ನವದೆಹಲಿ: ಸಂಸತ್ತಿನ ಅಧಿವೇಶನ ಆರಂಭ ದಿನವಾದ ಇಂದು ರಾಜ್ಯಸಭೆಯಲ್ಲಿ ಅಧಿವೇಶನದಲ್ಲಿ ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ನಡೆದ ತೀವ್ರ ಗದ್ದಲಕ್ಕಾಗಿ ವಿರೋಧ ಪಕ್ಷಗಳ 12 ಮಂದಿ ಸಂಸದರನ್ನು ಅಮಾನತು ಮಾಡಲಾಗಿದೆ.
ರಾಜ್ಯಸಭೆಯಲ್ಲಿ ಸರ್ಕಾರವು ನಿರ್ಣಯದ ಮೂಲಕ ಅಮಾನತ್ತುಗೊಳಿಸುವ ನಿರ್ಧಾರಕ್ಕೆ ಮುಂದಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಿರ್ಣಯ ಮಂಡಿಸಿದ್ದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದರೂ ಸಹ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಸದಸ್ಯರು ಅಮಾನತುಗೊಂಡಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಸಂಸದರು ಗದ್ದಲವನ್ನು ನಟೆಸಿದ್ದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ 6, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು, ಮತ್ತು ಸಿಪಿಐ ಮತ್ತು ಸಿಪಿಐ(ಎಂ) ಪಕ್ಷದ ತಲಾ ಒಬ್ಬರು ಸಂಸದರ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ.
ಫುಲೋ ದೇವಿ ನೇತಮ್, ಛಾಯಾ ವರ್ಮಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ರಿಪುನ್ ಬೋರಾ (ಕಾಂಗ್ರೆಸ್), ಬಿನೋಯ್ ವಿಸ್ವಾಮ್ (ಸಿಪಿಐ), ಎಲಮರಮ್ ಕರೀಮ್ (ಸಿಪಿಐ(ಎಂ)), ಡೋಲಾ ಸೇನ್, ಶಾಂತಾ ಛೆಟ್ರಿ (ಟಿಎಂಸಿ), ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ (ಶಿವಸೇನಾ) ಅಮಾನತ್ತುಗೊಂಡ ಸದಸ್ಯರು.
ಮುಂಗಾರು ಅಧಿವೇಶನದ ಕೊನೆಯ ದಿನ ವಿವಿಧ ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಸಭಾಂಗಣದ ಒಳಗೆ ಮಾರ್ಷಲ್‌ಗಳನ್ನು ಕರೆಸಿ ಎಳೆದಾಡುವ ದೃಶ್ಯಗಳು ಕಂಡುಬಂದವು. ರಾಜ್ಯಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 256 ರ ಅಡಿಯಲ್ಲಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭಾ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ನವೆಂಬರ್ 30ಕ್ಕೆ ಮುಂದೂಡಿದರು.
ನಿರ್ಣಯದ ಸೂಚನೆ ಹೀಗಿವೆ:
“ಸಭಾಪತಿಯ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು, ಸದನದ ನಿಯಮಗಳ ಸಂಪೂರ್ಣ ದುರುಪಯೋಗವನ್ನು ಈ ಸದನವು ಗಮನಕ್ಕೆ ತೆಗೆದುಕೊಳ್ಳುತ್ತದೆ ಮತ್ತು ಬಲವಾಗಿ ಖಂಡಿಸುತ್ತದೆ. ಈ ಮೂಲಕ ತಮ್ಮ ದುಷ್ಕೃತ್ಯಗಳ ಮೂಲಕ ಸದನದ ವ್ಯವಹಾರಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತದೆ. ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ಮತ್ತು ಆಗಸ್ಟ್ ತಿಂಗಳಲ್ಲಿ 254ನೇ ಅಧಿವೇಶನದ ಕೊನೆಯ ದಿನದಂದು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿಗಳು ಸದನಕಕ್ಕೆ ಅಪಖ್ಯಾತಿ ತಂದಿದ್ದು ಘನತೆಯನ್ನು ಕಡಿಮೆ ಮಾಡಿವೆʼʼ ಎಂದು ನಿರ್ಣಯದಲ್ಲಿ ಜೋಶಿ ಹೇಳಿದ್ದಾರೆ.
“ಆಗಸ್ಟ್ 11 ರಂದು ಸದನದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಉದ್ಧೇಶಪೂರ್ವಕವಾಗಿ ದಾಳಿ ಮಾಡಲಾಗಿದೆ. ಕುರ್ಚಿಗಳನ್ನು ಎಳೆದಾಡಲಾಗಿದೆ. ಸದನದ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಸದನದ ನಿಯಮಗಳ ಸಂಪೂರ್ಣ ದುರುಪಯೋಗವನ್ನು ತೀವ್ರವಾಗಿ ಖಂಡಿಸಲಾಗುವುದು” ಎಂದು ಉಲ್ಲೇಖ ಮಾಡಲಾಗಿದೆ.