ಹಾಸನ: ಬೇಲೂರು ತಾಲ್ಲೂಕು ಅಡವಿ ಬಂಟೇನಹಳ್ಳಿ ಗ್ರಾಮದಲ್ಲಿ ರೈತರು ಕೃಷಿ ಮಾಡುತ್ತಿರುವ ಭೂಮಿಯನ್ನು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಜಿಪಿಎಸ್ ಸರ್ವೆ ಮಾಡಿಸಿದೆ. ಅಲ್ಲದೆ, ಅರಣ್ಯ ಇಲಾಖೆಯು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಖಂಡಿಸಿದೆ.
ಬೇಲೂರು ತಾಲ್ಲೂಕಿನ ಅಡವಿ ಬಂಟೇನಹಳ್ಳಿಯ ಗ್ರಾಮದಲ್ಲಿ ಸುಮಾರು 70 ವರ್ಷಗಳಿಂದ (1952 ರಿಂದ) ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಕೃಷಿ ಚಟುವಟಿಕೆಯ ಮೂಲಕ ಜೀವನ ಸಾಗಿಸುತ್ತಿದ್ದ 83 ಕುಟುಂಬಗಳಿಗೆ 1968-69ನೇ ಸಾಲಿನಲ್ಲಿ ಸರ್ಕಾರವು ಕಂದಾಯ ಇಲಾಖೆಯ ಮೂಲಕ ಬಗರ್ ಹುಕುಂ ಸಾಗುವಳಿಯ ಆಧಾರದ ಮೇಲೆ ಸಾಗುವಳಿ ಚೀಟಿಗಳನ್ನು ನೀಡಿದೆ. ಸಾಗುವಳಿ ಮಾಡುತ್ತಿರುವ ರೈತರ ಹೆಸರುಗಳಲ್ಲೇ ಪಹಣಿಗಳು ಬರುತ್ತಿವೆ, ಇದೇ ಭೂಮಿಯಲ್ಲಿ ವಿದ್ಯುತ್ ಸಂಪರ್ಕ ಪಡೆದು ಕೊಳವೆ ಬಾವಿಗಳನ್ನು ಕೊರೆಸಿ, ಮನೆಗಳನ್ನು ಕಟ್ಟಿಕೊಂಡು, ತೆಂಗಿನ ಮರಗಳನ್ನು ಬೆಳೆಸಿ, ಪಹಣಿಯ ಆಧಾರದಲ್ಲಿ ಬ್ಯಾಂಕುಗಳಲ್ಲಿ ಸಾಲವನ್ನೂ ಪಡೆದಿರುತ್ತಾರೆ. ಇಷ್ಟೆಲ್ಲ ವ್ಯವಸ್ಥೆಗಳು ಇವೆ.
ಆದರೆ, 2015ರ ಇಸವಿ ಫೆಬ್ರವರಿ 12-13ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಇದನ್ನು ತೆರವುಗೊಳಿಸಬೇಕೆಂದು ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಇಲಾಖೆಯು ತೆರವಿಗೆ ಮುಂದಾದಾಗ ರೈತರು ಸಂಘಟಿತರಾಗಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಚಳುವಳಿ ನಡೆಸಿ ತೆರವು ಕಾರ್ಯಾಚರಣೆಯನ್ನು ತಡೆಯುತ್ತಾರೆ.
ಅರಣ್ಯ ಇಲಾಖೆ ದಾಖಲಾತಿಗಳ ಪ್ರಕಾರ ಈ ಭೂಮಿ ಹಾಸನ ತಾಲ್ಲೂಕಿನ ಸೀಗೆ ಗುಡ್ಡ ಕಾವಲಿಗೆ ಸೇರಿದ ಸರ್ವೆ ನಂಬರ್ 74-75 ಆಗಿದ್ದು ಎಂದು ನೋಟಿಸ್ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಸಂದರ್ಭದಲ್ಲಿ ಅಡವಿ ಬಂಟೇನಹಳ್ಳಿಯಲ್ಲಿ ವಾಸವಾಗಿರುವವರು ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ 1968-69 ರಲ್ಲಿ ಕಂದಾಯ ಇಲಾಖೆಯಿಂದ ಬೇಲೂರು ತಾಲ್ಲೂಕು ಶಿವಪುರ ಕಾವಲಿನ ಸರ್ವೆ ನಂಬರ್ 1ಕ್ಕೆ ಸಾಗುವಳಿ ಚೀಟಿ ನೀಡಿದ್ದು. ಪ್ರಸ್ತುತ ಪಹಣಿಗಳಲ್ಲೂ ಶಿವಪುರ ಕಾವಲು ಸರ್ವೆ ನಂಬರ್ 1 ಎಂದು ಬರೆಯಲಾಗಿದೆ.
ಈಗ ಮತ್ತೆ ರೈತರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾಗಿದ್ದು ಕೆಲವು ರೈತರಿಗೆ ಭೂಮಿಯನ್ನು ತೆರವುಗೊಳಿಸುವ ಬಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ 7 ವರ್ಷಗಳಿಂದ ಅರಣ್ಯ ಇಲಾಖೆಯಿಂದ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ರೈತರು ಉಳುಮೆ ಮಾಡುತ್ತಿರುವ ಕೃಷಿ ಭೂಮಿ ಕಂದಾಯ ಇಲಾಖೆಗೆ ಸೇರಿದ್ದಾ ಅಥವಾ ಅರಣ್ಯ ಇಲಾಖೆಗೆ ಸೇರಿದ್ದಾ ಎಂಬುದನ್ನು ಎರಡು ಇಲಾಖೆಗಳು ಸೇರಿ ಇತ್ಯರ್ಥಪಡಿಸಬೇಕು. ಆದರೆ ಈ ಕೆಲಸವನ್ನು ಮಾಡದ ಅಧಿಕಾರಿಗಳು ನಿರಂತರವಾಗಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬೇಲೂರು ಮತ್ತು ಹಾಸನ ತಾಲ್ಲೂಕಿನ ಗಡಿಭಾಗಗಳಲ್ಲಿ ಬರುವ ಸೀಗೆಗುಡ್ಡ ಕಾವಲು, ಶಿವಪುರ ಕಾವಲು, ಐದಳ್ಳ ಕಾಲವುಗಳಲ್ಲಿ ಇದೇ ರೀತಿಯ ಗೊಂದಲಗಳಿವೆ. ಇಂತಹ ಗೊಂದಲಗಳಿಂದಾಗಿ ಗಡಿಬಾಗದ ರೈತರು ಅತ್ಯಂತ ಸಂಕಷ್ಟಕ್ಕೆ ಒಳಗಾಗಿ ಅರಣ್ಯ ಇಲಾಖೆಯಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜೊತೆಗೆ ಹಾಸನ – ಬೇಲೂರು ತಾಲ್ಲೂಕುಗಳ ತಹಸಿಲ್ಡಾರ್ ಗಳು ಹಾಗೂ ಉಪವಿಭಾಗಾಧಿಕಾರಿಗಳು ಮತ್ತು ರೈತ ಮುಖಂಡರನ್ನು ಒಳಗೊಂಡಂತೆ ಸಭೆಯನ್ನು ನಡೆಸಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಜಿಪಿಎಸ್ ಸರ್ವೆ ನಡೆಸಲು ಆದೇಶಿಸಿಬೇಕು ಮತ್ತು ಈ ಎಲ್ಲ ಗೊಂದಲಕ್ಕೆ ತೆರೆಯೆಳೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್)ವು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ, ಹಾಸನ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್, ಕರ್ನಾಟಕ ಪ್ರಾಂತ ರೈತ ಸಂಘ, ಬಂಟೇನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಬಿ.ಎ. ವಿರುಪಾಕ್ಷ, ಗೌರವಾಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಬಿ.ಎಸ್.ರಮೇಶ್, ಉಪಾಧ್ಯಕ್ಷರುಗಳಾದ ಚಿಕ್ಕೇಗೌಡ, ಪುಟ್ಟಸ್ವಾಮಿಗೌಡ, ಜಂಟಿ ಕಾರ್ಯದರ್ಶಿಗಳಾದ ಬಿ.ಎ.ಮೋಹನ್ ಕುಮಾರ್, ಬಿ.ಎಸ್.ಮೋಹನ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.