ಬೆಂಗಳೂರು: ಮತದಾರರ ನಮೂದಿಸಲಾಗಿರುವ ವಯುಕ್ತಿಕ ಮಾಹಿತಿಗಳನ್ನು ತೆಗೆದು ಹಾಕಲು ಅಥವಾ ಸೇರಿಸುವುದಕ್ಕೆ ಚುನಾವಣಾ ಆಯೋಗ ನಿಗದಿಪಡಿಸಿರುವ ಫಾರಂ 7 ಅತ್ಯಗತ್ಯ. ಈ ಅರ್ಜಿ ಸ್ವೀಕಾರ ಮಾಡದೆಯೇ, 27 ಲಕ್ಷ ಹೆಸರು ತೆಗೆದಿದ್ದು ಹೇಗೆ? ಇವುಗಳಿಗೆ ಸಹಿ ಹಾಕಿದವರು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಸಮಯದಲ್ಲಿ ಚಿಲುಮೆ ಸಂಸ್ಥೆಗೆ ಬೇರೆ ಕೆಲಸವನ್ನು ಸರ್ಕಾರ ನೀಡಿರಬಹುದು. ಆದರೆ ಅವುಗಳಿಗೂ ಈ ಚುನಾವಣೆ ಪ್ರಕ್ರಿಯೆಗೂ ಬಹಳ ವ್ಯತ್ಯಾಸವಿದೆ. ಚುನಾವಣಾ ಆಯೋಗ ಅಧಿಕಾರಿಗಳ ಭೇಟಿಗೆ ಇಂದು ಸಮಯಾವಕಾಶ ಕೇಳಲಾಗಿತ್ತು. ಹಿರಿಯ ಅಧಿಕಾರಿ ಭೇಟಿ ಮಾಡಬೇಕಿದ್ದು, ನಾಳೆ ಸಮಯ ನೀಡಿದ್ದಾರೆ ಎಂದರು.
ನಾಳೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ದೂರು ನೀಡುತ್ತೇವೆ. ಈ ಪ್ರಕರಣದಲ್ಲಿ ಸಾಕಷ್ಟು ಕಾನೂನು ಅಂಶಗಳಿವೆ. ಮತದಾರರ ಮಾಹಿತಿ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ. ರಾಜ್ಯದಲ್ಲಿ 8250 ಬೂತ್ ಗಳಿವೆ. ಪ್ರತಿ ಬೂತ್ ಗೆ ಒಬ್ಬರನ್ನು ನೇಮಕ ಮಾಡಬೇಕು. ಕೇವಲ ಚಿಲುಮೆ ಸಂಸ್ಥೆ ಮಾತ್ರವಲ್ಲ, ಏಳು ಸಾವಿರಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಬೆಂಗಳೂರಿನ ಎಲ್ಲಾ 28 ಕ್ಷೇತ್ರ ಚುನಾವಣಾಧಿಕಾರಿ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಒತ್ತಡದ ಮೇಲೆ ಈ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿರುವ ಬಂಧಿತ ಕೆಲ ಆರೋಪಿಗಳು ಹೇಳಿಕೆ ಗಮನಿಸಿದ್ದಲ್ಲಿ, ‘ಈ ವಿಚಾರ ನನಗೆ ಗೊತ್ತಿಲ್ಲ. ಆತ ಕಳ್ಳತನ ಮಾಡಿದ್ದರೆ, ಅದನ್ನು ಮಾಡಿಸಿದವರು ಯಾರು? ಹೀಗೆ ಮಾಡಬೇಕು ಎಂದು ಹೇಳಿಕೊಟ್ಟವರು ಯಾರು? ಅಧಿಕಾರಿಯೊಬ್ಬರು ಮೇಲಾಧಿಕಾರಿಗಳ ಆದೇಶದ ಮೇರೆಗೆ ನಾವು ಈ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದು, ಈ ಮೇಲಾಧಿಕಾರಿಗಳು ಯಾರು? ನಾನಾ, ಸಿದ್ದರಾಮಯ್ಯನವರಾ, ಯಡಿಯರಪ್ಪನವರಾ, ಬೊಮ್ಮಾಯಿಯವರಾ? ಈ ವಿಚಾರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.