ಟಿ. ಸುರೇಂದ್ರರಾವ್
ಆರ್ಥಿಕವಾಗಿ ದುರ್ಬಲರಾಗಿರುವ ವಿಭಾಗದವರಿಗೆ ಉನ್ನತ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ಕಲ್ಪಿಸಲು 8 ಲಕ್ಷಗಳ ಆದಾಯ ಮಿತಿ ನಿಗದಿಪಡಿಸಿದೆ ನಮ್ಮ ಕೇಂದ್ರ ಸರ್ಕಾರ. ಅದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿದೆ.
8 ಲಕ್ಷ ಆದಾಯ ಇರುವವರಿಗೆ ರೂ.42,500 ಆದಾಯ ತೆರಿಗೆಯನ್ನು ವಿಧಿಸುತ್ತಿರುವ ಕೇಂದ್ರ ಸರ್ಕಾರ ಆರ್ಥಿಕ ದುರ್ಬಲರ ಹೆಸರಿನಲ್ಲಿ ಶೈಕ್ಷಣಿಕ ಮೀಸಲಾತಿಗೆ 8 ಲಕ್ಷ ಆದಾಯ ಮಿತಿ ನಿಗದಿ ಮಾಡಿರುವುದು ಎಷ್ಟು ಸರಿ?
ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ ಆರ್ಥಿಕ ದುರ್ಬಲ ವಿಭಾಗದವರು (8 ಲಕ್ಷಕ್ಕಿಂತ ಕಡಿಮೆ ಆದಾಯವಿರುವವರು) ಶೈಕ್ಷಣಿಕ ಮೀಸಲಾತಿಗೆ ಅರ್ಹರಾಗುವುದಾದರೆ ಆದಾಯ ತೆರಿಗೆ ವಿನಾಯಿತಿಯನ್ನೂ 8 ಲಕ್ಷ ಆದಾಯದವರೆಗೆ ನೀಡಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಆಲೋಚನೆ ಮಾಡುವುದು ಒಳಿತು. ಅದಿಲ್ಲದಿದ್ದರೆ ಆರ್ಥಿಕ ದುರ್ಬಲರ ಹೆಸರಿನಲ್ಲಿ 10% ಮೀಸಲಾತಿ ನೀಡುವ ಸರ್ಕಾರದ ನಿಲುವಿನ ಹಿಂದಿನ ನಿಜವಾದ ಉದ್ದೇಶವನ್ನೇ ಪ್ರಶ್ನಿಸಬೇಕಾಗುತ್ತದೆ”.
ಸಾಮಾನ್ಯ ವರ್ಗದ ಬಡವರಿಗೆ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ 10% ಮೀಸಲಾತಿ ಕಲ್ಪಿಸಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶವು ‘ಆರ್ಥಿಕ ದುರ್ಬಲ ವರ್ಗ’ ಎಂಬ ಕಲ್ಪನೆಯನ್ನೇ ಅಣಕಿಸಿದಂತಾಗುತ್ತದೆ.
ಎಂಟು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಅಥವಾ 5 ಎಕರೆ ಕೃಷಿ ಜಮೀನಿಗಿಂತ ಕಡಿಮೆ ಇರುವವರಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂದಿದೆ.
ವಾಸ್ತವದಲ್ಲಿ ಇದು ಒಬಿಸಿ ವಿಭಾಗದ ಕೆನೆ ಪದರ (creamy layer) ವಿಭಾಗದವರಿಗೆ ಬಳಸಿದ ವಿಧಾನವನ್ನೇ ಇಲ್ಲಿಯೂ ಅಳವಡಿಸಲಾಗಿದೆ. ಒಬಿಸಿ ವಿಭಾಗದವರು ಸಾಮಾಜಿಕವಾಗಿ ವಂಚಿತರಾದವರು ಎಂಬ ಕಾರಣಕ್ಕೆ ಕೆನೆ ಪದರ ಮಾನದಂಡವನ್ನು ವಿಸ್ತರಿಸಲಾಗಿದೆ. ಸಾಮಾನ್ಯ ವರ್ಗದವರಿಗೆ ಆ ಮಾನದಂಡ ವಿಸ್ತರಿಸುವುದು ಭಾರತದ ಸಂವಿಧಾನದ ಆಶಯಕ್ಕೇ ಅಪಚಾರ ಮಾಡಿದಂತಾಗುತ್ತದೆ.
ಈ ಕೇಂದ್ರ ಸರ್ಕಾರವು ಮಾಸಿಕ ಕನಿಷ್ಠ ವೇತನವಾಗಿ ರೂ.18,000/-ವನ್ನೇ ಒಪ್ಪಲು ಸಿದ್ಧವಿಲ್ಲ. ಆದರೆ ಮಾಸಿಕ ರೂ.70,000/- ಆದಾಯದ ಮಾನದಂಡ ಅಳವಡಿಸಿ ಸಾಮಾನ್ಯ ವರ್ಗದವರಿಗೆ ಈ ಮೀಸಲಾತಿಯನ್ನು ವಿಸ್ತರಿಸಲು ಈ ಸರ್ಕಾರ ಮುಂದಾಗಿದೆ. ಅಂದರೆ ದುಡಿಯುವ ಜನರಿಗೆ ಒಂದು ಮಾನದಂಡ ಮತ್ತು ಮಧ್ಯಮ ವರ್ಗದವರಿಗೆ ಇನ್ನೊಂದು ಮಾನದಂಡ. ಇದು ಕೇಂದ್ರ ಸರ್ಕಾರದ ಶ್ರೀಮಂತ ವರ್ಗವನ್ನು ಓಲೈಸುವ ನೀತಿಯೆನ್ನುವುದು ಸ್ಪಷ್ಟ.
ಕೇಂದ್ರ ಸರ್ಕಾರದ ಈ 10% ಮೀಸಲಾತಿಯ ಲಾಭವನ್ನು ಶ್ರೀಮಂತ ವರ್ಗವೇ ಬಾಚಿಕೊಳ್ಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ.