ಗಜೇಂದ್ರಗಡ: ದುಡಿಮೆಗೋಸ್ಕರ ಸಾವಿರಾರು ಕಿ.ಮಿ ಗುಳೆ ಹೊಗುವ ಕಾರ್ಮಿಕರಿಗೆ ಭದ್ರತೆ ಹಾಗೂ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ. ಅವೈಜ್ಞಾನಿಕ ಲಾಕ್ಡನ್ ನಿಂದಾಗಿ ಕಾರ್ಮಿಕರ ಬದುಕು ಅತಂತ್ರ ಪರಿಸ್ಥಿತಿಯಲ್ಲಿ ಬೀಳುವಂತಾಯಿತು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.
ನಗರದ ಸೇವಲಾಲ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಮಿಕರ ೨ ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಲಾಕ್ಡೌನಲ್ಲಿ ಅದೇಷ್ಟೋ ಕಾರ್ಮಿಕರು ಬೀದಿಯಲ್ಲಿ ಸತ್ತಿದ್ದಾರೆ. ಹೊಟ್ಟೆ ಬಟ್ಟೆಗಾಗಿ, ಗುಳೆ ಹೋಗುವ ನಾವು ನಮ್ಮ ಬದುಕನ್ನು ರಕ್ಷಣೆ ಮಾಡಿಕೊಳ್ಳಲು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸದೇ ಧೀಡರನೇ ಲಾಕ್ಡನ್ ಘೋಷಣೆ ಮಾಡಿ ಸರ್ಕಾರ ತನ್ನ ಕರ್ತವ್ಯದಿಂದ ನುಣಿಚಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರೆಲ್ಲರೂ ಕಲ್ಯಾಣ ಮಂಡಳಿಯಯಲ್ಲಿ ನೋಂದಣಿ ಮಾಡಿಸಿಕೊಂಡು ಸೌಲಭ್ಯ ಪಡೆಯಬೇಕು. ಸರ್ಕಾರ ವಲಸೆ ಹೋಗುವುದನ್ನು ತಡೆಗಟ್ಟಿ ಸ್ಥಳೀಯ ಮಟ್ಟದಲ್ಲಿಯೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಕಾರ್ಮಿಕರ ಹಿತ ಕಾಯಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಪೀರು ರಾಠೋಡ ಮಾತನಾಡಿ ಕಲ್ಯಾಣ ಮಂಡಳಿಯಲ್ಲಿ ೧೯ಕ್ಕೂ ಹೆಚ್ಚು ಸೌಲಭ್ಯಗಳಿದ್ದು ಕಾರ್ಮಿಕರಿಗೆ ಕೇವಲ ಬೆರಳಿಕೆಯಷ್ಟು ಸೌಲಭ್ಯ ಸಿಗುತ್ತಿವೆ. ಲಾಕ್ಡನ್ ಸಮಯದಲ್ಲಿ ಕಾರ್ಮಿಕರು ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದ, ಕೋವಿಡ್ ಪರಿಹಾರ ತಲುಪಿಸುವಲ್ಲಿ ಮಂಡಳಿ ವಿಫಲವಾಗಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಕೃಷಿ ಕೂಲಿಕಾರ ಸಂಘದ ಅಧ್ಯಕ್ಷ ಬಾಲು ರಾಠೋಡ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
ಸಮ್ಮೇಳನದ ಅಂಗವಾಗಿ ಕಾರ್ಮಿಕರು ತಹಶಿಲ್ದಾರರ ಕಚೇರಿಯಿಂದ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.
ಈ ವೇಳೆ 25 ಕಾರ್ಮಿಕರ ನ್ನೊಳಗೊಂಡ ನೂತನ ಸಮಿತಿ ರಚನೆಗೊಂಡಿತು. ಅಧ್ಯಕ್ಷರಾಗಿ ಅಂದಪ್ಪ ಕುರಿ, ಕಾರ್ಯದರ್ಶಿಯಾಗಿ ಪೀರು ರಾಠೋಡ, ಖಜಾಂಚಿಯಾಗಿ ಮೆಹಬೂಬ್ ಹವಾಲ್ದಾರ ಆಯ್ಕೆಗೊಂಡರು.
ಪರಶುರಾಮ ಲಮಾಣಿ, ಬಸಮ್ಮ ನೆಲ್ಲೂರು, ಯಮನೂರ ವಡ್ಡರ, ದೇವಲಪ್ಪ ರಾಠೋಡ, ಮೆಹಬೂಬಸಾಬ ಹವಾಲ್ದಾರ್, ಲಕ್ಷ್ಮಣ ರಾಠೋಡ, ಶೇಕಪ್ಪ ಬೆನಹಾಳ, ಚಂದ್ರ ಡೊಳ್ಳಿನ, ವಿರಪ್ಪ ಭೂಸನೂರ, ಮಂಗಳೇಶ ಹಾಳಕೇರಿ, ನಾರಯಣ ಪವಾರ, ನಜೀರ ಮಾಲ್ದರ್, ಮೈಬು ಹವಾಲ್ದಾರ್, ಉಸ್ಮಾನಸಾಬ ತಟ್ಟಿ, ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.
ವರದಿ: ದಾವಲಸಾಬ ತಾಳಿಕೋಟಿ