ಏಪ್ರಿಲ್‌ 5ರಂದು ರೈತ-ಕಾರ್ಮಿಕರ ಐಕ್ಯ ಚಳುವಳಿ: ಡಾ. ಕೆ. ಹೇಮಲತಾ

ಬೆಂಗಳೂರು: ಏಪ್ರಿಲ್‌ 5ರಂದು ರೈತ-ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೃಹತ್‌ ಪ್ರತಿಭಟನಾ ಪ್ರದರ್ಶನವಿದೆ. ಈ ಐಕ್ಯ ಹೋರಾಟದಲ್ಲಿ ದೇಶದ ವಿವಿಧ ಭಾಗಗಳಿಂದ ರೈತ-ಕಾರ್ಮಿಕರು, ಕೃಷಿಕೂಲಿಕಾರರು, ಮಹಿಳೆಯರು, ಯುವಜನ-ವಿದ್ಯಾರ್ಥಿಗಳು ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಈ ವಿಭಾಗದವರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ತಿಳಿಸಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ ಇಂದು(ಜನವರಿ20) ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಮೂರು ಪ್ರಮುಖ ನಿರ್ಣಯವನ್ನು ಅಂಗೀಕರಿಸಲಾಯಿತು. ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣಗೆ ಸರಕಾರಗಳು ಮುಂದಾಗಬೇಕು ಎಂದು ನಿರ್ಣಯ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಸತತ ಒಂದು ವರ್ಷ ಹೋರಾಟ ನಡೆದಿದ್ದು, ಹೋರಾಟದ ತೀವ್ರತೆಗೆ ಮಣಿದ ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಸಂದರ್ಭದಲ್ಲಿ ನೀಡಿದ ಪ್ರಮುಖ ಭರವಸೆಗಳನ್ನು ಇದೂವರೆಗೂ ಈಡೇರಿಲ್ಲ. ಭರವಸೆ ಈಡೇರಿಸಲು ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಡಾ ಕೆ. ಹೇಮಲತಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್‌ ರಂಗವನ್ನು ಸಂಪೂರ್ಣ ಖಾಸಗೀಯವರಿಗೆ ವಹಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ವಿದ್ಯುತ್ ಮಸೂದೆ-2021 ಕೇಂದ್ರ ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕೆಂದು ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಲಾಗಿದೆ. ಕೇರಳದ ಎಡರಂಗ ಸರ್ಕಾರ ಜಾರಿಗೊಳಿಸುತ್ತಿರುವ ಜನಪರ, ರೈತಪರ, ಕಾರ್ಮಿಕ ಪರ ನೀತಿಗಳಿಗೆ ಎದುರಾಗಿ ದಾಳಿಗಳು ಆರಂಭವಾಗಿದೆ. ಬಿಜೆಪಿ ಮತ್ತು ಅದರ ಮಿತ್ರಕೂಟ ಎಡರಂಗ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ತಡೆಯೊಡ್ಡುತ್ತಿರುವುದನ್ನು ಖಂಡಿಸುತ್ತೇವೆ ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಚಳುವಳಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬಂಡವಾಳಶಾಹಿ ದೇಶಗಳು ಬೆಳೆದು ಬರುತ್ತಿರುವ ಕಾರ್ಮಿಕ ಹೋರಾಟಗಳು ಆಳುವ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದಾರೆ. ಅದರಲ್ಲೂ ಕೋವಿಡ್‌ ಸಾಂಕ್ರಾಮಿಕ ಉತ್ತುಂಗದ ಹಂತದಲ್ಲಿದ್ದಾಗ ಕಾರ್ಮಿಕರು ಹೋರಾಟಗಳನ್ನು ಸಂಘಟಿಸಿರುವುದು ಗಮನಿಸಬಹುದಾಗಿ ಎಂದರು.

ಅಕ್ಟೋಬರ್‌ 2021ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ ನಲ್ಲಿ ದೊಡ್ಡ ಪ್ರತಿಭಟನೆಗಳು ನಡೆಯಿತು. ಕಳೆದ ಕೆಲವು ವರ್ಷಗಳಲ್ಲಿ ಜರುಗಿದ ಅತ್ಯಂತ ಬಲಿಷ್ಟ ಹೋರಾಟ ಇದಾಗಿದೆ. ಅದೇ ರೀತಿ ಯು.ಕೆ. ಸ್ಪೇನ್‌, ಜರ್ಮನಿಯಲ್ಲಿಯೂ ಹೋರಾಟಗಳು ನಡೆದಿವೆ. ಇತ್ತೀಚಿಗೆ ಫ್ರಾನ್ಸ್‌ನಲ್ಲಿ ಸತತ ಪ್ರತಿಭಟನೆಗಳು ನಡೆದಿದ್ದು, ನೌಕರರ ನಿವೃತ್ತಿ ಕಾಲಮಿತಿ ಅವಧಿ ಬದಲಾವಣೆಯನ್ನು ವಿರೋಧಿಸಿ ಕಾರ್ಮಿಕರು ವಿರೋಧ ವ್ಯಕ್ತಪಡಿಸಿರುವುದನ್ನು ಗಮನಿಸಬಹುದಾಗಿದೆ ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳಶಾಹಿಗಳ ವಿರುದ್ಧ ಜರುಗುತ್ತಿರುವ ಜನ ಚಳುವಳಿಯೊಂದಿಗೆ ಸಿಐಟಿಯು ಸಂಘಟನೆಯು ಸೌಹಾರ್ದಯುತವಾಗಿ ಬೆಂಬಲಿಸಲಿದೆ ಎಂದು ಡಾ. ಕೆ. ಹೇಮಲತಾ ಅವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *