ಪತ್ರಕರ್ತ ಅರ್ನಾಬ್​ ಗೋಸ್ವಾಮಿ ಬಂಧನ ಸಂತಸ ತಂದಿದೆ; ಮೃತ ಅನ್ವಯ್​ ನಾಯಕ್ ಕುಟುಂಬ

  • ಪ್ರಕರಣವನ್ನು ರಾಜಕೀಯವಾಗಿಸಲು ಬಯಸುವುದಿಲ್ಲ: ಅರ್ನಾಬ್‍ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಅದ್ನ್ಯಾ ಪ್ರತಿಕ್ರಿಯೆ

 

ದೆಹಲಿ:  ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪದ ಮೇಲೆ ಇಂಗ್ಲೀಷ್ಸುದ್ದಿ ಮಾಧ್ಯಮವಾದ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬಂಧಿಸಿರುವುದನ್ನು ಅನ್ವಯ್‍ ನಾಯಕ್ ‍ಕುಟುಂಬ ಸ್ವಾಗತಿಸಿದೆ. 

ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನದ ಕುರಿತು  ಮೃತ ನ್ವಯ್ ನಾಯಕ್​ ಕುಟುಂಬಸ್ಥರು ಪತ್ರಿಕಾಗೋಷ್ಠಿ ನಡೆಸಿದ್ದು, “ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಸ್ವಾಮಿ ಅವರನ್ನು ಬಂಧಿಸಿರುವುದು ನಮ್ಮ ಕುಟುಂಬಕ್ಕೆ ಸಂತಸ ತಂದಿದೆ” ಎಂದು ಅಭಿಪ್ರಾಯಿಸಿದ್ದಾರೆ.

ಅನ್ವಯ್ ನಾಯ್ಕ್

“ಅರ್ನಾಬ್ ಗೋಸ್ವಾಮಿ ಬಂಧನದಿಂದ ನಮಗೆ ಸಂತೋಷವಾಗಿದೆ. ಈ ಹಿಂದೆ ಪ್ರಕರಣವನ್ನು ಹಿಂಪಡೆಯುವಂತೆ ಪೊಲೀಸರಿಂದ ನಮಗೆ ಸಾಕಷ್ಟು ಒತ್ತಡವಿತ್ತು. ಹಣವನ್ನು ಹಿಂದಿರುಗಿಸುವಂತೆ ನನ್ನ ಪತಿ ಅರ್ನಾಬ್‌ಗೆ ಹಲವು ಬಾರಿ ಒತ್ತಾಯಿಸಿದ್ದು, ಇದು ಅವರಿಗೆ ಸಾವು-ಬದುಕಿನ ವಿಷಯವಾಗಿದೆ ಎಂದು ಕೇಳಿಕೊಂಡಿದ್ದರು” ಎಂದು ಹೇಳಿದ್ದಾರೆ.

ರಿಪಬ್ಲಿಕ್ ಟಿವಿಯಿಂದ ಬಾಕಿ ಹಣ ಪಾವತಿ ಮಾಡದೇ ಇರುವುದೇ ನನ್ನ ತಂದೆ ಮತ್ತು ಅಜ್ಜಿಯ ಸಾವಿಗೆ ಕಾರಣವಾಗಿದೆ ಎಂದು ನಾಯಕ್ ಅವರ ಮಗಳು ಅದ್ನ್ಯಾ ಆರೋಪಿಸಿದ್ದು, “ನಾವು ಈ ವಿಷಯವನ್ನು ರಾಜಕೀಯವಾಗಿಸಲು ಬಯಸುವುದಿಲ್ಲ. ಈ ಸಮಸ್ಯೆಯಿಂದಾಗಿ ನಾನು ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ. ಈ ಬಂಧನವನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು” ಎಂದು ಅದ್ನ್ಯಾ ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಆತ್ಮಹತ್ಯೆ ಪತ್ರವಿಲ್ಲದಿದ್ದರೂ ಅರ್ನಾಬ್, ‘ಬಂಧಿಸಿ ಬಂಧಿಸಿ’ ಎಂದು ಒತ್ತಾಯಿಸುತ್ತಿದ್ದರು. ಆದರೆ ನನ್ನ ಪತಿ ಆತ್ಮಹತ್ಯೆ ಪತ್ರದಲ್ಲಿ ಅರ್ನಾಬ್ ಮತ್ತು ಇನ್ನಿಬ್ಬರನ್ನು ಹೆಸರಿಸಿದ್ದರೂ, ಯಾರನ್ನೂ ಬಂಧಿಸಿಲ್ಲ. ಇದು ನ್ಯಾಯವೇ?”  ಎಂದು ನಾಯಕ್ ಪತ್ನಿ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಮಹಾರಾಷ್ಟ್ರ ಸಿಐಡಿ  ವಶಕ್ಕೆ

ಮೃತ ಅನ್ವಯ್ ನಾಯ್ಕ್ ಬರೆದಿದ್ದಾರೆ ಎನ್ನಲಾದ ಡೆತ್ನೋಟ್

ಈ ನಡುವೆ ಅನ್ವಯ್ ನಾಯಕ್ ಬರೆದಿದ್ದರು ಎನ್ನಲಾಗುವ ಆತ್ಮಹತ್ಯಾ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ (80 ಲಕ್ಷ), ಐಕಾಸ್ಟ್ ಎಕ್ಸ್‌ನ ಫಿರೋಜ್ ಶೇಖ್ (4 ಕೋಟಿ) ಮತ್ತು ಸ್ಮಾರ್ಟ್‌ವರ್ಕ್‌ ನಿತಿಶ್ ಸರ್ದಾ (55 ಲಕ್ಷ) ಹಣ ನೀಡಬೇಕು. ಆದರೆ, ಅವರು ನೀಡದ ಕಾರಣ ಒತ್ತಡದಿಂದಾಗಿ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ ಮೂರು ಕಂಪನಿಗಳ ಮಾಲೀಕರು 5.35 ಕೋಟಿ ಹಣ ಪಾವತಿ ಮಾಡದೇ ಇರುವುದರಿಂದ ಈ ಕಠಿಣ ನಿರ್ಧಾರಕ್ಕೆ ಬರುತ್ತಿದ್ದೇವೆ ಎಂದು ಬರೆಯಲಾಗಿದೆ.

2018 ರಲ್ಲಿ ಅಲಿಬಾಗ್ ಪೊಲೀಸರು ಪ್ರಕರಣ ದಾಖಲಿಸಿದ್ದರಾದರೂ 2019 ರಲ್ಲಿ ಪ್ರಕರಣವನ್ನು ರಾಯಗಡ್ ಪೊಲೀಸರು ಮುಚ್ಚಿದ್ದರು. 2020 ಮೇ ತಿಂಗಳಲ್ಲಿ ಅನ್ವಯ್ ನಾಯಕ್ ಅವರ ಪುತ್ರಿ ಅದ್ನ್ಯಾ ನಾಯಕ್ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಸಂಪರ್ಕಿಸಿ, ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯು ಬಾಕಿ ಪಾವತಿಸದಿರುವ ಬಗ್ಗೆ ಅಲಿಬಾಗ್ ಪೊಲೀಸರು ತನಿಖೆ ನಡೆಸಿಲ್ಲ ಎಂದು ದೂರಿದ ನಂತರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು. ಅನ್ವಯ್ ನಾಯಕ್ ಕಾನ್ಕಾರ್ಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಕಂಪೆನಿಯು ರಿಪಬ್ಲಿಕ್ ಟಿವಿಗೆ ಕೆಲವು ಸೇವೆಗಳನ್ನು ನೀಡಿತ್ತು. ಅನ್ವಯ್ ಅವರ ತಾಯಿ ಸಹ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿದ್ದರು. ಅನ್ವಯ್ ಅವರ ಪತ್ನಿ ಸೂಸೈಡ್ ನೋಟ್‌‌ನಲ್ಲಿ ಇರುವ ಹೆಸರಿನ ಆಧಾರದಲ್ಲಿ ಅರ್ನಾಬ್ ಸೇರಿದಂತೆ ಇತರರ ಮೇಲೆ ಕೇಸು ದಾಖಲಿಸಿದ್ದರು.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್‌ ಬಂಧನ: ಅಮಿತ್‌ ಶಾ, ಜಾವಡೇಕರ್‌, ಸ್ಮೃತಿ ಇರಾನಿ ಖಂಡನೆ

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್​ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಅರ್ನಾಬ್​ ಗೋಸ್ವಾಮಿ ಮೇಲಿದೆ. ಅರ್ನಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ತಮಗೆ 5.4 ಕೋಟಿ ರೂ. ಹಣ ನೀಡಬೇಕು. ಆ ಹಣ ನೀಡಲು ಅವರು ಒಪ್ಪುತ್ತಿಲ್ಲ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಅನ್ವಯ್​ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗ ಸಾವನ್ನಪ್ಪಿರುವುದು ಗೊತ್ತಾಗುತ್ತಿದ್ದಂತೆ ಅನ್ವಯ್ ಅವರ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆ ಸಮಯದಲ್ಲಿ ರಿಪಬ್ಲಿಕ್ ಟಿವಿಯು ತನ್ನ ಬಾಕಿ ಪಾವತಿಯ ಆರೋಪಗಳನ್ನು ರದ್ದುಗೊಳಿಸಿ, ಇದು ದುರುದ್ದೇಶಪೂರಿತ ಅಭಿಯಾನ ಎಂದು ಹೇಳಿತ್ತು. ಒಪ್ಪಂದದ ಪ್ರಕಾರ ಪಾವತಿಸಬೇಕಾದ ಎಲ್ಲಾ ಮೊತ್ತವನ್ನು ರಿಪಬ್ಲಿಕ್ ಟಿವಿ ಕನ್‌ಕಾರ್ಡ್ ಡಿಸೈನ್ಸ್‌‌ಗೆ ಪಾವತಿಸಿದೆ ಎಂದು ಅದು ಹೇಳಿಕೊಂಡಿತ್ತು.

Donate Janashakthi Media

Leave a Reply

Your email address will not be published. Required fields are marked *