ಶಿವಾಜಿ ಮುಸ್ಲಿಂ ವಿರೋಧಿಯೂ ಅಲ್ಲ, ಹಿಂದೂ ಧರ್ಮದ ರಕ್ಷಕನೂ ಅಲ್ಲ. ಶಿವಾಜಿ ಒಬ್ಬ ಅಪ್ರತಿಮ ವೀರ ಮಹಾರಾಜರಾಗಿದ್ದರು. ಕರ್ನಾಟಕದ ಲಕ್ಷ್ಮೇಶ್ವರದ ಬಳಿ ಸೂರಟೂರು ಶಿವಾಜಿ ಮೂಲ ಎಂದು ಮಹಾರಾಷ್ಟ್ರದ ಸಂಶೋಧಕರಾದ ಡಾ.ರಾಮಚಂದ್ರ ಚಿಂತಾಮಣ ಢೇರೆಯವರು ನಡೆಸಿದ ಸಂಶೋಧನೆಯಲ್ಲಿ ಶಿವಾಜಿ ವಂಶದ ಮೂಲ ಪುರುಷ ಬಿಳಿಯಪ್ಪ ಮಹಾರಾಷ್ಟ್ರಕ್ಕೆ ವಲಸೆ ಹೋಗಿ ನೆಲೆಸಿದ್ದರು ಎಂದು ಉಲ್ಲೇಖಿಸಿದ್ದಾರೆ ಶಿವಾಜಿಯ ಮೂಲ ಯಾವುದಾದರೂ ಇರಲಿ ಶಿವಾಜಿಯಂತಹ ಮಹಾರಾಜನನ್ನೆ ಬಿಡದ ವೈದಿಕರು ನಿರಂತರವಾಗಿ ಕಾಡಿದರು. ಸಾಮಾನ್ಯ ಮನೆತನದ ವ್ಯಕ್ತಿಯೊಬ್ಬ ತನ್ನ ಸಾಮರ್ಥ್ಯದಿಂದ ಛತ್ರಪತಿ ಶಿವಾಜಿಯಾಗಿ ಜಗತ್ತೆ ನಿಬ್ಬೆರಗಾಗುವಂತೆ ಮಾಡಿದ್ದ.
ಶಿವಾಜಿಯನ್ನು ಹಿಂದೂ ಧರ್ಮದ ರಕ್ಷಕನೆಂದು ಹೇಳುತ್ತಿರುವ ಹಲವರು ಹೇಗೆ ಶಿವಾಜಿ ಹಿಂದೂ ಧರ್ಮ ರಕ್ಷಕನೆಂದು ವಾದಿಸುವರೆಂಬುದೇ ವಿಪರ್ಯಾಸ. ಅಫ್ಜಲ್ ಖಾನ್ ನನ್ನು ಕೊಂದದ್ದೇ ಆತನನ್ನು ಹಿಂದೂ ಧರ್ಮರಕ್ಷಕ ಎಂದು ತೀರ್ಮಾನಿಸುವುದು ಮೂರ್ಖತನವಷ್ಟೇ ಸರಿ. ಯಾಕೆಂದರೆ ಒಬ್ಬ ರಾಜನಾಗಿ ಸಾಮ್ರಾಜ್ಯ ವಿಸ್ತರಣೆ ಮಾಡುವಲ್ಲಿ ಎದುರಾಳಿಯು ಯಾವ ಧರ್ಮದ ವ್ಯಕ್ತಿಯೆಂದು ಯಾವ ರಾಜನೂ ಪರಿಗಣಿಸುವುದಿಲ್ಲ. ಅಲ್ಲದೇ ರಾಜ್ಯವಿಸ್ತರಣೆ ಅಥವಾ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಇರುವುದಿಲ್ಲ, ಶಾಶ್ವತ ಮಿತ್ರರೂ ಇರುವುದಿಲ್ಲ. ಆದರೆ ಛತ್ರಪತಿ ಶಿವಾಜಿಯವರಿಗೆ ಮಾತ್ರ ಜೀವಮಾನದುದ್ದಕ್ಕೂ ಕಾಡಿದ ಶತ್ರುಗಳಿದ್ದಾರೆ. ಯಾಕೆ ಅವರು ಶಿವಾಜಿಯನ್ನು ಕಾಡಿದರು ಮತ್ತು ಹೇಗೆ ಅವರು ಶಿವಾಜಿಯನ್ನು ಕೊಲ್ಲಲು ಸಂಚುರೂಪಿಸದ್ದರು.
ಛತ್ರಪತಿ ಶಿವಾಜಿ ಮಹಾರಾಜ ತನ್ನ ಸ್ವಸಾಮರ್ಥ್ಯದಿಂದ ವಿಶಾಲ ಪ್ರದೇಶವನ್ನು ಗೆದ್ದರೂ ಅಧಿಕೃತವಾಗಿ ಮಹಾರಾಜನೆನಿಸಿಕೊಂಡು ಸಿಂಹಾಸನವನ್ನೆರಲು ಶಿವಾಜಿಯ ಜಾತಿ ಅಡ್ಡ ಬಂದಾಗ, ರಾಜಸ್ಥಾನದ ಸಿಸೋದಿಯ ಎಂಬ ಕ್ಷತ್ರಿಯ ವಂಶದ ಜೊತೆ ಅವರ ವಂಶವನ್ನು ಸಮ್ಮಿಲನಗೊಳಿಸಿ ಕೃತಕ ವಂಶವೃಕ್ಷವನ್ನು ಸೃಷ್ಟಿಸುವುದರ ಮೂಲಕ ಶಿವಾಜಿಗೆ ಕ್ಷತ್ರಿಯತ್ವವನ್ನು ಪುರೋಹಿತರು ಕಲ್ಪಿಸಿದ್ದೇ ಅವರ ಮೂಲವನ್ನು ತಪ್ಪಾಗಿ ಗುರುತಿಸಲು ನಿಮಿತ್ತ ವಾಯಿತು. ಶಿವಾಜಿಯನ್ನು ಇಂದು ಹಿಂದೂ ಧರ್ಮ ರಕ್ಷಕನೆಂದು ಹೇಳುತ್ತಿರುವವರು 1674 ರಲ್ಲಿ ಶಿವಾಜಿಯ ರಾಜ್ಯಾಭಿಷೇಕದ ಕಾಲದಲ್ಲಿ ವೈದಿಕರು ಮಹಾರಾಜರ ಕುಲದ ಬಗ್ಗೆ ಪ್ರಶ್ನೆಯನ್ನೆತ್ತಿದರು. ಬಲಾಢ್ಯ ಮೊಗಲರನ್ನು ಏಕೈಕ ವೀರನಾಗಿ ಎದುರಿಸಿ ಅವರ ಸೊಕ್ಕನ್ನು ಮುರಿದು ತನ್ನ ಸಾಮ್ರಾಜ್ಯವನ್ನೆ ಕಟ್ಟಿದ ಮಹಾರಾಜರಿಗೆ ಜಾತಿಯ ಕಾರಣಕ್ಕಾಗಿ ಪಟ್ಟಾಭಿಷೇಕವನ್ನೆ ನಿರಾಕರಿಸಲಾಯಿತು. ಆಗಿನ ಅನೇಕ ಹಿಂದೂ ರಾಜರುಗಳು ಅದರಲ್ಲಿಯೂ ರಜಪೂತ ಕ್ಷತ್ರಿಯ ರಾಜರುಗಳು ಮಹಾರಾಜನ್ನು (ಶಿವಾಜಿ) ನಿಕೃಷ್ಟವಾಗಿ ಕಾಣುತ್ತಿದ್ದರೆಂಬುದನ್ನು ಶಿವಾಜಿ ಮಹಾರಾಜರ ಸಮಕಾಲೀನ ಇತಿಹಾಸವೂ ದಾಖಲಿಸಿದೆ. ಈ ಬಗ್ಗೆ ಅಸಂಖ್ಯ ಕಾಗದ ಪತ್ರಗಳನ್ನು ಮಹಾರಾಷ್ಟ್ರ ಸರ್ಕಾರವು ಸಂರಕ್ಷಿಸಿ ಇಟ್ಟಿದೆ. ಪಟ್ಟಾಭಿಷೇಕ ಮಾಡಲು ಆಸ್ಥಾನದ ಪಂಡಿತರು ಒಬ್ಬ ಶೂದ್ರನಿಗೆ ರಾಜನಪಟ್ಟ ಕಟ್ಟುವುದನ್ನು ನಿರಾಕರಿಸಿ ಪಟ್ಟಾಭಿಷೇಕ ಮಾಡಲು ವಿರೋಧಿಸಿದರು ಇದರಿಂದ ಶಿವಾಜಿಯು ಕಾಶಿಯಿಂದ ಗಾಗಾಭಟ್ಟನನ್ನು ಕರೆಸಿ, ಚಾಣಾಕ್ಷ ಗಾಗಾಭಟ್ಟ ಹಣದಾಸೆಗೆ ಶೂದ್ರರಾಗಿದ್ದ ಮಹಾರಾಜರನ್ನು ಶಾಸ್ತ್ರದ ಒಳಮಾರ್ಗದ ಮೂಲಕ ಪಟ್ಟಾಭಿಷೇಕ ವ್ಯವಸ್ಥೆ ಮಾಡಿದನು. ಶಿವಾಜಿ ಮಹಾರಾಜರನ್ನು ರಾಜಸ್ಥಾನದ ಸಿಸೋದಿಯಾ ವಂಶಕ್ಕೆ ಸೇರಿಸಿ ವಂಶಾವಳಿಯನ್ನು ಬದಲಿಸಿ ” ವಂಶವೃಕ್ಷವನ್ನು” ತಯಾರಿಸಲಾಯಿತು.
ಶಿವಾಜಿಯು ಮೂಘಲರ ವಿರುದ್ದ ಯುದ್ಧ ಮಾಡಿದರೆ ಅಥವಾ ಇಸ್ಲಾಂನ ವಿರುದ್ಧ ಯುದ್ಧ ಮಾಡಿದರೆ? ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಶಿವಾಜಿಯು ಇಸ್ಲಾಂನ ವಿರುದ್ಧ ಹೋರಾಡಿದ್ದರೆ ಅವರ ಸೈನ್ಯದಲ್ಲಿ ಮುಸ್ಲಿಂ ದಂಡನಾಯಕರು ಮತ್ತು ಬಿಜಾಪುರ ಸುಲ್ತಾನರಿಗೆ ಸೇರಿದ್ದ 700 ಮುಸ್ಲಿಂ ಪಠಾಣ್ ಸೈನಿಕರು ಶಿವಾಜಿ ರಾಜನೊಂದಿಗೆ ಸೇರುತ್ತಿರಲಿಲ್ಲ . ಇಬ್ರಾಹಿಂ ಖಾನ್ ಫಿರಂಗಿ ದಳದ ಮುಖ್ಯಸ್ಥ, ಸಿದ್ದಿ ಹಿಲಾಲ್ 1,50,000 ಅಶ್ವದಳ ಇರುವ ಶಿವಾಜಿ ಸೈನ್ಯದ ಮುಖ್ಯಸ್ಥ ಮತ್ತು ಇದರಲ್ಲಿ 66000 ಮುಸಲ್ಮಾನ ಸೈನಿಕರಿದ್ದರು. ಸಿದ್ದಿ ವಹ್ವಾ, ಸಿದ್ದಿ ಇಬ್ರಾಹಿಂ ಶಿವಾಜಿಯ ಮುಸಲ್ಮಾನ ದಂಡನಾಯಕರುಗಳು. ಅಲ್ಲದೇ ಹೈದರಾಬಾದಿನ ನಿಜಾಮರೊಂದಿಗೆ ಒಳ್ಳೆಯ ಸ್ನೇಹಸಂಬಂಧ ಶಿವಾಜಿಗೆ ಇತ್ತು. 40 ಸಾವಿರದಷ್ಟಯ ರಜಪೂತ ಸೈನಿಕರಿದ್ದರು, ಯಾಕುತ್ ಬಾಬಾ ಎಂಬ ಮುಸಲ್ಮಾನ ಸೂಫಿ ಸಂತರನ್ನು ಅಪಾರವಾಗಿ ಆರಾಧಿಸುತ್ತಿದ್ದರು. ನೈಜ ಚಿತ್ರ ಹೀಗಿರಬೇಕಾದರೆ ಶಿವಾಜಿಯನ್ನು ಇಸ್ಲಾಂ ವಿರೋಧಿ ಎನ್ನಲು ಸಾಧ್ಯವಿಲ್ಲ.
ಸರ್ವಧರ್ಮಗಳಿಗೂ ಸಮಾನ ಸ್ಥಾನಮಾನ ಕೊಟ್ಟಿದ್ದ ಶಿವಾಜಿಯು, ಅಲ್ಲದೇ ಶೂದ್ರರು ಆಯುಧ ಹಿಡಿಯುವ ಹಕ್ಕು ನಿಷೇಧ ಮಾಡಿದ್ದ ಮನುಸ್ಮೃತಿಯನ್ನು ಮುರಿದು ಎಲ್ಲಾ ಶೂದ್ರ ಅಸ್ಪೃಶ್ಯರಿಗೂ ಸೈನ್ಯದಲ್ಲಿ ಅವಕಾಶ ನೀಡಿದರು.
ಶಿವಾಜಿಯನ್ನು ಅಂದು ಕಾಡಿದ ವೈದಿಕ ಬ್ರಾಹ್ಮಣರು ಇಂದು ಛತ್ರಪತಿ ಶಿವಾಜಿಯನ್ನೇ ಮುಂದೆ ಇಟ್ಟುಕೊಂಡು ಹಿಂಧೂಧರ್ಮ ರಕ್ಷಕ ಎಂದು ಚಿತ್ರಿಸಿರುವುದು ಕುತಂತ್ರವಲ್ಲದೇ ಮತ್ತೇನೂ ಅಲ್ಲ. ಶಿವಾಜಿಯು ಒಬ್ಬ ಶೂದ್ರ ಮೂಲನಿವಾಸಿ ರಾಜ, ಎಲ್ಲಾ ಜಾತಿ, ಧರ್ಮದ ಪ್ರಜೆಗಳನ್ನು ಸಮನಾಗಿ ಕಂಡ ಸಮತಾವಾದಿ. ಇಂತಹ ಮಹಾನ್ ರಾಜನನ್ನು ಹಿಂದೂ ಧರ್ಮ ರಕ್ಷಕ ಎಂದವರೆ ಶಿವಾಜಿಯ ಅಸಲೀ ಕೊಲೆಗಡುಕರು.
(ಶಿವಾಜಿಯ ಮೂಲ ಕನ್ನಡದ ನೆಲ: ಡಾ.ರಾಂ ಚಿ ಢೇರಿ,
ಶಿವಾಜಿ ಯಾರು : ಗೋವಿಂದ ಪಾನ್ಸಾರೆ ಪುಸ್ತಕಗಳಿಂದ)
ಸುಭಾಸ ಮಾದರ
ಶಿಗ್ಗಾಂವಿ