ಕೋಲಾರ: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೋಲಾರದ ಮುಳಬಾಗಿಲು ಬಳಿ ಶಾಸಕರನ್ನು ವಶಕ್ಕೆ ಪಡೆದಿರುವ ಆರಕ್ಷಕರು ಬೆಂಗಳೂರಿನತ್ತ ಕರೆತರುತ್ತಿದ್ದಾರೆ.
ಕೋಲಾರ ಪೊಲೀಸರ ನೆರವಿನೊಂದಿಗೆ ಬೆಂಗಳೂರು ನಗರ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ನಂಗಲಿ ಬಳಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮುಲಗಳು ತಿಳಿಸಿವೆ.
ಕೋಲಾರ ಮಾರ್ಗವಾಗಿ ಮುನಿರತ್ನ ಅವರು ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. ಅವರನ್ನು ಪೊಲೀಸರು ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ ಎಂದು ಕೋಲಾರ ಎಸ್ಪಿ ನಿಖಿಲ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಬಿಜೆಪಿ ಶಾಸಕ ಮುನಿರತ್ನ, ‘ಅಶ್ಲೀಲ ಶಬ್ಧಗಳಿಂದ ನಿಂದಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ’ ಆಡಿಯೊ ವೈರಲ್ ಆಗಿತ್ತು.
ಶಾಸಕ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರಿಂದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದಂತೆ ಕೊಲೆ ಮಾಡುವ ಜೀವ ಬೆದರಿಕೆ ಹಾಗೂ ಕಿರುಕುಳವಿದೆ ಎಂದು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೂ ಲಿಖಿತ ದೂರು ಸಲ್ಲಿಸಿದ್ದು, ಮುನಿರತ್ನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.
“ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿನಗರ ವಾರ್ಡ್‌ನ ಡಿ ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದೆ. ಶಾಸಕ ಮುನಿರತ್ನ 36 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ,” ಎಂದು ಚಲುವರಾಜು ಆರೋಪಿಸಿದ್ದರು.
ಮುನಿರತ್ನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಶಾಸಕನ ಬಂಧಿಸಿರುವ ಪೊಲೀಸರು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಿದ್ದಾರೆ. ಬಳಿಕ ಮುನಿರತ್ನನನ್ನು ನ್ಯಾಯಾಧೀಶರ ಮುಂದೆ ಹಾಜರ್ ಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಇಂದು ನ್ಯಾಯಾಧೀಶರ ಮುಂದೆ ಹಾಜರ್ ಪಡಿಸದಿದ್ದರೆ, ಭಾನುವಾರ ನ್ಯಾಯಾಧೀಶರ ಮನೆಗೆ ಹಾಜರ್ ಪಡಿಸಬಹುದು. ಸೋಮವಾರ ಈದ್ ಮೀಲಾದ್ ಹಿನ್ನೆಲೆ ಮಂಗಳವಾರ ಕೋರ್ಟ್‌ಗೆ ಹಾಜರ್ ಪಡಿಸಬಹುದು ಎಂದು ಹೇಳಲಾಗುತ್ತಿದೆ.
ಶಿಸ್ತಿನ ಪಕ್ಷದ ಮುಂದಾಳುಗಳೇ ಹೀಗಿದ್ದಮೇಲೆ ಹಿಂಬಾಲಕರು ಹೇಗಿರಬಹುದು? ದೇಶಭಕ್ತರು, ದೈವಭಕ್ತರು, ಸಂಸ್ಕೃತಿ ಚಿಂತಕರು ರಾಜಕೀಯ ಪರದೆಯ ಹಿಂದೆ ಹೇಗಿದ್ದಾರೆ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು. ಶಿಸ್ತು ಅನ್ನುವುದನ್ನು ಇವರು ಬೀದಿಯಲ್ಲಿ ನಡೆಸುವ ಪಥ ಸಂಚಲನದಲ್ಲಿ ನೋಡಬೇಡಿ. ಅದನ್ನ ಶಿಸ್ತು ಎಂದು ಇಲ್ಲಿಯತನಕ ನಿಮ್ಮನ್ನು ನಂಬಿಸಿಕೊಂಡು ಬರಲಾಗಿದೆ. ಅದು ದೈಹಿಕ ಕಸರತ್ತು ಅಷ್ಟೇ. ನಮಗೆ ಬೇಕಾಗಿರುವುದು ಮಾನಸಿಕ ಶಿಸ್ತು. ಮಾನಸಿಕವಾಗಿ ಅವರು ಹೇಗೆ ವಿಕಾರವಾಗಿದ್ದಾರೆ ಎನ್ನುವುದನ್ನು ಅಷ್ಟು ಸುಲಭವಾಗಿ ತಿಳಿಯಲಾಗದು. ಆಗಾಗ ಪ್ರಕಟಗೊಳ್ಳುವ ಇವರ ಇಂಥ ವಿಕಾರ ನಡವಳಿಕೆಗಳೇ ಇವರ ನಿಜರೂಪ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ.