‘ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳುತ್ತಿದ್ದೇನೆ, ಕೇಂದ್ರ ಸರ್ಕಾರ ತೋರಿಸಲಿ’: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌

ಹೈದರಾಬಾದ್: ಸೆಪ್ಟೆಂಬರ್ 29, 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ ಎಂಬ ಭಾರತೀಯ ಸೇನೆಯ ಪ್ರತಿಪಾದನೆಗೆ ಕೇಂದ್ರ ಸರ್ಕಾರ ಪುರಾವೆಗಳನ್ನು ತೋರಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್) ಕೇಳಿದ್ದಾರೆ.

ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಸಾಕ್ಷ್ಯ ನೀಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಳಿರುವುದನ್ನು ಸಮರ್ಥಿಸಿಕೊಂಡಿರುವ ಚಂದ್ರಶೇಖರ್‌ ರಾವ್‌ ಅಸ್ಸಾಂ ಮುಖ್ಯಮಂತ್ರಿಯವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿಯನ್ನು ಹುದ್ದೆಯಿಂದ ವಜಾಗೊಳಿಸಿ ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಭಾರತೀಯ ಸೇನೆ ಯೋಧರು ಗಡಿಯಲ್ಲಿ ಹೋರಾಡುತ್ತಿದ್ದಾರೆ. ಶತ್ರುಗಳಿಂದ ಯುದ್ಧದಲ್ಲಿ ಹೋರಾಡಿ ವೀರಮರಣವನ್ನು ಕಂಡರೆ ಅದರ ಕೀರ್ತಿ ಭಾರತೀಯ ಸೇನೆಗೆ ಹೋಗಬೇಕೆ ಹೊರತು ಕೇಂದ್ರದ ಬಿಜೆಪಿ ಸರ್ಕಾರಕ್ಕಲ್ಲ ಎಂದಿದ್ದಾರೆ.

‘ಖಂಡಿತವಾಗಿಯೂ ಅದೊಂದು ರಾಜಕೀಯ ತಂತ್ರವಾಗಿದ್ದು, ಅರ್ಧಕ್ಕೂ ಹೆಚ್ಚು ಭಾರತೀಯರಿಗೆ ಅದು ತಿಳಿದಿದೆ. ಯಾವಾಗ ಚುನಾವಣೆ ಸಮೀಪಿಸುತ್ತದೆಯೋ ಆಗೆಲ್ಲ ಗಡಿ ಭಾಗಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿ ಆತಂಕ ಮೂಡಿಸಲಾಗುತ್ತದೆ ಹಾಗೂ ಅದನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಲಾಗುತ್ತದೆ’ ಎಂದು ಚಂದ್ರಶೇಖರ್‌ ಆರೋಪಿಸಿದ್ದಾರೆ.

ಪುರಾವೆಗಳನ್ನು ತೋರಿಸುವುದು ಕೇಂದ್ರದ ಜವಾಬ್ದಾರಿ ಎಂದಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಮುಖ್ಯಸ್ಥರು ಆಗಿರುವ ಕೆ.ಚಂದ್ರಶೇಖರ್‌ ರಾವ್‌ ‘ಬಿಜೆಪಿಯು ಅಪಪ್ರಚಾರಗಳನ್ನು ನಡೆಸುತ್ತದೆ. ಹಾಗಾಗಿಯೇ ಜನರು ಸಾಕ್ಷ್ಯ ಕೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನೀವು ಚಕ್ರಾಧಿಪತಿ ಅಥವಾ ರಾಜ ಆಗಲು ಸಾಧ್ಯವಿಲ್ಲ. ಸಂಸದ ಸ್ಥಾನದಲ್ಲಿರುವ ರಾಹುಲ್‌ ಗಾಂಧಿ ಅವರು ಸಾಕ್ಷ್ಯಗಳಿಗಾಗಿ ಕೇಳಿದ್ದಾರೆ. ಅವರಿಗೆ ಕೇಳುವ ಹಕ್ಕಿದೆ. ನೀವು ಅದಕ್ಕೆ ಪ್ರತಿಕ್ರಿಯಿಸಿ ಇಲ್ಲವೇ ನಿಶ್ಯಬ್ದರಾಗಿರಿ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

2016ರಂದು ಉರಿ ಸೆಕ್ಟರ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ನೆಲದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಉಗ್ರರ ಕೇಂದ್ರಗಳನ್ನು ದ್ವಂಸ ಮಾಡಿರುವುದು ಸುದ್ದಿಯಾಗಿತ್ತು. ಆ ದಾಳಿಗೆ ಸಂಬಂಧಿಸಿದಂತೆ ಕೇಂದ್ರವು ಪುರಾವೆಗಳನ್ನು ಒದಗಿಸಬೇಕೆಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸುತ್ತಿದ್ದಾರೆ.

2025ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಆರ್ಥಿಕತೆಯನ್ನಾಗಿ ಮಾಡುವುದು ಯಾವುದೇ ದೊಡ್ಡ ಸಾಧನೆ ಅಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ. ಅದಕ್ಕಾಗಿ ಕೇಂದ್ರ ಸರ್ಕಾರ ಏನು ಹೆಚ್ಚುವರಿ ಪ್ರಯತ್ನ ಮಾಡುತ್ತಿದೆ. ಏನು ಮಾಡುತ್ತಿಲ್ಲ. ನಿಮ್ಮ ಬಳಿ ಹೊಸ ಹೊಸ ಕೌಶಲ್ಯಗಳು ಇದ್ದರೆ ಚೀನಾ ಮತ್ತು ಸಿಂಗಪೂರ ರೀತಿಯಲ್ಲಿ ಚಿಂತನೆ ಮಾಡಿ. ಆ ಕೆಲಸ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗಿಂತ ಅದ್ಭುತ ಆಗಬಹುದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಆಡಳಿತದ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ. ಲಕ್ಷಾಂತರ ಕೋಟಿ ರೂಪಾಯಿಗಳನ್ನು ಬ್ಯಾಂಕ್‌ನಿಂದ ಅಕ್ರಮವಾಗಿ ಪಡೆದುಕೊಂಡಿರುವ ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ರಫೇಲ್‌ ಒಪ್ಪಂದ ಸಹ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ ಎಂದ ಅವರು, ಇಂಡೊನೇಷ್ಯಾ 8 ಶತ ಕೋಟಿ ಡಾಲರ್‌ಗಳಲ್ಲಿ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಸಾಧ್ಯವಾದರೆ, 36 ಯುದ್ಧ ವಿಮಾನಗಳಿಗೆ ಭಾರತವು 9.74 ಶತ ಕೋಟಿ ಡಾಲರ್‌ ಪಾವತಿಸಿರುವುದು ಹೇಗೆ? ಅದನ್ನು ಮೋದಿ ಸರ್ಕಾರವು ವಿವರಿಸಲಿ. ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾನು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *