ಟ್ರಂಪ್ ತಮ್ಮ ಎರಡನೆಯ ಅವಧಿಯ ಮೊದಲ ಎರಡು ತಿಂಗಳಲ್ಲಿ ಹೊರಡಿಸಿದ ಸುಗ್ರೀವಾಜ್ಞೆಗಳು ಮತ್ತು ಹಲವು ಕ್ಷಿಪ್ರ ಕ್ರಮಗಳು ಅವರ ಬೆಂಬಲಿಗರು ಮತ್ತು ಟೀಕಾಕಾರಲ್ಲೂ ಆಶ್ಚರ್ಯ, ಆಕ್ರೋಶ, ಆತಂಕಗಳಿಗೆ ಕಾರಣವಾಗಿದೆ. ಆದರೆ ಈ ಬದಲಾವಣೆಗಳು ಹಲವರು ತಿಳಿದಿರುವಂತೆ ಟ್ರಂಪ್ ಅವರ ವೈಯಕ್ತಿಕ ತಿಕ್ಕಲುತನ, ತೆವಲು, ಮರ್ಜಿಗಳಿಂದ ಮಾತ್ರ ಆಗುತ್ತಿಲ್ಲ. ಬದಲಿಗೆ ಯು.ಎಸ್ ನ ಪ್ರಭುತ್ವ, ರಾಜಕಾರಣ, ಮಿಲಿಟರಿ, ದೇಶೀಯ ಮತ್ತು ವಿದೇಶಿ ನೀತಿಗಳಲ್ಲಿ ಹಳೆಯದನ್ನು ನಾಶ ಮಾಡಿ, ಆಮೂಲಾಗ್ರವಾಗಿ ಹೊಸದಾಗಿ ಮತ್ತೆ ಕಟ್ಟುವ ಯು.ಎಸ್ ನ ಆಳುವ ವರ್ಗದ ಒಂದು ವಿಭಾಗದ ಗಂಭೀರ ಪ್ರಯತ್ನದ ಭಾಗವಾಗಿ ಇದು ನಡೆಯುತ್ತಿದೆ. ಟೆಸ್ಲಾ ದ ಮಸ್ಕ್ ಮಾತ್ರವಲ್ಲದೆ ಟೆಕ್ ದೈತ್ಯರು ಎನ್ನಲಾದ ಗೂಗಲ್, ಪೇಸ್ ಬುಕ್-ಮೆಟಾ, ಅಮೆಝಾನ್, ಆಪಲ್ ಗಳ ಬಿಲಿಯಾಧಿಪತಿ ಒಡೆಯರ ಕೂಟ ಇದನ್ನು ನಿರ್ದೇಶಿಸುವಂತೆ ಅಥವಾ ಇದರಲ್ಲಿ ಕನಿಷ್ಠ ಪ್ರಧಾನ ಪಾತ್ರ ವಹಿಸುತ್ತಿರುವಂತೆ ಕಾಣುತ್ತಿದೆ. ಹೀಗೆ ಯಾವ ಆಧಾರದ ಮೇಲೆ ಹೇಳುವುದು? ಇದು ಗೆಲ್ಲಬಹುದೋ? ಇದರ ಪರಿಣಾಮ ಯು.ಎಸ್ ಮತ್ತು ಜಗತ್ತಿನ ಜನರ ಮೇಲೆ ಏನಾಗಬಹುದು – ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
– ವಸಂತರಾಜ ಎನ್.ಕೆ
ಟ್ರಂಪ್ ತಮ್ಮ ಎರಡನೆಯ ಅವಧಿಯ ಮೊದಲ ಎರಡು ತಿಂಗಳಲ್ಲಿ ಹೊರಡಿಸಿದ ಸುಗ್ರೀವಾಜ್ಞೆಗಳು ಮತ್ತು ವಿವಿಧ ನೀತಿ ಹೇಳಿಕೆಗಳ ಮೂಲಕ ಯು.ಎಸ್ ನೊಳಗೂ ಜಾಗತಿಕವಾಗಿಯೂ ಕೋಲಾಹಲ ಎಬ್ಬಿಸಿದ್ದಾರೆ. ಎದುರಾಳಿ ಚೀನಾ ಮಾತ್ರವಲ್ಲ, ಕೆನಡಾ, ಮೆಕ್ಸಿಕೊ, ಯುರೋ ಕೂಟ ಗಳಂತಹ ‘ಮಿತ್ರ ದೇಶ’ಗಳ ಮೇಲೆ ಸಹ, ಆಮದು ಸುಂಕಗಳ ಸರಣಿ ಘೋಷಣೆ, ಭಾರತ ಸೇರಿದಂತೆ ಹಲವು ದೇಶಗಳ “ಕಾನೂನುಬಾಹಿರ” ವಲಸಿಗರನ್ನು ಕೈ ಕಾಲುಗಳನ್ನು ಸರಪಣಿಯಲ್ಲಿ ಬಂಧಿಸಿ ಮಿಲಿಟರಿ ಸಾಗಾಣಿಕೆ ವಿಮಾನದಲ್ಲಿ ವಾಪಸು ಕಳಿಸಿದ್ದು, ಉಕ್ರೇನ್ ಯುದ್ಧ ನಿಲುಗಡೆಗೆ ಉಕ್ರೇನ್ ಅಥವಾ ಯುರೋ ಕೂಟವನ್ನು ದೂರವಿಟ್ಟು ರಶ್ಯಾದ ಜತೆ ನೇರ ಮಾತುಕತೆ, – ಮುಂತಾದ ಹಲವು ಕ್ಷಿಪ್ರ ಕ್ರಮಗಳು ಅವರ ಬೆಂಬಲಿಗರು ಮತ್ತು ಟೀಕಾಕಾರಲ್ಲೂ ಆಶ್ಚರ್ಯ, ಆಕ್ರೋಶ, ಆತಂಕಗಳಿಗೆ ಕಾರಣವಾಗಿದೆ. ಕೆನಡಾ ಯು.ಎಸ್ ನ 51ನೆಯ ರಾಜ್ಯ ಆಗಬೇಕು, ಪನಾಮಾ ಕಾಲುವೆ ಮತ್ತು ಗ್ರೀನ್ ಲ್ಯಾಂಡ್ ಯು.ಎಸ್ ಗೆ ಸೇರಬೇಕು ಎಂಬ ಹೇಳಿಕೆಗಳೂ ಅಷ್ಟೇ,
ಇವೆಲ್ಲದರಿಂದ ಟ್ರಂಪ್ ರ ಮುಂದಿನ ನಿರೀಕ್ಷಿಸಬಹುದಾದ ಹೇಳಿಕೆ, ಅಥವಾ ಕ್ರಮ ಪೂರ್ಣವಾಗಿ ಅನಿರೀಕ್ಷಿತವಾಗಿರುತ್ತದೆ ಎಂದಷ್ಟೇ ಗ್ಯಾರಂಟಿಯಾಗಿ ಹೇಳಬಹುದು ಎಂಬ ವಿಡಂಬನೆಗೆ ಅವರು ಗುರಿಯಾಗಿದ್ದಾರೆ. ಕೆಲವರು ಟ್ರಂಪ್ ಅವರನ್ನು ತಿಕ್ಕಲು, ಅರಾಜಕ, ಕುಳಿತ ಮರದ ಗೆಲ್ಲು ಕಡಿಯುವ ದಡ್ಡ; ಮತ್ತು ಅವರ ಹಲವು ಹೇಳಿಕೆ ನೀತಿಗಳ ನಡುವೆ ಯಾವುದೇ ತರ್ಕ, ತಾಳಮೇಳ ಹುಡುಕುವುದೇ ಮೂರ್ಖತನ ಎಂದು ವೈಯಕ್ತಿಕ ನಿಂದನೆ ಮಾಡಿದ್ದಾರೆ.. ಇನ್ನೊಂದು ಕಡೆ ಟ್ರಂಪ್ ಉಕ್ರೇನ್ ಮತ್ತು ಗಾಜಾದಲ್ಲಿ ಶಾಂತಿ ಸ್ಥಾಪಿಸಲು ಹೊರಟಿದ್ದಾರೆ. ಜಾಗತಿಕವಾಗಿ ಮಿಲಿಟರಿ ಸಂಘರ್ಷಕ್ಕೆ ಕಡಿವಾಣ ಹಾಕುವ ಮೂಲಕ ಮಿಲಿಟರಿ ಖರ್ಚನ್ನು ಕಡಿಮೆ ಮಾಡಲಿದ್ದಾರೆ. ಆಮದು ಸುಂಕ ಹೇರುವ ನೀತಿ ಯು.ಎಸ್ ನ್ನು ಮತ್ತೆ ಕೈಗಾರಿಕಾ ಉತ್ಪಾದನಾ ಕೇಂದ್ರವನ್ನಾಗಿಸಿ ಮತ್ತು ದೇಶಕ್ಕೆ ಅಗತ್ಯವಾದ ಕಾನೂನುಬದ್ಧ ವಲಸೆ ಮಾತ್ರ ಉತ್ತೇಜಿಸಿ ನಿರುದ್ಯೋಗ ನಿರ್ಮೂಲನ ಮಾಡಲಿದೆ ಎಂದು ಅವರ ಬೆಂಬಲಿಗರು ಮಾತ್ರವಲ್ಲ ಇತರ ಜನವಿಭಾಗಗಳೂ ನಂಬಿವೆ. ಇವೆಲ್ಲದರಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲವೆಂದಲ್ಲ. ಆದರೆ ಬಹುಪಾಲು ಇದು ಸಂಕೀರ್ಣವಾದ ವಿದ್ಯಮಾನವನ್ನು ಅತಿಯಾಗಿ ಸರಳೀಕರಿಸಿ ಕೆಲವು ಆಯಾಮಗಳನ್ನು ಮಾತ್ರ ನೋಡುವುದರಿಂದ ಹುಟ್ಟಿದ ತಪ್ಪು ಕಲ್ಪನೆಗಳು.
ಟ್ರಂಪ್ ತಿಕ್ಕಲುತನವಲ್ಲ, ಹೊಸ ಫಾರ್ಮುಲಾ
ಆದರೆ ಈ ಬದಲಾವಣೆಗಳು ಟ್ರಂಪ್ ಅವರ ವೈಯಕ್ತಿಕ ತಿಕ್ಕಲುತನ, ತೆವಲು, ಮರ್ಜಿಗಳಿಂದ ಮಾತ್ರ ಆಗುತ್ತಿಲ್ಲ. ಬದಲಿಗೆ ಯು.ಎಸ್ ನ ಪ್ರಭುತ್ವ, ರಾಜಕಾರಣ, ಮಿಲಿಟರಿ, ದೇಶೀಯ ಮತ್ತು ವಿದೇಶಿ ನೀತಿಗಳಲ್ಲಿ ಹಳೆಯದನ್ನು ನಾಶ ಮಾಡಿ, ಆಮೂಲಾಗ್ರವಾಗಿ ಹೊಸದಾಗಿ ಮತ್ತೆ ಕಟ್ಟುವ ಯು.ಎಸ್ ನ ಆಳುವ ವರ್ಗದ ಒಂದು ವಿಭಾಗದ ಗಂಭೀರ ಪ್ರಯತ್ನದ ಭಾಗವಾಗಿ ಇದು ನಡೆಯುತ್ತಿದೆ. ಟ್ರಂಪ್ ಅದರ ಸಾಧನ ಎಂಬಂತೆ ಕಾಣುತ್ತದೆ. ಹೀಗೆ ಯಾವ ಆಧಾರದ ಮೇಲೆ ಹೇಳುವುದು? ಆಳುವ ವರ್ಗದ ಯಾವ ವಿಭಾಗ ಇದರ ಹಿಂದಿದೆ? ಇದರ ಪರಿಣಾಮವೇನು? ಇದು ಗೆಲ್ಲಬಹುದೋ? ಇದರ ಪರಿಣಾಮ ಯು.ಎಸ್ ಮತ್ತು ಜಗತ್ತಿನ ಜನರ ಮೇಲೆ ಏನಾಗಬಹುದು – ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
ಇದನ್ನೂ ಓದಿ : ಟ್ರಂಪ್ 2.0 ಮತ್ತು ಮೋದಿ 3.0 – ವ್ಯಂಗ್ಯಚಿತ್ರಕಾರರು ಕಾಣುವಂತೆ
ಸೋವಿಯೆಟ್ ಒಕ್ಕೂಟದ ಪತನದ ನಂತರ ಯು.ಎಸ್ ಹೊಂದಿದ್ದ ಸಂಪೂರ್ಣ ಜಾಗತಿಕ ಅಧಿಪತ್ಯದ ಅವನತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ, ತನ್ನ ಜಾಗತಿಕ ಅಧಿಪತ್ಯವನ್ನು ಉಳಿಸಿಕೊಳ್ಳಲು ಈ ಹೊಸ ವ್ಯೂಹದ ಹುಡುಕಾಟ ನಡೆದಿದೆ ಎಂಬುದನ್ನು ಮೊದಲಿಗೆ ಗಮನಿಸಬೇಕು. 2008ರ ಜಾಗತಿಕ ಬಂಡವಾಳಶಾಹಿಯ ಮಹಾ ಬಿಕ್ಕಟ್ಟು, ಚೀನಾ ಯು.ಎಸ್ ಗಿಂತ ಉತ್ಪಾದನಾ ಸಾಮರ್ಥ್ಯ ಅದರಲ್ಲೂ ಕೈಗಾರಿಕಾ ಉತ್ಪಾದನೆಯಲ್ಲಿ ಮತ್ತು ಹೊಸ ಮುಂಚೂಣಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು, ಮಿಲಿಟರಿ ತಂತ್ರಜ್ಞಾನದಲ್ಲೂ ಹಲವು ಕ್ಷೇತ್ರಗಳಲ್ಲಿ ಸಮಬಲ ಮತ್ತು ಕೆಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು, ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆ ಮುಂತಾದ ಸಂಘಟನೆಗಳ ಬಲ ಹೆಚ್ಚಿ ಬಹು-ಧ್ರುವೀಯ ಜಗತ್ತಿನತ್ತ ಅಪ-ಡಾಲರೀಕರಣದತ್ತ ಚಲನೆ, – ಈ ಹಿನ್ನೆಲೆಯಲ್ಲಿ ಈ ಯು.ಎಸ್ ಸಾಮ್ರಾಜ್ಯಶಾಹಿ ಅಧಿಪತ್ಯದ ಅವನತಿಯ ಬಿಕ್ಕಟ್ಟನ್ನು ನೋಡಬೇಕು. ಈ ಹಿನ್ನೆಲೆಯಲ್ಲಿ ಯು.ಎಸ್ ರೂಪಿಸಿದ್ದ ಜಾಗತಿಕ ಆರ್ಥಿಕ ರಾಜಕೀಯ ಮತ್ತು ಮಿಲಿಟರಿ ವ್ಯವಸ್ಥೆಯನ್ನು ಹಾಗೆ ಮುಂದುವರೆಸುವುದು ಸಾಧ್ಯವಿಲ್ಲ. ಯು.ಎಸ್ ಸಾಮ್ರಾಜ್ಯಶಾಹಿ ಅಧಿಪತ್ಯದ ಅವನತಿಯನ್ನು ತಡೆದು ಅದನ್ನು ಮುಂದುವರೆಸಬೇಕಾದರೆ ಅದರ ನೀತಿ-ಧೋರಣೆಗಳಲ್ಲಿ ಮತ್ತು ಜಾಗತಿಕ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಬೇಕು ಎಂದು ಯು.ಎಸ್ ಆಳುವ ವರ್ಗದ ಒಂದು ವಿಭಾಗಕ್ಕೆ ಅನಿಸಿದೆ.
ಉಕ್ರೇನ್ ಯುದ್ಧ, ಮತ್ತು ಅದರ ಭಾಗವಾಗಿ – ರಶ್ಯಾದ ಮೇಲೆ ಯು.ಎಸ್-ಯುರೋ ಕೂಟ ಹೊರಿಸಿದ ಅಭೂತಪೂರ್ವ ಆರ್ಥಿಕ ದಿಗ್ಬಂಧನಗಳು, ಈ ಆರ್ಥಿಕ ದಿಗ್ಬಂಧನವನ್ನು ಯು.ಎಸ್ ನ ಭಾರತದಂತಹ ‘ಮಿತ್ರರಾಷ್ಟ್ರ’ ಗಳು ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳು ನಿರ್ಲಕ್ಷಿಸಿದ್ದು, ಈ ಆರ್ಥಿಕ ದಿಗ್ಬಂಧನವನ್ನು ಧಿಕ್ಕರಿಸಿ ರಶ್ಯಾ ಆರ್ಥಿಕತೆ ಬೆಳೆದದ್ದು, ಬದಲಿಗೆ ಯುರೋ ಕೂಟದ ದೇಶಗಳ ಆರ್ಥಿಕಕ್ಕೆ ಅದು ಬ್ಯೂಮರಾಂಗ್ ಆದದ್ದು, ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆ ಮುಂತಾದ ಸಂಘಟನೆಗಳ ವಿಸ್ತರಣೆಯ ಮತ್ತು ಅಪ-ಡಾಲರೀಕರಣದ ವೇಗ ಹೆಚ್ಚಿದ್ದು, ಉಕ್ರೇನಿನಲ್ಲಿ ಮಿಲಿಟರಿಯಾಗಿ ಸೋತಿದ್ದು ನಾಟೋ ಕೂಟದ ಮಿಲಿಟರಿ ಪ್ರಾಬಲ್ಯ ಮತ್ತು ಮಿಲಿಟರಿ ತಂತ್ರಜ್ಞಾನದ ಶ್ರೇಷ್ಟತೆಯ ಮುಂದೆ ಪ್ರಶ್ನೆ ಚಿಹ್ನೆ ಬಿದ್ದಿರುವುದು – ಇವೆಲ್ಲ ಬೆಳವಣಿಗೆಗಳು ಯು.ಎಸ್ ಸಾಮ್ರಾಜ್ಯಶಾಹಿ ಅಧಿಪತ್ಯದ ಅವನತಿಯ ವೇಗವನ್ನು ಹೆಚ್ಚಿಸಿದ್ದಲ್ಲದೆ ಅದು ಢಾಳಾಗಿ ಎಲ್ಲರಿಗೂ ಗೋಚರಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತದ ಈ ನೀತಿ-ಧೋರಣೆ ಮತ್ತು ಮಿಂಚಿನ ಕ್ರಮಗಳನ್ನು ನೋಡಬೇಕು.
ಟೆಕ್ ದೈತ್ಯರ ಗಮನಾರ್ಹ ಪಾತ್ರ
ಟ್ರಂಪ್ ನ ಚುನಾವಣಾ ಪ್ರಚಾರದಲ್ಲಿ ಮತ್ತು ಅಧ್ಯಕ್ಷೀಯ ಪದಗ್ರಹಣ ಸಂದರ್ಭದಲ್ಲಿ ಟೆಸ್ಲಾ ವಿದ್ಯುತ್ ಕಾರು ಮತ್ತು ಸ್ಪೇಸ್-ಎಕ್ಸ್ ಖ್ಯಾತಿಯ ಇಲೊನ್ ಮಸ್ಕ್ ಅವರ ಪ್ರಭಾವ ಕಣ್ಣಿಗೆ ರಾಚುವಂತಿತ್ತು. ಮಸ್ಕ್ ಮಾತ್ರವಲ್ಲ ಅಮೆಝಾನ್ ನ ಜೆಫ್ ಬೆಝೋಸ್, ಫೇಸ್ ಬುಕ್ ನ ಮಾರ್ಕ್ ಝುಕರ್ ಬರ್ಗ್, ಗೂಗಲ್ ನ ಸುಂದರ್ ಪಿಚ್ಚೈ, ಆಪಲ್ ನ ಟಿಮ್ ಕುಕ್ ಸಹ ಪದಗ್ರಹಣ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿದ್ದರು ಮತ್ತು ಟ್ರಂಪ್ ಆಡಳಿತದ ನೀತಿ-ಧೋರಣೆಗಳು ಮತ್ತು ಕ್ರಮಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದ್ದಾರೆ. ಈ ಕಂಪನಿಗಳು ಮತ್ತು ಅದರ ಡಾಲರ್ ಶತಕೋಟ್ಯಾಧಿಪತಿಗಳನ್ನು “ಟೆಕ್ ದೈತ್ಯರು” ಎಂದು ಕರೆಯಲಾಗಿದೆ. ಈ ಐದು ಕಂಪನಿಗಳು ತಮ್ಮ ಕ್ಷೇತ್ರಗಳಲ್ಲಿ ಭಾರೀ (ಜಾಗತಿಕವಾಗಿ ಅತಿ ದೊಡ್ಡ ಮಾರುಕಟ್ಟೆ ಪಾಲು ಮೂಲಕ) ಏಕಸ್ವಾಮ್ಯ ಹೊಂದಿವೆ ಮತ್ತು ಟೆಸ್ಲಾ ಬಿಟ್ಟರೆ ಉಳಿದ 4 ಕಂಪನಿಗಳು ಜಗತ್ತಿನ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ 10 ಕಂಪನಿಗಳ ಪಟ್ಟಿಯಲ್ಲಿ ಮೇಲೆ ಇವೆ. ಈ 5 ಟೆಕ್ ದೈತ್ಯರಲ್ಲದೆ ಟ್ರಂಪ್ ಆಡಳಿತದ ಹೊಸ ವ್ಯೂಹ ಮತ್ತು ನೀತಿಗಳ ಮೇಲೆ ಪೀಟರ್ ಥೀಲ್, ಡೇವಿಡ್ ಸ್ಯಾಕ್ಸ್ ಮತ್ತು ಮಾರ್ಕ್ ಆಂಡರ್ಸನ್ ಎಂಬ ಟೆಕ್ ಶತಕೋಟ್ಯಾಧಿಪತಿಗಳು ಸಹ ಪ್ರಭಾವ ಬೀರುತ್ತಿದ್ದಾರೆ. ಮಸ್ಕ್ ಅಂತೂ ಸರಕಾರದ ದಕ್ಷತೆ ಹೆಚ್ಚಿಸುವ ಇಲಾಖೆಯ (ಡಿ.ಒ.ಜಿ.ಇ) ಮುಖ್ಯಸ್ಥನಾಗಿ ಮತ್ತು ಟ್ರಂಪ್ ನ ಮುಖ್ಯ (ಆದರೆ ಅನಧಿಕೃತ) ನೀತಿ ಸಲಹಾಕಾರನಾಗಿ ಟ್ರಂಪ್ ಆಡಳಿತದ ಭಾಗವಾಗಿದ್ದಾನೆ ಮತ್ತು ಭಾರೀ ಪ್ರಭಾವ ಹೊಂದಿದ್ದಾನೆ.
ಉಕ್ರೇನ್ ಯುದ್ಧದಲ್ಲಿ ಭಾರೀ ಸೋಲಿನ ಹಿನ್ನೆಲೆಯಲ್ಲಿ ಮಸ್ಕ್ ಮತ್ತು ಈ ಟೆಕ್ ದೈತ್ಯರು ಯು.ಎಸ್ ನ ಮಿಲಿಟರಿ ತಂತ್ರಜ್ಞಾನದ ಪ್ರಸ್ತುತತೆಯನ್ನು ಪ್ರಶ್ನಿಸಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಯು.ಎಸ್ ಮಿಲಿಟರಿಯ (ದುಬಾರಿ ಆದರೆ) ಶ್ರೇಷ್ಠ ಉಪಕರಣಗಳು ಎನ್ನಲಾದ ವಿಮಾನ ಹೊತ್ತ ಭಾರೀ ಯುದ್ಧನೌಕೆಗಳು, ಅಣು ಸಬ್ ಮರೀನ್ ಗಳು, ಬಿ-52 ಬಾಂಬರುಗಳು, ಅಬ್ರಾಮ್ಸ್ ಟ್ಯಾಂಕುಗಳು, ಪೇಟ್ರಿಯಟ್ ವಿಮಾನ-ವಿರೋಧಿ ಕ್ಷಿಪಣಿಗಳು ಪರಿಣಾಕಾರಿಯಾಗಿರಲಿಲ್ಲ ಅಥವಾ ಅಪ್ರಯೋಜಕವಾಗಿದ್ದವು. ಎ.ಐ (ಕೃತಕ ಬುದ್ಧಿಮತ್ತೆ) ಮೂಲಕ ನಿಯಂತ್ರಿಸಿದ ಅಗ್ಗದ ಡ್ರೋನ್ ಗಳು ಬಾಂಬರುಗಳನ್ನು ಮತ್ತು ದುಬಾರಿ ವಿಮಾನ-ವಿರೋಧಿ ಕ್ಷಿಪಣಿಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದ್ದವು. ಉಕ್ರೇನಿನ ಭೂಮಿ ಆಧಾರಿತ ಕೇಬಲ್/ಫೈಬರ್ ಮತ್ತು ವೈರ್ ಲೆಸ್ ಸಂಪರ್ಕ ವ್ಯವಸ್ಥೆ ರಶ್ಯಾದ ದಾಳಿಯಲ್ಲಿ ಕುಸಿದು ಬಿದ್ದು, ಮಸ್ಕ್ ನ ಬಾಹ್ಯಾಕಾಶ ಆಧಾರಿತ ಸಂಪರ್ಕ ವ್ಯವಸ್ಥೆಯನ್ನು ಸ್ಟಾರ್ ಲಿಂಕ್ ಒದಗಿಸಿತು. ಉಪಗ್ರಹದಿಂದ ಪಡೆದ ಸ್ಥಳದ ಚಿತ್ರ, ಸ್ಥಳದ ಬಗ್ಗೆ ಇರುವ ಇತರ ಮುಕ್ತ ಮಾಹಿತಿ, ಡ್ರೋನ್ ಕಳಿಸಿದ ವಿಡಿಯೊ, ಯುದ್ಧಕ್ಷೇತ್ರದಿಂದ ಬಂದ ವರದಿಗಳು – ಇವೆಲ್ಲ ಮಾಹಿತಿ ಸಮಗ್ರೀಕರಿಸಿ ವಿಶ್ಲೇಷಿಸಿ ಡ್ರೋನ್ ದಾಳಿಯನ್ನು ಎತ್ತ ಕೇಂದ್ರೀಕರಿಸಬೇಕೆಂದು ಎ.ಐ ಬಳಸಿ ಪಲಂಟಿರ್ (ಪೀಟರ್ ಥೀಲ್ ಕಂಪನಿ ತಯಾರಿಸಿದ ಸಾಫ್ಟ್ ವೇರ್) ಟ್ಯಾಂಕ್-ವಿರೋಧಿ ಕ್ಷಿಪಣಿಗಳು, ತೋಪು ಮುಂತಾದ ಅಸ್ತ್ರಗಳನ್ನು ಗುರಿ ಇಟ್ಟದ್ದರಿಂದ ಉಕ್ರೇನ್ ಇಷ್ಟಾದರೂ ಪ್ರತಿರೋಧ ಒಡ್ಡಲು ಸಾಧ್ಯವಾಯಿತು ಎಂಬುದು ಮಸ್ಕ್ ಮತ್ತು ಇತರ ಟೆಕ್ ದೈತ್ಯರ ವಾದ. ಯು.ಎಸ್ ನ ಯಾವುದೇ ರಾಡಾರ್ ತಪ್ಪಿಸಿ ದಾಳಿಮಾಡಬಲ್ಲ ಎಫ್-35 ಫೈಟರ್ ಜೆಟ್ ಒಂದು ಅನಗತ್ಯ ದುಬಾರಿ ಕಳಪೆ ಬಿಳಿಆನೆ. ಅದರ ಉತ್ಪಾದನೆ ನಿಲ್ಲಿಸಬೇಕು ಎಂಬ ಮಸ್ಕ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಯಿತು.
ಹೊಸ ಫಾರ್ಮುಲಾದ ಮುಖ್ಯ ಅಂಶಗಳು
ಭವಿಷ್ಯದ ಯುದ್ಧಗಳನ್ನು ಎ.ಐ ನಿರ್ದೇಶಿತ (ಸೈನಿಕ ರಹಿತ) ಡ್ರೋನ್ ಸೈನ್ಯದ ಸ್ವಯಂ-ಚಾಲಿತ ಯುದ್ಧಗಳಾಗಿರುತ್ತವೆ. ಎ.ಐ ಮತ್ತು ಡ್ರೋನ್ ತಂತ್ರಜ್ಞಾನಗಳಲ್ಲಿ ಪಾರಮ್ಯ ಪಡೆಯುವಲ್ಲಿ ಗಮನ ಕೇಂದ್ರೀಕರಿಸಬೇಕು. ಹಳೆಯ ಬಿಳಿ ಆನೆಗಳನ್ನು ತ್ಯಜಿಸಬೇಕು ಎಂಬುದು ಟೆಕ್ ದೈತ್ಯರ ವಾದ. ಈ ವಾದದಲ್ಲಿ ಕೆಲವು ಸತ್ಯಾಂಶಗಳಿವೆ ನಿಜ. ಆದರೆ ಜತೆಗೆ ತಮ್ಮ ಕ್ಷೇತ್ರದ ತಂತ್ರಜ್ಞಾನ ಬಳಸುವ ರಕ್ಷಣಾ ವ್ಯವಸ್ಥೆ ರೂಪಿಸಿ ತಮ್ಮ ವಹಿವಾಟು ಮತ್ತು ಲಾಭ ಹೆಚ್ಚಿಸುವ ತಂತ್ರವೂ ಅಡಗಿದೆ ಎಂಬುದೂ ಅಷ್ಟೇ ನಿಜ. ಉಕ್ರೇನ್ ಯುದ್ಧದಲ್ಲಿ ಡ್ರೋನ್ ನ ವ್ಯಾಪಕ ಬಳಕೆ ಜತೆಗೆ ಸಾಂಪ್ರದಾಯಿಕ (ಉದಾ : ಸೂಪರ್ ಸಾನಿಕ್ ಯುದ್ಧ ವಿಮಾನಗಳು, ಕ್ಷಿಪಣಿಗಳು) ಯುದ್ಧೋಫಕರಣಗಳಲ್ಲಿ ಸಹ ರಶ್ಯಾದ ಪಾರಮ್ಯ ಕಂಡು ಬಂತು. ಅದೂ ಉಕ್ರೇನಿನ ಮತ್ತು ಅದರ ಹಿಂದಿದ್ದ ನಾಟೋ ಸೋಲಿಗೆ ಕಾರಣವಾಯಿತು ಎಂಬುದೂ ಅಷ್ಟೇ ನಿಜ. ಅದು ಏನೇ ಇದ್ದರೂ ಟ್ರಂಪ್ ಆಡಳಿತದ ಭವಿಷ್ಯದ ಯುದ್ಧದ ಕಾಣ್ಕೆ ಟೆಕ್ ದೈತ್ಯರ ಸಲಹೆಯಂತೆ ಇರಲಿದೆ ಮತ್ತು ಸಾಂಪ್ರದಾಯಿಕ ರಕ್ಷಣಾ ಉಪಕರಣಗಳಲ್ಲಿ ಕಡಿತ ಮಾಡಬಹುದು ಎನ್ನಲಾಗಿದೆ. ಅಥವಾ ಕನಿಷ್ಠ ಟೆಕ್ ದೈತ್ಯರಿಗೆ ರಕ್ಷಣಾ ಬಜೆಟ್ ನ ದೊಡ್ಡ ಪಾಲಂತೂ ಸಿಗಲಿದೆ.
ಟ್ರಂಪ್ ಅವರ ರಶ್ಯಾದ ಜತೆ ಸಮಜಾಯಿಷಿ ಮಾಡುವ ನೀತಿ ಕೂಡಾ ಚೀನಾವನ್ನು ಮುಖ್ಯ ವಿರೋಧಿಯಾಗಿ ಕಾಣುವ ಮತ್ತು ಅದರ ಪ್ರಾಬಲ್ಯವನ್ನು ಅಡಗಿಸುವ ಟೆಕ್ ದೈತ್ಯರ ಆಧ್ಯತೆಯಿಂದ ಹೊರಡುವಂತೆ ಕಾಣುತ್ತದೆ. ಈ ಟೆಕ್ ದೈತ್ಯರ ಕ್ಷೇತ್ರವಾದ
ಕ್ವಾಂಟಮ್ ಮುಂತಾದ ಹೊಸ ಕಂಪ್ಯೂಟರ್ ತಂತ್ರಜ್ಞಾನಗಳು, ವಿದ್ಯುತ್ ವಾಹನಗಳಿಗೆ ಸಂಬಂಧಿಸಿದ ಬ್ಯಾಟರಿ ಮುಂತಾದ ತಂತ್ರಜ್ಞಾನಗಳು ಮತ್ತು ಅದಕ್ಕೆ ಬೇಕಾದ ಅಪರೂಪದ ಲೋಹಗಳು (ಲೀಥಿಯಂ ಇತ್ಯಾದಿ,), ಅತಿ ಸೂಕ್ಷ್ಮ ಸೆಮಿಕಂಡಕ್ಟರ್, 5ಜಿ, ಕೃತಕ ಬುದ್ಧಿಮತ್ತೆ ಮುಂತಾದ ಮುಂಚೂಣಿ ತಂತ್ರಜ್ಞಾನಗಳಲ್ಲಿ ಚೀನಾ ತೀವ್ರ ಮುನ್ನಡೆ ಸಾಧಿಸಿದ್ದು ಅದಕ್ಕೆ ಅಡೆತಡೆ ಒಡ್ಡುವ ಕ್ರಮಗಳನ್ನು ಟ್ರಂಪ್ ಆದ್ಯತೆಯದ್ದಾಗಿ ಕಾಣುವುದು ಸಹ ಇವರ ಪ್ರಭಾವದಿಂದಲೇ ಎಂಬಂತೆ ಕಾಣುತ್ತಿದೆ.
ಇದನ್ನೂ ಓದಿ : ಸುಂಕದ ಗೋಡೆ ಕಟ್ಟುವ ಟ್ರಂಪ್ ಬೆದರಿಕೆ
ಬಿಡೆನ್ ಅಧ್ಯಕ್ಷಗಿರಿಯಲ್ಲಿ ಸಹ ಚೀನಾಕ್ಕೆ ಅತಿ ಸೂಕ್ಷ್ಮ ಸೆಮಿಕಂಡಕ್ಟರ್ ತಂತ್ರಜ್ಞಾನಗಳ ರಫ್ತಿನ ಮೇಲೆ ಕಟುವಾದ ನಿರ್ಬಂಧ ಹೇರಲಾಗಿತ್ತು. ವ್ಯೂಹಾತ್ಮಕ ಆದ್ಯತೆಯ ಅತಿ ಸೂಕ್ಷ್ಮ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಯು.ಎಸ್ ಗೆ ವಾಪಸು ತರಲು 52 ಶತಕೋಟಿ ಡಾಲರು ಪ್ರೊತ್ಸಾಹ ಧನ ಮತ್ತು ಚಿಪ್ಸ್ ಕಾನೂನು ತರಲಾಗಿತ್ತು. ಆದಾಗ್ಯೂ ಚೀನಾದ ಮುನ್ನಡೆಗೆ ತಡೆ ಮತ್ತು ಉತ್ಪಾದನೆಯನ್ನು ಯು.ಎಸ್ ಗೆ ವಾಪಸು ತರುವ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಹುವಾವೇ 7 ನ್ಯಾನೋ ಮೀಟರ್ ಚಿಪ್ ಬಳಸಿದ ಮೊಬೈಲ್ ಬಿಡುಗಡೆ ಮಾಡಿದೆ. ಎ.ಐ ಗೆ ಬೇಕಾದ ಕ್ಷಮತೆಯ ಕಂಪ್ಯೂಟರ್ ಚಿಪ್ ಮೇಲೆ ನಿರ್ಬಂಧಿಸುವ ಮೂಲಕ ಚೀನಾದ ಎ.ಐ ಕ್ಷೇತ್ರದ ಮುನ್ನಡೆ ತಡೆಯಬಹುದು ಎಂಬ ನಿರೀಕ್ಷೆಗೂ ಅತ್ಯಂತ ದಕ್ಷ ಕಡಿಮೆ ಕ್ಷಮತೆಯ ಚಿಪ್ ಬಳಸುವ ಆದರೆ ಅಷ್ಟೇ ಪರಿಣಾಮಕಾರಿಯಾದ “ಡೀಪ್ ಸೀಕ್’” ಬಿಡುಗಡೆಯ ಘೋಷಣೆ ತಣ್ಣೀರೆರಚಿದೆ.
ಈಗ ಟ್ರಂಪ್ ಆಡಳಿತ ಆಮದು ಸುಂಕದ ಬೆದರಿಕೆ ಮತ್ತು ಕಾರ್ಪೊರೆಟ್ ನಿಯಂತ್ರಣ ಬಳಸಿ ತೈವಾನ್ ನ ಅತಿ ದೊಡ್ಡ ಮತ್ತು ಅತ್ಯಾಧುನಿಕ ಸೆಮಿಕಂಡಕ್ಟರ್ ಉತ್ಪಾದಕ ಟಿ.ಎಸ್.ಎಂ.ಸಿ ಯನ್ನು ಯು.ಎಸ್ ನಲ್ಲಿ ಫ್ಯಾಕ್ಟರಿ ಸ್ಥಾಪಿಸುವಂತೆ ಬಲವಂತ ಮಾಡುವ ಪ್ರಯತ್ನದಲ್ಲಿದೆ. ಎ.ಐ ನಲ್ಲಿ ಅಗಾಧ ಬೆಳವಣಿಗೆ, ಡಾಟಾ ಸೆಂಟರ್ ಹಾರ್ಡ್ ವೇರ್ ಮತ್ತು ಅವುಗಳಿಗೆ ಅಗ್ಗದ ವಿದ್ಯುತ್ ಪೂರೈಕೆಯ ಆಧಾರದಲ್ಲಿ ಯು.ಎಸ್ ಮತ್ತೆ ತಂತ್ರಜ್ಞಾನದ ಪ್ರಾಬಲ್ಯ ಸ್ಥಾಪಿಸಲು ಸಾಧ್ಯ. ಇದಕ್ಕೆ ಎ.ಐ ಸುರಕ್ಷಿತತೆ, ನೈತಿಕತೆ, ಪರಿಸರ ಕಾಳಜಿಯ ಆಧಾರದ ಮೇಲೆ ಯಾವುದೇ ನಿರ್ಬಂಧಗಳಿರಬಾರದು. (ಇಂತಹ ನಿರ್ಬಂಧಗಳಲ್ಲಿ ಟ್ರಂಪ್ ಗೆ ಮೊದಲೇ ನಂಬಿಕೆಯಿಲ್ಲ) ಎಂದು ಟೆಕ್ ದೈತ್ಯರು ಟ್ರಂಪ್ ಆಡಳಿತವನ್ನು ಒಪ್ಪಿಸಿದ್ದಾರೆ.
ಸರಕಾರದ ನಿರ್ವಹಣೆಯಲ್ಲೂ ಟೆಕ್ ಶತಕೋಟ್ಯಾಧಿಪತಿಗಳ “ಕಾರ್ಪೊರೆಟ್ ಮ್ಯಾನೇಜ್ ಮೆಂಟ್” ಹೈರ್-ಫೈರ್ ವಿಧಾನಗಳನ್ನು, ಎ.ಐ ಬಳಕೆಯ ಮೂಲಕ ಭಾರಿ ದಕ್ಷತೆ ಯ ಹೆಚ್ಚಳ (ಅಂದರೆ ಸಿಬ್ಬಂದಿ ಕಡಿತ), “ಹಣ ಪೋಲು ಮಾಡುವ” ಶಿಕ್ಷಣ, ಆರೋಗ್ಯ ಮತ್ತಿತರ ಸಾಮಾಜಿಕ ಕಲ್ಯಾಣ ಸೇವೆಗಳ ಕಡಿತಕ್ಕೆ ಮುಂದಾಗಿದೆ. ಇದನ್ನು ಈ ದೈತ್ಯರಲ್ಲೊಬ್ಬರಾದ ಮಸ್ಕ್ ನ ನೇರ ನಿಯಂತ್ರಣದಲ್ಲಿ ಮಾಡಲಾಗುತ್ತಿದೆ.
ರಶ್ಯಾ ಮುಂಚೂಣಿಯಲ್ಲಿರುವ ಕ್ಷೇತ್ರಗಳು ಇವರಿಗೆ ಆದ್ಯತೆಯವು ಅಲ್ಲ ಮಾತ್ರವಲ್ಲ, ರಶ್ಯಾದ ಜತೆ ಸಮಜಾಯಿಷಿ ನೀತಿಯ ಮೂಲಕ ಚೀನಾ-ರಶ್ಯಾ ವ್ಯೂಹಾತ್ಮಕ ನಿಕಟ ಸಂಬಂಧ ಕಡಿತದ ಸಾಧಿಸಿ ಚೀನಾವನ್ನು ದುರ್ಬಲಗೊಳಿಸಿ ಹಣಿಯಬಹುದು ಎಂಬ ಲೆಕ್ಕಾಚಾರವು ಇದೆ. ಇದಕ್ಕಾಗಿ ಯುರೋ ಕೂಟದ ಜತೆ ಮೈತ್ರಿ ಕಡಿತಕ್ಕೂ ತಯಾರಾಗುವ ನೀತಿ ಇವರದು. ಮಾತ್ರವಲ್ಲ ಏಕಸ್ವಾಮ್ಯ ಕಾನೂನು ಮತ್ತು ನೀತಿ ಉಲ್ಲಂಘಿಸಿರುವ ಆರೋಪದ ಮೇಲೆ ಈ ಟೆಕ್ ದೈತ್ಯ ರ ಮೇಲೆ ಯೂರೋ ಕೂಟ ವಿಧಿಸಿರುವ ಭಾರೀ ದಂಡ ಮತ್ತು ನಿರ್ಬಂಧಗಳ ಕಾರಣದಿಂದಲೂ ಯುರೋ ಕೂಟದ ಮೇಲೆ ಇವು ಆಕ್ರಾಮಕ ನೀತಿಗೆ ಉತ್ತೇಜನ ನೀಡುತ್ತಿವೆ.
ಟ್ರಂಪ್ ಆಡಳಿತದ “ಕ್ರಿಪ್ಟೊ ಕರೆನ್ಸಿ ಸೊವೆರಿನ್ ಫಂಡ್” ಘೋಷಣೆಯ ಹಿಂದೆನೂ ಟೆಕ್ ದೈತ್ಯರ ಕುಮ್ಮಕ್ಕು ಇದ್ದಂತಿದೆ. ಈ ಟೆಕ್ ದೈತ್ಯ ಶತಕೋಟ್ಯಾಧಿಪತಿಗಳಲ್ಲಿ ಹೆಚ್ಚಿನವರು ತಮ್ಮ ಆದಾಯದ ದೊಡ್ಡ ಭಾಗವನ್ನು ಕ್ರಿಪ್ಟೊ ಕರೆನ್ಸಿಯಲ್ಲಿ ಇಟ್ಟಿದ್ದಾರೆ.
ಇದರರ್ಥ ಟೆಕ್ ದೈತ್ಯ ಬಿಟ್ಟರೆ ಇತರ ವಿಭಾಗಗಳ ಅಥವಾ ಅಂಶಗಳ ಪಾತ್ರವಿಲ್ಲ ಟ್ರಂಪ್ ಹೊಸ ಫಾರ್ಮುಲಾದಲ್ಲಿ ಇಲ್ಲವೆಂದಲ್ಲ. ಟೆಕ್ ದೈತ್ಯರು ನಿರ್ದೇಶಿಸುತ್ತಿದ್ದಾರೆ ಅಥವಾ ಕನಿಷ್ಠ ಪ್ರಧಾನ ಪಾತ್ರ ವಹಿಸುತ್ತಿರುವಂತೆ ಕಾಣುತ್ತಿದೆ.
ಹೊಸ ಫಾರ್ಮುಲಾ ಗೆಲ್ಲಬಹುದೇ?
ಟ್ರಂಪ್ ಆಡಳಿತ, 1990ರ ದಶಕದಲ್ಲಿ ಆರಂಭವಾದ ಯು.ಎಸ್ ಸಾಮ್ರಾಜ್ಯದ ಏಕಧ್ರುವೀಯ ಯುಗ ಮುಗಿದಿದೆ ಎಂದು ಹಿಂದಿನ ಯಾವ ಆಡಳಿತಕ್ಕೆ ಹೋಲಿಸಿದರೂ ಸ್ಪಷ್ಟವಾಗಿ ಗುರುತಿಸಿದೆ. ಹೊಸ ಬಹುಧ್ರುವೀಯ ಜಗತ್ತನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಅದು, ಬರಿಯ ಮಿಲಿಟರಿ ಬಲದಿಂದ ತನ್ನ ಅಧಿಪತ್ಯ ಉಳಿಸಿಕೊಳ್ಳಲು ಸಾಧ್ಯವಿಲ್ಲ ವೆಂದೂ ಗುರುತಿಸಿದ ಅದು, ತನ್ನ ಆರ್ಥಿಕ ಮತ್ತು ತಂತ್ರಜ್ಞಾನದ ಪ್ರಾಬಲ್ಯವನ್ನು ಮತ್ತೆ ಪಡೆಯಲು ಹತಾಶ ಪ್ರಯತ್ನ ನಡೆಸಿದೆ. ಮಿಲಿಟರಿ ಬಲದ ಬದಲು ಆಮದು ಸುಂಕ ಮತ್ತಿತರ “ಆರ್ಥಿಕ ಯುದ್ಧ’ದ ತಂತ್ರ ಬಳಸಲು ಬಯಸಿದೆ. ಇಡೀ ಜಗತ್ತಿನ ಮೇಲೆ ಪ್ರಾಬಲ್ಯವನ್ನು ಸಾಧಿಸುವ ಬದಲು ಪಶ್ಚಿಮ ಗೋಳಾರ್ಧ ದ ಮೇಲೆ ಒತ್ತು ಕೊಡಬೇಕೆಂದಿದೆ. ಚೀನಾವನ್ನು ರಶ್ಯಾ ಮತ್ತು ಇತರ ದೇಶಗಳಿಂದ ಪ್ರತ್ಯೇಕಿಸಿ ಅದರ ವಿರುದ್ಧ ತೀವ್ರ ಶೀತ ಸಮರ ನಡೆಸಬೇಕೆಂದಿದೆ. ಇದಕ್ಕಾಗಿ ಹಿಂದಿನ ನೀತಿ-ಧೋರಣೆಗಳು ಮತ್ತು ತಾನೇ ಹುಟ್ಟಿ ಹಾಕಿದ ಜಾಗತಿಕ ವ್ಯವಸ್ಥೆ ಯನ್ನು ಬುಡಮೇಲು ಮಾಡಲು ಹಿಂದೆ ಮುಂದೆ ನೋಡುತ್ತಿಲ್ಲ. ಇದಕ್ಕೆ ಬೇಕಾದ ಹೊಸ ಫಾರ್ಮುಲಾ ವನ್ನು ಟೆಕ್ ದೈತ್ಯರಿಂದ ಪಡೆಯುತ್ತಿರುವಂತೆ ಕಾಣುತ್ತಿದೆ.
ಈ ಹೊಸ ಟ್ರಂಪ್ ಫಾರ್ಮುಲಾ ಕೆಲಸ ಮಾಡಬಹುದೇ? ಆಮದು ಸುಂಕ ಮುಂತಾದ ಆರ್ಥಿಕ ಯುದ್ಧದ ನೀತಿಗಳ ಮತ್ತು ಒತ್ತಡಗಳ ಮೂಲಕ ಕೈಗಾರಿಕಾ ಉತ್ಪಾದನೆಯನ್ನು ಯು.ಎಸ್ ಗೆ ವಾಪಸು ತರುವುದು ಸುಲಭದ ಕೆಲಸವಲ್ಲ. ಇದಕ್ಕೆ ಬೇಕಾದ ಮೂಲಸೌಕರ್ಯ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನು ಒದಗಿಸುವುದು ಸಾಕಷ್ಟು ದೀರ್ಘ ಸಮಯ ಮತ್ತು ತಾಳ್ಮೆಯ ಕೆಲಸ ಬೇಡುತ್ತದೆ. ಟೆಕ್ ದೈತ್ಯರ “ಹೊಸ ಸೇವೆ”ಯ ಉದ್ಯಮಗಳಲ್ಲಿ ಹೂಡಿದ ಬಂಡವಾಳಕ್ಕೆ ಸೂಪರ್ ಲಾಭ ಬರುತ್ತಿರುವಾಗ ಮತ್ತು ಶೇರುಗಳ ಮಾರುಕಟ್ಟೆ ಮೌಲ್ಯ ಭಾರೀ ಪ್ರಮಾಣದಲ್ಲಿ ಏರುತ್ತಿರುವಾಗ, ಬಂಡವಾಳಶಾಹಿ (ಎಷ್ಟೇ ಉತ್ತೇಜನ, ಒತ್ತಡವಿದ್ದರೂ) ಕಡಿಮೆ ಲಾಭದ ಕೈಗಾರಿಕಾ ಉತ್ಪಾದನೆಯಲ್ಲಿ ಹೂಡಿಕೆ ಮಾಡುತ್ತಾರೆ ಎಂದು ನಿರೀಕ್ಷಿಸುವುದೇ ಅವಾಸ್ತವ. ಹೀಗೆ ಕಾರ್ಮಿಕ ವರ್ಗಕ್ಕೆ “ಉತ್ತಮ ಕೈಗಾರಿಕಾ ಉದ್ಯೋಗ”ಗಳ ಭರವಸೆ ಹುಸಿಯಾಗಬಹುದು. ವಲಸಿಗರ ಕಾನೂನುಗಳಲ್ಲಿ ಮಾಡುತ್ತಿರುವ ಕಟು ಅರಾಜಕ ಬದಲಾವಣೆಗಳು ಅಗತ್ಯ ಕೌಶಲ್ಯ, ಪರಿಣತಿಯ ಕಾರ್ಮಿಕರ ತಂತ್ರಜ್ಞರ ಲಭ್ಯತೆಗೆ ತೊಡಕಾಗಬಹುದು. ಈಗಾಗಲೇ ಸರಕಾರಿ ನೌಕರರನ್ನು ಮಸ್ಕ್ ಅವರ ಡಿ.ಒ.ಜಿ.ಇ ಹಿಗ್ಗಾಮುಗ್ಗಾ ವಜಾ ಮಾಡುತ್ತಿರುವುದರ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿವೆ. ಟೆಸ್ಲಾ ಕಾರುಗಳಿಗೆ ಬಹಿಷ್ಕಾರ, ಬೆಂಕಿಯ ಪ್ರಕರಣಗಳೂ ನಡೆದಿವೆ.
ಈ ನಡುವೆ ಟ್ರಂಪ್ ಆಮದು ಸುಂಕ ಯುದ್ಧಕ್ಕೆ ಉತ್ತರವಾಗಿ ಇತರ ದೊಡ್ಡ ಧೇಶಗಳು, ಕೂಟಗಳು (ಕೆನಡಾ, ಚೀನಾ, ಯುರೋ ಕೂಟ, ಮೆಕ್ಸಿಕೊ) ಸಹ ಯು.ಎಸ್ ಮೇಲೆ ಆಮದು ಸುಂಕ ಅಸ್ತ್ರವನ್ನು ಬಳಸಿದರೆ ಒಂದು ಕಡೆ ಯು.ಎಸ್ ಜನತೆಗೆ ಎಲ್ಲ ಜೀವನಾವಶ್ಯಕ ವಸ್ತುಗಳ ಕೊರತೆ, ವಿಪರೀತ ಬೆಲೆ ಏರಿಕೆ ಆಗಬಹುದು. ಮುಂದುವರೆಯುತ್ತಿರುವ ನಿರುದ್ಯೋಗ, ಬೆಲೆಏರಿಕೆ ಸಾಮಾಜಿಕ ಆಸ್ಫೋಟಕ್ಕೆ ಕಾರಣವಾಗಬಹುದು. ಆಮದು ಸುಂಕ ಯುದ್ಧಕ್ಕೆ ಗುರಿಯಾದ ದೇಶಗಳಲ್ಲಿ ಯು.ಎಸ್ ಸರಕುಗಳ ಬಷಿಷ್ಕಾರ ಮುಂತಾದ ವಿದ್ಯಮಾನಗಳೂ ಕಂಡು ಬಂದಿವೆ. ರಶ್ಯಾ-ಚೀನಾ ನಿಕಟ ಸಂಬಂಧ ಒಡೆಯುವ ಟ್ರಂಪ್ ಕನಸು ನನಸಾಗುವ ಸಾಧ್ಯತೆ ಸಹ ಕಡಿಮೆ, ರಶ್ಯಾ-ಚೀನಾ ಆರ್ಥಿಕ-ಕೈಗಾರಿಕಾ-ಮಿಲಿಟರಿ ಶಕ್ತಿಗಳು ಪರಸ್ಪರ ಪೂರಕವಾಗಿದ್ದು ಮತ್ತು ಈಗಾಗಲೇ ಬೇರೂರಿದ್ದು ಟ್ರಂಪ್ ತಂತ್ರಗಳಿಗೆ ಪುಟಿನ್ ಮಾರು ಹೋಗಲಿಕ್ಕಿಲ್ಲ. ಟೆಕ್ ದೈತ್ಯರು ತಮಗೆ ಹೆಚ್ಚು ಪ್ರಯೋಜನಕಾರಿಯಾದ ಈ ಹೊಸ ಫಾರ್ಮುಲಾವನ್ನು ಉತ್ತೇಜಿಸುತ್ತಿದ್ದರೂ ಇದರಲ್ಲಿ ಸಾಕಷ್ಟು ವೈರುಧ್ಯಗಳು ಮತ್ತು ಕುರುಡು ನಂಬಿಕೆಗಳು ಇವೆ. ಆಳುವ ವರ್ಗದ ಇತರ ವಿಭಾಗಗಳು ಈ ಫಾರ್ಮುಲಾವನ್ನು ವಿರೋಧಿಸಬಹುದು. ಇದರಲ್ಲಿ ಯು.ಎಸ್ ಜನತೆಗೂ ಆಳುವ ವರ್ಗಕ್ಕೂ ತೀವ್ರ ಅಪಾಯ ಮತ್ತು ಅನಿಶ್ಚಿತ ಭವಿಷ್ಯದ ಸಾಧ್ಯತೆಯಿದೆ. ಮಾತ್ರವಲ್ಲ ಜಾಗತಿಕ ಆರ್ಥಿಕ ಕುಸಿತ, ಅರಾಜಕತೆಗಳ ತೀವ್ರ ಅಪಾಯವೂ ಇದೆ. ಯು.ಎಸ್ ಒಳಗೂ ಜಾಗತಿಕವಾಗಿಯೂ ಹೊಸ ಫಾರ್ಮುಲಾಗೆ ತೀವ್ರ ಪ್ರತಿರೋಧ ಕಂಡು ಬಂದಿದೆ.
******
ಇದನ್ನೂ ನೋದಿ : ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ?Janashakthi Media