ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂಬ ಸರ್ಕಾರದ ಭರವಸೆಯಿಂದಾಗಿ ಗುರುವಾರ ಅಂತ್ಯವಾಯಿತು.ಚಿತ್ರದುರ್ಗ
ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಮಾಸಿಕ ಗೌರವಧನವನ್ನು ₹10,000 ನಿಗದಿಗೊಳಿಸಬೇಕು. ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂಬ ಬೇಡಿಕೆಗಳಿಗಾಗಿ ಪಟ್ಟು ಹಿಡಿದಿದ್ದರು. ನಗರದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಇದನ್ನೂ ಓದಿ: 2.67 ಲಕ್ಷ ಮೆ.ಟನ್ ಯುರಿಯಾ ಪೂರೈಸುವಂತೆ ಕೇಂದ್ರ ಕೃಷಿ ಸಚಿವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ
ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಅತ್ಯಂತ ನ್ಯಾಯಯುತವಾಗಿವೆ. ಆದ್ದರಿಂದ ಇವರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎಲ್ಲ ಮುಖಂಡರು ಒತ್ತಾಯಿಸಿದರು.
‘ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಸರ್ಕಾರದಿಂದ ಸ್ಪಷ್ಟ ಭರವಸೆ ಸಿಕ್ಕಿದೆ. ಇದು ನಮ್ಮೆಲ್ಲರ ಹೋರಾಟಕ್ಕೆ ಸಂದ ಜಯವಾಗಿದೆ. ಆದ್ದರಿಂದ ಈ ನಮ್ಮ ಅಹೋರಾತ್ರಿ ಧರಣಿಯನ್ನು ಇಂದಿಗೆ ಕೊನೆಗೊಳಿಸುತ್ತಿದ್ದೇವೆ. ಆದರೆ ನಮ್ಮ ಇನ್ನುಳಿದ ಬೇಡಿಕೆ ಈಡೇರಿಕೆಗಾಗಿ ನಾವು ಮುಂದಿನ ಹಂತದ ಹೋರಾಟವನ್ನು ರೂಪಿಸಲಿದ್ದೇವೆ. ನಮ್ಮ ಎಲ್ಲಾ ಹಕ್ಕೊತ್ತಾಯಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್ ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ಮುಖಂಡರಾದ ಕುಮುದಾ, ಮಂಜುಳಮ್ಮ, ಲಕ್ಷ್ಮೀಬಾಯಿ, ಗುರುಶಾಂತ, ನಾಗವೇಣಿ, ಪಾರ್ವತಮ್ಮ, ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ, ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್ ಬಾಬು ಇದ್ದರು.
ಇದನ್ನೂ ನೋಡಿ: ಪಪ್ಪೆಟ್ ಜಾನು ಈಗ ಕಾಲೇಜ್ ಹುಡುಗಿ (ಲಿಂಗತ್ವ ಅಲ್ಪಸಂಖ್ಯಾತ) Janashakthi Media
