ಆರೋಗ್ಯ ದತ್ತಾಂಶಗಳ ನಿರ್ವಹಣೆಗೆ ಸರ್ಕಾರದ ತರಾತುರಿ

ಸಂಸತ್ತಿನಲ್ಲಿ ಚರ್ಚೆಸದೆ ಅಂತಿಮಗೊಳಿಸದಂತೆ ಪ್ರಧಾನಿಯವರಿಗೆ ಯೆಚುರಿ ಪತ್ರ

ಈ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ದೇಶದಲ್ಲಿ ಕೊವಿಡ್‍ ಅನುಭವಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸುವ ಬಗ್ಗೆ ಹೇಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್‍.ಡಿ.ಎಚ್‍.ಎಂ.) ಎಂಬುದನ್ನು ಪ್ರಕಟಿಸಿದರಷ್ಟೇ.

ಕೇಂದ್ರ ಸರಕಾರ ಈಗಾಗಲೇ ರೂಪಿಸಿಕೊಂಡಿರುವ  ‘ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ’(ಹೆಚ್.ಡಿ.ಎಂ.ಪಿ) ಈ ಮಿಷನ್‍ನ ಒಂದು ಭಾಗವೆನ್ನಲಾಗಿದೆ. ಅದನ್ನು ಕುರಿತಂತೆ ಸಪ್ಟಂಬರ್ 3ರ  ಒಳಗೆ ಟಿಪ್ಪಣಿಗಳನ್ನು ಎಂದೂ ಸರಕಾರದ ಪ್ರಕಟಣೆ ಹೇಳುತ್ತದೆ. 

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಒದಗಿಸುವ  ಬಗ್ಗೆ ಏನೂ ಹೇಳದೆ ಕೇವಲ ಆ ಕುರಿತ ದತ್ತಾಂಶಗಳ ಈ ಬಗ್ಗೆ ಇಷ್ಟೊಂದು ಧಾವಂತವನ್ನು ಏಕೆ ತೋರಿಸುತ್ತಿದೆ ಎಂಬ ಪ್ರಶ್ನೆ ಹಲವರಲ್ಲಿ ಸಹಜವಾಗಿ ಎದ್ದಿದೆ. ಅದರಲ್ಲೂ ವೈಯಕ್ತಿಕ ದತ್ತಾಂಶಗಳ ರಕ್ಷಣೆ ಕುರಿತು ಒಂದು ಮಸೂದೆ,  ‘ವೈಯಕ್ತಿಕ ದತ್ತಾಂಶ ರಕ್ಷಣಾ’ (ಪಿಡಿಪಿ) ಮಸೂದೆ 2019 ಇನ್ನೂ ಸಂಸತ್ತಿನ ಮುಂದೆ ಅಂಗೀಕಾರಕ್ಕೆ ಕಾದಿರುವಾಗ, ಮತ್ತು ಸಪ್ಟಂಬರ್ 14ರಿಂದ ಸಂಸತ್ತಿನ ಅಧಿವೇಶನವನ್ನು ಕರೆದಿರುವಾಗ, ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ.ನ್ನು ಅಂತಿಮಗೊಳಿಸುವ ತರಾತುರಿ ಏಕೆ ಎಂಬ ಪ್ರಶ್ನೆಯೂ ಎದ್ದಿದೆ.

ಆದ್ದರಿಂದ ಇಲ್ಲಿ ವೈಯಕ್ತಿಕ ದತ್ತಾಂಶಗಳ ರಕ್ಷಣೆಯ ಪ್ರಶ್ನೆ ಅಡಗಿರುವಾಗ, ಮತ್ತು ಈ ಪ್ರಶ್ನೆ ಇನ್ನೂ ಸಂಸತ್ತಿನ ಮುಂದೆ ಚರ್ಚೆಯಲ್ಲಿರುವಾಗ  ಇದನ್ನು ಇತ್ಯರ್ಥಗೊಳಿಸದೆ ಇವೆರಡನ್ನು ಅಂತಿಮಗೊಳಿಸಬಾರದು ಎಂದು ಆಗ್ರಹಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಆಗಸ್ಟ್ 31ರಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಹೆಚ್.ಡಿ.ಎಂ.ಪಿ, ಸ್ವಾತಂತ್ರ್ಯ ದಿನ 2020ರಂದು ಪ್ರಕಟಿಸಿರುವ ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್‍.ಡಿ.ಎಚ್‍.ಎಂ.)ನ ಭಾಗವಾಗಿದೆಯಾದ್ದರಿಂದ ಇಂತಹ ಒಂದು ಚರ್ಚೆ ಅನಿವಾರ್ಯವಾಗಿದೆ. ವಿಚಿತ್ರವೆಂದರೆ, ಸರಕಾರ ಪ್ರತ್ಯೇಕವಾಗಿ ಹೆಚ್.ಡಿ.ಎಂ.ಪಿ ಬಗ್ಗೆ ಮಾತ್ರ ಟಿಪ್ಪಣಿಗಳನ್ನು ಕೇಳಿದೆ, ಇಡಿಯಾಗಿ ಎನ್‍.ಡಿ.ಎಚ್‍.ಎಂ. ಬಗ್ಗೆ ಕೇಳಿಲ್ಲ ಎಂಬ ಸಂಗತಿಯತ್ತ  ಅವರು ಈ ಪತ್ರದಲ್ಲಿ ಪ್ರಧಾನಿಗಳ ಗಮನ ಸೆಳೆದಿದ್ದಾರೆ.

ದೇಶದಲ್ಲಿ ಮತ್ತು ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಗಳ ನಂತರ, ‘ವೈಯಕ್ತಿಕ ದತ್ತಾಂಶ ರಕ್ಷಣಾ’ (ಪಿಡಿಪಿ) ಮಸೂದೆ 2019 ನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಅದಿನ್ನೂ ಇತ್ಯರ್ಥಗೊಂಡಿಲ್ಲ. ಎನ್‍.ಡಿ.ಎಚ್‍.ಎಂ. ಎಲ್ಲ ನಾಗರಿಕರ ಸೂಕ್ಷ್ಮ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸುವ ಪ್ರಸ್ತಾವವನ್ನು ಇಟ್ಟಿದೆ. ನಂತರ ಇದನ್ನು ಖಾಸಗಿ ವಿಮಾ ಕಾರ್ಪೊರೇಟ್‍ಗಳಿಗೆ ಮತ್ತು ಔಷಧಿ ಕಂಪನಿಗಳಿಗೆ ಲಭ್ಯಗೊಳಿಸಲಾಗುತ್ತದೆ. ಇದು ವೈಯಕ್ತಿಕ ದತ್ತಾಂಶದ ರಕ್ಷಣೆಯ ಒಂದು ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಅಲ್ಲದೆ ಈ ಪ್ರಸ್ತಾವಿತ ಹೆಚ್.ಡಿ.ಎಂ.ಪಿ. ಸಂಸತ್ತಿನ ಪರಿಶೀಲನೆಯಲ್ಲಿರುವ ಈ ಮಸೂದೆಯ ಬಗ್ಗೆ ಏನೂ ಹೇಳುವುದಿಲ್ಲ. ಎಂಬುದೂ ಗಮನಾರ್ಹ. ನಿಜಸಂಗತಿಯೆಂದರೆ, ಪ್ರಸ್ತಾವಿತ ಹೆಚ್.ಡಿ.ಎಂ.ಪಿ., ಸಂಸತ್ತಿನ ಮುಂದಿರುವ ಮಸೂದೆಯ ಸಾರವನ್ನು, ಅಂದರೆ ದತ್ತಾಂಶ ರಕ್ಷಣೆಯ ನಿರ್ವಹಣೆಯ ಕುರಿತಾದ ಪ್ರಶ್ನೆಯನ್ನು ಗಂಭೀರವಾಗಿ ದುರ್ಬಲಗೊಳಿಸುವ ಹಲವಾರು ಅಂಶಗಳನ್ನು ಹೊಂದಿದೆ. ಇಂತಹ ಸನ್ನಿವೇಶಗಳಲ್ಲಿ, ಸಂಸತ್ತು ಪಿ.ಡಿ.ಪಿ. ಮಸೂದೆ ಪರಿಶೀಲನೆಯನ್ನು ಮುಕ್ತಾಯಗೊಳಿಸುವ ವರೆಗೆ, ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ. ಇವೆರಡನ್ನೂ ಅಂತಿಮಗೊಳಿಸುವುದನ್ನು ಕೇಂದ್ರ ಸರಕಾರ ಮುಂದೂಡಬೇಕು ಎಂದು ಯೆಚುರಿ ಪ್ರಧಾನ ಮಂತ್ರಿಗಳನ್ನು ಈ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಸಂಸತ್ತಿನ ಎರಡೂ ಸದನಗಳ ಸಭೆಗಳನ್ನು ಸಪ್ಟಂಬರ್‍ 14 ರಿಂದ ಕರೆಯಲಾಗಿದೆ. ಸಂಸತ್ತು ಪಿ.ಡಿ.ಪಿ. ಮಸೂದೆ 2019ನ್ನು ಪರಿಶೀಲಿಸುವಾಗ ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ.ನ್ನು ಚರ್ಚಿಸಬೇಕು. ಸಂಸತ್ತು ಮತ್ತು ಸ್ಥಾಯೀಸಮಿತಿ ಮುಂತಾದ ಅದರ ರಚನೆಗಳು ಪ್ರಸ್ತಾವಗಳನ್ನು ಆಳವಾಗಿ ಪರಿಶೀಲಿಸುವ ವರೆಗೆ ಯಾವುದೇ ಮಿಷನ್ನಿನ ಅನುಷ್ಠಾನವನ್ನು ಮಾಡಬಾರದು ಎಂದು ಒತ್ತಿ ಹೇಳಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು  ಟಿಪ್ಪಣಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಸಪ್ಟಂಬರ್‍ 3, 2020 ರಿಂದ ಮುಂದಕ್ಕೆ ಹಾಕಬೇಕು ಎಂದೂ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *