ಮಾಲೆಗಾಂವ್ ಬಾಂಬ್ ಸ್ಫೋಟ: ಖುಲಾಸೆಯಾದವರು ನಿಜವಾಗಿಯೂ ಅಮಾಯಕರೇ?

ಸೆಪ್ಟೆಂಬರ್ 2008 ರಲ್ಲಿ ಆರು ಜನರ ಸಾವು ಮತ್ತು ಸುಮಾರು 100 ಜನರನ್ನು ಗಾಯಾಳುಗಳಾಗಿಸಿದ ಮಾಲೆಗಾಂವ್‍ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿ ಬಂದಿರುವ ಅಂತಿಮ ತೀರ್ಪು ಜಾಮೀನಿನ ಮೇಲೆ ಹೊರಗಿದ್ದ ಎಲ್ಲ 11 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಪ್ರಕರಣವು ಬಲವಾದ ಅನುಮಾನವನ್ನು ಸೃಷ್ಟಿಸಿದೆಯಾದರೂ, ಆರೋಪಗಳನ್ನು ಸಾಬೀತುಪಡಿಸಲು ವಾಸ್ತವಿಕ ಪುರಾವೆಗಳನ್ನು ಪ್ರಾಸಿಕ್ಯೂಷನ್ ಮಂಡಿಸಲಿಲ್ಲ ಎಂದು ಎನ್‍ಐಎ ನ್ಯಾಯಾಲಯ ಟಿಪ್ಪಣಿ ಮಾಡಿರುವುದು ಗಮನಾರ್ಹ. ಈ ಪ್ರಕರಣದ ಆರೋಪ ಪಟ್ಟಿಗಳ ವಿಶ್ಲೇಷಣೆಯಿಂದ ಮೂಡಿಬರುವ ಚಿತ್ರವೆಂದರೆ, ಖುಲಾಸೆಯಾದವರು ಪ್ರತಿಪಾದಿಸುವ ಆಲೋಚನೆಗಳು ಮತ್ತು ಆಕಾಂಕ್ಷೆಗಳು ಒಟ್ಟಾರೆಯಾಗಿ ಇಂದು ಕೇಂದ್ರದಲ್ಲಾಗಲೀ, ರಾಜ್ಯಗಳಲ್ಲಾಗಲೀ ಅಧಿಕಾರದಲ್ಲಿರುವ ಹೆಚ್ಚಿನವರ ಚಿಂತನೆಗಳ ಅವಿಭಾಜ್ಯ ಅಂಗವಾಗಿವೆ. ಅವುಗಳಲ್ಲಿ ಕೆಲವನ್ನು ಸರಕಾರೀ ಕ್ರಿಯೆಗಳ ಮೂಲಕ ವಾಸ್ತವಗೊಳಿಸಲಾಗುತ್ತಿದ್ದರೆ, ನೇರ ಕಾರ್ಯಾಚರಣೆಗಳನ್ನು ಇಂತಹ ಗುಂಪುಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ.

-‘ಸವೇರಾ’
-ಅನು: ಸಿ. ಸಿದ್ದಯ್ಯ

2000ದ ದಶಕದ ಆರಂಭದಲ್ಲಿ ಸವೇರಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಬಾಂಬ್ ಸ್ಫೋಟಗಳು ದೇಶವನ್ನು ಬೆಚ್ಚಿಬೀಳಿಸಿದ್ದವು. ಅವುಗಳೆಂದರೆ ಮಾಲೆಗಾಂವ್ (2006, 2008), ಸಂಝೌತಾ ಎಕ್ಸ್‌ಪ್ರೆಸ್ (2007), ಹೈದರಾಬಾದ್‌ನ ಮೆಕ್ಕಾ ಮಸೀದಿ (2007), ಅಜ್ಮೀರ್ ಷರೀಫ್ ದರ್ಗಾ (2007) ಮತ್ತು ಮೊದಸಾ (2008). ಅದಕ್ಕೂ ಮೊದಲು, ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಬಾಂಬ್ ಸ್ಫೋಟಗಳು ನಡೆದಿದ್ದವು, ಇವುಗಳನ್ನು ಇಸ್ಲಾಮಿಸ್ಟ್ ಗುಂಪುಗಳು ತಾವು
ನಡೆಸಿದ್ದೆಂದು ಹೇಳಿಕೊಂಡಿವೆ. ನಂತರದ ಸ್ಫೋಟಗಳು ಹಿಂದೂ ಮತಾಂಧರು ನಡೆಸಿದ ಸೇಡಿನ ದಾಳಿಗಳು ಎಂದು ಭಾವಿಸಲಾಗಿತ್ತು. ಆದರೆ, ಇವು ಹೆಚ್ಚು ಅಪಾಯಕಾರಿ ದೃಷ್ಟಿಕೋನ ಮತ್ತು ಯೋಜನೆಗಳನ್ನು ಹೊಂದಿದ್ದವು ಎಂದು ನಂತರದ ತನಿಖೆಗಳು ಬಹಿರಂಗಪಡಿಸಿದವು. ಇದು ‘ಸೇಡಿನ ದಾಳಿಗಳು’ ಎಂಬುದು ಒಂದು ನೆಪವಷ್ಟೆ ಎಂದು ಸಾಬೀತಾಯಿತು. ಹಲವು ವರ್ಷಗಳ ನಂತರ, 2021 ರಲ್ಲಿ ಬಂಧಿಸಲ್ಪಟ್ಟ ಸ್ವಾಮಿ ಅಸೀಮಾನಂದ ಎಂಬಾತ , ವಿವಿಧ ಸಂಘ ಪರಿವಾರದ ಸಂಘಟನೆಗಳು ಮತ್ತು ಅವುಗಳಿಗೆಸಂಬಂಧಿಸಿದ ವ್ಯಕ್ತಿಗಳು ನಂತರದ ಸ್ಫೋಟಗಳಿಗೆ ಕಾರಣರಾಗಿದ್ದಾರೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡರು. ಈ ಪಿತೂರಿಯಲ್ಲಿ ಆರ್‌ಎಸ್‌ಎಸ್‌ ನ ಕೆಲವು ಪ್ರಚಾರಕರು ಮತ್ತು ಒಬ್ಬ ಹಿರಿಯ ಆರ್‌ ಎಸ್‌ ಎಸ್ ಮುಖಂಡರೂ ಭಾಗಿಯಾಗಿದ್ದಾರೆ ಎಂದೂ ಆತ ಆರೋಪಿಸಿದರು.

ಇತ್ತೀಚೆಗೆ, ಸೆಪ್ಟೆಂಬರ್ 2008 ರಲ್ಲಿ ನಡೆದ ಮಾಲೆಗಾಂವ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿ, ಮುಂಬೈಯಲ್ಲಿ ಎನ್‍ಐಎ ನ್ಯಾಯಾಲಯವು ಅಂತಿಮ ತೀರ್ಪು ನೀಡಿತು. ಮನೆಯಲ್ಲಿ ತಯಾರಿಸಿದ ಒಂದು ಬಾಂಬ್ ಮಾಲೆಗಾಂವ್ ಪಟ್ಟಣದ ಮಸೀದಿಯೊಂದರ ಬಳಿ ಸ್ಫೋಟಗೊಂಡಾಗ ಆರು ಜನರು ಸಾವನ್ನಪ್ಪಿದರು ಮತ್ತು ಸುಮಾರು 100 ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಎಲ್ಲ 11 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇವರಲ್ಲಿ ಮಾಜಿ ಸಂಸತ್ ಸದಸ್ಯೆ ಸಾಧ್ವಿ ಪ್ರಜ್ಞಾ ಠಾಕೂರ್, ಕೆಲವು ಮಾಜಿ ಸೈನಿಕರು ಮತ್ತು ಕೆಲವು ಅತೃಪ್ತ ಸಂಘಪರಿವಾರದ ಸಹವರ್ತಿಗಳೂ ಸೇರಿದ್ದಾರೆ. 2011ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಸ್ಫೋಟಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಪತ್ತೆಯಾದ ನಂತರ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದಿಂದ ಈ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿತು.

ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆಗೆ ಧರ್ಮದ್ವೇಷ ರಾಜಕಾರಣ ಮಾಡುವ ‌ಬಿ.ಜೆ.ಪಿ ನಡೆಗೆ ಸಿಪಿಐಎಂ ಖಂಡನೆ

ರಾಗ ಬದಲಾಯಿತು

2014 ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಎನ್ಐಎ ರಾಗ ಬದಲಾಯಿತು ಮತ್ತು 2016 ರಲ್ಲಿ ಅದು ಪ್ರಜ್ಞಾ ಠಾಕೂರ್ ಅವರನ್ನು ಖುಲಾಸೆಗೊಳಿಸಲು ಪ್ರಕರಣದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿತು. ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು ಮತ್ತು ಪ್ರಕರಣವು 2018 ರಲ್ಲಿ ವಿಚಾರಣೆಗೆ ಬಂದಿತು. ವಿವಿಧ ತಾಂತ್ರಿಕ ಮತ್ತು ಕಾರ್ಯವಿಧಾನದ ಲೋಪಳಿಂದಾಗಿ ಎಟಿಎಸ್ ನಡೆಸಿದ ಆರಂಭಿಕ ತನಿಖೆ ಹೆಚ್ಚು ಸ್ವೀಕಾರಾರ್ಹವಲ್ಲ ಎಂದು ಎನ್‌ಐಎ ನ್ಯಾಯಾಲಯಕ್ಕೆ ಕಂಡಿತು. ಈ ಪ್ರಕರಣವು ಬಲವಾದ ಅನುಮಾನವನ್ನು ಸೃಷ್ಟಿಸಿದೆ, ಆದರೆ ಆರೋಪಗಳನ್ನು ಸಾಬೀತುಪಡಿಸಲು ವಾಸ್ತವಿಕ ಪುರಾವೆಗಳನ್ನು ಪ್ರಾಸಿಕ್ಯೂಷನ್ ಮಂಡಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದರ ಸೂಚನೆಯನ್ನು 2015 ರಷ್ಟು ಹಿಂದೆಯೇ ವಿಶೇಷ ಎನ್‍ಐಎ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ನೀಡಿದ್ದರು. “ಮೇಲಿನವರ” ನಿರ್ದೇಶನದಂತೆ ಈ ಪ್ರಕರಣವನ್ನು ನಿಧಾನಗೊಳಿಸಬೇಕು ಎಂದು ಎನ್‍ಐಎ ಬಯಸುತ್ತಿದೆ ಎಂದು ಅಂದು ಅವರು ಆರೋಪಿಸಿದ್ದರು.

ಎಟಿಎಸ್ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರೋಪಿಗಳು ನಡೆಸಿದ ವಿವಿಧ ಸಭೆಗಳ ವೀಡಿಯೊ ರೆಕಾರ್ಡಿಂಗ್‌ಗಳು (ಭಾಗವಹಿಸಿದವರಲ್ಲಿ ಒಬ್ಬರು ಮಾಡಿದ್ದು), ವಿಚಾರಣೆಯ ದಾಖಲೆಗಳು, ಸಾಮಾನ್ಯ ವಿಧಿವಿಜ್ಞಾನ ವರದಿಗಳ ಹೊರತಾಗಿ, ಇತರ ಸಭೆಗಳ ಪ್ರತಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಬೃಹತ್ ಪ್ರಮಾಣದ ಪೋಷಕ ಪುರಾವೆಗಳನ್ನು ಲಗತ್ತಿಸಲಾಗಿದೆ. 2010 ರಲ್ಲಿ, ಈ ದಾಖಲೆಗಳನ್ನು ಪ್ಯಾರಿಸ್‌ನ CERI-Sciences Po/CNRS ನಲ್ಲಿ ಹಿರಿಯ ಸಂಶೋಧನಾ ಫೆಲೋ ಮತ್ತು ಲಂಡನ್‌ ನ ಕಿಂಗ್ಸ್ ಕಾಲೇಜ್‌ನಲ್ಲಿ ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರದ ಪ್ರಾಧ್ಯಾಪಕರಾದ ಕ್ರಿಸ್ಟೋಫೆ ಜಾಫ್ರೆಲೊಟ್ ಅವರು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ‘(ಸೆಪ್ಟೆಂಬರ್ 4, 2010)ಯಲ್ಲಿ ವಿಶೇಷ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಲೇಖನ ಮತ್ತು ಪ್ರಕರಣದ ಅನೇಕ ಪ್ರಮುಖ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಅದೇ ಪ್ರಕರಣದ ದಾಖಲೆಗಳೊಂದಿಗೆ ಅದರ ಸಾರಾಂಶವನ್ನು ‘ದಿ ವೈರ್‌’ನಲ್ಲಿ (ಆಗಸ್ಟ್ 5, 2025) ಪ್ರಕಟಿಸಲಾಗಿದೆ. ಕೆಳಗೆ ನೀಡಲಾದ ವಿಶ್ಲೇಷಣೆಯು ಅದರಲ್ಲಿ ನೀಡಲಾದ ಪ್ರಕರಣದ ದಾಖಲೆಗಳನ್ನು ಆಧರಿಸಿದೆ.

ಸಂಚು ಮತ್ತು ಸಂಚುಕೋರರು

ವಿಚಾರಣಾ ಪ್ರತಿಲಿಪಿಯ ಪ್ರಕಾರ, 2006 ರಲ್ಲಿ ‘ಅಭಿನವ್ ಭಾರತ್ ‘ ಎಂಬ ಸಂಘಟನೆಯನ್ನು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಹುಟ್ಟುಹಾಕಿದರು.ಈ ಹೆಸರನ್ನು 1905 ರಲ್ಲಿ ವಿ.ಡಿ. ಸಾವರ್ಕರ್ ಅವರು ಪ್ರಾರಂಭಿಸಿದ ಚಳುವಳಿಯ ನೆನಪಿನಲ್ಲಿ ಇದನ್ನು ಇಡಲಾಗಿದೆ. ಆದರೆ, ನಾಥೂರಾಂ ಗೋಡ್ಸೆಯವರ ಸೋದರ ಸೊಸೆ ಮತ್ತು ಸಾವರ್ಕರ್ ಅವರ ಸೋದರಳಿಯನ ಪತ್ನಿ ಹಿಮಾನಿ ಸಾವರ್ಕರ್ ಅವರು, ಆರೆಸ್ಸೆಸ್ ಪ್ರಚಾರಕರಾದ ಸಮೀರ್ ಕುಲಕರ್ಣಿಯವರು ಈ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ ಎಂದು ಹೇಳಿದ್ದಾರೆ.

ವಿವಿಧ ಆರೋಪಿಗಳು ಮತ್ತು ಇತರರು ನೀಡಿದ ಹೇಳಿಕೆಗಳ ಪ್ರಕಾರ, ಪ್ರಮುಖ ವ್ಯಕ್ತಿಗಳಲ್ಲಿ ಸ್ವಾಮಿ ಅಮೃತಾನಂದ ದೇವ್ ತೀರ್ಥ (ಸುಧಾಕರ್ ದ್ವಿವೇದಿ, ಸುಧಾಕರ್ ಧರ್ ಮತ್ತು ದಯಾನಂದ ಪಾಂಡೆ ಎಂಬ ಹೆಸರುಗಳಲ್ಲಿಯೂ ಪರಿಚಿತರು), ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮೇಜರ್ ರಮೇಶ್ ಉಪಾಧ್ಯಾಯ, ಸುಧಾಕರ್ ಚತುರ್ವೇದಿ, ಬಿ.ಎಲ್. ಶರ್ಮಾ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದ್ದಾರೆ. ಸಂಘಟನೆಗೆ ರೂಪ ನೀಡಲು ಮತ್ತು ಅದರ ತತ್ವಗಳನ್ನು ಅಭಿವೃದ್ಧಿಪಡಿಸಲು ವಿವಿಧ ಸ್ಥಳಗಳಲ್ಲಿ ಸಭೆಗಳು ನಡೆದವು.

ಇದನ್ನೂ ನೋಡಿ: ಸಮುದಾಯ 50| ನಾಟಕೋತ್ಸವ | ಸದ್ಭಾವನಾ ಗೀತೆ – ಜನಾರ್ಧನ್‌ (ಜನ್ನಿ) ಮತ್ತು ತಂಡದವರಿಂದJanashakthi Media

ಇದು ಮತೀಯ ವ್ಯಕ್ತಿಗಳು, ಮಾಜಿ ಸೈನಿಕರು ಮತ್ತು ಸಂಘ ಪರಿವಾರದ ಕಾರ್ಯಕರ್ತರ ಒಂದು ಜ್ವಲನಕಾರೀ ಮಿಶ್ರಣವಾಗಿತ್ತು. ಸ್ವಾಮಿ ಅಮೃತಾನಂದ ದೇವ್ ತೀರ್ಥರು ತಮ್ಮನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಶ್ರೀ ಶಾರದಾ ಸರ್ವಜ್ಞಪೀಠದ ಶಂಕರಾಚಾರ್ಯ ಎಂದು ಕರೆದುಕೊಳ್ಳುತ್ತಿದ್ದರು. ಅವರ ನೋಂದಾಯಿತ ಕಚೇರಿ ಜಮ್ಮುವಿನಲ್ಲಿತ್ತು ಮತ್ತು ಫರಿದಾಬಾದ್ ಬಳಿ ಶಿಬಿರ ಕಚೇರಿ ಇತ್ತು. ಮೇಜರ್ ರಮೇಶ್ ಉಪಾಧ್ಯಾಯ ಅವರು ರಕ್ಷಣಾ ಸೇವೆಗಳ ಮಾಜಿ ಅಧಿಕಾರಿಯಾಗಿದ್ದರು. ಅವರು ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರು ಯುವ ಕಾರ್ಯಕರ್ತರಿಗೆ ಮಿಲಿಟರಿ ತರಬೇತಿ ನೀಡುತ್ತಿದ್ದರು ಮತ್ತು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪುರೋಹಿತ್ ಜುಲೈ-ಆಗಸ್ಟ್ 2008 ರಲ್ಲಿ ಮಧ್ಯಪ್ರದೇಶದ ಪಂಚಮರ್ಹಿಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ನಿರ್ವಹಿಸಲು ತರಬೇತಿ ಶಿಬಿರಗಳನ್ನು ಆಯೋಜಿಸಿದರು. ಈ ಇಬ್ಬರು ಆರೋಪಿಗಳಲ್ಲದೆ, ಇತರ ಮಾಜಿ ಸೈನಿಕರು ಸಹ ‘ಅಭಿನವ ಭಾರತ್‌’ ನಲ್ಲಿ ಭಾಗಿಯಾಗಿದ್ದರು.

ಪ್ಯಾರಾಚೂಟ್ ರೆಜಿಮೆಂಟ್ ನ ಕರ್ನಲ್ ಆದಿತ್ಯ ಧರ್ ಅವರನ್ನು ಒಂದು ಸಭೆಯಲ್ಲಿ ಪರಿಚಯಿಸಲಾಗುತ್ತದೆ, ಮತ್ತು ಪುರೋಹಿತ್ ಮೇಜರ್ ಪರಾಗ್ ಮೋಡಕ್ ಅವರನ್ನು ನಮ್ಮ ಅಂತರರಾಷ್ಟ್ರೀಯ ಕಚೇರಿಯ ಉಸ್ತುವಾರಿ ಎಂದು ಪುರೋಹಿತ್‍ ಉಲ್ಲೇಖಿಸುತ್ತಾರೆ. 1997 ರವರೆಗೆ ಉಜ್ಜಯಿನಿ ಮತ್ತು ಇಂದೋರ್‌ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಾಯಕಿಯಾಗಿದ್ದ, ನಂತರ ಅದರ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಅವರು ಪಿತೂರಿಗಾರರಲ್ಲಿ ಸೇರಿದ್ದರು. ನಂತರ, 2019 ರಲ್ಲಿ, ಅವರು ಬಿಜೆಪಿ ಅಭ್ಯರ್ಥಿಯಾಗಿ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು. ಸಮೀರ್ ಕುಲಕರ್ಣಿ ಪೂರ್ಣಾವಧಿ ಆರ್‌ಎಸ್‌ಎಸ್ ಕಾರ್ಯಕರ್ತ (ಪ್ರಚಾರಕ್) ಆಗಿದ್ದರು. 1940 ರಿಂದ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಬಿಎಲ್ ಶರ್ಮಾ ಅವರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕರಾಗಿ ರಾಮ ಜನ್ಮಭೂಮಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ನಂತರ 1991 ಮತ್ತು 1996 ರಲ್ಲಿ ಪೂರ್ವ ದೆಹಲಿ ಲೋಕಸಭಾ ಸ್ಥಾನವನ್ನು ಗೆದ್ದರು. ಅವರು 1997 ರಲ್ಲಿ ತಮ್ಮ ಸಂಸದ ಸ್ಥಾನ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ವಿಎಚ್‌ಪಿಯ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಹಿಂದೂರಾಷ್ಟ್ರದ ಸಂವಿಧಾನದ ಕುರಿತು ಚರ್ಚೆ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಮುಸ್ಲಿಂ ಬಾಹುಳ್ಯದ ಪಟ್ಟಣವಾದ ಮಾಲೆಗಾಂವ್‌ನಲ್ಲಿ ಬಾಂಬ್ ಸ್ಫೋಟ ನಡೆಸುವ ಸಂಚು 2008 ರಲ್ಲಿ ನಾಲ್ಕು ಸಭೆಗಳ ಮೂಲಕ ವಿಕಸನಗೊಂಡಿತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಜನವರಿ 25-27, 2008 ರಂದು, ಪುರೋಹಿತ್, ಉಪಾಧ್ಯಾಯ, ಕುಲಕರ್ಣಿ, ಚತುರ್ವೇದಿ ಮತ್ತು ಸ್ವಾಮಿ ಅಮೃತಾನಂದ ಅವರು ಫರಿದಾಬಾದ್ ಬಳಿ ಭೇಟಿಯಾದರು. ಹಿಂದೂ ರಾಷ್ಟ್ರದ ಸಂವಿಧಾನದ ಕುರಿತು ಚರ್ಚೆ ಮತ್ತು ಆ ಗುರಿ ಮುಟ್ಟುವುದು ಅದರ ಪ್ರಮುಖ ಕಾರ್ಯಸೂಚಿಯಾಗಿತ್ತು. ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯತಂತ್ರಗಳ ಬಗ್ಗೆಯೂ ಇದರಲ್ಲಿ ಚರ್ಚಿಸಲಾಯಿತು.

ಏಪ್ರಿಲ್ 11-12, 2008 ರಂದು, ಅದೇ ಜನರು ಭೋಪಾಲ್‌ನಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಭೇಟಿಯಾಗಿ ಮಾಲೆಗಾಂವ್‌ನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ದಾಳಿ ಮಾಡಲು ಸ್ಥಳವನ್ನು ನಿರ್ಧರಿಸಿದರು. ಸ್ಫೋಟಕಗಳನ್ನು ಜೋಡಿಸುವ ಜವಾಬ್ದಾರಿಯನ್ನು ಪುರೋಹಿತ್ ವಹಿಸಿಕೊಂಡರೆ, ಅವುಗಳನ್ನು ಇಡಲು ಪುರುಷರನ್ನು ನಿಯೋಜಿಸುವುದಾಗಿ ಪ್ರಜ್ಞಾ ಸಿಂಗ್ ಠಾಕೂರ್ ಭರವಸೆ ನೀಡಿದರು. ನಂತರ, ಪ್ರಜ್ಞಾ ಸಿಂಗ್ ಠಾಕೂರ್ ಅವರು, ಮಾಲೆಗಾಂವ್‌ನಲ್ಲಿ ಬಾಂಬ್ ಇಡುವ ಇಬ್ಬರು ವಿಶ್ವಾಸಾರ್ಹ ವ್ಯಕ್ತಿಗಳೆಂದು ಆರ್‌ಎಸ್‌ಎಸ್‌ ನೊಂದಿಗೆ ಸಂಬಂಧ ಹೊಂದಿದ್ದ ರಾಮಚಂದ್ರ ಕಲಾಸಂಗ್ರ ಮತ್ತು ಸಂದೀಪ್ ಡಾಂಗೆ ಅವರನ್ನು, ಅಮೃತಾನಂದ ದೇವ್ ತೀರ್ಥರಿಗೆ ಪರಿಚಯಿಸಿದರು.

ಆಗಸ್ಟ್ 3, 2008 ರಂದು, ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಧರ್ಮಶಾಲೆಯಲ್ಲಿ ನಡೆದ ಸಭೆಯಲ್ಲಿ, ಕಲಾಸಂಗ್ರ ಮತ್ತು ಡಾಂಗೆಗೆ ಆರ್‌ ಡಿಎಕ್ಸ್ ಸಂಗ್ರಹಿಸಿ ನೀಡುವಂತೆ ಪುರೋಹಿತ್ ಅವರನ್ನು ಕೇಳಲಾಯಿತು. ನಂತರ ಪುರೋಹಿತ್, ಪುಣೆಯಲ್ಲಿ ಕಲಾಸಂಗ್ರ ಮತ್ತು ಡಾಂಗೆ 2008 ರ ಆಗಸ್ಟ್ 9 ಮತ್ತು 10 ರಂದು ಭೇಟಿಯಾದಾಗ ಅವರಿಗೆ ಸ್ಫೋಟಕಗಳನ್ನು ಒದಗಿಸುವಂತೆ ರಾಕೇಶ್ ಧಾವಡೆ ಅವರನ್ನು ಕೇಳಿಕೊಂಡರು. ರಾಕೇಶ್ ಧಾವಡೆ ಸ್ಫೋಟಗಳನ್ನು ಮಾಡುವ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಜೋಡಿಸುವಲ್ಲಿ ತರಬೇತಿ ಪಡೆದ ಪರಿಣಿತನಾಗಿದ್ದ.

ನಮ್ಮ ರಾಷ್ಟ್ರಕ್ಕಾಗಿ ಹೋರಾಡಲು ನಾವು ಸಂವಿಧಾನದ ವಿರುದ್ಧ ಹೋರಾಡುತ್ತೇವೆ. 2008 ರ ಗಣರಾಜ್ಯೋತ್ಸವದಂದು ಫರಿದಾಬಾದ್‌ನಲ್ಲಿ ನಡೆದ ಸಭೆಯನ್ನು ಪುರೋಹಿತ್ ಉದ್ಘಾಟಿಸಿದ್ದು ಈ ಮಾತಿನೊಂದಿಗೆ. ಆತ ಭಾರತೀಯ ಸಂವಿಧಾನವನ್ನು ಉಲ್ಲೇಖಿಸಿ ಹೇಳಿದ್ದರು. ನಾವು ಈ ದೇಶವನ್ನು ವೈದಿಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸ್ಥಾಪಿಸಬೇಕು, ನಮಗೆ ಸನಾತನ ಧರ್ಮ, ವೈದಿಕ ಧರ್ಮ ಬೇಕು ಎಂದು ಅವರು ವಿವರಿಸಿದರು.

ಪುರೋಹಿತ್ ಹಿಂದೂ ರಾಷ್ಟ್ರದ ಕರಡು ಸಂವಿಧಾನವನ್ನು ಸಿದ್ಧಪಡಿಸಿದ್ದರು, ಅದರ ಆಯ್ದ ಭಾಗಗಳನ್ನು ಸಭೆಯ ಮುಂದಿಟ್ಟರು. ಇದು ಏಕಪಕ್ಷ ಆಳ್ವಿಕೆ ಮತ್ತು ಅಧ್ಯಕ್ಷೀಯ ಸ್ವರೂಪದ ಸರ್ಕಾರವನ್ನು ವಿಧಿಸುತ್ತದೆ. ಪುರೋಹಿತ್ ವಿವರಿಸಿದಂತೆ ಭಿನ್ನಾಭಿಪ್ರಾಯಕ್ಕೆ ಕಡಿಮೆ ಅವಕಾಶವಿರುತ್ತದೆ: ಬಹಳ ಮುಖ್ಯವಾದ ಅಂಶ: ಹಿಂದೂ ರಾಷ್ಟ್ರಕ್ಕೆ ಹಾನಿಕಾರಕವಾದ ಆಲೋಚನೆಗಳನ್ನು ಹೊಂದಿರುವ ಜನರ ರಾಜಕೀಯ ಬಹಿಷ್ಕಾರ… ಅವರಲ್ಲಿ ಕೆಲವರನ್ನು ಕೊಲ್ಲಬೇಕು.

ಬಹುದೊಡ್ಡ ಗುರಿ ಮತ್ತು ಕಾರ್ಯತಂತ್ರ

ಈ ಗುರಿಯನ್ನು ಸಾಧಿಸುವುದು ಹೇಗೆ? ಮೊದಲ ಹೆಜ್ಜೆ ಎಲ್ಲ ಹಿಂದುಗಳನ್ನು ಒಗ್ಗೂಡಿಸುವುದು ಎಂದು ಸೂಚಿಸಲಾಯಿತು. ಮುಸ್ಲಿಮರನ್ನು ಭಯಭೀತಗೊಳಿಸುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಏಕೆಂದರೆ ಅದು ಅವರನ್ನು ಒಂದಾಗುವಂತೆ ಒತ್ತಾಯಿಸುತ್ತದೆ ಮತ್ತು ಅಂತಿಮ ಯುದ್ಧಕ್ಕೆ ಕಾರಣವಾಗುತ್ತದೆ. ಇದರಲ್ಲಿ ಹಿಂದೂಗಳು ಖಂಡಿತವಾಗಿಯೂ ಗೆಲ್ಲುತ್ತಾರೆ ಮುಸ್ಲಿಮರು ಒಗ್ಗೂಡುವ ದಿನವೇ ನಮ್ಮ ಅತಿ ದೊಡ್ಡ ಗೆಲುವು ….ಅವರ ಮೇಲೆ ದಾಳಿ ಮಾಡಲು ಪ್ರಾರಂಭಿಸುವುದು ಮತ್ತು ಇಮಾಮ್ ಬುಖಾರಿ ಸಮುದಾಯದ ಪರವಾಗಿ ನಿಲ್ಲಲಿ. ನಾನು ಮಹಾರಾಷ್ಟ್ರದಲ್ಲಿ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಆತ ಹೇಳಬೇಕು, ಅವರು ಒಂದಾಗಲಿ, ಒಟ್ಟಾಗಿ ಕೂಗಲು ಪ್ರಾರಂಭಿಸಲಿ … ನಾವು ನಮ್ಮ ವಿರುದ್ಧ ಇಸ್ಲಾಂ, ಕ್ರಿಶ್ಚಿಯನ್ನರು ಮತ್ತು ಮಾವೋವಾದಿಗಳು ನಮ್ಮ ವಿರುದ್ಧ ಒಂದುಗೂಡುವುದಕ್ಕಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಫರೀದಾಬಾದ್‍ ಸಭೆಯಲ್ಲಿ ಹೇಳುತ್ತಾರೆ.

ಆರಂಭದಲ್ಲಿ, ಅಭಿನವ ಭಾರತ್ ಇದ್ದಕ್ಕಿದ್ದಂತೆ ಎಲ್ಲಿಂದಲೋ ಪ್ರತ್ಯಕ್ಷಗೊಂಡ ಕೊಂಡ ಪ್ರೇತದಂತಹ ಸಂಘಟನೆಯಾಗಬೇಕು” ಎನ್ನುತ್ತಾರೆ ಪುರೋಹಿತ್. ಸ್ಫೋಟದ ನಂತರ ಸ್ಫೋಟಗಳ ಮೂಲಕ ಮುಸ್ಲಿಮರ ಮೇಲೆ ದಾಳಿ ಮಾಡಿ, ಆ ದಾಳಿಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಳ್ಳದಿರುವ ಮೂಲಕ ಅದು ಉಪದ್ರವ ಮೌಲ್ಯವನ್ನು ಗಳಿಸುತ್ತದೆ. ಅಂತಿಮವಾಗಿ, ಈ ಉಪದ್ರವ ಮೌಲ್ಯ ಅದಕ್ಕೆ ಸ್ವಲ್ಪ ಚೌಕಾಸಿ ಮಾಡುವ ಶಕ್ತಿಯನ್ನು ನೀಡಬೇಕು, ಎಷ್ಟೆಂದರೆ, ರಾಜಕೀಯ ಪ್ರಕ್ರಿಯೆಯನ್ನು ಅದು ಸೇರಿಕೊಳ್ಳಲು ಸಾಧ್ಯವಾಗಬೇಕು, ವಿಹೆಚ್‍ಪಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮನ್ನು ಒಂದು ರಾಜಕೀಯ ಪಕ್ಷವಾಗಿ ಪರಿವರ್ತಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು.

ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಇದು ಇಸ್ಲಾಮಿಕ್ ಭಯೋತ್ಪಾದಕ ಚಟುವಟಿಕೆಗಳಿಗೆ ಸೇಡು ತೀರಿಸಿಕೊಳ್ಳುವುದಕ್ಕಷ್ಟೇ ಈ ಮಂದಿ ಒಟ್ಟಾಗಿ ಕಾರ್ಯಾಚರಣೆ ನಡೆಸುತ್ತಿರಲಿಲ್ಲ. ಅವರ ಕಾರ್ಯತಂತ್ರದ ಗುರಿ ಇನ್ನೂ ದೊಡ್ಡದಾಗಿತ್ತು.ನಿಜ, ಅದಕ್ಕೆ ಕಾರ್ಯಯೋಜನೆ ಭಯಂಕರವೆಂದೇ ಹೇಳಬಹುದು.

ಫರಿದಾಬಾದ್‌ನಲ್ಲಿ, ಅಭಿನವ್ ಭಾರತ್ ಈಗಾಗಲೇ ಎರಡು ಸ್ಫೋಟಗಳನ್ನು ನಡೆಸಿದೆ ಎಂದು ಪುರೋಹಿತ್ ಹೇಳಿಕೊಂಡರು. ಅವುಗಳಲ್ಲಿ ಒಂದು ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ ಎಂದು ಜನವರಿ 25, 2008 ರಂದು ಸ್ವಾಮಿ ಅಮೃತಾನಂದ ಮತ್ತು ಮೇಜರ್ ಉಪಾಧ್ಯಾಯ ಅವರ ನಡುವಿನ ಖಾಸಗಿ ಸಂಭಾಷಣೆಯಿಂದ ಊಹಿಸಬಹುದು. ಐಎಸ್ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಅಥವಾ ಬೇರಾವುದೇ ಸಂಸ್ಥೆ ಇದರಲ್ಲಿ ಭಾಗಿಯಾಗಿರಲಿಲ್ಲ. ಅದು ನಮ್ಮವರಲ್ಲಿ ಒಬ್ಬರ ಕೆಲಸವಾಗಿತ್ತು. ನನಗೆ ತಿಳಿದಿರುವುದರ ಆಧಾರದ ಮೇಲೆ ಇದನ್ನು ಹೇಳಬಲ್ಲೆ. ಇದನ್ನು ಕರ್ತವ್ಯದ ಹೆಸರಿನಲ್ಲಿ ಮಾಡಲಾಗಿದೆ ಎಂದು ಉಪಾಧ್ಯಾಯ ಹೇಳುತ್ತಾರೆ. ಇನ್ನೊಂದು ದಾಳಿ ನಾಂದೇಡ್ ಅಥವಾ ಪರ್ಭಾನಿ ಅಥವಾ ಜಾಲ್ನಾದಲ್ಲಿ ನಡೆದಿರಬಹುದು. ಇವು ಮಾಲೇಗಾಂವ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರಾಕೇಶ್ ಧಾವಡೆ ಭಾಗಿಯಾಗಿದ್ದ ಎರಡು ಬಾಂಬ್ ದಾಳಿಗಳಲ್ಲಿ ಒಂದು.

ಈ ಸಂಘಟನೆಗೆ ಹಣಕಾಸಿನ ಕೊರತೆ ಇರಲಿಲ್ಲ. ಪುರೋಹಿತ್ ತನ್ನ ಯೋಜನೆಗಳನ್ನು ಉತ್ತೇಜಿಸಲು ತನಗಾಗಿ ಮತ್ತು ತನ್ನ ಅಭಿನವ್ ಭಾರತ್ ಸಂಘಟನೆಗಾಗಿ 21,00,000 ರೂ.ಗಳಷ್ಟು ಗಣನೀಯ ಮೊತ್ತವನ್ನು ಸಂಗ್ರಹಿಸಿದ್ದರು ಎಂದು ಮಾಲೆಗಾಂವ್ ಎಫ್ಐಆರ್ ಹೇಳುತ್ತದೆ.

ಬೆಂಬಲಕ್ಕಾಗಿ ಇಸ್ರೇಲ್‌, ನೇಪಾಲ್ ಸಂಪರ್ಕ

ಹಿಂದೂಗಳನ್ನು ಅಧಿಕೃತ ಮಾನ್ಯತೆಯನ್ನು ಹುಡುಕುತ್ತಿರುವ ಒಂದು ರಾಷ್ಟ್ರೀಯತೆ ಎಂದು ಪರಿಗಣಿಸಬಹುದು, ಇದನ್ನು ವಿಶ್ವಸಂಸ್ಥೆಯಿಂದ ಪಡೆಯಬಹುದು ಎಂದು ಫರಿದಾಬಾದ್ ಸಭೆಯಲ್ಲಿ ಪುರೋಹಿತ್ ವಿವರಿಸುತ್ತಾರೆ. “ದೇಶದ ಹೊರಗಿರುವ ಒಂದು ಕೇಂದ್ರೀಯ ಹಿಂದೂ ಸರ್ಕಾರ” ವನ್ನು ರಚಿಸಿಕೊಂಡು, ತಮ್ಮ ಗುರಿಯನ್ನು, ಪ್ರತಿಪಾದಿಸಲು ಕಾಶ್ಮೀರಿಗಳು (JKLF ಮತ್ತು ಹುರಿಯತ್) ಮಾಡಲು ಪ್ರಯತ್ನಿಸಿದಂತೆಯೇ ವಿಶ್ವಸಂಸ್ಥೆಯನ್ನು ಜಾಗತಿಕ ವೇದಿಕೆಯಾಗಿ ಬಳಸಬೇಕೆಂಬುದು ಅವರ ಬಯಕೆ.

ಚರ್ಚಿಸಲಾದ ಮತ್ತೊಂದು ನಾಗರಿಕತೆಗೆ ಸಂಬಂಧಪಟ್ಟ ಕನಸು ಎಂದರೆ, ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಅತಿಕ್ರಮಣಗಳ” ವಿರುದ್ಧ ಹೋರಾಡಲು ಹಿಂದೂ ಮತ್ತು ಬೌದ್ಧ ರಾಷ್ಟ್ರಗಳ ಒಕ್ಕೂಟ. ಪುರೋಹಿತ್ ಭವಿಷ್ಯದಲ್ಲಿ ಹಿಂದೂ ಮತ್ತು ಪ್ರಾಚ್ಯ ರಾಷ್ಟ್ರಗಳ ಒಕ್ಕೂಟ (Hindu and Oriental Nations Union) ಎಂದು ಅವರೇ ಹೆಸರಿಸಿದ ಒಂದು ರಾಜಕೀಯ ಒಕ್ಕೂಟವನ್ನು ಕಾಣುತ್ತಾರೆ. ಇದು ಅವರ ಪ್ರಕಾರ ಕಾಂಬೋಡಿಯಾ, ಥೈಲ್ಯಾಂಡ್, ಭಾರತ, ನೇಪಾಳ, ಭೂತಾನ್, ಜಪಾನ್, ಕೊರಿಯಾಗಳನ್ನು ಒಳಗೊಂಡಿರುತ್ತದೆ.

ಆದರೆ ಈ ಎಲ್ಲ ಭವ್ಯ ಮಹತ್ವಾಕಾಂಕ್ಷೆಯ ಸಂಗತಿಗಳ ಜೊತೆಗೆ, ತಕ್ಷಣದ ಭೌತಿಕ ಬೆಂಬಲಕ್ಕಾಗಿ ವಿದೇಶಿ ಪ್ರಾಯೋಜಕರ ಅಗತ್ಯವಿತ್ತು. ಅದಾಗಲೇ ಇಸ್ರೇಲ್ ಮತ್ತು ನೇಪಾಳದ ವ್ಯಕ್ತಿಗಳನ್ನು ಸಂಪರ್ಕಿಸಲಾಗಿದೆ ಮತ್ತು ಬೆಂಬಲವನ್ನು ಪಡೆದುಕೊಳ್ಳಲಾಗಿದೆ ಎಂದು ಫರಿದಾಬಾದ್ ಸಭೆಯಲ್ಲಿ ಪುರೋಹಿತ್ ವರದಿ ಮಾಡಿದರು. ನಾನು ಇಸ್ರೇಲ್‌ನಲ್ಲಿ ಸಂಪರ್ಕಗಳನ್ನು ಪಡೆದಿದ್ದೇನೆ. ನಮ್ಮ ಕ್ಯಾಪ್ಟನ್ ಗಳಲ್ಲಿ ಒಬ್ಬರು ಈಗಾಗಲೇ ಹೋಗಿ, ಅಲ್ಲಿಂದ ಹಿಂತಿರುಗಿದ್ದಾರೆ. ಅವರ ಕಡೆಯಿಂದ ನಮಗೆ ತುಂಬಾ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು. ಅವರು ನಮಗೆ, ನೀವು ಬುಡಮಟ್ಟದಲ್ಲಿ ನಮಗೆ ಏನನ್ನಾದರೂ ತೋರಿಸಬೇಕು” ಎಂದು ಹೇಳಿದರು.

“ಅವರಿಂದ (ಇಸ್ರೇಲಿಗಳು) ನಾಲ್ಕು ಬೇಡಿಕೆಗಳನ್ನು” ಇಟ್ಟಿರುವುದಾಗಿ ಎಂದು ಅವರು ಹೇಳಿದರು: 1) ಸಲಕರಣೆಗಳ ನಿರಂತರ ಪೂರೈಕೆ ಮತ್ತು ತರಬೇತಿ. ii) ಟೆಲ್ ಅವೀವ್‌ನಲ್ಲಿ ಕೇಸರಿ ಧ್ವಜದೊಂದಿಗೆ ಕಚೇರಿಯನ್ನು ಪ್ರಾರಂಭಿಸಲು ಅನುಮತಿ. iii) ರಾಜಕೀಯ ಆಶ್ರಯ.iv) “ಹಿಂದೂ ರಾಷ್ಟ್ರ ಹುಟ್ಟಿದೆ ಎಂಬ ನಮ್ಮ ಗುರಿಗೆ ವಿಶ್ವಸಂಸ್ಥೆಯಲ್ಲಿ ಬೆಂಬಲ”

ಪುರೋಹಿತ್ ಪ್ರಕಾರ, ಇಸ್ರೇಲಿಗಳು ಒಮ್ಮೆ ನಾವು ಬುಡಮಟ್ಟದಲ್ಲಿ ಏನನ್ನಾದರೂ ಮಾಡಿ ತೋರಿಸಿದರೆ” ರಾಜಕೀಯ ಆಶ್ರಯ, ಉಪಕರಣಗಳು ಮತ್ತು ತರಬೇತಿಗೆ ಒಪ್ಪಿಕೊಂಡರು. ಆದರೆ, ಟೆಲ್ ಅವೀವ್‌ನಲ್ಲಿ ಕೇಸರಿ ಧ್ವಜ ಹಾರಿಸುವ ಮತ್ತು ವಿಶ್ವಸಂಸ್ಥೆಯಲ್ಲಿ ಹಿಂದೂ ರಾಷ್ಟ್ರವನ್ನು ಬೆಂಬಲಿಸುವ ವಿಚಾರದಲ್ಲಿ ಇಸ್ರೇಲಿಗಳು ಸಹ ಹಿಂದೇಟು ಹಾಕಿದಂತೆ ತೋರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗೆ ಇಸ್ರೇಲ್ ಸಂಬಂಧ ಉತ್ತಮಗೊಳ್ಳು ಪ್ರಾರಂಭಿಸಿದ್ದರಿಂದ, ಅದನ್ನು ಅಪಾಯಕ್ಕೆ ಸಿಲುಕಿಸಲು ಅವರು ಬಯಸದ ಕಾರಣ ಈ ವಿಷಯಗಳಲ್ಲಿ ಇಸ್ರೇಲಿಗಳು ಹಿಂಜರಿಯುತ್ತಿದ್ದರು ಎಂದು ಪುರೋಹಿತ್ ಹೇಳುತ್ತಾರೆ.

ನೇಪಾಳದಲ್ಲಿ, ಅಭಿನವ್ ಭಾರತ್ ಗುಂಪು ಕೆಲವು ರಾಜಪ್ರಭುತ್ವವಾದಿ ಗುಂಪುಗಳೊಂದಿಗೆ ಸಂಪರ್ಕದಲ್ಲಿತ್ತು, ಇತ್ತೀಚೆಗೆ ಈ ಗುಂಪುಗಳನ್ನು ಭಯೋತ್ಪಾದಕ ಗುಂಪುಗಳೆಂದು ಘೋಷಿಸಲಾಗಿತ್ತು ಎಂದು ಡಾ. ಆರ್.ಪಿ. ಸಿಂಗ್ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದರು. ಪ್ರತಿ ಆರು ತಿಂಗಳಿಗೊಮ್ಮೆ ಭಾರತದಿಂದ 200 ಮಂದಿಗೆ ನೇಪಾಳಿ ಪಡೆಗಳು ಸೈನಿಕರಾಗಿ ತರಬೇತಿ ನೀಡುತ್ತದೆ ಎಂದು ಪುರೋಹಿತ್ ಹೇಳಿಕೊಂಡರು. “ಜೆಕೊಸ್ಲೊವಾಕಿಯಾದ AKS” ಖರೀದಿಸಬೇಕು ಎಂದು ನೇಪಾಳಿ ಜನರಿಗೆ ತಾನಿ ಹೇಳಿರುವುದಾಗಿ ಮತ್ತು ಅದಕ್ಕೆ “ನಾವು ಹಣವನ್ನು ಪಾವತಿಸುತ್ತೇವೆ” ಎಂದೂ ಪುರೋಹಿತ್‍ ಹೇಳಿಕೊಂಡಿದ್ದಾರೆ.

ಆರೆಸ್ಸೆಸ್ / ಬಿಜೆಪಿಯ ಬಗ್ಗೆ ಹತಾಶೆ

ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವ ಧಾವಂತವನ್ನು ಆರ್‌ಎಸ್‌ಎಸ್/ಬಿಜೆಪಿ ನಿಧಾನಗೊಳಿಸುತ್ತಿವೆ ಎಂಬ ಹತಾಶೆ ಮತ್ತೆ-ಮತ್ತೆ ವ್ಯಕ್ತಗೊಂಡಿರುವುದನ್ನು ಸಭೆಯ ದಾಖಲೆಗಳು ತೋರಿಸುತ್ತವೆ. ಫರಿದಾಬಾದ್ ಸಭೆಯಲ್ಲಿ ಬಿ.ಎಲ್. ಶರ್ಮಾ ಕಟುವಾಗಿ ಹೀಗೆ ವ್ಯಕ್ತಪಡಿಸಿದರು: “ಜನವರಿ 26 ರಂದು ನಾನು ಸುಮಾರು ಮೂರು ಲಕ್ಷ ಪತ್ರಗಳನ್ನು ಕಳುಹಿಸಿದ್ದೇನೆ, 20,000 ಅಖಂಡ ಭಾರತದ ನಕ್ಷೆಗಳನ್ನು ವಿತರಿಸಿದ್ದೇನೆ, ಅದಾಗಿ ಒಂದು ವರ್ಷವಾಗಿದೆ. ಆದರೆ ಈ ಬ್ರಾಹ್ಮಣರು ಮತ್ತು ಬನಿಯಾಗಳು ಎಂದೂ ಏನನ್ನೂ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ… ಅಂತಿಮವಾಗಿ ಅವರು ಕಾರ್ಯಸಾಧ್ಯವಾದ ಕೆಲಸಗಳನ್ನು ಮಾಡುತ್ತಾರೆ. ಒಬ್ಬ ಚಾಣಕ್ಯ ಬರುತ್ತಾನೆ, ಮೆದು ಆಡಳಿತಗಾರನಾಗುತ್ತಾನೆ… ಸಮಾಜದಲ್ಲಿ ಬೆಂಕಿ ಹಚ್ಚಬೇಕು, ಕನಿಷ್ಠ ಒಂದು ಕಿಡಿಯನ್ನಾದರೂ ಹಚ್ಚಬೇಕು ಎಂದು ನಾನು ನಂಬುತ್ತೇನೆ.”

ಈ ಭಾವನೆಯೇ ಅನೇಕ ಸಂಘ ಪರಿವಾರದ ಕಾರ್ಯಕರ್ತರು ಅಭಿನವ ಭಾರತ್ ಮಾದರಿಯ ಗುಂಪುಗಳೊಂದಿಗೆ ಸೇರಲು ಕಾರಣವಾಯಿತು. ಸ್ವಾಮಿ ಅಸೀಮಾನಂದ ಅವರ ತಪ್ಪೊಪ್ಪಿಗೆ (ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮಾಡಿದ್ದು) ಅಂತಹ ವ್ಯಕ್ತಿಗಳ ಹಲವಾರು ಹೆಸರುಗಳನ್ನು ಸೂಚಿಸುತ್ತದೆ.

ಆದರೆ ಅದು ಆಗ, 2000 ರ ದಶಕದ ಆರಂಭದಲ್ಲಿ. ಮೋದಿ ಅಧಿಕಾರಕ್ಕೆ ಬಂದ ನಂತರ 2014 ರಿಂದ ಏನಾಗುತ್ತಿದೆ? ಮೇಲೆ ವಿವರಿಸಿದ ಪ್ರಕರಣದ ದಾಖಲೆಗಳಲ್ಲಿ ವಿಭಿನ್ನ ಸಂಚುಕೋರರು ಪ್ರತಿಪಾದಿಸುವ ಆಲೋಚನೆಗಳು ಮತ್ತು ಆಕಾಂಕ್ಷೆಗಳು ಒಟ್ಟಾರೆಯಾಗಿ ಇಂದು ಕೇಂದ್ರದಲ್ಲಾಗಲೀ, ರಾಜ್ಯಗಳಲ್ಲಾಗಲೀ ಅಧಿಕಾರದಲ್ಲಿರುವ ಹೆಚ್ಚಿನವರ ಚಿಂತನೆಗಳ ಅವಿಭಾಜ್ಯ ಅಂಗವಾಗಿವೆ. ಅವುಗಳಲ್ಲಿ ಕೆಲವನ್ನು ಸರಕಾರೀ ಕ್ರಿಯೆಗಳ ಮೂಲಕ ವಾಸ್ತವಗೊಳಿಸಲಾಗುತ್ತಿದೆ- ಮುಖ್ಯವಾಗಿ, ಸಂವಿಧಾನದ ಮೂರು ಸ್ತಂಭಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಒಕ್ಕೂಟತತ್ವವನ್ನು ನಿಧಾನವಾಗಿ ಮತ್ತು ಸತತವಾಗಿ ಕಳಚಿ ಹಾಕಲಾಗುತ್ತಿದೆ. ಹಿಂದೂಗಳನ್ನು ಜಾಗೃತಗೊಳಿಸುವಗುರಿಗೆ ಸಂಬಂಧಿಸಿದಂತೆ, ಸರ್ಕಾರವು ಆರೆಸ್ಸೆಸ್ ನಂತಹ ಸರ್ಕಾರೇತರ ಶಕ್ತಿಗಳೊಂದಿಗೆ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಅಯೋಧ್ಯೆ ದೇವಾಲಯವನ್ನು ಉದ್ಘಾಟಿಸುತ್ತಾರೆ, ಅತ್ತ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಹಿಂದೂ ಭಾರತದ ಭೂತಕಾಲದ ವೈಭವದ ಗುಣಗಾನ ಮಾಡುತ್ತಾರೆ. ಶ್ಲಾಘಿಸುತ್ತಾರೆ.

ಆದರೆ ಹೆಚ್ಚು ನೇರವಾದ, ಅಭಿನವ್ ಭಾರತ್ ಸಂಚುಕೋರರು ಕಂಡರಿಸಿದ್ದ ರೀತಿಯ ಕಾರ್ಯಾಚರಣೆಗಳನ್ನು ಈಗ, ಮತಾಂಧ ಹಿಂದೂ ಸರ್ವೋಚ್ಚವಾದಿ ಸಿದ್ಧಾಂತಕ್ಕೆ ಬದ್ಧವಾಗಿರುವ ಹತ್ತಾರು ಸಂಘಟನೆಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಅವರು ದೊಂಬಿಹತ್ಯೆಗಳನ್ನು ಪ್ರಚೋದಿಸುತ್ತಾರೆ, ಗೋಮಾಂಸ ಭಕ್ಷಕರೆಂದು ಆರೋಪಿಸಿ ಕೊಲ್ಲುತ್ತಾರೆ, ಮಸೀದಿಗಳು ಮತ್ತು ಚರ್ಚ್‌ಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಾರೆ, ವಿಚಾರವಾದಿ ಚಿಂತಕರನ್ನು ಕೊಲೆ ನಡೆಸುತ್ತಾರೆ, ಶತ್ರುಗಳೆಂದು ವಿರುದ್ಧ ಯುದ್ಧಕೋರ ಉನ್ಮಾದವನ್ನು ಪ್ರಚೋದಿಸುತ್ತಾರೆ, ನುಸುಳುಕೋರರು ಎಂದು ಬೇಟೆಯಾಡುತ್ತಾರೆ ಮತ್ತು ದುರ್ಬಲ ಅಲ್ಪಸಂಖ್ಯಾತ ಸಮುದಾಯದ ಜನರ ವಿರುದ್ಧ ಬಹಿಷ್ಕಾರ ಮತ್ತು ಹಿಂಸಾಚಾರಕ್ಕೆ ಕರೆ ನೀಡುತ್ತಾರೆ. ಕಾನೂನು ಜಾರಿ ಸಂಸ್ಥೆಗಳಿಂದ ಅಪರಾಧಿಗಳು ಸಿಕ್ಕಿಬಿದ್ದರೆ, ಅಂತಹ ಪ್ರಕರಣಗಳು ಬಿದ್ದುಹೋಗುತ್ತವೆ ಅಥವಾ ಅವರು ಖುಲಾಸೆಗೊಳ್ಳುತ್ತಾರೆ. ಬಿಲ್ಕಿಸ್ ಬಾನೋ ಪ್ರಕರಣದಂಲ್ಲಾದಂತೆ ಘೋರ ಅಪರಾಧಗಳಿಗಾಗಿ ಶಿಕ್ಷೆಗೊಳಗಾದವರಿಗೆ ಮಾಫಿ ಸಿಗುತ್ತಿದೆ. ಇಂದು ನಾವು ನೋಡುತ್ತಿರುವ ಈ ವಿಷವೃಕ್ಷದ ಬೀಜಗಳನ್ನು ಮಾಲೆಗಾಂವ್ ಪಿತೂರಿಗಾರರ ಆಲೋಚನೆಗಳಲ್ಲಿ ಕಾಣಬಹುದು.

(ಮೂಲ ಲೇಖನ ಕೃಪೆ: ಪೀಪಲ್ ಡೆಮಾಕ್ರಸಿ)

Donate Janashakthi Media

Leave a Reply

Your email address will not be published. Required fields are marked *