ಬೆಳಗಾವಿ: ಖಾನಾಪುರದ ಯುವಕ ಅರ್ಬಾಜ್ ಮುಲ್ಲಾ(24) ಎಂಬ ಯುವಕನ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು ಅರ್ಬಾಜ್ ಮುಲ್ಲಾ ಪ್ರೀತಿಸುತ್ತಿದ್ದ ಹಿಂದೂ ಯುವತಿಯ ತಂದೆ-ತಾಯಿ ಹಾಗೂ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಖಾನಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ನಾಗಪ್ಪ ಮುತಗೇಕರ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.
ಯುವತಿಯ ತಂದೆ ಈರಪ್ಪ ಕುಂಬಾರ, ತಾಯಿ ಸುಶೀಲಾ ಕುಂಬಾರ, ಪುಂಡಲೀಕ ಮುತಗೇಕರ, ಕುತುಬುದ್ದೀನ್ ಬೇಪಾರಿ, ಮಾರುತಿ ಸುಗತೆ, ಮಂಜುನಾಥ ಗೊಂಧಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ, ಪ್ರವೀಣ ಪೂಜಾರಿ ಮತ್ತು ಶ್ರೀಧರ ಡೋಣಿ ಬಂಧಿತ ಆರೋಪಿಗಳಾಗಿದ್ದಾರೆ.
ಸೆಪ್ಟೆಂಬರ್ 28ರಂದು ಯುವಕನ ಕೊಲೆ ನಡೆದಿದ್ದು, ಶವ ಖಾನಾಪುರ ಹೊರವಲಯದ ರೈಲು ಹಳಿಯಲ್ಲಿ ಪತ್ತೆಯಾಗಿತ್ತು. ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಅವರ ತಾಯಿ ನಾಜಿಮಾ ಶೇಖ್ ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29ರಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಅಕ್ಟೋಬರ್ 3ರಂದು ಜಿಲ್ಲಾ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ, ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
‘ಯುವತಿಯ ತಂದೆ- ತಾಯಿ ಪುಂಡಲೀಕಗೆ ಹಣ ನೀಡಿ ಕೊಲೆ ಮಾಡಲು ತಿಳಿಸಿದ್ದರು. ಸೆಪ್ಟಂಬರ್ 28ರಂದು ಅರ್ಬಾಜ್ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು, ಅವರಿಂದ ಹಣ ಪಡೆದು ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶವವನ್ನು ಹಳಿಯ ಮೇಲೆ ಎಸೆದು ಹೋಗಿದ್ದರು ಎನ್ನಲಾಗಿದೆ.