ಅಸಹಿಷ್ಣುತೆಯಿಂದ ಸಹಿಷ್ಣುತೆ ನಿರ್ಮಿಸುವುದೇ ಬಂಡಾಯ: ಬರಗೂರು ರಾಮಚಂದ್ರಪ್ಪ

ದಾವಣಗೆರೆ: ಸಮಾಜದಲ್ಲಿನ  ಜಾತಿ, ಲಿಂಗ ತಾರತಮ್ಯ, ವರ್ಗ ಅಸಮಾನತೆ, ಅಸಹಿಷ್ಣುತೆಯಿಂದ ಸಮಾನತೆಯೆಡೆಗೆ, ಸಹಿಷ್ಣುತೆ ಸಮಾಜ ಮಾಡುವುದು ಬಂಡಾಯ. ಬಂಡಾಯ ಎಂದರೆ ತತ್ವಾಂತರವಲ್ಲ, ಪಕ್ಷಾಂತರವೂ ಅಲ್ಲ ಸಮಾಜ ಬದಲಾವಣೆಯ ಆಶಯವೇ ಬಂಡಾಯ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ʻಬಂಡಾಯ ಸಾಹಿತ್ಯ ಸಮ್ಮೇಳನʼವನ್ನು ಚಿಂತಕ ಜಿ.ರಾಮಕೃಷ್ಣ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು ಮತ್ತು ಬರಗೂರು ರಾಮಚಂದ್ರಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟ ಎಂದುಕೊಂಡು ಸಹೋದರತ್ವ ಬಂದಿದೆ ಎಂದು ತಿಳಿದಿದ್ದೆವು. ಅದರೆ, ಅ ಎಲ್ಲವನ್ನು ಛಿದ್ರ ಮಾಡಿ ಪ್ರಸ್ತುತ ಸಮಾಜದಲ್ಲಿ ದ್ವೇಷವನ್ನು ಹರಡುವ ಕೆಲಸ ಮಾಡಲಾಗುತ್ತಿದೆ.  ಈ ನಿಟ್ಟಿನಲ್ಲಿ ಸಮಾಜ ಬದಲಾವಣೆಯಾಗಬೇಕು. ಅದಕ್ಕೆ ಸಮಾನತೆ ಎಷ್ಟು ಮುಖ್ಯವೋ ಸಹಿಷ್ಣುತೆ ಅಷ್ಟೇ ಮುಖ್ಯ. ಸಕಾರತ್ಮಕ ಸಮಾಜ ನಿರ್ಮಾಣ ಮಾಡುವ ಆಶಯಕ್ಕೆ ಬಂಡಾಯ ಸಾಹಿತ್ಯ ಬದ್ದವಾಗಿದೆ ಎಂದು ಹೇಳಿದರು.

ಬಂಡಾಯ ಸಾಹಿತ್ಯ  ಸಾಂಸ್ಕೃತಿಕ ಸಂಘಟನೆ. ಸಮೂಹ ಸಂಘಟನೆಗಳಿಗೆ ಪೂರಕವಾಗಿ ಮಾನಸಿಕ ಪ್ರಜಾಪ್ರಭುತ್ವೀಕರಣದ ಕೆಲಸವನ್ನು ಸಾಂಸ್ಕೃತಿಕ ಸಂಘಟನೆಗಳು ಮಾಡಬೇಕಿದೆ. ಸಾಹಿತಿಗಳು ಮನ್ನಣೆ ಬಯಸಿದರೆ, ಜನರು ಸಾಹಿತಿಗಳಿಂದ ಸಾಮಾಜಿಕ ಜವಾಬ್ದಾರಿ ಬಯಸುತ್ತಾರೆ. ಅಂತಹ ಸಾಮಾಜಿಕ ಕೆಲಸ ಮಾಡುವ ಮೂಲಕ ಈ ನೆಲದ ಋಣ ತೀರಿಸುವ ಕೆಲಸ ಮಾಬೇಕಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ರಾಜಕೀಯ ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯಬಾರದು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ಆಗಬೇಕಿದೆ ಎಂದರು.

ರಾಜಕೀಯವೆಂದರೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಸ್ಥಾನವಿದೆ. ಇಂದಿನ ಚಿಲ್ಲರೆ ರಾಜಕಾರಣದಿಂದ ಮನುಷ್ಯರ ನಡುವೆ ದ್ವೇಷ ಬಿತ್ತುವ ಕೆಲಸವಾಗುತ್ತಿದೆ. ಭಾಷಿಕ ಭ್ರಷ್ಟಚಾರ ನಡೆಯುತ್ತಿದೆ. ರಾಜಕೀಯ ಪ್ರಜ್ಞೆ ಇಲ್ಲದಾಗಿದೆ. ಇಲ್ಲಿ ಎಲ್ಲಾ ರೀತಿಯ ವಿಚಾರಧಾರೆಗಳು ಒಗ್ಗೂಡಿವೆ.  ಮಾರ್ಕ್ಸ್‌ವಾದಿ ದಿ. ಅಂಬೇಡ್ಕರ್‌, ಲೋಹಿಯಾವಾದಿಗಳು ಇದ್ದಾರೆ. ಅಲ್ಲದೇ ಯಾವುದೇ ಸಿದ್ದಾಂತ ಇಲ್ಲದಿದ್ದರೂ ಸಮಾಜ ಬದಲಾವಣೆಯಾಗಬೇಕು ಎನ್ನುವ ವಿಶಾಲ ಮನೋಭಾವದವರು ಇದ್ದಾರೆ. ಸಾಂಸ್ಕೃತಿಕ ಐಕ್ಯತೆ ಸಂಘಟನೆ ಬಂಡಾಯ ಸಾಹಿತ್ಯ ಸಂಘಟನೆಯಾಗಿದೆ.  ಸಾಹಿತ್ಯದಿಂದ ಬದಲಾವಣೆ ಭ್ರಮೆಯಲ್ಲಿ ಇಲ್ಲ. ಸಾಹಿತ್ಯ ಬದಲಾವಣೆ ಮನೋಭೂಮಿಕೆ ಸಿದ್ದತೆ ಮಾಡುತ್ತದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾದುದು ಸಂವಾದ, ಅದರೆ, ಈಗ ಸಂವಾದವೇ ನಡೆಯುತ್ತಿಲ್ಲ. ಪರಸ್ಪರ ವೈರುಧ್ಯದ ಸಿದ್ದಾಂತರ ಸಂವಾದ ನಡೆದರೆ ಮಾತ್ರ ಅದು ಪ್ರಜಾಪ್ರಭುತ್ವ. ಉಗ್ರವಾದ ಟೀಕೆ ಮಾಡುವವರು ಸಂಸತ್ತಿನಲ್ಲಿರಬೇಕು. ಅದು ನಿಜವಾದ ಪ್ರಜಾಪ್ರಭುತ್ವ. ಅದರೆ, ಸಂವಾದ ನಡೆಸಲು ಸಾಧ್ಯವಿಲ್ಲ ವಾತಾವರಣ ಕಾಣುತ್ತಿದ್ದೇವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಬೇಕಿದೆ. ಸಂವಾದ ಸಂಸ್ಕ್ರತಿಯನ್ನ, ಸೌಹಾರ್ಧ ಸಂಸ್ಕೃತಿಯನ್ನ ಕಾಪಾಡುವ ದೊಡ್ಡ ಜವಾಬ್ದಾರಿ ರಾಜಕಾರಣಿಗಳು, ಚಳುವಳಿಗಾರು, ಸಾಂಸ್ಕ್ರತಿಕ ಸಂಘಟನೆಗಳು ಮೇಲಿದೆ. ಸಮತೆ, ಮಮತೆ ತಿಳುವಳಿಕೆ ಜನರಿಗೆ ಕೊಡಬೇಕು. ಜನರ   ಹೃದಯಲ್ಲಿ ಸಂಚಾರ ಮಾಡಬೇಕು. ಚಳವಳಿಗೆ ಸಿದ್ದತೆಗೊಳಿಸಬೇಕು ಎಂದು ಕರೆ ನೀಡಿದರು.

ಮೂಲಭೂತವಾದ ಯಾವ ಧರ್ಮದವರು ಮಾಡಿದರೂ ಅದು ಕೆಟ್ಟಿದ್ದು ಅದನ್ನು ಧಿಕ್ಕರಿಸಬೇಕು. ಯಾರೇ ಅದರೂ ಪಕ್ಷಪಾತ  ಮಾಡಿದರೆ ಜನರೇ ಹೊಡೆಯತ್ತಾರೆ. ಎಲ್ಲಾ ಧರ್ಮದ ಭಾಷಿಕ, ಜಾತಿ, ಧರ್ಮಾಧಾರಿತ ದೈಹಿಕ ಮತ್ತು ಮಾನಸಿಕ ಹಿಂಸೆ ಧಿಕ್ಕರಿಸಬೇಕು ಇಲ್ಲದಿದ್ದರೆ ಜನರು ನಮ್ಮನ್ನು ನಂಬಲ್ಲ. ಯಾರಬೇಕಾದರೂ ಎಲ್ಲಿ ಬೇಕಾದರೂ ಹತ್ಯೆ ಮಾಡಬಹುದು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಇಂತಹ ನಡೆ ವಿರೋಧಿಸದಿದ್ದರೆ ಮಾನವೀಯ ಸಮಾಜ ಅಂತ ಕರೆಯಲು ಸಾಧ್ಯವಿಲ್ಲ ಎಂದರು.

ಬರಹಗಾರರು ಮಾನವೀಯ ಸಂಬಂಧ ನಿರ್ಮಾಣ ಮಾಡಬೇಕು, ಹಿಂಸೆ, ಅಸಮಾನತೆ, ಅಸಹಿಷ್ಣುತೆ ಹೋಗಲಾಡಿಸಬೇಕಾಗಿರುವುದು ಬರಹಗಾರರ ಕೆಲಸ ಎಂದು ಹೇಳಿದರು.

ಪಠ್ಯ ಸಮಿತಿಯಲ್ಲಿ ಮೀಸಲಾತಿ ಏಕಿಲ್ಲ: ಜಿ.ರಾಮಕೃಷ್ಣ

ಮಕ್ಕಳ ಭವಿಷ್ಯವನ್ನು ರೂಪಿಸುವ, ತಿಳಿವಳಿಕೆ ಕಟ್ಟಿಕೊಡುವ ಶಿಕ್ಷಣಕ್ಕೆ ಮಹತ್ವದ ಘಟ್ಟವಾಗಿರುವ ಪಠ್ಯ ಪರಿಷ್ಕರಿಸುವ ಸಮಿತಿಯಲ್ಲಿ ಮೀಸಲಾತಿ ಏಕಿಲ್ಲ? ದಲಿತರು, ಹಿಂದುಳಿದವರು ಇದರಲ್ಲಿ ಏಕೆ ಮೀಸಲಾತಿ ಕೇಳಿಲ್ಲ’ ಎಂದು ಚಿಂತಕ ಜಿ.ರಾಮಕೃಷ್ಣ ಪ್ರಶ್ನಿಸಿದರು.

‘ಕನಿಷ್ಠ ತಿಳಿವಳಿಕೆ ಇಲ್ಲದ, ವೈಚಾರಿಕತೆ ಬಗ್ಗೆ ಅಸಡ್ಡೆ ಹೊಂದಿರುವ ಮತ್ತು ಜನಸಾಮಾನ್ಯರ ಬಗ್ಗೆ ಗೌರವವನ್ನು ತೋರದವರು ದೇಶವನ್ನು ನಾಶಗೊಳಿಸುವುದನ್ನು ಮುಂದಾಗಿದ್ದಾರೆ. ಅಂಥವರೇ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಿದ್ದಾರೆ. ಶಿಕ್ಷಣವನ್ನು ತುಳಿದು ಚರಂಡಿಗೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಶಿಕ್ಷಣ ದಿಕ್ಸೂಚಿ, ಮಾರ್ಗದರ್ಶಿ ಎಂದು ಅವೈಜ್ಞಾನಿಕ, ಅವೈಚಾರಿಕಗಳನ್ನು ಹೇಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎ.ಬಿ ರಾಮಚಂದ್ರಪ್ಪ, ಸುಕನ್ಯ ಮಾರುತಿ, ಸಿ.ವಿ. ಪಾಟೀಲ, ಬರಗೂರು ರಾಮಚಂದ್ರಪ್ಪ, ಬಿ.ಎಂ. ಹನೀಫ್, ಎಂ.ಟಿ. ಸುಭಾಶ್ಚಂದ್ರ, ಬಿ.ಎನ್. ಮಲ್ಲೇಶ್ ಮತ್ತಿತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *