ಪ್ರಕಾಶ್ ಕಾರತ್, ಅನು: ವಿಶ್ವ
ಸಂವಿಧಾನದ 370ನೇ ವಿಧಿಯ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಕಾರ್ಯಾಂಗದ ಅಧಿಕಾರ ದುರ್ಬಳಕೆಗೆ ಸಾಂವಿಧಾನಿಕ ಕೋರ್ಟ್ ಶರಣಾಗಿದ್ದಕ್ಕೆ ಒಂದು ಅತಿರೇಕದ ಉದಾಹರಣೆಯಾಗಿದೆ. ಘಟನೆ ನಡೆದ ನಾಲ್ಕು ವರ್ಷದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇತೃತ್ವದ ಐದು ಸದಸ್ಯರ ಸಂವಿಧಾನ ಪೀಠದಿಂದ ಹೊರಬಿದ್ದ ಮೂರು ಸಹವರ್ತಿ ತೀರ್ಪುಗಳು ಒಕ್ಕೂಟ ತತ್ವ ಮತ್ತು ರಾಜ್ಯಗಳ ಅಧಿಕಾರಗಳ ಮೇಲೆ ದೊಡ್ಡ ಹಾಗೂ ದೀರ್ಘಕಾಲೀನ ಪರಿಣಾಮ ಬೀರಲಿವೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯವು ರಾಷ್ಟçಪತಿ ಆಡಳಿತದಲ್ಲಿದ್ದ ವೇಳೆ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ರಾಷ್ಟçಪತಿ ಆದೇಶದ ಸಿಂಧುತ್ವವನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್, ಭಾರತೀಯ ಒಕ್ಕೂಟದಲ್ಲಿ ವಿಲೀನವಾಗುವ ವೇಳೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಲಾಗಿದ್ದ ಆಶ್ವಾಸನೆಗೆ ಬಗೆದ ವಿಶ್ವಾಸದ್ರೋಹಕ್ಕೆ ನೀಡಿದ ಇತ್ತೀಚಿನ ಅಂಕಿತವಾಗಿದೆ. 370ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರ (ಜೆ-ಕೆ) ರಾಜ್ಯಕ್ಕಿದ್ದ “ಆಂತರಿಕ ಸಾರ್ವಭೌಮತೆ”ಯು ತಾತ್ಕಾಲಿಕ ಕ್ರಮ ಎಂದು ತೀರ್ಮಾನಿಸುವ ಮೂಲಕ ಕೋರ್ಟ್ ಜೆ-ಕೆಗೆ ವಿಶೇಷ ಸ್ಥಾನಮಾನ ನೀಡಿದ್ದು ಯಾಕೆಂಬ ಪ್ರಶ್ನೆಯನ್ನು ಉಲ್ಲಂಘಿಸಿದೆ (ಬೈಪಾಸ್). ಇಂಥ ಸ್ಥಾನಮಾನವು ಹೇಗೆ ತಾತ್ಕಾಲಿಕವಾದುದಲ್ಲ, ಬದಲಿಗೆ ಕಾಶ್ಮೀರ ಜನತೆಗೆ ಅಂದಿನ ಸಾಂವಿಧಾನಿಕ ಅಧಿಕಾರಿಗಳು ನೀಡಿದ್ದ ಆಶ್ವಾಸನೆಯ ಭಾಗ ಎನ್ನುವುದನ್ನು ಕೂಡ ಅದು ಅದು ಕಡೆಗಣಿಸಿದೆ. ಆರ್ಟಿಕಲ್ 370, ಜಮ್ಮು ಮತ್ತು ಕಾಶ್ಮೀರ ಜನತೆಯ ಪ್ರತಿನಿಧಿಗಳ ಸಹಮತದೊಂದಿಗೆ ವ್ಯಾಖ್ಯಾನಿಸಿ ರೂಪುಗೊಳಿಸುವ ಸ್ಥಾನಮಾನ ಎಂಬ ಸಾಂವಿಧಾನಿಕ ಖಾತರಿಯನ್ನು ಪ್ರತಿನಿಧಿಸುತ್ತದೆ.
ಪೀಠದ ಮೂರು ಜಡ್ಜ್ಗಳ ಪರವಾಗಿ ಸಿಜೆಐ ನೀಡಿದ ತೀರ್ಪು, `ಒಕ್ಕೂಟ ಮತ್ತು ಜಮ್ಮು-ಕಾಶ್ಮೀರ ರಾಜ್ಯದ ನಡುವೆ ಸಾಂವಿಧಾನಿಕ ಸಮಗ್ರತೆಯನ್ನು ಹೆಚ್ಚಿಸುವುದು’ 370ನೇ ವಿಧಿಯ ಉದ್ದೇಶವಾಗಿತ್ತು ಎಂದು ಹೇಳಿರುವುದು ಬೆರಗುಗೊಳಿಸುವಂಥ ವಿಚಾರವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕಿಂತ ಇದುವೇ ಅದರ ಉದ್ದೇಶವಾಗಿತ್ತು ಎಂದಿದೆ. ಆರ್ಟಿಕಲ್ 370 (1) ಅಡಿಯಲ್ಲಿ ರಾಷ್ಟ್ರಪತಿಯವರು ಸತತವಾಗಿ ಚಲಾಯಿಸುವ ಅಧಿಕಾರವು ಸಾಂವಿಧಾನಿಕ ಸಮಗ್ರತೆಯ ಪ್ರಕ್ರಿಯೆ ನಡೆಯುವುದನ್ನು ಸೂಚಿಸುತ್ತದೆ ಎಂದು ಕೂಡ ಈ ತೀರ್ಪು ಹೇಳಿದೆ.
ಇದನ್ನೂ ಓದಿ : ಆರ್ಟಿಕಲ್ 370 ರದ್ದು: ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಸತತ ದುರುಪಯೋಗ
ರಾಜ್ಯಗಳ ಸ್ವಾಯತ್ತೆಯನ್ನು ನಿರಾಕರಿಸಲು ಮತ್ತು ರಾಜ್ಯಗಳ ಅಧಿಕಾರದ ಮೇಲೆ ಸವಾರಿ ಮಾಡಲು 370ನೇ ವಿಧಿಯನ್ನು ಸತತವಾಗಿ ದುರುಪಯೋಗ ಮಾಡಿಕೊಳ್ಳಲಾಗಿತ್ತು ಎನ್ನುವುದು ಅದರ ಇತಿಹಾಸವನ್ನು ಗಮನಿಸಿದಾಗ ತಿಳಿಯುತ್ತದೆ. ಅದನ್ನು ಹೇಗೆ ಮಾಡಲಾಯಿತು? ವಿವಿಧ ರಾಷ್ಟ್ರಪತಿ ಆಡಳಿತದ ವೇಳೆ ಕೇಂದ್ರವೇ ನೇಮಿಸಿದ ರಾಜ್ಯಪಾಲರಿಂದ “ಸಹಮತ”ದಿಂದ ಇದನ್ನು ಸಾಧಿಸಲಾಗುತ್ತಿತ್ತು.
ಆದರೆ, ತೀರ್ಪಿನ ವಿಚಿತ್ರ ತರ್ಕದ ಪ್ರಕಾರ, “ಆರ್ಟಿಕಲ್ 370 (3) ಅಡಿಯಲ್ಲಿ ರಾಷ್ಟ್ರಪತಿ ಹೊರಡಿಸುವ ಘೋಷಣೆಯು ಸಮಗ್ರತೆ ಪ್ರಕ್ರಿಯೆಯಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಅದೊಂದು ಸಿಂಧುವಾದ ಅಧಿಕಾರದ ಚಲಾವಣೆಯಾಗಿರುತ್ತದೆ”.
ನ್ಯಾಯಮೂರ್ತಿಗಳ ಈ ಕಾರ್ಯಕಾರಣವನ್ನು ಅನ್ವಯಿಸಿದರೆ ಜೆ-ಕೆ ವಿಶೇಷ ಲಕ್ಷಣಗಳು ಅಥವಾ ಕೆಲವು ಈಶಾನ್ಯ ರಾಜ್ಯಗಳು ಮತ್ತು ಇತರ ಕೆಲವು ರಾಜ್ಯಗಳಿಗೆ ಆರ್ಟಿಕಲ್ 371ರಡಿ ಕೊಡಲಾದ ವಿಶೇಷ ಸ್ಥಾನಮಾನಕ್ಕೆ ಅರ್ಹವೂ ಆಗುವುದಿಲ್ಲ. ಜೆಕೆಗೆ ದಶಕಗಳಿಂದ ಪ್ರಜಾಪ್ರಭುತ್ವ ಮತ್ತು ಸ್ವಾಯತ್ತೆ ನಿರಾಕರಣೆಗೆ ಇದಕ್ಕಿಂತ ಉತ್ತಮ ಕಾನೂನು ಸಮರ್ಥನೆ ಬೇರೊಂದು ಇರಲಾರದು.
ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯನ್ನು ಒಂದು ವಿಧಾನಸಭೆಯಾಗಿ ಮರುವ್ಯಾಖ್ಯಾನಿಸಲು ಆರ್ಟಿಕಲ್ 367ಕ್ಕೆ ತಿದ್ದುಪಡಿಯು ವ್ಯಾಪ್ತಿಯನ್ನು ಮೀರಿದ್ದೆಂದು ಕೋರ್ಟ್ ಹೇಳಿದಾಗಲೂ 370ನೇ ವಿಧಿಯನ್ನು ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಸಿಂಧುತ್ವದ ಮೇಲೆ ಪರಿಣಾಮ ಬೀರದು ಎಂದು ಸುತ್ತು ಬಳಸಿ ಈ ತೀರ್ಪು ಹೇಳಿದೆ.
ಹಕ್ಕುಗಳ ನಾಶ ಮೋದಿ ಸರ್ಕಾರದ ಉದ್ದೇಶ
ಮೋದಿ ಸರಕಾರದ ಸರ್ವಾಧಿಕಾರಿ ಏಕಪಕ್ಷೀಯ ನಡೆಗೆ ಅನುಮೋದನೆ ನೀಡಿದ್ದು ತೀರ್ಪಿನ ಇನ್ನೊಂದು ಅಪಾಯಕಾರಿ ಲಕ್ಷಣವಾಗಿದೆ. ಸಂವಿಧಾನದಲ್ಲಿ ಲಭ್ಯವಿರುವ ರಾಜ್ಯಗಳ ಒಕ್ಕೂಟ ತತ್ವದ ಲಕ್ಷಣಗಳು ಮತ್ತು ರಾಜ್ಯಗಳ ಸೀಮಿತ ಹಕ್ಕುಗಳನ್ನು ಕೂಡ ನಾಶ ಮಾಡುವುದು ಮೋದಿ ಸರ್ಕಾರದ ಉದ್ದೇಶವಾಗಿದೆ. 2019ರಲ್ಲಿ ಸಂಸತ್ತು ಅಂಗೀಕರಿಸಿದ ಜಮ್ಮು ಮತ್ತು ಕಾಶ್ಮೀರ ಪುರ್‌ಸಂಘಟನೆ ಕಾನೂನಿನ ಸಿಂಧುತ್ವದ ಬಗ್ಗೆ ತೀರ್ಪು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆ ಕಾನೂನು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲು ಅನುವು ಮಾಡಿತ್ತು. ಸಂವಿಧಾನದ 3ನೇ ವಿಧಿಯನ್ನು ಸರಿಯಾಗಿ ಬಳಸಲಾಗಿದೆಯೇ ಮತ್ತು ಒಂದು ರಾಜ್ಯವನ್ನು ಒಂದು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೆ ಇಳಿಸಲು ಈ ವಿಧಿಯನ್ನು ಬಳಸಬಹುದೇ ಎನ್ನುವುದು ಚರ್ಚೆಯ ವಿಷಯವಾಗಿದೆ.
ಇದನ್ನೂ ಓದಿ : ಕಾಶ್ಮೀರದಲ್ಲಿ 370ನೇ ವಿಧಿ ರದ್ದು: ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ – ಯೂಸುಫ್ ತರಿಗಾಮಿ
ನ್ಯಾಯಾಂಗದ ತತ್ವಕ್ಕೇ ತಿಲಾಂಜಲಿ
ಜೆ-ಕೆಗೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದೆಂದು ಸಾಲಿಸಿಟರ್ ಜನರಲ್ ಆಶ್ವಾಸನೆ ನೀಡಿರುವುದರಿಂದ ಈ ವಿಷಯದ ಬಗ್ಗೆ ತಾನು ಪರಿಶೀಲಿಸುವುದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಂಗದ ತತ್ವವನ್ನೇ ಖುಲ್ಲಂಖುಲ್ಲಾ ಕೈಬಿಡುವ ರೀತಿಯಲ್ಲಿ ಕೋರ್ಟ್ ನಡೆದು ಕೊಂಡಿದೆ. ಇದೊಂದು ಸಮಯದ ಚೌಕಟ್ಟಿಲ್ಲದ ಕೇವಲ ಒಂದು ಭರವಸೆ ಆಗಿದೆಯಷ್ಟೇ. ಅದೇ ವೇಳೆ, ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ರಚಿಸಿರುವುದು ಸಿಂಧು ಎಂದು ಕೋರ್ಟ್ ತೀರ್ಪಿತ್ತಿದೆ. 2024ರ ಸೆಪ್ಟೆಂಬರ್‌ನೊಳಗೆ ಚುನಾವಣೆಗಳನ್ನು ನಡೆಸಬೇಕೆಂದು ಹೇಳಿದರೂ ಅದಕ್ಕಿಂತ ಮುಂಚೆಯೇ ರಾಜ್ಯ ಸ್ಥಾನಮಾನವನ್ನು ಪುನರ್‌ಸ್ಥಾಪಿಸಬೇಕೆಂದು ನಿರ್ದಿಷ್ಟ ಪಡಿಸಿಲ್ಲ.
ಸಂವಿಧಾನದ 3ನೇ ಆರ್ಟಿಕಲ್ ಪ್ರಕಾರ, ರಾಜ್ಯವೊಂದರ ಗಡಿಯಲ್ಲಿ ಬದಲಾವಣೆ ಇದ್ದರೆ ಅಥವಾ ರಾಜ್ಯವೊಂದರ ವಿಲೀನ ಮಾಡುವುದಾದರೆ ಅಥವಾ ಹೊಸ ರಾಜ್ಯವನ್ನು ರಚಿಸುವುದಾದರೆ ಅಂಥ ಪ್ರಸ್ತಾಪನೆಗಳನ್ನು ರಾಷ್ಟçಪತಿಯವರು ಆಯಾ ರಾಜ್ಯ ಶಾಸಕಾಂಗಕ್ಕೆ ಅವುಗಳ ಅಭಿಪ್ರಾಯ ತಿಳಿಯಲು ಕಳಿಸ ಬೇಕಾಗುತ್ತದೆ. ಶಾಸಕಾಂಗದ ಅನುಮೋದನೆ ಸಿಕ್ಕ ನಂತರವಷ್ಟೇ ಸಂಸತ್ತು ಈ ವಿಚಾರಗಳಲ್ಲಿ ಕಾನೂನು ರೂಪಿಸಬಹುದಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ 356ನೇ ಆರ್ಟಿಕಲ್ ಬಳಸಿ 2008ರ ನವೆಂಬರ್‌ನಲ್ಲಿ ರಾಜ್ಯ ಶಾಸಕಾಂಗವನ್ನು ವಿಸರ್ಜಿಸಲಾಗಿತ್ತು. ಹೀಗಾಗಿ, ಸಮಾಲೋಚನೆಗಾಗಿ ಅಲ್ಲಿ ಶಾಸನಸಭೆಯೇ ಇರಲಿಲ್ಲ.
ರಾಷ್ಟçಪತಿ ಆಡಳಿತವಿದ್ದಾಗ, ರಾಜ್ಯದ ವಿಷಯದಲ್ಲಿ ಕಾನೂನು ರೂಪಿಸಬೇಕಾದ್ದು ಸಂಸತ್ತು. ಹಾಗಾಗಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಕಾನೂನನ್ನು ಸಂಸತ್ತು ಚರ್ಚಿಸಿ ಅನುಮೋದಿಸಿತ್ತು. ಇಲ್ಲಿ ಕೂಡ ಆರ್ಟಿಕಲ್ 3ರ ಉಲ್ಲಂಘನೆ ಆಗಿದೆ. ಯಾಕೆಂದರೆ ರಾಜ್ಯ ಶಾಸಕಾಂಗದ ಅಭಿಪ್ರಾಯವನ್ನು ಸಂಸತ್ತು ಒಪ್ಪಲೇ ಬೇಕಿಲ್ಲ ಎಂದಿದ್ದರೂ ರಾಜ್ಯ ಶಾಸಕಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಆರ್ಟಿಕಲ್ 3 ಹೇಳುತ್ತದೆ.
3ನೇ ವಿಧಿಯಡಿ ಒಂದು ರಾಜ್ಯವನ್ನು ಅಸ್ತಿತ್ವದಿಂದ ತೆಗೆದು ಹಾಕಲು ಕಾನೂನು ರೂಪಿಸಬಹುದೇ ಎನ್ನುವ ಮೂಲಭೂತ ವಿಷಯವನ್ನು ಕೂಡ ಕೋರ್ಟ್ ಪರಿಗಣಿಸಿಲ್ಲ. ಲಡಾಖ್ ಕೇಂದ್ರಾಡಳಿತ ಪ್ರದೇಶ ರಚನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ ಭವಿಷ್ಯದಲ್ಲಿ ಅದೇ ರೀತಿಯ ಕೃತ್ಯಗಳನ್ನು ನಡೆಸಲು ಹಾದಿಯನ್ನು ಮುಕ್ತಗೊಳಿಸಿದಂತಾಗಿದೆ. ಸಂಸತ್ತಿನಲ್ಲಿ ಅಪಾರ ಬಹುಮತ ಇರುವ ಆಡಳಿತ ಪಕ್ಷವೊಂದು, ಯಾವುದೇ ಒಂದು ರಾಜ್ಯದಲ್ಲಿ ರಾಷ್ಟçಪತಿ ಆಡಳಿತ ಹೇರಿದ್ದರಿಂದ ಉಂಟಾದ ಪರಿಸ್ಥಿತಿಯನ್ನು ಬಳಸಿಕೊಂಡು ಆ ರಾಜ್ಯದ ಭಾಗವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಆ ರಾಜ್ಯದ ಸ್ಥಾನಮಾನ ಕೆಳಗಿಳಿಸುವ ಅಪಾಯವಿದೆ.
ಸುಪ್ರೀಂ ಕೋರ್ಟ್ ತೀರ್ಪು ಕೇಂದ್ರದ ಏಕಪಕ್ಷೀಯ ನಡೆಗೆ ಸಮ್ಮತಿಯ ಮುದ್ರೆ ಒತ್ತುತ್ತದೆ. ಹಾಗೂ ಒಕ್ಕೂಟ ತತ್ವಕ್ಕೆ ಮತ್ತು ಕೇಂದ್ರ-ರಾಜ್ಯ ಸಂಬAಧಗಳನ್ನು ಸರಿದೂಗಿಸುವ ಅಂಶಕ್ಕೆ ಗಂಭೀರ ಬೆದರಿಕೆ ಒಡ್ಡುತ್ತದೆ. ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದಾಗ, ಸುಪ್ರೀಂ ಕೋರ್ಟ್ ಕಾರ್ಯಾಂಗದ ಒಂದು ಕೋರ್ಟ್ ಅಗುವುದು ನಿಲ್ಲುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ದುರದೃಷ್ಟವಶಾತ್ ಆ ಆಸೆ ಹುಸಿಯಾಗಿದೆ.
ಈ ವಿಡಿಯೋ ನೋಡಿ : ಜಮ್ಮು& ಕಾಶ್ಮೀರದ ಸ್ಥಾನಮಾನ ರದ್ದತಿ :ಲೋಕಸಭಾ ಚುನಾವಣೆಗೆ ಆರು ತಿಂಗಳ ಮುಂಚೆ ಪ್ರಕಟವಾದ ಈ ತೀರ್ಪು ಕೇವಲ ಕಾಕತಾಳೀಯವೇ?