಇಲ್ಲ. ಅವರು ಬಂದು ನಮ್ಮ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಹೇಳಿದ್ದು ನಿಜ. ಅದಕ್ಕೆ ಅವರ ಪುತ್ರ ಅಶೋಕ್ ಮನಗುಳಿ ಅವರೇ ಸಾಕ್ಷಿ. 15 ದಿನ ಮೊದಲು ಭೇಟಿ ಮಾಡಿದ್ದರು ಎಂದರೆ ಮೀಟರ್ ಹಾಕಿ, ಲೆಕ್ಕ ಮಾಡಿ ಹೇಳಲು ಆಗುತ್ತಾ? ಅವರು ಬಂದಿದ್ದು ನಿಜ. ಮಗನ ಬಗ್ಗೆ ಹೇಳಿದ್ದೂ ನಿಜ. ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ’ ಎಂದರು.
ಇದನ್ನು ಓದಿ: ಉಪಚುನಾವಣೆ: ಹಾನಗಲ್-ಸಿಂಧಗಿ ಕ್ಷೇತ್ರಗಳಿಗೆ ಅ.30ರಂದು ಮತದಾನ
ಸಿಂದಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಸಿಂದಗಿ ಹಾಗೂ ಅಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಚಿವ ಎಂ.ಬಿ. ಪಾಟೀಲ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಆನಂದ ನ್ಯಾಮಗೌಡ, ಅಜಯ್ ಸಿಂಗ್, ಶರಣಬಸಪ್ಪ ದರ್ಶನಾಪುರ್, ಮಾಜಿ ಶಾಸಕ ಶರಣಪ್ಪ ಸುಣ್ಣಗಾರ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಪ್ರಕಾಶ್ ರಾಥೋಡ್, ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ವಿಜಯಪುರ ಜಿಲ್ಲಾಧ್ಯಕ್ಷ ರಾಜು ಅಲಗೂರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ಕೋಳೂರು, ಅಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.