ಇದೀಗ ಜೀವನೋಪಾಯದ ಬಿಕ್ಕಟ್ಟು ಅಲ್ಲ, ಬದುಕುಳಿಯುವ ಬಿಕ್ಕಟ್ಟು -ಸಿಪಿಐ(ಎಂ) ಪೊಲಿಟ್‌ಬ್ಯುರೊ
ಭಾರತೀಯ ಅರ್ಥವ್ಯವಸ್ಥೆ ತೀವ್ರ ನಿಧಾನಗತಿಗೆ ಇಳಿದಿದೆ ಎಂಬುದನ್ನು ಈಗ ರಿಝರ್ವ್ ಬ್ಯಾಂಕ್ ಅಧಿಕೃತವಾಗಿ ದೃಢಪಡಿಸಿದೆ., “ಭಾರತ 2020-21ರ ಮೊದಲ ಅರ್ಧವರ್ಷದಲ್ಲಿ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ತಾಂತ್ರಿಕ ಹಿಂಜರಿತವನ್ನು ಪ್ರವೇಶಿಸಿದೆ’ ಎಂದು ಹೇಳಿದೆ.
ಜಿಡಿಪಿ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 23.9ಶೇ.ದಷ್ಟು ಆಳಕ್ಕೆ ಕುಸಿದ ನಂತರ, ಈಗ ಸೆಪ್ಟಂಬರ್ 2020ರಂದು ಕೊನೆಗೊಂಡ ಈ ತ್ರೈಮಾಸಿಕದಲ್ಲಿ ಮತ್ತೆ 8.6ಶೇ.ದಷ್ಟು ಇಳಿದಿದೆ.
ಜಿಡಿಪಿ ಈ ರೀತಿಯಲ್ಲಿ ಸತತವಾಗಿ ಸಂಕುಚಿತಗೊಳ್ಳುತ್ತಿರುವುದು ಜೀವಗಳನ್ನು, ಜೀವನೋಪಾಯಗಳನ್ನು ಧ್ವಂಸ ಮಾಡುತ್ತಿದೆ, ಈ ಮೂಲಕ ನಮ್ಮ ಕೋಟ್ಯಂತರ ಜನಗಳನ್ನು ಬಡತನ, ಹಸಿವು, ಕಷ್ಟಕೋಟಲೆಗಳತ್ತ ತಳ್ಳುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ. ಇದೀಗ ಜೀವನೋಪಾಯದ ಬಿಕ್ಕಟ್ಟು ಅಲ್ಲ, ಬದುಕುಳಿಯುವ ಬಿಕ್ಕಟ್ಟು ಎಂದು ಮುಂದುವರೆದು ಅದು ವರ್ಣಿಸಿದೆ.
ಮೋದಿ ಸರಕಾರದ ಧೋರಣೆಗಳಿಂದ ಹೀಗೆ ಭಾರತೀಯ ಅರ್ಥವ್ಯವಸ್ಥೆಯ ಬೃಹತ್‌ನಾಶವನ್ನು ತಡೆಯುವುದು ನಮ್ಮ ಬಹು ಅಗತ್ಯವಾದ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವ ಮೂಲಕ ಮಾತ್ರವೇ ಸಾಧ್ಯ. ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಆಂತರಿಕ ಬೇಡಿಕೆಯನ್ನು ಮೇಲೆತ್ತುತ್ತದೆ ಎಂದು ಪುನರುಚ್ಚರಿಸಿರುವ ಪೊಲಿಟ್ ಬ್ಯುರೊ ಇದು ಯಾವುದೇ ಆರ್ಥಿಕ ಪುನಶ್ಚೇತನವನ್ನು ಆರಂಭಿಸಲು ಇರುವ ಏಕೈಕ ದಾರಿ ಎಂದು ಹೇಳಿದೆ.
ರಾಷ್ಟ್ರೀಯ ಆಸ್ತಿಗಳ ಲೂಟಿ ನಿಲ್ಲಬೇಕು, ಚುನಾವಣಾ ಬಾಂಡುಗಳು ಮತ್ತು ಪ್ರಧಾನ ಮಂತ್ರಿಗಳ ಖಾಸಗಿ ನಿಧಿಯ ಮೂಲಕ ಅಪಾರ ಐಶ್ವರ್ಯ ರಾಶಿ ಹಾಕುವುದು ಕೊನೆಗೊಳ್ಳಬೇಕು. ಇವುಗಳ ಬದಲು ಈ ಮೊತ್ತಗಳನ್ನು, ಯಾವ ಭಾರತೀಯನೂ ಹಸಿದಿರದಂತೆ ಖಾತ್ರಿ ಪಡಿಸಲು ಸಾಧ್ಯವಾಗುವಂತೆ ಸಾರ್ವಜನಿಕ ಹೂಡಿಕೆಗಳ ಹೆಚ್ಚಳಕ್ಕೆ ಬಳಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.