ಬೆಂಗಳೂರು: ಮಹಿಳಾ ನಿಂದನೆ ಪ್ರಕರಣ ಸಮರ್ಥಿಸಿಕೊಳ್ಳುವ ಭರದಲ್ಲಿ ” ನಾನೇನು ರೇಪ್ ಮಾಡಿದ್ದೇನಾ” ಎಂದು ಶಾಸಕ ಅರವಿಂದ ಲಿಂಬಾವಳಿ ಪ್ರಶ್ನಿಸಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಮಹಿಳಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಲು ರುತ್ ಸಗಾಯ್ ನಿರ್ಧರಿಸಿದ್ದಾರೆ.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ತಮಗೆ ಅಹವಾಲು ಸಲ್ಲಿಸಲು ಬಂದಿದ್ದ ಮಹಿಳೆಯ ಮೇಲೆ ದರ್ಪ ತೊರಿದ್ದಲ್ಲದೆ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತನ್ನ ನಡೆಗೆ ವಿರೋಧ ವ್ಯಕ್ತವಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಮಹಿಳೆಯನ್ನು ನಾನು ರೇಪ್ ಮಾಡಿದ್ದೇನೆಯೆ? ಎಂದಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಓರ್ವ ಶಾಸಕರಾಗಿ ಈ ರೀತಿ ಪದ ಬಳಕೆ ಮಾಡುವುದು ಸರಿಯೇ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮಹಿಳಾ ಆಯೋಗಕ್ಕೆ ದೂರು : ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರುತ್ ಸಗಾಯ್, ಅರವಿಂದ್ ಲಿಂಬಾವಳಿ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಾನೇನು ರೇಪ್ ಮಾಡಿದ್ದೇನಾ ? ಎಂಬ ಪ್ರಶ್ನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಬಿಜೆಪಿ ನಾಯಕರು ತಮ್ಮದು ಶಿಸ್ತಿನ ಪಕ್ಷ ಅಂತಾ ಹೇಳುತ್ತಾರೆ. ಆದರೆ ಇದೇನಾ ಅವರ ಸಂಸ್ಕೃತಿ ? ಒಬ್ಬ ಮಹಿಳೆ ಬಗ್ಗೆ ಹೇಗೆ ಮಾತನ್ನಾಡಬೇಕು ಅನ್ನೋದು ಗೊತ್ತಿಲ್ಲ. ಹೆಣ್ಣಿಗೆ ಗೌರವ ಕೊಡುವುದನ್ನ ಕಲಿತುಕೊಳ್ಳಲಿ.ನಾನು ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ನಮ್ಮ ಮನೆಯ ಗೋಡೆ ಒಡೆದು ಹಾಕಿದ್ದರು. ಆಗ ಬಿಬಿಎಂಪಿ ಕಮಿಷನರ್, ಬಿಜೆಪಿ ನಾಯಕರು ಇದ್ದರು. ಒತ್ತುವರಿಯಾಗಿದೆ ಎಂದು ಒಡೆದು ಹಾಕಿದ್ದರು. ನಮ್ಮ ಬಳಿ ದಾಖಲೆಗಳು ಸರಿಯಾಗಿಯೇ ಇದೆ. ಡೆಮಾಲಿಷ್ ಮಾಡುವುದಕ್ಕೂ ಮೊದಲು ನೋಟಿಸ್ ಕೊಡಬೇಕು.ಅದ್ಯಾವುದನ್ನೂ ನೀಡದೆ ಏಕಾಏಕಿ ನೆಲಸಮ ಮಾಡಿದರು.ನಾನು ಶಾಸಕರಿಗೆ ದಾಖಲೆ ತೋರಿಸಲು ಹೋಗಿದ್ದೆ. ಆಗ ಅವರು ನನ್ನಿಂದ ದಾಖಲೆ ಕಿತ್ತುಕೊಂಡರು. ಬಳಿಕ ಬಾಯಿಗೆ ಬಂದಂತೆ ಬೈದರು.ನಾನು ಮಹಿಳೆ ಸರ್ ಅಂತ ಹೇಳಿದೆ. ಏನು ಮಹಿಳೆ? ನಾಚಿಕೆ, ಮಾನ ಮರ್ಯಾದೆ ಇಲ್ವಾ ಅಂತ ಬೈದರು. ನನ್ನ ಮೇಲೆ ಹಲ್ಲೆ ಮಾಡೋಕೆ ಬಂದರು. ಅವರ ಪಕ್ಷದ ಕಾರ್ಯಕರ್ತರಿಗೆ ಏ ಇವಳಿಗೆ ಹೊಡಿರೋ ಅಂತ ಹೇಳಿದರು. ಲೇಡಿ ಪೊಲೀಸರನ್ನ ಕರೆಸಿ ಇವಳನ್ನ ಎಳ್ಕೊಂಡು ಹೋಗಿ ಅಂತಾ ಹೇಳಿದರು. ನನ್ನನ್ನ ಪೊಲೀಸ್ ಸ್ಟೇಷನ್ ಗೂ ಕರೆದುಕೊಂಡು ಹೋಗುವಂತೆ ಮಾಡಿದರು ಎಂದು ಅಳಲು ತೋಡಿಕೊಂಡರು.