ಮೈಸೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ನಟ ಪ್ರಕಾಶ್ ರೈ ಅವರು ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರೈ, ಅಪ್ಪು ಎಂದೆಂದಿಗೂ ಇರುವ ಕಥಾನಾಯಕ. ಅಪ್ಪು ನಮ್ಮನ್ನು ಅಗಲಿದ್ದಾಗ ಇಡೀ ರಾಜ್ಯಕ್ಕೆ ಅನಾಥ ಪ್ರಜ್ಞೆ ಕಾಡಿತು. ಮಾತು ಹೊರಡದ ಮೌನ ನನ್ನನ್ನು ಕಾಡಿತ್ತು. ಹೀಗಾಗಿ ಇದುವರೆಗೂ ಅಪ್ಪು ಬಗ್ಗೆ ನಾನು ಎಲ್ಲಿಯೂ ಮಾತಾಡಿರಲಿಲ್ಲ ಎಂದರು.
‘ಅಪ್ಪು ಬಗ್ಗೆ ಕೇವಲ ಮಾತನಾಡುತ್ತಾ ಕುಳಿತರೆ ಸಾಲದು. ಅವರ ಅಗಲಿಕೆಯ ನೋವನ್ನು ಮಾಗಿಸುವ ಕೆಲಸವಾಗಿ ಈ ಸೇವಾ ಕಾರ್ಯದಲ್ಲಿ ತೊಡಗಿದ್ದೇನೆ. ಈ ಮೂಲಕ, ಜನಪರ ಕಾರ್ಯ ಮಾಡಿದ ಅಪ್ಪುಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಆ ವ್ಯಕ್ತಿತ್ವದ ಮುಂದೆ ನಾವೆಲ್ಲರೂ ಸಣ್ಣವರು’ ಎಂದರು.
ಕೋವಿಡ್ ಸಂದರ್ಭದಲ್ಲಿ ಪ್ರಕಾಶ್ ರಾಜ್ ಫೌಂಡೇಶನ್ ಗೆ ರಾಜ್ ಫೌಂಡೇಶನ್ ನಿಂದ ಪುನೀತ್ ರಾಜ್‌ಕುಮಾರ್ 2 ಲಕ್ಷ ಕೊಟ್ಟಿದ್ದರು. ಅಪ್ಪು ಇದನ್ನು ಎಲ್ಲೂ ಹೇಳಿಕೊಳ್ಳಲಿಲ್ಲ. 10 ನಿಮಿಷ ಮುಂಚೆ ಅಪ್ಪುಗೆ ಅಂಬುಲೆನ್ಸ್ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಅಂತಾ ನನಗೆ ಅನ್ನಿಸಿತ್ತು. ಈ ಕಾರಣ ಅಂಬುಲೆನ್ಸ್ ವ್ಯವಸ್ಥೆ ಎಲ್ಲಾ ಕಡೆ ಮಾಡಲು ಮುಂದಾಗಿದ್ದೇನೆ. ‘ಅಪ್ಪು ಎಕ್ಸ್‍ಪ್ರೆಸ್’ ಅಂತಾ ಅಂಬುಲೆನ್ಸ್ ಗೆ ಹೆಸರು ಇಟ್ಟಿದ್ದೇವೆ ಎಂದರು.
ಅಪ್ಪು ಅಗಲಿದ್ದಾಗ ಯಾರು ಯಾರಿಗೂ ಸಮಾಧಾನ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮತ್ತೊಬ್ಬ ಅಪ್ಪು ಹುಟ್ಟಿ ಬರುತ್ತಾನೋ ಗೊತ್ತಿಲ್ಲ. ಹೊಸ ಪ್ರತಿಭೆಗೆ ಅವಕಾಶ ಕೊಡಲು ಸಣ್ಣಸಣ್ಣ ಸಿನಿಮಾ ಮಾಡಬೇಕು ಎಂದು ಸಲಹೆ ಕೊಟ್ಟಿದ್ದೆ. ಆ ಸಲಹೆಯನ್ನು ಅಪ್ಪು ಗಂಭೀರವಾಗಿ ಪರಿಗಣಿಸಿದ್ದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
‘ನನ್ನ ಪ್ರಕಾಶ್ ರಾಜ್ ಪ್ರತಿಷ್ಠಾನದಿಂದ ಅಪ್ಪು ಎಕ್ಸ್‌ಪ್ರೆಸ್’ ಹೆಸರಿನ ಆಂಬ್ಯುಲೆನ್ಸ್‌ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದು ವರ್ಷದೊಳಗೆ ನೀಡುವ ಯೋಜನೆ ಇದೆ. ಇದಕ್ಕಾಗಿ ಕೈಜೋಡಿಸುವ ಸ್ನೇಹಿತರಿದ್ದಾರೆ. ಯಾರೂ ಕೊಡದಿದ್ದರೂ ನಾನು ದುಡಿಯುವ ಹಣದಲ್ಲೇ ಈ ಸತ್ಕಾರ್ಯವನ್ನು ಮಾಡುತ್ತೇನೆ’ ಎಂದು ಹೇಳಿದರು.
ನಿರ್ದೇಶಕ ಆನಂದರಾಮ್ ಮಾತನಾಡಿ, ಅಂಬುಲೆನ್ಸ್‍ಗೆ ರಾಜಕುಮಾರ್ ಚಿತ್ರದ ಅಪ್ಪು ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂತಹ ಅಂಬುಲೆನ್ಸ್ ಗಳನ್ನು ನೀಡಲಾಗುತ್ತದೆ. ಪ್ರಕಾಶ್ ರಾಜ್ ಫೌಂಡೇಶನ್ ನಿಂದ ಅಪ್ಪು ಅವರ ಸ್ಮರಣೆ ಆಗುತ್ತಿದೆ. ಅಪ್ಪು ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. 10 ವರ್ಷದ ಹಿಂದೆ ನಮ್ಮ ತಂದೆಯ ಹೃದಯದ ಶಸ್ತ್ರ ಚಿಕಿತ್ಸೆಗೆ ಅಪ್ಪು ಅವರು ಹಣ ಕೊಟ್ಟರು ಎಂದು ಮೊನ್ನೆ ಹೋಟೆಲ್ ಕೆಲಸಗಾರನೊಬ್ಬ ಹೇಳಿದ. ಎಲ್ಲಿಯ ಹೋಟೆಲ್ ಕೆಲಸಗಾರ ಎಲ್ಲಿಯಾ ಅಪ್ಪು, ಒಳ್ಳೆ ಕೆಲಸ ಮಾಡುವವರನ್ನೂ ಟ್ರೋಲ್ ಮಾಡಿಕೊಂಡು ತಿರುಗಾಡುವ ಸಮಾಜದಲ್ಲಿ ಅಪ್ಪು ಅವರು ಸದ್ದಿಲ್ಲದೆ ಸಾಮಾಜಿಕವಾಗಿ ಜನರಿಗೆ ನೆರವಾದರು ಎಂದು ಹೇಳುತ್ತಾ ಅಪ್ಪುವನ್ನು ಕೊಂಡಾಡಿದರು.