ಅರೆನ್ಯಾಯಿಕ ನ್ಯಾಯಾಲಯಗಳ ಅಧಿಕಾರ ವಿಭಜನೆ: ಸರ್ಕಾರದ ಕ್ರಮಕ್ಕೆ ಎಐಎಲ್‌ಯು ತೀವ್ರ ವಿರೋಧ

ಬೆಂಗಳೂರು: ರಾಜ್ಯ ಸರ್ಕಾರ‌ ಆದೇಶವೊಂದನ್ನು ಹೊರಡಿಸುವ ಮೂಲಕ ಅರೆನ್ಯಾಯಿಕ ನ್ಯಾಯಾಲಯಗಳ ಅಧಿಕಾರ ವಿಭಜನೆ ಮಾಡಲು ಹೊರಟಿರುವುದು ಅತ್ಯಂತ ಅವೈಜ್ಞಾನಿಕದ ಕ್ರಮವಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಶ್ರೀನಿವಾಸ ಕುಮಾರ್

ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಐಎಲ್‌ಯು ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ್ ಅವರು, ಕರ್ನಾಟಕದಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ರವರುಗಳಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಇತರ ಕೆಲವು ಕಾಯ್ದೆ ಕಾನೂನುಗಳಲ್ಲಿ ಪ್ರಕರಣಗಳನ್ನು ವಿಚಾರಣೆ ನಡೆಸುವ ಅರೆನ್ಯಾಯಿಕ ಅಧಿಕಾರ ಸದ್ಯದ ಸ್ಥಿತಿಯಲ್ಲಿ ಚಾಲ್ತಿಯಲ್ಲಿವೆ. ಆದರೆ, ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್‌. ಅಶೋಕ್ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ, ತಹಶೀಲ್ದಾರ್ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ವಿಚಾರಣೆ ಅಧಿಕಾರವನ್ನು ಉಪ ತಹಶೀಲ್ದಾರ್ ಗಳಿಗೆ ವಹಿಸುವಂತೆ ಆದೇಶ ಹೊರಡಿಸಿದ್ದಾರೆ.

ಸಚಿವರ ಆದೇಶವು ಅವೈಜ್ಞಾನಿಕ ಮತ್ತು ಕಾನೂನು ಬಾಹಿರವಾಗಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ ಮತ್ತು ನಿಯಮಗಳು ಉಲ್ಲೇಖಿಸಲ್ಪಟ್ಟಂತೆ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ನಡೆಸುತ್ತಿರುವಾಗ ಸಂಬಂಧಿತ ಕಾಯಿದೆ ಕಾನೂನುಗಳಿಗೆ ಸರಿಯಾದ ತಿದ್ದುಪಡಿ ಆಗದೆ, ಶಾಸನಸಭೆಯಲ್ಲಿ ಚರ್ಚೆಗೆ ಒಳಪಡಿಸದೆ ಏಕಾಏಕಿ ಅವೈಜ್ಞಾನಿಕ ಆದೇಶವನ್ನು ಹೊರಡಿಸಿದ ಪಕ್ಷದಲ್ಲಿ ಸರ್ಕಾರದ ಈ ಆದೇಶದಿಂದ ವಕೀಲರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಮತ್ತು ಗೊಂದಲ ಉಂಟಾಗಲಿದೆ ಎಂದು ಎಐಎಲ್‌ಯು ಸಂಘಟನೆ ತಿಳಿಸಿದೆ.

ಹಾಗಾಗಿ ಕಾನೂನು ತಜ್ಞರ, ಹಿರಿಯ ರೆವಿನ್ಯೂ ಅಧಿಕಾರಿಗಳ, ಶಾಸಕರ, ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಳ್ಳದೆ, ಅರೆ ನ್ಯಾಯಿಕ ನ್ಯಾಯಾಲಯಗಳ ವ್ಯವಸ್ಥೆಯಲ್ಲಿ ಯಾವುದೇ ಆತುರದ ತೀರ್ಮಾನವನ್ನು ಸರ್ಕಾರವಾಗಲಿ ಅಥವಾ ಕಂದಾಯ ಮಂತ್ರಿಗಳಾಗಲಿ ತೆಗೆದುಕೊಳ್ಳಬಾರದೆಂದು ಅಖಿಲ ಭಾರತ ವಕೀಲರ ಒಕ್ಕೂಟ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *