ಛತ್ತೀಸ್ಗಢ ಕ್ರೈಸ್ತ ಸನ್ಯಾಸಿಯರ ಬಂಧನ: ಆರೆಸ್ಸೆಸ್ ನ ವಿಷಪೂರಿತ ‘ಹಿಂದುತ್ವ ರಾಷ್ಟ್ರ’ ಕಾರ್ಯಸೂಚಿ

ಛತ್ತೀಸ್‌ಗಢದಲ್ಲಿ ಬಜರಂಗದಳದ ಕಾರ್ಯಕರ್ತರ ದೂರಿನ ಮೇರೆಗೆ, ಮಾನವ ಕಳ್ಳಸಾಗಣೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪದ ಮೇಲೆ ಜುಲೈ 25 ರಂದು ದುರ್ಗ್ ರೈಲು ನಿಲ್ದಾಣದಲ್ಲಿ ಸರ್ಕಾರಿ ರೈಲ್ವೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಮತ್ತು ಇನ್ನೊಬ್ಬ ವ್ಯಕ್ತಿ ಸುಖ್‌ಮಾನ್ ಮಾಂಡವಿ ಅವರಿಗೆ ಛತ್ತೀಸ್‌ಗಢದ ಎನ್‌ಐಎ ನ್ಯಾಯಾಲಯ ಆಗಸ್ಟ್ 2ರಂದು ಜಾಮೀನು ನೀಡಿದೆ. ಪ್ರೀತಿ ಮೇರಿ (55) ಮತ್ತು ವಂದನಾ ಫ್ರಾನ್ಸಿಸ್ (53) ಎಂಬ ಕ್ರೈಸ್ತ ಸನ್ಯಾಸಿನಿಯರು ಎಂಟು ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು. ಜೈಲಿನಲ್ಲಿದ್ದ ಇವರನ್ನು ಭೇಟಿ ಮಾಡಿ ಬಂದ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಬರೆದ ಲೇಖನ ಇಲ್ಲಿದೆ. ಕ್ರೈಸ್ತ

 –ಬೃಂದಾ ಕಾರಟ್

ಕನ್ನಡಕ್ಕೆ: ಸಿಚಿ

ನಮ್ಮ ತಂಡವು ದುರ್ಗ್ ಕೇಂದ್ರ ಕಾರಾಗೃಹದಲ್ಲಿ ಸನ್ಯಾಸಿನಿಯರಾದ ಸಿಸ್ಟರ್ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಅವರನ್ನು ಭೇಟಿಯಾದಾಗ, ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಅವರು ನಮ್ಮೊಂದಿಗೆ ಅತ್ಯಂತ ಧೈರ್ಯ ಮತ್ತು ಘನತೆಯಿಂದ ಮಾತನಾಡಿದರು. ತಮ್ಮೊಂದಿಗೆ ಬಂಧಿಸಲ್ಪಟ್ಟ ಬುಡಕಟ್ಟು ಯುವಕ ಸುಖ್ಮಾನ್ ಮಾಂಡವಿಗೆ ಏನಾಯಿತು ಎಂದು ಅವರು ತುಂಬಾ ಚಿಂತಿತರಾಗಿದ್ದರು.

ದಶಕಗಳಿಂದ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಸನ್ಯಾಸಿನಿಯರು ನಿಸ್ವಾರ್ಥವಾಗಿ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅವರು ತಮ್ಮ ಸಂಸ್ಥೆಗಳು ಸ್ಥಾಪಿಸಿರುವ ಆಸ್ಪತ್ರೆಗಳಲ್ಲಿ ಎಲ್ಲ ವರ್ಗದ ಬಡವರ ಸೇವೆ ಮಾಡುತ್ತಿದ್ದಾರೆ. ಅವರು ತಮ್ಮ ಬಳಿಗೆ ಸಹಾಯಕ್ಕಾಗಿ ಬರುವ ಜನರಲ್ಲಿ ಅವರ ಧರ್ಮ ಅಥವಾ ಜಾತಿಯ ಬಗ್ಗೆ ಎಂದಿಗೂ ಕೇಳುವುದಿಲ್ಲ. ಈ ನಿರಂತರ ಕಾರ್ಯಕ್ಕಾಗಿ ಅವರಿಗೆ ಪ್ರಶಸ್ತಿ ನೀಡಬೇಕು ಎಂದು ನಾವು ಭಾವಿಸಿದ್ದೇವೆ. ಬದಲಾಗಿ, ಅವರನ್ನು ಜೈಲಿಗೆ ಹಾಕಲಾಗಿದೆ. ಕ್ರೈಸ್ತ

ಆರೋಪಗಳು ಶುದ್ಧ ಸುಳ್ಳು

ಸನ್ಯಾಸಿನಿಯರ ವಿರುದ್ಧದ ಆರೋಪಗಳು ಸುಳ್ಳು ಮತ್ತು ಕಟ್ಟುಕಥೆ ಎಂದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಅವರು ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಹೊರಿಸಲಾದ ಬಲವಂತದ ಮತಾಂತರದ ಆರೋಪ ಸುಳ್ಳು. ಏಕೆಂದರೆ ಸನ್ಯಾಸಿನಿಯರೊಂದಿಗೆ ಕೆಲಸ ಮಾಡುತ್ತಿದ್ದ ಬುಡಕಟ್ಟು ಜನಾಂಗದವರು ಹಲವು ವರ್ಷಗಳಿಂದ ಕ್ರೈಸ್ತರಾಗಿದ್ದಾರೆ. ಅವರ ನಡುವೆ ಬಲವಂತದ ಮತಾಂತರ ಎಂಬುದು ಹೇಗೆ ಬರುತ್ತದೆ? ಎರಡನೆಯದಾಗಿ, ಮಾನವ ಕಳ್ಳಸಾಗಣೆ ವಿಷಯದಲ್ಲಿಯೂ, ಸಂಭಂದಪಟ್ಟ ಈ ಮೂವರು ಬುಡಕಟ್ಟು ಮಹಿಳೆಯರೂ ವಯಸ್ಕರು ಎಂಬುದು ಅವರ ಆಧಾರ್ ಕಾರ್ಡ್‌ ಗಳಿಂದ ಸಾಬೀತಾಗಿದೆ. ಕ್ರೈಸ್ತ

ಇದನ್ನೂ ಓದಿ: ಅಂಚೆ ಇಲಾಖೆಗಳಲ್ಲಿ ಇನ್ನು ಮುಂದೆ ಡಿಜಿಟಲ್ ಪೇಮೆಂಟ್ ಸೌಲಭ್ಯಗಳು ಸಿಗಲಿದೆ

ಅವರು ಸ್ವ ಇಚ್ಛೆಯಿಂದ ಸನ್ಯಾಸಿನಿಯರೊಂದಿಗೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಅವರ ಪೋಷಕರು ಸಹ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ, ಮಾನವ ಕಳ್ಳಸಾಗಣೆ ಆರೋಪವೂ ಸುಳ್ಳು. ಆದರೂ, ಅವರಿಗೆ ಜಾಮೀನು ನೀಡುವುದು ಕಷ್ಟಕರವಾಗುವಂತೆ ಮಾಡಲು ಬಿಜೆಪಿ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕಳುಹಿಸಿದೆ. ವಾಸ್ತವವಾಗಿ, ಆ ರಾಜ್ಯದಲ್ಲಿ ಯಾವುದಾದರೂ ಬಲವಂತದ ಮತಾಂತರದಂತಹ ಏನಾದರೂ ಇದ್ದರೆ, ಅದು ಛತ್ತೀಸ್‌ಗಢವನ್ನು ಹಿಂದುತ್ವ ರಾಷ್ಟ್ರವನ್ನಾಗಿ ಬಲವಂತದ ಪರಿವರ್ತನೆ ಮಾಡುತ್ತಿರುವುದಾಗಿದೆ. ಕ್ರೈಸ್ತ

ಜೈಲಿನಲ್ಲಿರುವ ಸನ್ಯಾಸಿನಿಯರನ್ನು ನಾನು ಭೇಟಿಯಾದಾಗ, ಅವರ ಕೈಗಳನ್ನು ಹಿಡಿದಾಗ, ಅವರಿಬ್ಬರಿಗೂ ಜ್ವರ ಇರುವುದು ನನಗೆ ಕಂಡುಬಂದಿತು. ಅವರಿಗೆ ದೀರ್ಘಕಾಲದ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಯಿತು. ಇವುಗಳಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಜೈಲಿನ ಕೊರೆಯುವ ತಣ್ಣನೆಯ ನೆಲದಲ್ಲೇ ಅವರನ್ನು ಇರಿಸಿರುವುದು ಅವರ ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಅವರಿಗೆ ಹಾಸಿಗೆಗಳನ್ನು ಒದಗಿಸಬೇಕು ಮತ್ತು ಸರಿಯಾದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ನಾವು ಜೈಲು ಸೂಪರಿಂಟೆಂಡೆಂಟ್ ಜೊತೆ ವಾದಿಸಿದೆವು. ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದ ಬುಡಕಟ್ಟು ಯುವಕ ಸುಖ್ಮಾನ್ ಮಾಂಡವಿ ಅವರನ್ನು ನಾವು ಕೂಡ ಭೇಟಿಯಾಗಿದೆವು. ಕ್ರೈಸ್ತ

ಕೆಲಸಕ್ಕಾಗಿ ಪ್ರಯಾಣಿಸಿದವರು…

ಅವರು ಇಡೀ ಘಟನೆಯನ್ನು ನಮಗೆ ವಿವರಿಸಿದರು. ಆಗ್ರಾ, ಭೋಪಾಲ್ ಮತ್ತು ಶಹದೋಲ್‌ ನಲ್ಲಿರುವ ಅವರ ಸಂಸ್ಥೆಗಳ ಅಡುಗೆ ಮನೆಯಲ್ಲಿ ಸಹಾಯಕರು ಬೇಕಾಗಿದ್ದರು. ಮಾಜಿ ಸಹಾಯಕರಲ್ಲಿ ಒಬ್ಬರಾದ ಸುಖ್ಮತಿ ಎಂಬ ಬುಡಕಟ್ಟು ಮಹಿಳೆ, ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದವಳು, ತಾನು ಮದುವೆಯಾಗಲು ಹೋಗಬೇಕಾಗಿ ಬಂದ ಕಾರಣ ಛತ್ತೀಸ್‌ಗಢದಲ್ಲಿರುವ ತನ್ನ ಹಳ್ಳಿಗೆ ಹೋಗಲು ತನ್ನ ಕೆಲಸವನ್ನು ಬಿಟ್ಟಳು. ಬೇರೆ ಯಾರಾದರೂ ಬಂದು ಕೆಲಸ ಮಾಡಲು ಸಿದ್ಧರಿದ್ದರೆ ಅವರನ್ನು ಕಳುಹಿಸಲು ಅವರಿಗೆ ಹೇಳಲಾಯಿತು. ಸಂಬಳ ತಿಂಗಳಿಗೆ 10,000 ರೂ. ಎಂದು ಹೇಳಲಾಗುತ್ತದೆ. ಸುಖ್ಮತಿ ತನ್ನ ಹಳ್ಳಿಗೆ ಮರಳಿದಳು. ಈಗ ಮೂರು ವರ್ಷದ ಮಗುವಿನ ತಾಯಿಯಾಗಿರುವ ಅವರು, ನಾರಾಯಣಪುರ ಜಿಲ್ಲೆಯ ತಮ್ಮ ಹಳ್ಳಿಯಲ್ಲಿರುವ ಕೆಲವು ಕುಟುಂಬಗಳೊಂದಿಗೆ ಈ ವಿವರಗಳನ್ನು ಹಂಚಿಕೊಂಡರು. ಕ್ರೈಸ್ತ

ಮೂವರು ಯುವ ಬುಡಕಟ್ಟು ಮಹಿಳೆಯರಾದ ಲಲಿತಾ, ಕಮಲೇಶ್ವರಿ, ಮತ್ತೊಬ್ಬಳು ಸುಖ್ಮತಿ ಎಂಬ ಮೂವರು, ಆಗ್ರಾಗೆ ಹೋಗುವುದು, ನಂತರ ಕೆಲವು ಸಂಸ್ಥೆಗಳಿಗೆ ಭೇಟಿ ನೀಡಲು ತಮ್ಮ ಪ್ರಯಾಣದ ಯೋಜನೆಯನ್ನು ಅಂತಿಮಗೊಳಿಸುತ್ತಾರೆ. ಈ ಯುವತಿಯರಲ್ಲಿ ಯಾರೂ ತಮ್ಮ ಜಿಲ್ಲೆಯ ಹೊರಗೆ ಪ್ರಯಾಣಿಸಿರಲಿಲ್ಲ. ಆದ್ದರಿಂದ ಸ್ವಾಭಾವಿಕವಾಗಿಯೇ ಅವರು ಆತಂಕಗೊಂಡಿದ್ದರು. ಹೀಗಾಗಿ, ಅವರ ಪೋಷಕರು ಸುಖ್ಮತಿಯ ಅಣ್ಣನಾದ ಸುಖ್ಮಾನ್ ಮಾಂಡವಿ ಅವರನ್ನು ದುರ್ಗ್ ರೈಲು ನಿಲ್ದಾಣಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಅಲ್ಲಿ ಸನ್ಯಾಸಿನಿಯರನ್ನು ಭೇಟಿಯಾಗಿ ಅವರನ್ನು ಆಗ್ರಾಕ್ಕೆ ಕರೆದೊಯ್ಯುವುದು ಎಂದು ವ್ಯವಸ್ಥೆ ಮಾಡಲಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ಸುಖ್ಮಾನ್ ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿಸಲಿಲ್ಲ. ಗುಂಪನ್ನು ನೋಡಿದ ಟಿಕೆಟ್ ಇನ್ಸ್‌ಪೆಕ್ಟರ್ ಒಬ್ಬರು ಟಿಕೆಟ್ ಬಗ್ಗೆ ಕೇಳಿದಾಗ, ಅವು ಸನ್ಯಾಸಿನಿಯರ ಬಳಿ ಇವೆ ಎಂದು ಅವರು ಹೇಳುತ್ತಾರೆ. ಆ ಸಮಯದಲ್ಲಿ ಸನ್ಯಾಸಿನಿಯರೂ ಬಂದರು.

ಬಜರಂಗದಳದ ದಾಳಿ

ಇದನ್ನೆಲ್ಲಾ ನೋಡುತ್ತಿದ್ದ ಬಜರಂಗದಳದ ಸದಸ್ಯರೊಬ್ಬರು ತಮ್ಮ ಗುಂಪನ್ನು ಒಟ್ಟುಗೂಡಿಸಿ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಿದರು. ಬುಡಕಟ್ಟು ಮಹಿಳೆಯರನ್ನು ಅಪಹರಿಸಲಾಗುತ್ತಿದೆ ಮತ್ತು ರೈಲ್ವೆ ಪೊಲೀಸರು ಅವರನ್ನು ಬಂಧಿಸಬೇಕು ಎಂದು ಅವರು ಆಕ್ರಮಣಕಾರಿ ರೀತಿಯಲ್ಲಿ ಘೋಷಣೆಗಳನ್ನು ಕೂಗಿದರು. ಆ ಗುಂಪು ಅವರನ್ನು ಬಲವಂತವಾಗಿ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿಗೆ ತಳ್ಳಿತು. ಅಲ್ಲಿ ಅವರೆಲ್ಲರೂ ತಾವಾಗಿಯೇ ಹೋಗುತ್ತಿದ್ದೇವೆ ಎಂದು ಹೇಳಿದರು. ಸುಖ್ಮಾನ್ ಹುಡುಗಿಯರ ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು, ಮತ್ತು ಅವರು ತಮ್ಮ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕಳುಹಿಸಲು ತಮ್ಮ ಒಪ್ಪಿಗೆ ಇದೆ ಎಂದು ಪೊಲೀಸರಿಗೆ ತಿಳಿಸಿದರು.

ಆದರೆ ಬಜರಂಗದಳ ಗ್ಯಾಂಗ್ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆರ್‌ಎಸ್‌ಎಸ್‌ನ ವಿಷಕಾರಿ ಅಜೆಂಡಾವನ್ನು ಅನುಷ್ಠಾನಗೊಳಿಸುವ ಗುರಿಯನ್ನು ಈ ಗ್ಯಾಂಗ್ ಹೊಂದಿತ್ತು. ದುರ್ಗಾ ವಾಹಿನಿ ಚಳವಳಿಯ ಜ್ಯೋತಿ ಶರ್ಮಾ ಎಂಬ ಮಹಿಳೆ ನೇತೃತ್ವದ ಬಜರಂಗದಳ ಗ್ಯಾಂಗ್ ಅವರನ್ನು ತುಂಬಾ ಕೆಟ್ಟ ಪದಗಳಲ್ಲಿ ನಿಂದಿಸಿ ನಂತರ ಅವರ ಮೇಲೆ ಹಲ್ಲೆ ನಡೆಸಿತು. ಅವರನ್ನು ನಿಂದಿಸಿದರು, ಬೆದರಿಸಿದರು ಮತ್ತು ಅವಮಾನಿಸಿದರು. ಮೂವರು ಬುಡಕಟ್ಟು ಮಹಿಳೆಯರನ್ನು ತೀವ್ರವಾಗಿ ಥಳಿಸಿದರು. ತಾನು ಅಪಹರಣಕ್ಕೊಳಗಾಗಿರುವುದಾಗಿ ಒಪ್ಪಿಕೊಳ್ಳುವಂತೆ ಜ್ಯೋತಿ ಶರ್ಮಾ ತನಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದಳು ಎಂದು ಅವರಲ್ಲಿ ಒಬ್ಬ ಮಹಿಳೆ ಸಾಕ್ಷ್ಯ ನುಡಿದಿದ್ದಾಳೆ. ಪ್ರತಿಯೊಬ್ಬ ಮಹಿಳೆಯನ್ನು ಪ್ರತ್ಯೇಕವಾಗಿ ಪ್ರತ್ಯೇಕ ಕೋಣೆಗೆ ಕರೆದೊಯ್ದು ಇಂತಹ ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಅವರು ಹೇಳಿದ್ದಕ್ಕೂ ಪೊಲೀಸರು ಬರೆದಿದ್ದಕ್ಕೂ ಸಂಪೂರ್ಣ ವ್ಯತ್ಯಾಸವಿದೆ.

ದಿಢೀರನೆ NIA ಗೆ ವರ್ಗಾಯಿದ ಬಿಜೆಪಿ ಸರ್ಕಾರ

ಬಿಜೆಪಿ ಸರ್ಕಾರದ ಸಂಪೂರ್ಣ ಬೆಂಬಲವಿದೆ ಎಂಬ ಕಾರಣಕ್ಕೆ ಭಜರಂಗದಳದವರು ಪೊಲೀಸರ ಮುಂದೆಯೇ ಈ ರೀತಿ ಮಾಡುತ್ತಿದ್ದಾರೆ. ದೌರ್ಜನ್ಯ ನಡೆಸಿದ ಸ್ಪಷ್ಟ ಪುರಾವೆಗಳಿದ್ದರೂ, ಭಜರಂಗದಳ ಗ್ಯಾಂಗ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಬಂಧಿತರಿಗೆ ಜಾಮೀನು ಕೋರಿ ಕೆಳ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತು. ನಂತರ, ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ, ಸೆಷನ್ಸ್ ನ್ಯಾಯಾಧೀಶರು ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಡಿಯಲ್ಲಿರುವ ವಿಶೇಷ ನ್ಯಾಯಾಲಯ ಮಾತ್ರ ತನಿಖೆ ನಡೆಸಬೇಕು ಮತ್ತು ತನಿಖೆ ನಡೆಸಲು ತಮಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದರು.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಳ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದೆ. ಆ ಸಮಯದಲ್ಲಿ, ಸರ್ಕಾರವು ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ. ಮೇಲ್ಮನವಿಯಲ್ಲಿ, ಸೆಷನ್ಸ್ ನ್ಯಾಯಾಧೀಶರು ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕಳುಹಿಸುವ ಕುರಿತು ಯಾವುದೇ ಸೂಚನೆಯನ್ನು ನೀಡಲಿಲ್ಲ. ಹೀಗಿರುವಾಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸಂಬಂಧಿಸಿದಂತೆ ಸರಕಾರದ ವಾದವನ್ನು ಸೆಷನ್ಸ್ ನ್ಯಾಯಾಲಯ ಹೇಗೆ ಒಪ್ಪಿಕೊಂಡಿತು ಎಂಬುದು ಪ್ರಶ್ನಾರ್ಹವಾಗಿದೆ. ಇದು ಮತ್ತೊಂದು ದೊಡ್ಡ ಅನ್ಯಾಯವಾಗಿದೆ. ಇದು ಡಬಲ್ ಎಂಜಿನ್ ಮೋದಿ ಸರ್ಕಾರದ ಮುಖ.

ಕೆಲಸ ಹುಡುಕಿ ಹೋಗಲು ಆರ್‌ಎಸ್‌ಎಸ್ ಅನುಮತಿ ಬೇಕೇ?

ಈ ಪ್ರಕರಣವು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡಿರುವುದರ ಜೊತೆಗೆ, ಇನ್ನೂ ಅನೇಕ ಸಮಸ್ಯೆಗಳನ್ನು ನಮ್ಮ ಮುಂದೆ ತಂದಿಟ್ಟಿದೆ. ನಮ್ಮ ಸಂವಿಧಾನ ನೀಡಿರುವ ಹಕ್ಕುಗಳ ಪ್ರಕಾರ ಯಾವುದೇ ನಾಗರಿಕರು ದೇಶದ ಯಾವುದೇ ಭಾಗಕ್ಕೆ ಕೆಲಸ ಹುಡುಕಿಕೊಂಡು ಹೋಗಬಹುದು. ಅಂತಹ ಆ ಹಕ್ಕಿನ ಮೇಲೆ ಇಲ್ಲಿ ದಾಳಿ ಮಾಡಲಾಗಿದೆ.

ಕ್ರೈಸ್ತ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನಾಂಗದ ಯುವ ಮಹಿಳೆಯರು ತನ್ನ ತವರು ರಾಜ್ಯದಿಂದ ಬೇರೆ ರಾಜ್ಯಕ್ಕೆ ಕೆಲಸ ಹುಡುಕಿಕೊಂಡು ಹೋದರೆ ಆಕೆ ಬಜರಂಗದಳದಂತಹ ಆರ್ ಎಸ್ ಎಸ್ ಸಂಘಟನೆಯ ಅನುಮತಿ ಪಡೆಯಬೇಕೆ? ವಯಸ್ಕ ಬುಡಕಟ್ಟು ಮಹಿಳೆಯರು ತಾವು  ಏಕೆ ಮತ್ತು ಯಾರೊಂದಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಪುರಾವೆಗಳನ್ನು ಏಕೆ ತೋರಿಸಬೇಕು? ಈ ಪ್ರಕರಣವು ಕೆಲಸಕ್ಕಾಗಿ ತಮ್ಮ ಗ್ರಾಮಗಳನ್ನು ತೊರೆಯುವ ಬುಡಕಟ್ಟು ಜನಾಂಗದ ಯುವ ಮಹಿಳೆಯರ ಜೀವನ ಮತ್ತು ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುವ ಭಯಾನಕ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಕ್ರೈಸ್ತ

ಸನ್ಯಾಸಿನಿಯರು ಮತ್ತು ಬುಡಕಟ್ಟು ಮಹಿಳೆಯರ ಮೇಲೆ ದಾಳಿ ಮಾಡಿದ ರೀತಿ ಮತ್ತೊಂದು ಅತ್ಯಂತ ಘೋರ ಅಂಶವಾಗಿದೆ. ಅವರು ಪೊಲೀಸರ ಎದುರೇ ಅತ್ಯಂತ ಅಸಭ್ಯ ಪದಗಳನ್ನು ಬಳಸಿ ಉದ್ಧಟತನದಿಂದ ನಡೆದುಕೊಂಡಿದ್ದಾರೆ. ಇದು ಎಲ್ಲಾ ಮಹಿಳೆಯರ ಹಕ್ಕುಗಳ ಮೇಲಿನ ಘೋರ ದೌರ್ಜನ್ಯವಾಗಿದೆ. ಸಿಸ್ಟರ್ ಪ್ರೀತಿ ಮೇರಿ ನಮ್ಮೊಂದಿಗೆ ಮಾತನಾಡುತ್ತ, ಭಜರಂಗದಳದ ಗೂಂಡಾಗಳು ತಮ್ಮನ್ನು ದೇಶದ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುವ “ವಿದೇಶಿ” ಎಂದು ಕರೆದರು ಎಂದು ತುಂಬಾ ನೋವಿನಿಂದ ಹೇಳಿಕೊಂಡರು. ಕ್ರೈಸ್ತ

“ದೂರದ ಹಳ್ಳಿಯ ಬಡವರಿಗಾಗಿ, ಯಾವುದೇ ಸೌಲಭ್ಯಗಳಿಲ್ಲದೆ ಹಲವು ವರ್ಷಗಳಿಂದ ಕುಷ್ಠರೋಗಿಗಳಿಗಾಗಿ ಕೆಲಸ ಮಾಡುತ್ತಿರುವುದಕ್ಕಾಗಿ ನನ್ನನ್ನು ದೇಶ ವಿರೋಧಿ ಗೆದ್ದಲು ಎಂದು ಕರೆಯಲಾಗಿದೆಯೇ? ಬಡವರಿಗೆ ಸಹಾಯ ಮಾಡಬೇಕೆಂದು ನನ್ನ ಧರ್ಮವು ನನಗೆ ಸೂಚಿಸಿದೆ. ಅದಕ್ಕಾಗಿ ನನಗೆ ಶಿಕ್ಷೆಯಾಗಬೇಕೇ?” ಎಂದು ಅವರು ಕಣ್ಣೀರು ಸುರಿಸುತ್ತಾ ನಮ್ಮನ್ನು ಕೇಳಿದರು. ಕ್ರೈಸ್ತ

ಮೊದಲು ಬಂಗಾಳಿ ಮುಸ್ಲಿಮರು, ಈಗ ಕೇರಳ ಕ್ರಿಶ್ಚಿಯನ್ನರು

ಬಂಗಾಳಿ ಭಾಷಿಕ ಮುಸ್ಲಿಮರನ್ನು ಅಕ್ರಮ ವಲಸಿಗರು ಎಂದು ನಿಂದಿಸಲು ಕೇಂದ್ರ ಗೃಹ ಸಚಿವರು ಬಳಸಿದ “ಗೆದ್ದಲುಗಳು” (termites) “ವಿದೇಶಿಯರು”ಎಂಬ ಪದಗಳು ಈಗ ಇಲ್ಲಿ ಕ್ರಿಶ್ಚಿಯನ್ ಸನ್ಯಾಸಿನಿಯರಿಗೂ ಬಳಸಲಾಗುತ್ತಿದೆ. ಹಿಂದುತ್ವದ ಚೌಕಟ್ಟಿಗೆ ಹೊಂದಿಕೆಯಾಗದ ಯಾರನ್ನಾದರೂ “ವಿದೇಶಿ” ಅಥವಾ “ಗೆದ್ದಲುಗಳು” ಎಂದು ಕರೆಯಲಾಗುತ್ತದೆ. ಅವರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತದೆ. ಈಗ ಇವರು ಬಿಹಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ ಮೂಲಕ ಲಕ್ಷಾಂತರ ಮತದಾರರು, ವಿಶೇಷವಾಗಿ ಬಡವರು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಜನರನ್ನು ಮತದಾರರ ಪಟ್ಟಿಯಿಂದ “ಶುದ್ಧೀಕರಣ” ಮತ್ತು ತೆಗೆದುಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಭಾರತದಾದ್ಯಂತ ಏನು ನಡೆಯುತ್ತಿದೆ ಎಂಬುದನ್ನು ಒಟ್ಟುಗೂಡಿಸಿ ನೋಡಬೇಕಿದೆ. ಸನ್ಯಾಸಿನಿಯರು ಮತ್ತು ಸ್ಥಳೀಯ ಬುಡಕಟ್ಟು ಕ್ರೈಸ್ತರ ಮೇಲಿನ ಕ್ರೂರ ದಾಳಿ ಮತ್ತು ಬಂಧನವು ಒಂದು ಪ್ರತ್ಯೇಕ ಘಟನೆಯಲ್ಲ. “ಇಂದು ನಾವು ಮೌನವಾಗಿದ್ದರೆ, ನಾಳೆ ಅವರು ನಮ್ಮನ್ನು ಹುಡುಕಿಕೊಂಡು ಬಂದಾಗ ಪ್ರತಿಭಟಿಸಲು ಯಾರೂ ಇರುವುದಿಲ್ಲ.” ಎಂದು ಪಾದ್ರಿ ನಿಮೊಲರ್ ಹೇಳಿದ್ದನ್ನು ನೆನಪಿಸಿಕೊಳ್ಳೋಣ.

ದುರ್ಬಲಗೊಳಿಸಿದ ಕಾಂಗ್ರೆಸ್‌ ನ ದ್ವಂದ್ವ ನಿಲುವು

ನಮ್ಮ ಭೇಟಿಯ ನಂತರ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸಂಸದರ ಗುಂಪು ಜೈಲಿಗೆ ಭೇಟಿ ನೀಡಿದೆ ಎಂದು ನಾವು ಕೇಳಿದೆವು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರು ಸಂಸತ್ತಿನ ಹೊರಗೆ ಬ್ಯಾನರ್‌ಗಳನ್ನು ಹಿಡಿದಿದ್ದ ಪತ್ರಿಕಾ ವರದಿಗಳನ್ನು ನಾವು ನೋಡಿದೆವು. ಇದು ಆಗಬೇಕಾದ್ದೆ. ಆದರೆ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅಕ್ಟೋಬರ್ 2022 ರಿಂದ ಫೆಬ್ರವರಿ 2023 ರವರೆಗೆ, ಕ್ರಿಶ್ಚಿಯನ್ ಬುಡಕಟ್ಟು ಜನಾಂಗದವರ ಮೇಲೆ ಸರಣಿ ಕ್ರೂರ ದಾಳಿಗಳು ನಡೆದವು. ನಾರಾಯಣಪುರದಲ್ಲಿರುವ ಪ್ರಮುಖ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ನಡೆಯಿತು, ಯೇಸುಕ್ರಿಸ್ತ ಮತ್ತು ಮೇರಿ ಮಾತೆಯ ಪ್ರತಿಮೆಗಳನ್ನು ಧ್ವಂಸಗೊಳಿಸಲಾಯಿತು.

ದುರ್ಗ್ ನಲ್ಲಿ ಇಬ್ಬರು ಸನ್ಯಾಸಿನಿಯರ ಮೇಲೆ ದಾಳಿ ಮಾಡಿದ ಆರ್‌ಎಸ್‌ಎಸ್ ನ ಅದೇ ಗ್ಯಾಂಗ್ ಗಳು ಆಗಲೂ ಅದರ ಜವಾಬ್ದಾರಿಯನ್ನು ಹೊತ್ತುಕೊಂಡವು. ನಂತರ ನಾರಾಯಣಪುರ ಮತ್ತು ಸಂತ್ರಸ್ತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರೆಲ್ಲರನ್ನು ಭೇಟಿ ಮಾಡಿದ್ದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮಾತ್ರ. ನಾನು ಆ ತಂಡದಲ್ಲಿದ್ದೆ. ನಾವು ಕಾಂಗ್ರೆಸ್ ಮುಖ್ಯಮಂತ್ರಿಗೆ ವರದಿ ನೀಡಿದ್ದೇವೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್‌ ನ ಯಾವ ಸಮಿತಿಯೂ ಈ ಕುಟುಂಬಗಳನ್ನು ಭೇಟಿ ಮಾಡಿಲ್ಲ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷದ ದ್ವಂದ್ವ ನಿಲುವು ಬಿಜೆಪಿ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿತು.

ಸನ್ಯಾಸಿನಿಯರು ಮತ್ತು ಬುಡಕಟ್ಟು ಜನಾಂಗದವರೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಂತಿದ್ದೇವೆ. ನಾವು ಆಗಲೂ ಅದನ್ನೇ ಮಾಡಿದ್ದೇವೆ. ಈಗಲೂ ಅದನ್ನೇ ಮಾಡುತ್ತೇವೆ. ನನ್ನ ಜೊತೆಗಿದ್ದ ತಂಡದಲ್ಲಿ ಸಂಗಾತಿಗಳಾದ ಆನಿ ರಾಜಾ, ಸಂಸದರಾದ ಜೋಸ್, ಕೆ. ಮಣಿ, ಕೆ. ರಾಧಾಕೃಷ್ಣನ್, ಎ.ಎ. ರಹೀಮ್, ಪಿ.ಪಿ. ಸುನೀರ್ ಸೇರಿದ್ದಾರೆ.

ಇದನ್ನೂ ನೋಡಿ: ಬಲ್ಡೋಟಾ ಕಾರ್ಖಾನೆಯಿಂದ ಕೆರೆ ಒತ್ತುವರಿ; ಜಾನುವಾರು ಸಮೇತ ವಿಭಿನ್ನ ಪ್ರತಿಭಟನೆ | Janashakthi Media

Donate Janashakthi Media

Leave a Reply

Your email address will not be published. Required fields are marked *