2020-21ರ ಹಣಕಾಸು ವರ್ಷದ 2ನೇ ತ್ರೈಮಾಸಿಕದ ಅಂಕಿ-ಅಂಶಗಳನ್ನು ಸಿ.ಎಸ್.ಒ.( ಕೇಂದ್ರೀಯ ಸಾಂಖ್ಯಿಕ ಸಂಘಟನೆ) ಈಗ ಪ್ರಕಟಿಸಿದೆ. ಮೊದಲ ತ್ರೈಮಾಸಿಕದ ಅಂಕಿ-ಅಂಶಗಳು 24ಶೇ.ದಷ್ಟು ಭಾರೀ ಇಳಿಕೆಯನ್ನು ತೋರಿಸಿದ ಮೇಲೆ ಖಿನ್ನರಾಗಲೇ ಬೇಕಾಗಿ ಬಂದ ಸರಕಾರ ಮತ್ತು ಮಾಧ್ಯಮಗಳ ಕೆಲ ವಿಭಾಗಗಳು ದೇಶದ ಅರ್ಥವ್ಯವಸ್ಥೆಯ ಕಷ್ಟಕಾಲ ಕಳೆಯುತ್ತಿದೆ ಎಂಬುದರ ಬಗ್ಗೆ “ಸಕಾರಾತ್ಮಕ ಕಂಪನ”ಗಳನ್ನು ಈ ಎರಡನೇ ತ್ರೈಮಾಸಿಕದ ಅಂಕಿ-ಅಂಶಗಳು ಸೂಸಿವೆ ಎಂದು ಹೇಳುತ್ತಿದ್ದಾರೆ.
ಜಿಡಿಪಿ ನಷ್ಟ ಗಮನಾರ್ಹವಾಗಿ ಇಳಿದಿದೆ, ತಯಾರಿಕೆ ಮತ್ತು ನಿರ್ಮಾಣ ವಲಯಗಳ ನಷ್ಟ ಶೇ.91ದಷ್ಟು ಇಳಿದಿದೆ, ಸೇವಾ ವಲಯ ತನ್ನ ನಷ್ಟವನ್ನು 43ಶೇ.ದಷ್ಟು ಇಳಿಸಿಕೊಂಡಿದೆ, ವ್ಯಾಪಾರ ಉಪವಿಭಾಗದಲ್ಲಿ ನಷ್ಟ ಶೇ.80ದಷ್ಟು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ. ತಯಾರಿಕಾ ವಲಯದ ನೇತೃತ್ವದಲ್ಲಿ ಚೇತರಿಕೆ ಆರಂಭವಾಗಿದೆ, ಪರಿಸ್ಥಿತಿ ಕೆಲವರು ನಿರೀಕ್ಷಿಸಿದಷ್ಟು ಮಂಕಾಗಿಲ್ಲ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ, ಜಗತ್ತಿನ 49 ದೇಶಗಳಲ್ಲಿ ಈ ತ್ರೈಮಾಸಿಕದಲ್ಲಿ ಜಿಡಿಪಿ ಇಳಿಕೆ ಸರಾಸರಿ 12.4ಶೇ. ಇದ್ದರೆ ಭಾರತದಲ್ಲಿ ಇದು 7.5ಶೇ. ಮಾತ್ರ ಎಂಬ ಸಂಗತಿಯತ್ತ ಅವರು ಬೊಟ್ಟುಮಾಡುತ್ತಾರೆ.
ಆದರೆ ಇಂತಹ ಆಶಾವಾದಕ್ಕೆ ಕಾರಣಗಳಿಲ್ಲ ಎನ್ನುತ್ತಾರೆ ಬಹಳಷ್ಟು ಅರ್ಥಶಾಸ್ತ್ರಜ್ಷರು. ಮೊದಲನೆಯದಾಗಿ, ಈ 49 ದೇಶಗಳಲ್ಲಿ ಮೊದಲ ತ್ರೈಮಾಸಿಕದ ಜಿಡಿಪಿ ಇಳಿಕೆ ಸರಾಸರಿ 5.6ಶೇ. ಇದ್ದಾಗ ಭಾರತದ ಜಿಡಿಪಿ ಇಳಿಕೆ 24ಶೇ. ದಷ್ಟಿತ್ತು ಎಂಬುದನ್ನು ಮರೆಯುವಂತಿಲ್ಲ. ಎರಡನೆಯದಾಗಿ, ತ್ರೈಮಾಸಿಕದ ಅಂಕಿ-ಅಂಶಗಳು ಅನೌಪಚಾರಿಕ ವಲಯದ ದತ್ತಾಂಶವನ್ನು ಹೆಚ್ಚಾಗಿಯೇ ಅಂದಾಜು ಮಾಡುತ್ತವೆ, ಮೂರನೆಯದಾಗಿ, ತಯಾರಿಕಾ ವಲಯದಲ್ಲಿ ತುಸು ಹೆಚ್ಚಳವಾಗಿದ್ದರೆ ಅದಕ್ಕೆ ಹಬ್ಬಗಳ ಸೀಝನ್ ಕಾರಣ. ಇದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವ ಇತರ ಕ್ರಮಗಳನ್ನು ಸರಕಾರ ಕೈಗೊಳ್ಳದಿದ್ದರೆ ಹೀಗೆಯೇ ಮುಂದುವರೆಯುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.
ಅಲ್ಲದೆ ಮೊದಲ ಎರಡು ತ್ರೈಮಾಸಿಕಗಳನ್ನು ಸೇರಿಸಿದ ಮೊದಲ ಅರ್ಧವಾರ್ಷಿಕದ ಅಂಕಿ-ಅಂಶಗಳು ಅರ್ಥವ್ಯವಸ್ಥೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 15ಶೇ.ದಷ್ಟು ಕುಸಿದಿರುವುದನ್ನು ತೋರಿಸುತ್ತವೆ. ತಯಾರಿಕಾ ವಲಯದಲ್ಲಿಯೂ 19ಶೇ. ಇಳಿಕೆಯಾಗಿದೆ, ನಿರ್ಮಾಣ ವಲಯದಲ್ಲಿ 30ಶೇ. ಇಳಿಕೆಯಾಗಿದೆ, ವ್ಯಾಪಾರ, ಹೊಟೆಲ್, ಸಾರಿಗೆ, ಸಂವಹನ ವಲಯಗಳಲ್ಲಿ 32ಶೇ. ಇಳಿಕೆಯಾಗಿದೆ. ಕೃಷಿ ವಲಯದಲ್ಲಿ ಮಾತ್ರ ಬೆಳವಣಿಗೆ ದರ ತುಸು ಹೆಚ್ಚಾಗಿದೆ, 3.2ಶೇ.ದಿಂದ 3.4ಶೇ. ಆಗಿದೆ.
ಭಾರತ ಸರಕಾರದ ನಿವೃತ್ತ ಮುಖ್ಯ ಸಂಖ್ಯಾಶಾಸ್ತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞ ಪ್ರೊಣಬ್ ಸೆನ್. ತಯಾರಿಕಾ ವಲಯ 2ನೇ ತ್ರೈಮಾಸಿಕದಲ್ಲಿ 0.6ಶೇ.ದಷ್ಟು ಬೆಳೆದಿದೆ ಎಂಬುದನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ಪೂರ್ಣ ತಥ್ಯಗಳು ಹೊರಬಂದಾಗ ಬಹುಶಃ ಈ ವಲಯ ಬೆಳೆದಿಲ್ಲ, ಸಂಕುಚನಗೊಂಡಿದೆ ಎಂಧು ಕಂಡು ಬರಬಹುದು, ಮೂರನೇ ತ್ರೈಮಾಸಿಕದಲ್ಲಿ ಅದು ನಕಾರಾತ್ಮಕ ಬೆಳವಣಿಗೆ ತೋರಿಸಬಹುದು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ(ದಿ ವೈರ್, ಡಿ.1) .
ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ 2ನೇ ತ್ರೈಮಾಸಿಕಕ್ಕಿಂತ ಹೆಚ್ಚೇ ಇರಬಹುದು, ನಾಲ್ಕನೇ ತ್ರೈಮಾಸಿಕದಲ್ಲಿ ಕೂಡ ನಕಾರಾತ್ಮಕವಾಗಿರಬಹುದು ಎನ್ನುವ ಅವರು ಇಡೀ ವರ್ಷಕ್ಕೆ ಜಿಡಿಪಿ ಕುಸಿತ ಶೇ.10ಕ್ಕಿಂತ ಹೆಚ್ಚಿರುತ್ತದೆ ಎಂದಿದ್ದಾ.ರೆ
ಇನ್ನೂ ಹೆಚ್ಚು ಆತಂಕಕಾರಿಯೆಂದರೆ ಮುಂದಿನ 4-5 ವರ್ಷಗಳ ಕಾಲ ಜಿಡಿಪಿ ಬೆಳವಣಿಗೆ ದರ 5ಶೇ.ದ ಸುತ್ತಮುತ್ತಲೇ ಗಿರಕಿ ಹೊಡೆಯುತ್ತದೆ ಭಾರತ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ಆದರೆ ಸರಕಾರ ಇದನ್ನು ಸರಿಯಾಗಿ ಗುರುತಿಸುತ್ತಿಲ್ಲ, ಸ್ಪಂದನೆಯಂತೂ ಇಲ್ಲವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸುವ ಪ್ರೊಣಬ್ ಸೆನ್ ಭಾರತ ಮುಂದಿನ ವರ್ಷ ಒಂದು ಹೂಡಿಕೆ ಬಿಕ್ಕಟ್ಟನ್ನು ಕೂಡ ಎದುರಿಸ ಬೇಕಾಗಿ ಬರಬಹುದು ಎಂದೂ ಎಚ್ಚರಿಸಿದ್ದಾರೆ.