ಹೊನ್ನಾವರ : ಅರಣ್ಯ ಹಕ್ಕು ಕಾಯ್ದೆ 2006 ಸಮರ್ಪಕವಾಗಿ ಜಾರಿ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್ ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಅರಣ್ಯ ಅತಿಕ್ರಮಣ ರೈತರ ಬೃಹತ್ ತಾಲ್ಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಹೋರಾಟದಿಂದಾಗಿ ಅರಣ್ಯ ಸಾಗುವಳಿ ರೈತರ ಹಕ್ಕುಗಳನ್ನು ಮಾನ್ಯ ಮಾಡಲು ಅಗತ್ಯವಾದ ಅದಿವಾಸಿಯೇತರ ಸಮುದಾಯಗಳಿಗೂ 75 ವರ್ಷದ ಸ್ವಾಧೀನ ಅನುಭವ ಪುರಾವೆಯಿಂದ ವಿನಾಯಿತಿ ನೀಡುವಂತಹ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ರಾಜ್ಯ ವಿಧಾನ ಮಂಡಲದ ನಿರ್ಣಯ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ಹೆಚ್ಚು ಮಾಡುವ ಮತ್ತೊಂದು ಹಂತದ ಐತಿಹಾಸಿಕ ಚಳವಳಿಗೆ ಈ ಸಮಾವೇಶ ನಾಂದಿಯಾಗಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಜಿಲ್ಲಾ ಅಧ್ಯಕ್ಷರಾದ ಶಾಂತಾರಾಮ ಎಸ್ ನಾಯಕ, ಹೊನ್ನಾವರ ತಾಲ್ಲೂಕಿನ ಮುಖಂಡರಾದ ತಿಮ್ಮಪ್ಪಗೌಡ, ಸಿಐಟಿಯು ಜಿಲ್ಲಾ ಮುಖಂಡರುಗಳಾದ ಕಾಂ.ತಿಲಕ್ ಗೌಡ, ಯಮುನಾ ಗಾಂವ್ಕರ್ ಮುಂತಾದವರು ರೈತರನ್ನು ಉದ್ದೇಶಿಸಿ ಮಾತಾನಾಡಿದರು.
ಮೆರವಣಿಗೆ ಮೂಲಕ ಹೊನ್ನಾವರ ತಾಲ್ಲೂಕು ಕಛೇರಿ ಗೆ ತೆರಳಿ ಅರಣ್ಯ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸುವ ಕಿರುಕುಳ ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. ಜಿಪಿಎಸ್ ಮಾಡುವ ಮೂಲಕ ಅರಣ್ಯ ರೈತರ ವಾಸ ಮತ್ತು ಸಾಗುವಳಿ ಯನ್ನು ದೃಡೀಕರಿಸುವಂತೆ, ಈಗಾಗಲೇ ಜಿಪಿಎಸ್ ಆಗಿರುವ ರೈತರಿಗೆ ನಕಾಶೆ ಒದಗಿಸುವಂತೆ ಆಗ್ರಹಿಸಿ ಹಕ್ಕೊತ್ತಾಯ ಪತ್ರ ನೀಡಲಾಯಿತು.
ನವೆಂಬರ್ 26,2024 ರಂದು ಸಂಯುಕ್ತ ಹೋರಾಟ ಕರ್ನಾಟಕದ ಕರೆ ಯಶಸ್ವಿ ಗೊಳಿಸಲು ಈ ಸಮಾವೇಶದಲ್ಲಿ ಕರೆ ನೀಡಲಾಯಿತು. ಹೊನ್ನಾವರ ಪಟ್ಟಣದ ಮೂಡ ಗಣಪತಿ ಸಭಾ ಭವನದಲ್ಲಿ ನಡೆಯಿತು. ಐದು ನೂರಕ್ಕೂ ಹೆಚ್ಚು ಅರಣ್ಯ ಅತಿಕ್ರಮಣ ರೈತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.