ಮುಂಬೈ: ಐಷಾರಾಮಿ ಹಡಗಿನೊಂದರಲ್ಲಿನ ಡ್ರಗ್ ಪಾರ್ಟಿ ಸಂಬಂಧ ಬಂಧಿನದಲ್ಲಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ಮುಂಬೈ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.
ಅಕ್ಟೋಬರ್ 3ರಂದು ಎನ್‌ಸಿಬಿ ಆರ್ಯನ್ ಖಾನ್ ನನ್ನು ಬಂಧಿಸಿದ್ದು, ಸದ್ಯ ಮುಂಬೈನ ಅರ್ಥೂರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರ್ಯನ್ ಖಾನ್ ಗೆ ಮತ್ತಷ್ಟು ದಿನ ಜೈಲೇ ಗತಿ.
ಆರ್ಯನ್ ಖಾನ್ ಗೆ ಜಾಮೀನು ನೀಡುವಂತೆ ಮುಂಬೈನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಸೇರಿದಂತೆ ಇನ್ನು ಮೂವರಿಗೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಇದನ್ನು ಓದಿ: ಅದಾನಿ ಬಂದರು ಡ್ರಗ್ಸ್-ಲಖಿಂಪುರ ಹಿಂಸಾಚಾರ ಮರೆಮಾಚಲು ಆರ್ಯನ್ ಖಾನ್ ಬಂಧನ ವಿಶಾಲ್ ದದ್ಲಾನಿ
ಬಂಧನದಲ್ಲಿರುವ ಆರ್ಯನ್ ಖಾನ್ ಜೈಲಿನಲ್ಲಿ ಸಾಕಷ್ಟು ದಿನ ಕಳೆದಿದ್ದಾರೆ. ನ್ಯಾಯಾಲಯದಲ್ಲಿ ಸಾಲುಸಾಲು ವಿಚಾರಣೆ ನಡೆಸಲಾಯಿತಾದರೂ ಜಾಮೀನು ಸಿಕ್ಕಿರಲಿಲ್ಲ. ಮುಂಬೈನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಈಗ ಆರ್ಯನ್ ಪರ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಆರ್ಯನ್ ಪರ ವಕೀಲರ ವಾದ
‘ಅಕ್ಟೋಬರ್ 3ರಿಂದ ಆರ್ಯನ್ ವಿಚಾರಣೆ ನಡೆಸಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಎನ್‌ಸಿಬಿ ವಿರೋಧ ಮಾಡಿತ್ತು. ಹೀಗಾಗಿಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದೆ. ಎನ್‌ಸಿಬಿ ಕಸ್ಟಡಿ ಅಗತ್ಯವಿಲ್ಲ ಎಂದು ಆರ್ಯನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದ್ದರು.
‘ಆರ್ಯನ್ ಖಾನ್‌ಗೆ ಯಾರು ಆಹ್ವಾನ ನೀಡಿದ್ದರೋ ಅವರನ್ನು ಬಂಧಿಸಿಲ್ಲ. ಪ್ರತೀಕ್ ಗಾಬಾ ಎಂಬಾತ ಆರ್ಯನ್ ಖಾನ್ ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದ, ಆತನನ್ನು ಬಂಧಿಸಬೇಕಿತ್ತು. ಎನ್‌ಡಿಪಿಎಸ್ ಕಾಯಿದೆಯ 27ಎ ಸೆಕ್ಷನ್ ಕಳ್ಳಸಾಗಣಿಕೆಗೆ ಸಂಬಂಧಿಸಿದೆ. ಈ ಸೆಕ್ಷನ್ ಆರ್ಯನ್ ಖಾನ್‌ಗೆ ಅನ್ವಯಿಸುವುದಿಲ್ಲ.’ ಎಂದು ಅಮಿತ್ ದೇಸಾಯಿ ವಾದವಾಗಿದೆ.
‘ಇವರು ಡ್ರಗ್ಸ್ ಪೆಡ್ಲರ್ಗಳು ಅಲ್ಲ. ಡ್ರಗ್ಸ್ ಕಳ್ಳ ಸಾಗಾಟವನ್ನು ಮಾಡಿಲ್ಲ. ಇವರೆಲ್ಲಾ ಚಿಕ್ಕ ಮಕ್ಕಳು. ಅವರು ಪಾಠವನ್ನು ಕಲಿತಿದ್ದಾರೆ. ಜೈಲಿನಲ್ಲಿ ದೀರ್ಘ ಅವಧಿಯವರೆಗೂ ಇರುವುದು ಬೇಡ. ಆರ್ಯನ್ ಖಾನ್‌ಗೆ ಜಾಮೀನು ನೀಡಿ’ ಎಂದು ನ್ಯಾಯಾಲಯಕ್ಕೆ ಅವರು ಮನವಿ ಮಾಡಿದ್ದರು.
ಎನ್‌ಸಿಬಿ ಪರ ವಕೀಲರ ವಾದ
ಎನ್‌ಸಿಬಿ ಪರ ವಕೀಲರಾದ ಅನಿಲ್ ಸಿಂಗ್ ವಾದಮಂಡಿಸಿದ್ದು, ‘ಡ್ರಗ್ಸ್ ಕಳ್ಳ ಸಾಗಣೆ ಬಹಳ ಗಂಭೀರ, ಕಳಕಳಿಯ ವಿಷಯ. ರೇವ್ ಪಾರ್ಟಿಗಳಲ್ಲಿ ಯುವಜನತೆ ಡ್ರಗ್ಸ್ ಸೇವನೆ ಮಾಡುತ್ತಾರೆ. ಇದರಿಂದ ದೇಶಕ್ಕೆ ತೊಂದರೆ ಆಗುತ್ತದೆ. ಇದು ಒಂದಿಬ್ಬರ ಡ್ರಗ್ಸ್ ಸೇವನೆಗೆ ಸಂಬಂಧಪಟ್ಟಿದ್ದಲ್ಲ. ನಾವು ಇಡೀ ಜಾಲದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆರ್ಯನ್ ಖಾನ್ನನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ಯಾರು, ಯಾವಾಗ ಆಹ್ವಾನಿಸಿದರು ಎಂದು ಹೇಳುತ್ತಿಲ್ಲ. ಅವರಿಗೆ ಜಾಮೀನು ನೀಡಬಾರದು’ ಎಂದು ಅವರು ವಾದ ಮಂಡಿಸಿದರು.
ಆರ್ಯನ್ ಖಾನ್ ಪರ ವಕೀಲ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ನಂತರ ಎನ್‌ಸಿಬಿ ಪರ ವಕೀಲರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸುತ್ತದೆ. ಎನ್‌ಸಿಬಿ ಆಕ್ಷೇಪಣೆ ಸಲ್ಲಿಸಿದ ನಂತರದಲ್ಲಿ ವಿಚಾರಣೆ ನಡೆಸಲಿರುವ ಹೈಕೋರ್ಟ್ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಕಳೆದ ಅಕ್ಟೋಬರ್ 4ರಂದು ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಅಕ್ಟೋಬರ್ 7ರವರೆಗೆ ಮೊದಲಿಗೆ ಎನ್‌ಸಿಬಿ ಕಸ್ಟಡಿಗೆ ನೀಡಿತ್ತು. ಅಕ್ಟೋಬರ್ 8ರಂದು ಆರ್ಯನ್ ಖಾನ್ ನನ್ನು ಅರ್ಥರ್ ರಸ್ತೆಯ ಜೈಲಿನಲ್ಲಿ ಕೊವಿಡ್-19 ಮಾರ್ಗಸೂಚಿಯಂತೆ ಇರಿಸಲು ಕೋರ್ಟ್ ಸೂಚನೆ ನೀಡಿತ್ತು.