ಹಾಸನ : ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ, ಇಂದು ಕಾಡಾನೆಯೊಂದಿಗಿನ ಕಾಳಗದಲ್ಲಿ ಪ್ರಾಣ ಬಿಟ್ಟಿದೆ. ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಈ ವೇಳೆ ಒಂಟಿಸಲಗದ ಜೊತೆ ಅರ್ಜುನ ಕಾಳಗಕ್ಕೆ ಇಳಿದಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ನಿಯಂತ್ರಿಸಲಾಗದೆ ಮಾವುತ ಇಳಿದು ಓಡಿದ್ದಾನೆ. ಕಾಳಗದಲ್ಲಿ ಅರ್ಜುನ ದಾರುಣವಾಗಿ ಸಾವನ್ನಪ್ಪಿದೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯನ್ನು ಸೆರೆಹಿಡಿಯಲು ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಿಢೀರ್ ದಾಳಿ ಮಾಡಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅರ್ಜುನ, ಸೌಮ್ಯ ಸ್ವಾಭಾವದಿದಲೇ ಎಲ್ಲರ ಪ್ರೀತಿ ಗಳಿಸಿದ್ದ. ಅರ್ಜುನನ ಸಾವು ದುಃಖ ತರಿಸಿದೆ.
ಇದನ್ನೂ ಓದಿ:ಅರಣ್ಯ ಭವನದಲ್ಲಿ ಭೀಮಾರ್ಜುನರ ಪ್ರೀತಿ…
ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?
ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತು ತನ್ನ ಅದ್ಧೂರಿ ಗಜ ನಡಿಗೆಯಿಂದ ಜನರನ್ನು ರಂಜಿಸಿದ್ದ ಅರ್ಜುನ ಎಂಬ ಆನೆಯ ಸಾವಿಗೆ ಅಧಿಕಾರಿಗಳು ಮಾಡಿದ ಎಡವಟ್ಟೇ ಕಾರಣವಾಯಿತೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ ವೇಳೆ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ. ಅಧಿಕಾರಿಗಳ ಪ್ರಕಾರ ಪುಂಡಾನೆ ದಾಳಿಗೆ ಸಿಲುಕಿ ಅರ್ಜುನ ಮೃತಪಟ್ಟಿದ್ದಾನೆ. ಆದರೆ, ಅರ್ಜುನನಂಥ ಬಲಶಾಲಿಯನ್ನು ಪುಂಡಾನೆ ಕೆಡವಲು ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಜನರು ಮತ್ತು ಆನೆಗಳ ಮಾವುತರ ಆರೋಪ.
ಕಾಡಾನೆಯನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳು ನಡೆಸಿದ ಪ್ರಯೋಗಗಳೆಲ್ಲವೂ ಅರ್ಜುನನ ಮೇಲೆ ಆಗಿದೆ. ಕಾಡಾನೆಯ ಕಾಲಿಗೆ ಎಂದು ಹಾರಿಸಿದ ಗುಂಡು ಅರ್ಜುನನ ಕಾಲಿಗೆ ಬಿದ್ದಿದೆ. ಈ ಕಾರಣದಿಂದ ಬಲ ಕಳೆದುಕೊಂಡ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ ಎನ್ನುವುದು ಮಾವುತರು ನೀಡುವ ವಿವರಣೆ. ಅಂತಿಮವಾಗಿ ಕಾಡಾನೆ ತಿವಿತಕ್ಕೆ ಒಳಗಾಗಿ ಅರ್ಜುನ ಸತ್ತಿದ್ದು ನಿಜವಾದರೂ ಅದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಈಗ ಕೇಳಿಬರುತ್ತಿರುವ ಮಾತು.
ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಕಾಡಾನೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಅಂಬಾರಿ ವೀರ ಅರ್ಜುನನ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ನೆಡುತೋಪಿನಲ್ಲಿ ಸಕಲ ಸರ್ಕಾರಿ ಗೌರವ ಹಾಗು ರಾಜ ಮರ್ಯಾದೆಯೊಂದಿಗೆ ನಡೆಯಲಿದೆ.
ಅರ್ಜುನ ದಸರಾ ಅಂಬಾರಿ ಹೊತ್ತ ಆನೆಯಾದ ಕಾರಣ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಮೈಸೂರು ಅರಮನೆಯ ರಾಜ ವಂಶಸ್ಥರಿಂದಲೂ ಅರ್ಜುನನಿಗೆ ಅಂತಿಮ ಗೌರವ ಸಲ್ಲಲಿದೆ. ಅರಮನೆಯ ಪೊರೋಹಿತರಿಂದ ಅಂತಿಮ ವಿಧಿ ವಿಧಾನ ನಡೆಯಲಿದೆ.
ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 04 | ಭಾಗ 02 Live #wintersession2023