ಡ್ರಗ್ಸ್‌ ಪ್ರಕರಣ ಆರೋಪ: ಆರ್ಯನ್ ಖಾನ್ ಸೇರಿ ಮೂವರಿಗೆ ಜಾಮೀನು ಮಂಜೂರು

ಮುಂಬಯಿ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಲಭಿಸಿದೆ. ಆರ್ಯನ್ ಸ್ನೇಹಿತರಾದ ಅರ್ಬಾನ್ ಮರ್ಚೆಂಟ್, ಮನ್ಮನ್‌ ಧಮೇಚಾಗೂ ಜಾಮೀನು ಮಂಜೂರು ಮಾಡಲಾಗಿದ್ದು, ನಾಳೆ ಅಥವಾ ಶನಿವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಇವರಿಗೆ ಜಾಮೀನು ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು ಇದರ ವಿರುದ್ದ ಆರೋಪಿಗಳ ಪರ ವಕೀಲರು ಮುಂಬೈನ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನು ಓದಿ: ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತ

ಜಾಮೀನು ಅರ್ಜಿಯ ಬಗ್ಗೆ ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡಿದ್ದ ಬಾಂಬೆ ಹೈಕೋರ್ಟ್ ಮೂರು ದಿನಗಳ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಎನ್. ಡಬ್ಲ್ಯು.ಸಾಂಬ್ರೆ ಅವರ ಏಕ ಸದಸ್ಯ ನ್ಯಾಯಪೀಠವು ಜಾಮೀನು ಮಂಜೂರು ಮಾಡಿದೆ.

ಮುಂಬೈನ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ 2ರಂದು ಆರ್ಯನ್ ಖಾನ್‌ ನನ್ನು ಎನ್‌ಸಿಬಿ ವಶಕ್ಕೆ ಪಡೆದಿತ್ತು. 21 ದಿನಗಳಿಂದ ಆರ್ಯನ್‌ ಜೈಲುವಾಸ ಅನುಭವಿಸುತ್ತಿದ್ದಾರೆ.

ಇಂದು ನಡೆದ ಸುಧೀರ್ಘ ವಿಚಾರಣೆ ವೇಳೆ ಆರ್ಯನ್ ಹಾಗೂ ಇತರ ಮೂರರ ಪರ ವಕೀಲರು ಸೂಕ್ಷ್ಮವಾಗಿ ವಾದ ಮಂಡಿಸಿದರೆ ಎನ್‌ಸಿಬಿ ಪರ ವಕೀಲರು ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು .ಕೊನೆಗೆ ನ್ಯಾಯಮೂರ್ತಿಗಳು ಸುದೀರ್ಘವಾಗಿ ವಾದಗಳನ್ನು ಆಲಿಸಿ ಜಾಮೀನು ನೀಡಿದ್ದಾರೆ.

ಜಾಮೀನು ನೀಡಿಕೆ ಸಂಬಂಧಿಸಿದಂತೆ ಆರ್ಯನ್ ಖಾನ್‌ಗೆ ಒಟ್ಟು 13 ಷರತ್ತುಗಳನ್ನು ವಿಧಿಸಲಾಗಿದ್ದು, ಪ್ರತಿ ಶುಕ್ರವಾರ ಎನ್‌ಸಿಬಿ ವಿಚಾರಣೆಗೆ ಹಾಜರಾಗಬೇಕು. ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ವಿದೇಶಕ್ಕೆ ತೆರಳಬಾರದು, ಉಳಿದ ಆರೋಪಿಗಳ ಸಂಪರ್ಕದಲ್ಲಿ ಇರಬಾರದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡಬಾರದು, ಸಾಕ್ಷಿಗಳ ನಾಶಕ್ಕೆ ಯತ್ನಿಸಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬುದು ಸೇರಿದಂತೆ ಪ್ರಮುಖ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಮನೀಶ್‌ ರಾಜ್‌ಗರಿಯಾ ಮತ್ತು ಅವಿನ್‌ ಸಾಹು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಹೊಂದಿದ್ದರು. ವಿಶೇಷ ನ್ಯಾಯಾಲಯದಲ್ಲಿ ಜಾಮೀನು ದೊರೆಯದ ಹಿನ್ನೆಲೆಯಲ್ಲಿ ಆರ್ಯನ್‌ ಖಾನ್‌ ಬಾಂಬೆ ಹೈಕೋರ್ಟ್‌ ಮೊರೆಹೋಗಿದ್ದರು.

ಆರ್ಯನ್ ಪರ ವಾದ ಮಂಡಿಸಿದ ವಕೀಲ ಮುಕುಲ್‌ ರೋಹಟಗಿ ‘ಆರ್ಯನ್ ಖಾನ್‌ ಬಂಧನಕ್ಕೆ ಸೂಕ್ತ ಕಾರಣ ನೀಡದೆಯೇ ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಸೂಕ್ತ ಕಾರಣವನ್ನು ತಿಳಿಸಬೇಕಿತ್ತು. ಯಾವ ಕಾರಣಕ್ಕೆ ಬಂಧನವೆಂದು ತಿಳಿದುಕೊಳ್ಳುವ ಹಕ್ಕಿದೆ. ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ’ ಎಂದು ವಾದ ಮಂಡಿಸಿದರು.

ಎನ್‌ಸಿಬಿ ಪರ ಎಎಸ್‌ಜಿ ಅನಿಲ್ ಸಿಂಗ್ ವಾದಮಂಡನೆ ಮಾಡಿದ್ದು, ಆರ್ಯನ್​ಗೆ ಜಾಮೀನು ನೀಡಬಾರದು ಎಂದು ವಾದಿಸಿದರು. ‘ಡ್ರಗ್ಸ್ ಸೇವಿಸಿರುವುದನ್ನು ಅರ್ಬಾಜ್ ಒಪ್ಪಿಕೊಂಡಿದ್ದಾನೆ. ಆರ್ಯನ್ ಖಾನ್ ಡ್ರಗ್ಸ್ ದಂಧೆಯ ಬಗ್ಗೆ ದಾಖಲೆ ಇದೆ. ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ ಆರ್ಯನ್‌ಗೆ ಮಾಹಿತಿಯಿತ್ತು. ಆರ್ಯನ್ ವಾಟ್ಸಾಪ್ ಚಾಟ್‌ನಿಂದ ವಾಣಿಜ್ಯ ಉದ್ದೇಶಕ್ಕೆ ಡ್ರಗ್ಸ್​​ ಇಟ್ಟುಕೊಂಡಿದ್ದರು ಎಂಬುದು ಪತ್ತೆ ಆಗಿದೆ. ಇದು ನರಹತ್ಯೆಗಿಂತ ಘೋರ ಅಪರಾಧವಾಗಿದೆ’ ಎಂದು ವಾದಿಸಿದರು.

ಈವರೆಗೂ ಪ್ರಕರಣದಲ್ಲಿ ನೈಜೀರಿಯಾದ ಇಬ್ಬರು ಸೇರಿದಂತೆ ಒಟ್ಟು 20 ಜನರನ್ನು ಎನ್‌ಸಿಬಿ ಬಂಧಿಸಿದೆ.

Donate Janashakthi Media

Leave a Reply

Your email address will not be published. Required fields are marked *