ಲಖನೌ: ಬಿಜೆಪಿ ತೊರೆದ 24 ಗಂಟೆಗಳಲ್ಲಿ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಸುಲ್ತಾನ್‌ಪುರ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
2014 ರಲ್ಲಿ ದ್ವೇಷ ಭಾಷಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌರ್ಯ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.ಹಿಂದೂ ದೇವರುಗಳ ವಿರುದ್ಧ ಮಾತನಾಡಿದ್ದಾರೆ ಎಂಬ ಆರೋಪವು ಮೌರ್ಯ ಮೇಲಿದೆ.
ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಸ್ವಾಮಿ ಪ್ರಸಾದ್ ಮೌರ್ಯ ಕಾರ್ಯನಿರ್ವಹಿಸಿದ್ದರು. ಹಿಂದುಳಿದ ವರ್ಗಗಳ (ಒಬಿಸಿ) ಪ್ರಭಾವಿ ನಾಯಕರೂ ಆಗಿರುವ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಮೌರ್ಯ ಸೇರಿದಂತೆ ಶಾಸಕರಾಗಿರುವ ರೋಷನ್ ಲಾ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಾಗ್ವತಿ ಸಾಗರ್, ವಿನಯ್ ಶಂಕ್ಯಾ ರಾಜೀನಾಮೆ ನೀಡಿದ್ದಾರೆ.
ಅತ್ತ ರಾಜೀನಾಮೆ ನೀಡುತ್ತಿದ್ದಂತೇ ಇತ್ತ ಅವರಿಗೆ ಎಂಪಿ,ಎಂಎಲ್‌ಎಗಳ ವಿಶೇಷ ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಇದಕ್ಕೆ ಕಾರಣ, 2014ರ ಪ್ರಕರಣ. ಮೌರ್ಯ ಅವರು ಬಿಜೆಪಿಗೆ ಬರುವುದಕ್ಕೂ ಮುನ್ನ 2016ರವರೆಗೆ ಬಿಎಸ್‌ಪಿಯಲ್ಲಿಯೇ ಇದ್ದರು. 2014ರಲ್ಲಿ ಬಿಎಸ್‌ಪಿಯಲ್ಲಿ ಇದ್ದ ಸಂದರ್ಭದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕೇಸೊಂದು ದಾಖಲಾಗಿತ್ತು. ಅದು ವಿಶೇಷ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿತ್ತು.
ಇದೀಗ ರಾಜೀನಾಮೆ ಘೋಷಿಸಿದ ತಕ್ಷಣವೇ ಈ ಕೇಸ್‌ಗೆ ಚಾಲನೆ ಸಿಕ್ಕಿದ್ದು, ಅವರಿಗೆ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಇದಕ್ಕೆ ಕಾರಣ ಈ ಹಿಂದೆ ವಿಚಾರಣೆ ವೇಳೆ ಇವರಿಗೆ ಕೋರ್ಟ್‌ನಿಂದ ಹಲವಾರು ಬಾರಿ ಸಮನ್ಸ್ ಜಾರಿಯಾಗಿತ್ತು. ಇದರ ಹೊರತಾಗಿಯೂ ಅವರು ಕೋರ್ಟ್‌ಗೆ ಹಾಜರು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನಿನ ಅನ್ವಯ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ.
ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮೌರ್ಯ ಅವರು, ‘ಇದು ಇನ್ನೂ ಆರಂಭವಷ್ಟೇ. ಮುಂದೆ ಇನ್ನೂ ಏನೇನೋ ನೋಡಬೇಕಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮೌರ್ಯ ಅವರು ಕುಶಿನಗರದ ಪದ್ರೌನಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರ ಮೌರ್ಯ ಬದೌನ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ. ಇನ್ನೂವ 20 ಜನ ಸಚಿವರು ದಿನಕ್ಕೊಬ್ಬರಂತೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಈಗ ಪಕ್ಷಾಂತರ ಪ್ರದೇಶವಾಗಿ ಮಾರ್ಪಟ್ಟಿದೆ.