ಬೆಂಗಳೂರು: ಒಂದು ಉತ್ತಮ ಅವಕಾಶ ಒದಗಿ ಬಂದಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ʻನಾ ನಾಯಕಿʼ ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ಜನವರಿ 16ರಂದು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸಚಿವೆ ಹಾಗೂ ‘ನಾ ನಾಯಕಿ’ ಸಮಿತಿ ಅಧ್ಯಕ್ಷೆ ಉಮಾಶ್ರೀ ತಿಳಿಸಿದರು.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಮಾಶ್ರೀ ಅವರು ʻನಾ ನಾಯಕಿʼ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಸಮಾರಂಭದಲ್ಲಿ ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿನ ಮುಖಂಡರು, ಚುನಾವಣಾ ಅಭ್ಯರ್ಥಿ ಆಕಾಂಕ್ಷಿಗಳು, ಶಾಸಕರು, ಮಾಜಿ ಶಾಸಕರು, ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಹಿಳಾ ವಿಭಾಗದ ಸದಸ್ಯರು ಹಾಗೂ ನಾಯಕಿಯರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಇದನ್ನು ಓದಿ: ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಮುಂದುವರೆದು ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆಸಲು ಅವಕಾಶ ನೀಡಬೇಕು ಎಂದು ಪ್ರಿಯಾಂಕಾ ಗಾಂಧಿ ಅವರಿಗೆ ಮನವಿ ಮಾಡಲಾಗುವುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು ಮತ್ತು ಗೆಲುವು ಸಹ ಸಾಧಿಸಿದ್ದರು. ಈ ಬಾರಿ ರಾಜ್ಯಾದ್ಯಂತ ಹೆಚ್ಚಿನ ಅವಕಾಶ ನೀಡುವಂತೆ ಮನವಿ ಮಾಡುತ್ತೇವೆ ಎಂದರು.
ಈ ಬಾರಿ ವಿಧಾನಸಭಾ ಚುನಾವಣೆಗೆ 109 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವಂತೆ ಒಕ್ಕೊರಲಿನಲ್ಲಿ ಕೋರಲಾಗುವುದು. ಒಂದು ಸೂಕ್ತ ಹಾಗೂ ಉತ್ತಮ ವೇದಿಕೆಯಲ್ಲಿ ನಾವು ನಮ್ಮ ಮನವಿಯನ್ನು ರಾಷ್ಟ್ರೀಯ ನಾಯಕಿಗೆ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಇದನ್ನು ಓದಿ: ಬಿಜೆಪಿ ಅಂದ್ರೆ ಭ್ರಷ್ಟಾಚಾರʼ ಅಭಿಯಾನ ಆರಂಭಿಸಿದ ಕಾಂಗ್ರೆಸ್
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ 200 ಯೂನಿಟ್ ನಂತೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ. ಅದೇ ರೀತಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆಯೂ ಸಿದ್ಧಗೊಳ್ಳಲಿದೆ. ಇದನ್ನು ನಾವು ಸ್ವಾಗತಿಸುತ್ತಿದ್ದು, ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಾವು ಪ್ರತ್ಯೇಕ ಅಂತರ್ಜಾಲ ತಾಣ ಆರಂಭಿಸಿದ್ದೇವೆ ಎಂದರು.
ವಿಶೇಷವಾಗಿ ಪ್ರಿಯಾಂಕ ಗಾಂಧಿ ಅವರ ಸ್ವಾಗತಿಸಲು ನಾವು ತೀರ್ಮಾನಿಸಿದ್ದೇವೆ. ಕಾರ್ಯಕ್ರಮದ ಮಹಿಳಾ ಪ್ರಣಾಳಿಕೆ ಸಿದ್ಧಪಡಿಸಲು ನಾವು ಆರಂಭಿಸಿರುವ ಅಂತರ್ಜಾಲ ತಾಣಕ್ಕೆ ಮಹಿಳೆಯರು ತಮ್ಮ ಸಲಹೆ ಸೂಚನೆಗಳನ್ನು ಕಳುಹಿಸಬಹುದು. ಜೊತೆಗೆ ಪ್ರತ್ಯೇಕ ಇ-ಮೇಲ್ ವಿಳಾಸ ಸಹ ಆರಂಭಿಸಲಾಗಿದೆ. ಮಹಿಳೆಯರಿಗಾಗಿ ನಾವು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ