ಕಿರುಧಾನ್ಯಗಳು ಶ್ರೀಸಾಮಾನ್ಯನ ಕೈಗೆಟುಕುತ್ತವೆಯೇ ?

ಕೇಸರಿ ಹರವೂ

̲(Will Millets be affordable – DH April 5 2023)                                                                ಅನುವಾದ : ನಾ ದಿವಾಕ

ಪ್ರಪಂಚದಾದ್ಯಂತ ನಗರವಾಸಿ ಗ್ರಾಹಕರು ಹೆಚ್ಚು ಹೆಚ್ಚು ಆರೋಗ್ಯ ಕಾಳಜಿಯತ್ತ ಗಮನಹರಿಸುತ್ತಿದ್ದು, ಸಾವಯವ, ಜಿಡ್ಡುರಹಿತ, ಕಡಿಮೆ ಕ್ಯಾಲೋರಿಯ ಹಾಗೂ ಹೆಚ್ಚಿನ ಪ್ರೋಟೀನ್‌ ಇರುವ ಕಿರುಧಾನ್ಯಗಳತ್ತ ( ನವಣೆ, ಸಾಮೆ, ಸಜ್ಜೆ, ಬರಗು, ಕೊರಲೆ, ಅರ್ಕ, ರಾಗಿ ಮತ್ತು ಜೋಳ ಇವುಗಳನ್ನು ಕಿರುಧಾನ್ಯಗಳೆಂದು ಗುರುತಿಸಲಾಗುತ್ತದೆ -ಅನು) ಗಮನಹರಿಸುತ್ತಿರುವುದು ಇತ್ತೀಚಿನ ಬೆಳವಣಿಗೆ, ಹಸಿರು ಕ್ರಾಂತಿ ಮತ್ತು ತದನಂತರದ ಆಹಾರ ಭದ್ರತೆಯ ಯೋಜನೆಗಳ ವ್ಯಾಪ್ತಿಯಲ್ಲಿ ಈ ಕಿರುಧಾನ್ಯಗಳನ್ನು ಕೆಳದರ್ಜೆಯ ಹಾಗೂ ಕೀಳುಮಟ್ಟದ ಆಹಾರ ಎಂದೇ ಪರಿಗಣಿಸಲಾಗಿತ್ತು. ಕಿರುಧಾನ್ಯಗಳ ಜನಪ್ರಿಯತೆ ಹೆಚ್ಚಾಗುತ್ತಿರುವಂತೆ ಈ ಧಾನ್ಯಗಳ ರಫ್ತು ವಹಿವಾಟು ಸಹ ವೃದ್ಧಿಯಾಗುತ್ತಿರುವುದು ಸುಸ್ಪಷ್ಟವಾಗುತ್ತಿದೆ. ಆದ್ದರಿಂದಲೇ ಆಹಾರ ನಿಗಮಗಳು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಮುನ್ನುಗ್ಗುತ್ತಿದ್ದು, ಈ ನಿಟ್ಟಿನಲ್ಲಿ ಸೂಕ್ತ ಆಡಳಿತ ನೀತಿಗಳನ್ನು ರೂಪಿಸುವಂತೆ ಜಾಗತಿಕ ಸಂಸ್ಥೆಗಳ ಮೇಲೆ, ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಭಾರತದ ಪ್ರಸ್ತಾವನೆಯ ಮೇರೆಗೆ 2022ರ ಡಿಸೆಂಬರ್‌ 6ರಂದು ವಿಶ್ವಸಂಸ್ಥೆಯ ಕೃಷಿ ಮತ್ತು ಆಹಾರ ಸಂಸ್ಥೆ (ಎಫ್‌ಎಒ) 2023ರ ವರ್ಷವನ್ನು ಅಂತಾರಾಷ್ಟ್ರೀಯ
ಕಿರುಧಾನ್ಯ ವರ್ಷ (ಐವೈಎಮ್‌ 2023) ಎಂದು ಘೋಷಿಸಿದೆ.

ವಿಶ್ವಸಂಸ್ಥೆಯ ಘೋಷಣೆಯೊಂದಿಗೇ ಭಾರತದಲ್ಲಿ ಹಲವು ದಶಕಗಳಿಂದ ಆದಿವಾಸಿಗಳ, ಅತಿಸಣ್ಣ ರೈತರ ಮತ್ತು ಸಾವಯವ ಕೃಷಿಕರ ನಡುವೆ ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ಸಮಾಜದ ಸಂಘ ಸಂಸ್ಥೆಗಳು ಈ ಬೆಳವಣಿಗೆಗೆ ಎಚ್ಚರಿಕೆಯಿಂದ ಸ್ಪಂದಿಸುವ ನಿರೀಕ್ಷೆ ಇದ್ದರೂ, ಅತಿಯಾಗಿ ಉತ್ತೇಜಿತರಾದಂತೆ ಕಾಣುತ್ತಿದೆ. ಕಿರುಧಾನ್ಯ ಆಹಾರ ಮೇಳಗಳು, ಬೆಳೆಗಾರರ ಸಮಾವೇಶಗಳು ಮತ್ತು ಇತರ ಪ್ರಾಯೋಜಕತ್ವದ ಚಟುವಟಿಕೆಗಳ ಪರಿಣಾಮ ದೇಶವ್ಯಾಪಿಯಾಗಿ ಕಿರುಧಾನ್ಯಗಳ ಬಳಕೆಯಲ್ಲಿ ಹೆಚ್ಚಳ ಕಂಡಿದೆ. ಐವೈಎಮ್‌ 2023ರ ಘೋಷಣೆಯ ಪರಿಣಾಮ ಬಹುರಾಷ್ಟ್ರೀಯ ಉದ್ದಿಮೆಗಳು ಕಿರುಧಾನ್ಯ ಕೃಷಿ ಒಳಸುರಿಗಳ ಮೇಲೆ ಮತ್ತು ಮಾರುಕಟ್ಟೆಯ ಮೇಲೆ ತಮ್ಮ ಬೌದ್ಧಿಕ ಹಕ್ಕುಗಳನ್ನು ಆಕ್ರಮಿಸಿಕೊಂಡು, ಏಕಸ್ವಾಮ್ಯ ಸಾಧಿಸುವ ಮೂಲಕ, ಬಡ ಜನತೆಯ ಪ್ರಧಾನ ಆಹಾರವನ್ನು ಅವರ ತಟ್ಟೆಗಳಿಂದ ಕಸಿದುಕೊಂಡು ನಗರವಾಸಿ, ಮೇಲ್ವರ್ಗದ ಗ್ರಾಹಕರಿಗೆ ಉತ್ಕೃಷ್ಟ ಆಹಾರ ಎಂದು ಒದಗಿಸಲು ಈಗಾಗಲೇ ಸಾಧ್ಯವಾಗಿದೆಯೇ ಎಂಬ ಪ್ರಶ್ನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿತ್ತು ಎನಿಸುತ್ತದೆ.

ಈ ರೀತಿಯ ಆತಂಕಗಳು ಭಾರತೀಯರಲ್ಲಿ ಉಂಟಾಗಲು ಕಾರಣಗಳೇನು ? ಭಾರತ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿದ ಸಮಯ ಮತ್ತು ವಿಶ್ವಸಂಸ್ಥೆಯ ಘೋಷಣೆ ಕುತೂಹಲಕಾರಿಯಾಗಿ ಕಾಣಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವನ್ನು ನಾವು ಕಳೆದ ಒಂದು ದಶಕದಲ್ಲಿ ಭಾರತ ಸರ್ಕಾರ ಮತ್ತು ವಿಶ್ವಸಂಸ್ಥೆಯು ಆಹಾರ ಹಾಗೂ ಕೃಷಿ ವಲಯದಲ್ಲಿ ಹೇಗೆ ತೊಡಗಿಸಿಕೊಂಡಿವೆ ಎನ್ನುವುದರಲ್ಲಿ ಕಂಡುಕೊಳ್ಳಬಹುದು. 2009ರ ಭಾರತದ ಬೀಜ ಕಾಯ್ದೆಯ ಅನುಸಾರ ʼ ರೈತ ʼ ಎನ್ನುವುದನ್ನು ಹೀಗೆ ನಿರ್ವಚಿಸಲಾಗಿದೆ. ಯಾವುದೇ ವ್ಯಕ್ತಿ ಭೂಮಿಯನ್ನು ತಾನೇ ಸ್ವತಃ ಅಥವಾ ಮತ್ತೊಬ್ಬ ವ್ಯಕ್ತಿಯ ಮೂಲಕ ಉಳುಮೆ ಮಾಡುವುದರ ಮೂಲಕ ಬೆಳೆಯನ್ನು ಬೆಳೆದರೆ ಆದರೆ ಬೀಜವನ್ನು ವಾಣಿಜ್ಯ  ಉದ್ದೇಶಗಳಿಂದ ಖರೀದಿಸುವ ಅಥವಾ ಮಾರಾಟ ಮಾಡುವ ಇತರ ಯಾವುದೇ ಉದ್ದಿಮೆ, ವ್ಯಕ್ತಿ, ವ್ಯಾಪಾರಿ ಅಥವಾ ದಲ್ಲಾಳಿಗಳನ್ನು ಒಳಗೊಳ್ಳದೆ ಇದ್ದರೆ ಅಂಥವರನ್ನು ರೈತ ಎಂದು ನಿರ್ವಚಿಸಲಾಗಿದೆ. ಆದರೆ 2019ರ ಕರಡು ಬೀಜ ಮಸೂದೆಯು ಈ ವ್ಯಾಖ್ಯಾನವನ್ನು ತಿರಸ್ಕರಿಸಿದ್ದು ಬೇಸಾಯ ಯೋಗ್ಯ ಭೂಮಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಸೂಚನೆಯ ಮೂಲಕ ಸೂಚಿಸುವಂತಹ ಕೃಷಿ ಚಟುವಟಿಕೆಯಲ್ಲಿ ತೊಡಗಿರುವಂತಹ ಇತರ ಯಾವುದೇ ವರ್ಗದ ವ್ಯಕ್ತಿಯನ್ನು ರೈತ ಎಂದು ವ್ಯಾಖ್ಯಾನಿಸುತ್ತದೆ. ಈ ನಿರ್ಧಾರವನ್ನು ಕೈಗೊಂಡಿದ್ದು ಭಾರತ 2018ರಲ್ಲಿ ಮುಂಬೈನಲ್ಲಿ ನಾಲ್ಕನೆಯ ಔದ್ಯೋಗಿಕ ಕ್ರಾಂತಿಗಾಗಿ ವಿಶ್ವ ಆರ್ಥಿಕ ವೇದಿಕೆಯ ಕೇಂದ್ರವನ್ನು ಸ್ಥಾಪಿಸಿದ ನಂತರ. ಈ ಕೇಂದ್ರವು ನೀತಿ ಆಯೋಗದ ಸಹಭಾಗಿತ್ವದೊಂದಿಗೆ ರೂಪಿಸಿದ ಇಂಡಿಯಾ@75 ದಸ್ತಾವೇಜನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳೂ ಸಹ ಇದೇ ಒಡಂಬಡಿಕೆಯ ಒಂದು ಭಾಗವಾಗಿದೆ.

ವಿಶ್ವ ಆಹಾರ ಸಂಸ್ಥೆಯ 2021ರ ಸಂಶೋಧನಾ ಪ್ರಬಂಧವೊಂದರಲ್ಲಿ ಯಾವ ಬೇಸಾಯಗಳು ಜಗತ್ತಿಗೆ ಆಹಾರ ಒದಗಿಸುತ್ತಿವೆ ಮತ್ತು ಯಾವ ಬೇಸಾಯ ಭೂಮಿಗಳು ಹೆಚ್ಚು ಸಾಂದ್ರೀಕರಣಕ್ಕೊಳಗಾಗಿವೆ ಎನ್ನುವುದನ್ನು ಚರ್ಚಿಸಲಾಗಿದ್ದು, ಇದೇ ನೆಲೆಯಲ್ಲೇ, ಈ ಹಿಂದೆ ವಿಶ್ವ ಸಂಸ್ಥೆಯು ಅನುಮೋದಿಸಿದ್ದ ʼ ಕುಟುಂಬ ರೈತನ ʼ ವ್ಯಾಖ್ಯಾನದಲ್ಲಿ ಬದಲಾವಣೆಗಳನ್ನು ಸೂಚಿಸಿದೆ. ಈ ಪ್ರಬಂಧದಲ್ಲಿ ಅಂದಾಜಿಸಿರುವ ಪ್ರಕಾರ ಜಗತ್ತಿನ ಸಣ್ಣ ಪ್ರಮಾಣದ ಬೇಸಾಯ ಭೂಮಿಯು ಕೇವಲ ಶೇ 12ರಷ್ಟು ಕೃಷಿ ಭೂಮಿಯನ್ನು ಬಳಸಿಕೊಂಡು, ಒಟ್ಟು ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇ 35ರಷ್ಟು ಪಾಲು ಹೊಂದಿವೆ. ಆಡಳಿತ ನೀತಿಗಳನ್ನು ರೂಪಿಸುವವರು ಸಣ್ಣ ರೈತರ/ಬೇಸಾಯಗಾರರ ಉತ್ಪಾದನೆಗಿಂತಲೂ ಬೃಹತ್‌ ಉತ್ಪಾದನೆಯ ಘಟಕಗಳಿಗೆ ಹೆಚ್ಚು ಗಮನ ನೀಡುವಂತೆ ಈ ಪ್ರಬಂಧವು ಸೂಚಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಕೆಲವು ಪ್ರಖ್ಯಾತ ಸಂಘಟನೆಗಳು ಅಂದಾಜಿಸುವಂತೆ, ಜಗತ್ತಿನ ಸಣ್ಣ ಕೃಷಿ ಭೂಮಿಗಳು ಒಟ್ಟಾರೆ ಜಗತ್ತಿನ ಮೂರನೆ ಒಂದರಷ್ಟು ಕೃಷಿ ಭೂಮಿಯನ್ನು ಮತ್ತು ಸಂಪನ್ಮೂಲಗಳನ್ನು ಹೊಂದಿದ್ದರೂ ವಿಶ್ವದ ಶೇ 50ರಷ್ಟು ಜನತೆಯನ್ನು ಪೋಷಿಸುತ್ತಿದೆ.

ಇದನ್ನೂ ಓದಿದ್ವೇಷಾಸೂಯೆಯಗಳಿಲ್ಲದ ಸಮಾಜದತ್ತ ಯೋಚಿಸೋಣವೇ ?

ಈ ಉದ್ದೇಶಪೂರ್ವಕ ಬದಲಾವಣೆಗಳ ಹಿಂದೆ ಬೃಹತ್‌ ಕೃಷಿ ಉದ್ಯಮಗಳನ್ನು ಪೋಷಿಸುವ ಇರಾದೆಯನ್ನು ಗಮನಿಸಬಹುದು. ಈ ನಿಟ್ಟಿನಲ್ಲಿ ಭಾರತದ ಅನುಭವ ಸುಸ್ಪಷ್ಟವಾಗಿದೆ. ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಲ್ಲಿ ರೈತರ ಪರವಾದ ಯಾವುದೇ ರೀತಿಯ ಕಾಳಜಿ ಇರಲಿಲ್ಲ ಆದರೆ ಕೃಷಿ ವಲಯದ ಕಾರ್ಪೋರೇಟೀಕರಣದತ್ತ ಸಾಗುವ ಧಾವಂತವನ್ನು ಗಮನಿಸಬಹುದಿತ್ತು. ಈ ಕಾಯ್ದೆಗಳನ್ನು, ಕೋವಿದ್‌ ಸಾಂಕ್ರಾಮಿಕದ ಲಾಕ್‌ಡೌನ್‌ ಅವಧಿಯಲ್ಲಿ ಹಲವು ಪ್ರಜಾಸತ್ತಾತ್ಮಕ ಹಕ್ಕುಗಳು ನಿರ್ಬಂಧಿಸಲ್ಪಟ್ಟಿದ್ದ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗಿತ್ತು. ರಾತ್ರೋರಾತ್ರಿ ಈ ಮಸೂದೆಗಳನ್ನು ಕಾನೂನುಗಳಾಗಿ ಜಾರಿಗೊಳಿಸಲಾಯಿತು. ಸಂಸತ್ತಿನಲ್ಲಿ ಯಾವುದೇ ಚರ್ಚೆಗೂ ಆಸ್ಪದ ಕೊಟ್ಟಿರಲಿಲ್ಲ. ಈ ಕಾಯ್ದೆಗಳನ್ನು ವಿರೋಧಿಸಿ ಪ್ರತಿರೋಧ ವ್ಯಕ್ತಪಡಿಸಿದ ರೈತರು ದೆಹಲಿಯ ಗಡಿಗಳಲ್ಲಿ ಒಂದು ವರ್ಷದ ಸುದೀರ್ಘ ಮುಷ್ಕರ ನಡೆಸಿದ್ದನ್ನು ಪ್ರತಿಗಾಮಿ ಎಂದೂ, ದೇಶ ವಿರೋಧಿ ಎಂದೂ ಬಣ್ಣಿಸಲಾಗಿತ್ತು. ಆದರೆ ರೈತರ ದಿಟ್ಟ ನಡೆ ಮತ್ತು ದೃಢ ನಿಶ್ಚಯದ ಫಲವಾಗಿ ಕಾಯ್ದೆಗಳನ್ನು ಹಿಂಪಡೆಯಲಾಯಿತು. ಆದಾಗ್ಯೂ ಈ ಕಾಯ್ದೆಗಳು ಶಾಶ್ವತವಾಗಿ ಇಲ್ಲವಾಗಿವೆ ಎಂದು ನಂಬುವುದು ತುಸು ಕಷ್ಟವೇ ಆಗಿದೆ.

ಈ ರೀತಿಯ ಏಕಪಕ್ಷೀಯ ನಿರ್ಧಾರಗಳ ಹೊರತಾಗಿಯೂ ಭಾರತ ಕಿರುಧಾನ್ಯಗಳನ್ನು ಪ್ರೋತ್ಸಾಹಿಸಲು ಉತ್ತೇಜಿಸಿದ ಕಾರಣಗಳಾದರೂ ಏನು ? ಕಾರ್ಪೋರೇಟ್‌ ಪರ ಇದ್ದಂತಹ ತನ್ನ ನಿಲುವಿನಿಂದ ಭಾರತ ಸಣ್ಣ ರೈತರ ಪರ, ಬಡ ಗ್ರಾಹಕರ ಪರ ವಾಲುವ ಶೀರ್ಷಾಸನ ಹಾಕಿರುವುದಾದರೂ ಏಕೆ ? 2017ರಲ್ಲಿ ವಿಶ್ವಸಂಸ್ಥೆಗೆ ಭಾರತ 2018ರ ವರ್ಷವನ್ನು ಅಂತಾರಾಷ್ಟ್ರೀಯ ಕಿರುಧಾನ್ಯಗಳ ವರ್ಷ ಎಂದು ಘೋಷಿಸುವಂತೆ ಆಗ್ರಹಿಸಿದಾಗ, ಅಂದಿನ ಕೇಂದ್ರ ಕೃಷಿ ಸಚಿವರು “ ಜಾಗತಿಕ ಮಟ್ಟದಲ್ಲಿ ಕಿರುಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಪ್ರೋತ್ಸಾಹಿಸುವುದರ ಮೂಲಕ ಉದ್ದೇಶಿತ ಹಸಿವಿನ ವಿರುದ್ಧದ ಹೋರಾಟಕ್ಕೆ ನೆರವಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಇದು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನೂ ಎದುರಿಸಲು ನೆರವಾಗುತ್ತದೆ ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಕಿರುಧಾನ್ಯಗಳ ಹೆಚ್ಚಿನ ಉತ್ಪಾದನೆಯ ಮೂಲಕ ಇದುವರೆಗೂ ಗುರುತಿಸಲಾಗದ, ಜಾನುವಾರು ಮೇವು, ಆಹಾರ, ಜೈವಿಕ ಇಂಧನ ಮತ್ತು ಮದ್ಯ ತಯಾರಿಕೆಗಳಂತಹ ಬಳಕೆಯ ಮಾರ್ಗಗಳನ್ನು ಗುರುತಿಸಬಹುದು ಎಂದು ಹೇಳಿದ್ದರು.

ಇದನ್ನೂ ಓದಿ : ಮತ-ಮತದಾರ-ಮತದಾನ ಮತ್ತು ಮತದ ಮೌಲ್ಯ

2023ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ʼ ಜನಕೋಟಿಗಾಗಿ ಕಿರುಧಾನ್ಯಗಳು ಪ್ರಜಾ ಸಮಾವೇಶ ʼ ದಲ್ಲಿ ದೇಶದ ಮೂಲೆಮೂಲೆಗಳಿಂದ ಕಿರುಧಾನ್ಯ ಬೆಳೆಗಾರರು, ನಾಗರಿಕ ಸಮಾಜದ ಸಂಘಸಂಸ್ಥೆಗಳು, ಸಂಶೋಧಕರು, ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮಾವೇಶದಲ್ಲಿ ಭಾಗಿಯಾಗಿದ್ದವರ ಕಿರುಧಾನ್ಯಗಳನ್ನು ದೇಶದ ಪ್ರಧಾನ ಮುಖ್ಯವಾಹಿನಿ ಆಹಾರ ಪದ್ಧತಿಯಾಗಿ ಪ್ರೋತ್ಸಾಹಿಸಲು ಹಲವು ಆಡಳಿತ ನೀತಿಗಳನ್ನು ಶಿಫಾರಸು ಮಾಡಿದ್ದರು. ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿಯವರು ಆಹಾರ ಭದ್ರತೆಯನ್ನು ವಿಕೇಂದ್ರೀಕರಣಗೊಳಿಸುವುದಾಗಿಯೂ, ತನ್ಮೂಲಕ ಕಿರುಧಾನ್ಯಗಳ ಬಗ್ಗೆ ಪಾರಂಪರಿಕ ಜ್ಞಾನವನ್ನು ವಿಶ್ವವಿದ್ಯಾಲಯಗಳ ವೈಜ್ಞಾನಿಕ ಜ್ಞಾನಶಿಸ್ತುಗಳೊಡನೆ ಸಂಯೋಜಿತಗೊಳಿಸುವುದಾಗಿಯೂ ಭರವಸೆ ನೀಡಿದ್ದರು. ಇದು ಆವರೆಗಿನ ಕೇಂದ್ರೀಕೃತ ಧೋರಣೆಗಿಂತಲೂ ಭಿನ್ನವಾಗಿ ಕಂಡಿತ್ತು.

ಈ ಆಶ್ವಾಸನೆಗಳು ಎಷ್ಟೇ ಬಾಯಿಮಾತಿನಂತೆ ಕಂಡುಬಂದರೂ, ಭಾರತದ ರೈತರು ಸುಸ್ಥಿರತೆಗೆ ಹಿಂದಿರುಗುವ ಮೂಲಕ ಆಹಾರ ರಾಜಕಾರಣ ಮತ್ತು ಆಹಾರ ವಾಣಿಜ್ಯದ ಕಪಿಮುಷ್ಠಿಯಿಂದ ತಮ್ಮ ಸಾರ್ವಭೌಮತ್ವದ ವಿಮೋಚನೆಗಾಗಿ ಮುಂದಾಗಬೇಕಿದೆ. ಸರ್ಕಾರಗಳೂ ಸಹ ಕೃಷಿ ಭೂಮಿಯ ಸವೆತವನ್ನು ತಪ್ಪಿಸಬೇಕಾದರೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯನ್ನು ಸುಗಮಗೊಳಿಸಬೇಕಾದರೆ, ದುರ್ಬಲ ವರ್ಗಗಳಿಗೆ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ  ಭದ್ರತೆಯನ್ನುಒದಗಿಸಬೇಕಾದರೆ, ಜಾಗತಿಕ ತಾಪಮಾನವನ್ನು ಎದುರಿಸಬೇಕಾದರೆ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ರೈತರಿಗೆ ಬೆಂಬಲ ನೀಡಬೇಕಾಗುತ್ತದೆ. ಎನ್‌ಜಿಒಗಳು ಸ್ವ ಇಚ್ಚಾಶಕ್ತಿಯಿಂದ ಬೆಳೆಗಾರರಲ್ಲಿ ಕೃಷಿ ಮತ್ತು ಆಹಾರ ಸಾರ್ವಭೌಮತ್ವದ ಮಹತ್ವವನ್ನು ಕುರಿತು ಅರಿವು ಮೂಡಿಸಬೇಕಿದೆ. ಬಹಳ ಮುಖ್ಯವಾಗಿ, ಕಿರುಧಾನ್ಯ ಬೀಜ ವೈವಿಧ್ಯತೆಗಳನ್ನು ಹಾಗೂ ಪಾರಂಪರಿಕ ಜ್ಞಾನವನ್ನು ಅಪಾಯಕಾರಿ ಆಡಳಿತ ನೀತಿಗಳು ಮತ್ತು ಹಸ್ತಕ್ಷೇಪಗಳ ದಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ
ಕಾರ್ಯೋನ್ಮುಖವಾಗಬೇಕಿದೆ.

ಒಂದು ರಾಷ್ಟ್ರವಾಗಿ ನಾವು ಈ ಮಾದರಿ ಪರಿವರ್ತನೆಗೆ ತಯಾರಾಗಿದ್ದೇವೆಯೇ ? ಕರ್ನಾಟಕದಲ್ಲಿ ರಾಗಿಯ ಸಂಗ್ರಹವು 2021ರಲ್ಲಿ 3 ಲಕ್ಷ ಮೆಟ್ರಿಕ್‌ ಟನ್‌ ಇದ್ದುದನ್ನು 2022ರ ವೇಳೆಗೆ 2.25 ಲಕ್ಷ ಮೆಟ್ರಿಕ್‌ ಟನ್‌ಗೆ ಇಳಿಸಲಾಗಿದೆ. ಆದರೆ ಮತಧಾರ್ಮಿಕ ಧೃವೀಕರಣವು ಅನಿರ್ಬಂಧಿತವಾಗಿ ಸಾಗಿದೆ. ಉತ್ತರ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಆದಿವಾಸಿಗಳು ಕಿರುಧಾನ್ಯ ಬೆಳೆಯುವ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು ಗಣಿಗಾರಿಕೆ ಮತ್ತು ಸುಸ್ಥಿರವಲ್ಲದ ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಇದೇ ವೇಳೆ ಅದೇ ಆದಿವಾಸಿಗಳು ಯುಎಪಿಎ ಮುಂತಾದ ಕರಾಳ ಶಾಸನಗಳಡಿ ಬಂಧನಕ್ಕೊಳಗಾಗಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂಜಾಬ್‌ ಒಂದರಲ್ಲೇ ಮೂರು ಲಕ್ಷ ಸಣ್ಣ ರೈತ ಕುಟುಂಬಗಳು ಕಳೆದ ಒಂದು ದಶಕದಲ್ಲಿ ತಮ್ಮ ಬೇಸಾಯ ವೃತ್ತಿಯನ್ನು ತೊರೆದಿದ್ದು ಕೃಷಿ ಕೂಲಿಗಳಾಗಿಯೋ, ನಗರದ ಕೂಲಿಕಾರ್ಮಿಕರಾಗಿಯೋ ಬದುಕು ಸವೆಸುತ್ತಿದ್ದಾರೆ. ಪಾರಂಪರಿಕ ಆಹಾರ ಪೂರೈಕೆದಾರರ ಮೇಲಿನ ಒತ್ತಡಗಳು ದಿನೇದಿನೇ ಹೆಚ್ಚಾಗುತ್ತಲೇ ಇದೆ.

ಇದನ್ನೂ ಓದಿ : ಚುನಾವಣಾ ಪ್ರಣಾಳಿಕೆಗಳಂತಾಗುತ್ತಿರುವ ಮುಂಗಡ ಪತ್ರಗಳು

ಕಿರುಧಾನ್ಯಗಳು ಸಾಧಾರಣ ಆಹಾರಧಾನ್ಯಗಳಾಗಿದ್ದು ಹವಾಮಾನಕ್ಕೆ ತಕ್ಕಂತೆ ಚೇತರಿಸಿಕೊಳ್ಳುವುದೇ ಅಲ್ಲದೆ, ರಸಗೊಬ್ಬರ, ರಾಸಾಯನಿಕ ಅಥವಾ ಯಾವುದೇ  ರೀತಿಯ ವೈಜ್ಞಾನಿಕ ಹಸ್ತಕ್ಷೇಪವಿಲ್ಲದೆಯೇ ವಿರಳ ಮಳೆಯ ನಡುವೆಯೂ ಉತ್ತಮ ಇಳುವರಿ ಹೊಂದಿರುತ್ತವೆ. ಕಿರುಧಾನ್ಯದ ಬೀಜಗಳು, ಪ್ರಭುತ್ವಗಳ ನಿರ್ಲಕ್ಷ್ಯದ ಹೊರತಾಗಿಯೂ, ಜಗತ್ತಿನಾದ್ಯಂತ ಅಸಂಖ್ಯಾತ ಸ್ಥಳೀಯ-ಪರಿಸರವ್ಯವಸ್ಥೆಯ ಸಮುದಾಯಗಳ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಈ ಸಮುದಾಯಗಳು ಮತ್ತು ಸಮಾಜಗಳೇ ಸಾಮೂಹಿಕ ಸ್ವಾಮ್ಯವಾದವನ್ನು ಶತಮಾನಗಳಿಂದ ಸಾಕಾರಗೊಳಿಸಿವೆ. ಈ ಸಮುದಾಯಗಳು-ಸಮಾಜಗಳು  ಬಂಡವಾಳಶಾಹಿ ಲೋಭಕ್ಕೆ ಬಲಿಯಾಗದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಊರ್ಜಿತವಾಗಬೇಕು ಎನ್ನುವುದು ಇಡೀ ಜಗತ್ತಿನ ಆಶಯವೂ ಆಗಿರುತ್ತದೆ.

( ಮೂಲ ಲೇಖಕರು ಸಾಕ್ಷ್ಯಚಿತ್ರ ನಿರ್ಮಾಪಕರು ಹಾಗೂ ಬರಹಗಾರರು )

Donate Janashakthi Media

Leave a Reply

Your email address will not be published. Required fields are marked *