ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿದ್ದ ಸ್ವಾತಂತ್ರ್ಯದ ಕುರಿತ ಹೇಳಿಕೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ರಾಜಕೀಯವಾಗಿಯೂ ಚರ್ಚೆಯಾಗುತ್ತಿದೆ. ಕಂಗನಾ ರಣಾವತ್‌ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಹಾಗೂ ಆಕೆಯನ್ನು ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಹಲವಾರು ರಾಜಕೀಯ ಪಕ್ಷಗಳು ಒತ್ತಾಯಿಸಿವೆ.
2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿರುವುದನ್ನು ಉಲ್ಲೇಖಿಸಿದ್ದ ಕಂಗನಾ ರಣಾವತ್ 1947 ಸ್ವಾತಂತ್ರ್ಯವು ಭಿಕ್ಷೆ ಆಗಿತ್ತು ಎಂದು ಹೇಳುವುದರೊಂದಿಗೆ ವಿವಾದ ಸೃಷ್ಟಿಸಿದ್ದಾರೆ.
“ರಣಾವತ್‌ಗೆ ನೀಡಲಾದ ಪದ್ಮಪ್ರಶಸ್ತಿ ವಾಪಸ್ಸುಪಡೆಯಬೇಕು. ಪ್ರಶಸ್ತಿಗಳನ್ನು ನೀಡುವ ಮೊದಲು ಮಾನಸಿಕ ಮೌಲ್ಯಮಾಪನ ಮಾಡಬೇಕು. ಹೀಗೆ ಮಾಡಿದರೆ ಭವಿಷ್ಯದಲ್ಲಿ ಅಂತಹ ವ್ಯಕ್ತಿಗಳು ರಾಷ್ಟ್ರ ಹಾಗೂ ರಾಷ್ಟ್ರದ ವೀರರನ್ನು ಅಗೌರವಗೊಳಿಸುವುದಿಲ್ಲ” ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಟ್ವಿಟ್ ಮಾಡಿದ್ದಾರೆ. ಅಲ್ಲದೆ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಕಂಗನಾ ರಣಾವತ್ ಹೇಳಿಕೆಯನ್ನು ನಾಚಿಕೆಗೇಡಿನ ಮತ್ತು ಆಘಾತಕಾರಿ ಎಂದು ಕರೆದಿರುವ ಆನಂದ್ ಶರ್ಮಾ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲಭಭಾಯಿ ಪಟೇಲ್ ಅವರನ್ನು ಅವಮಾನಿಸಿದ್ದಾರೆ. ಜೊತೆಗೆ ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಝಾದ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕುಗ್ಗಿಸಿದ್ದಾರೆ ಎಂದಿದ್ದಾರೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) “ನಟಿ ಕಂಗನಾ ರಣಾವತ್ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆಕೆಯು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೇಂದ್ರ ಸರಕಾರವು ಕಂಗನಾ ರಿಂದ ಪದ್ಮಶ್ರೀಯನ್ನು ಹಿಂಪಡೆಯಬೇಕು ಹಾಗೂ ಆಕೆಯನ್ನು ಬಂಧಿಸಬೇಕು” ಎಂದು ಹೇಳಿದೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಪ್ರೀತಿ ಮೆನನ್ ಮುಂಬೈ ಪೊಲೀಸರಿಗೆ ಕಂಗನಾ ಹೇಳಿಕೆ ವಿರುದ್ಧ ದೂರು ನೀಡಿದ್ದಾರೆ. ಇದಾಗ್ಯೂ ಕಂಗನಾ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ.
ಕಂಗನಾ ರಣಾವತ್ ಹೇಳಿಕೆಗೆ ಬಿಜೆಪಿಯೂ ಪ್ರತಿಕ್ರಿಯಿಸಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಇಂತಹ ಹೇಳಿಕೆಗಳು ದೇಶದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದರು. ದೆಹಲಿಯ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಸಹ ಕಂಗನಾ ಹೇಳಿಕೆಯನ್ನು ವಿರೋಧಿಸಿದ್ದಾರೆ. ಕಂಗನಾ ಅವರ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ದುರುಪಯೋಗ ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಪ್ರವೀಣ್ ಶಂಕರ್ ಕಪೂರ್ ‘‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ತಂದೆ ಹಾಗೂ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ, ಕಂಗನಾರ ಬ್ರಿಟೀಷರಿಂದ ಲಭಿಸಿದ ಸ್ವಾತಂತ್ರ್ಯ ಭಿಕ್ಷೆ ಎಂಬ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ದುರುಪಯೋಗವಾಗಿದೆ. ಅಲ್ಲದೇ ಇದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನಕ್ಕೆ ಮಾಡಿದ ಬಹುದೊಡ್ಡ ಅಪಮಾನ’ʼ ಎಂದಿದ್ದಾರೆ.
ಬಿಜೆಪಿ ಸಂಸದ ವರುಣ್ ಗಾಂಧಿ ‘ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಕಂಗನಾ ತಿರಸ್ಕರಿಸಿದ್ದಾರೆ. ಈ ಆಲೋಚನೆಗೆ ಹುಚ್ಚುತನ ಎಂದು ಕರೆಯಬೇಕೋ, ದೇಶದ್ರೋಹ ಎನ್ನಬೇಕೋ’ ಎಂದು ಪ್ರಶ್ನಿಸಿದ್ದಾರೆ.