ಅರಕಲಗೂಡು : ಅರಕಲಗೂಡು ಸಮೀಪದ ಶಂಭುನಾಥಪುರ ಗ್ರಾಮದಲ್ಲಿ ಮೃತಪಟ್ಟ ದಲಿತ ವ್ಯಕ್ತಿ ಶವ ಸಂಸ್ಕಾರ ಮಾಡಲು ಸ್ಮಶಾನ ಜಾಗವಿಲ್ಲದೆ ಮನೆ ಮುಂದೆಯೇ ಹೂಳಲು ಮುಂದಾದ ಮನ ಕಲಕುವ ಘಟನೆ ವರದಿಯಾಗಿದೆ.
ಗ್ರಾಮದ ದಲಿತ ವ್ಯಕ್ತಿ ಗಿಡ್ಡಯ್ಯ (62) ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಗಿಡ್ಡಯ್ಯ ಅವರ ಪತ್ನಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ದೇವರಾಜು ಎನ್ನುವ ಒಬ್ಬ ಪುತ್ರ ಇದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ದಲಿತ ಕುಟುಂಬಕ್ಕೆ ಜೀವನಾಧಾರಕ್ಕಾಗಿ ಜಮೀನು ಇಲ್ಲ. ವಾಸಿಸಲು ಮನೆ ಕೂಡ ಇಲ್ಲ. ಇಂದಿರಾ ಗಾಂಧಿ ಕಾಲದಲ್ಲಿ ನೀಡಿದ ವಸತಿ ದುಸ್ಥಿತಿಯಲ್ಲಿದ್ದ ಅಲ್ಲಿಯೇ ಈ ಬಡ ಕುಟುಂಬ ಬದುಕಿನ ಬಂಡಿ ಸಾಗಿಸುತ್ತಿದೆ. ಗ್ರಾಮದಲ್ಲಿ ದಲಿತರು ಮೃತಪಟ್ಟರೆ ಶವ ಸಂಸ್ಕಾರ ನಡೆಸಲು ಸ್ಮಶಾನವಿಲ್ಲ. ಹೀಗಾಗಿ ನೊಂದ ದಲಿತ ಕುಟುಂಬದ ಸಂಬಂಧಿಕರು ಶನಿವಾರ ಮನೆಯ ಮುಂದೆಯೇ ಗುಂಡಿ ತೋಡಿ ಶವ ಹೂಳಲು ಮುಂದಾಗಿದ್ದಾರೆ.
ಇದನ್ನೂ ಓದಿ :ಕರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ
ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್, ರಾಜಸ್ವ ನಿರೀಕ್ಷಕ ಭಾನು ಪ್ರಕಾಶ್ ಗ್ರಾಮಕ್ಕೆ ತೆರಳಿ ನೋವು ಆಲಿಸಿದರು. ಗ್ರಾಮದ ಹೊರ ಭಾಗದಲ್ಲಿರುವ ಸ್ಮಶಾನಕ್ಕೆ ತೆರಳು ದಾರಿ ಇಲ್ಲ. ಇಲ್ಲಿ ಕೆಲ ದಲಿತ ಕುಟುಂಬಗಳು ವಾಸವಿದ್ದು ನಮಗೆ ಇಂದಿಗೂ ಸ್ಮಶಾನ ಜಾಗ ಒದಗಿಸಿಲ್ಲ. ಈ ದಲಿತ ಕುಟುಂಬದ ವ್ಯಕ್ತಿಗೆ ವಾಸಿಸಲು ಮನೆಯೂ ಇಲ್ಲ, ಶವ ಹೂಳಲು ಸ್ವಂತ ಜಮೀನು ಕೂಡ ಇಲ್ಲ. ಇಂಥ ಸಂಕಷ್ಟದಲ್ಲಿ ಏನು ಮಾಡಬೇಕೆಂಬುದು ದಿಕ್ಕು ತೋಚದೆ ಸಂಬಂಧಿಕರ ಮನೆ ಮುಂದೆಯೇ ಶವ ಹೂಳುತ್ತೇವೆ ಎಂದು ಅಳಲು ತೋಡಿಕೊಂಡರು.
ಅರಕಲಗೂಡು ಡಿಪೋ ಹಿಂಭಾಗದ ಸ್ಮಶಾನ ಜಾಗದಲ್ಲಿ ಸದ್ಯಕ್ಕೆ ಶವ ಸಂಸ್ಕಾರ ನಡೆಸಿ. ತಹಸೀಲ್ದಾರ್ ಗಮನಕ್ಕೆ ತಂದು ಊರಿಗೆ ಸ್ಮಶಾನ ಜಾಗ ನೀಡುವುದಾಗಿ ಅಧಿಕಾರಿಗಳು ಮನವೊಲಿಸಲು ಮುಂದಾದರು. ಇದಕ್ಕೆ ಒಪ್ಪದೆ ಈಗಲೇ ಜಾಗ ಮಂಜೂರು ಮಾಡಿಕೊಡಿ ಇಲ್ಲವೇ ಮನೆ ಮುಂದೇಯೆ ಶವ ಸಂಸ್ಕಾರ ನಡೆಸುತ್ತೇವೆ ಎಂದು ಗ್ರಾಮದ ಕೆಲವರು ಪಟ್ಟು ಹಿಡಿದರು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್ ತಿಳಿಸಿದರು.