ಬೆಂಗಳೂರು: ಸಂತ್ರಸ್ತ ಬಾಲಕಿಯರು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮರುಘಾ ಶರಣರು ಹಾಗೂ ಇತರ ಇಬ್ಬರನ್ನು ಖುಲಾಸೆಗೊಳಿಸಿರುವ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಮರುಘಾ
ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸುವಂತೆ ಹಾಗೂ ಖುಲಾಸೆಗೊಂಡಿರುವವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸುವಂತೆ ಕೋರಿ ಬಾಲಕಿಯರು ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದು, ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು, ಖುಲಾಸೆಗೊಂಡಿರುವ ಶಿವಮೂರ್ತಿ ಮರುಘಾ ಶರಣರು, ಎಸ್. ರಶ್ಮಿ ಮತ್ತು ಎ.ಜೆ. ಪರಮಶಿವಯ್ಯ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಮೇಲ್ಮನವಿಗಳು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ನಿರ್ಭಯಾ ಕೇಸ್ ಮಾದರಿ ಕೃತ್ಯ ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿದ ಆರೋಪಿ; ಬಂಧನ
ಪ್ರಕರಣದ ಹಿನ್ನೆಲೆ:
ಮುರುಘಾ ಮಠದ ವಸತಿ ನಿಲಯದಲ್ಲಿ ಇದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮುರುಘಾ ಶರಣರು ನಮ್ಮನ್ನು ಖಾಸಗಿ ಕೊಠಡಿಗೆ ಹಿಂಬಾಗಿಲಿನಿಂದ ಕರೆಸಿಕೊಂಡು ಚಾಕೊಲೇಟ್‌ಗಳು ಮತ್ತು ಹಣ್ಣು ಇತ್ಯಾದಿಗಳನ್ನು ತಿನ್ನಲು ನೀಡುತ್ತಿದ್ದರು. ಇದರಲ್ಲಿ ಮಾದಕ ಪದಾರ್ಥಗಳನ್ನು ಬೆರಸಲಾಗಿತ್ತು. ಅದನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸಬಾರದು. ಬಹಿರಂಗಪಡಿಸಿದರೆ ತಂದೆ-ತಾಯಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮತ್ತವರ ಪತ್ನಿ ಸೌಜನ್ಯಾ ನೆರವಿನಿಂದ ಮೈಸೂರಿನ ಸರ್ಕಾರೇತರ ಸಂಸ್ಥೆ ಒಡನಾಡಿ ತಲುಪಿ, ಅವರ ನೆರವಿನಿಂದ ಮೈಸೂರಿನ ನಜಾರಾಬಾದ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಬಾಲಕಿಯರು ದೂರಿನಲ್ಲಿ ವಿವರಿಸಿದ್ದರು. ಆನಂತರ ಪ್ರಕರಣ ಚಿತ್ರದುರ್ಗದ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಕಳೆದ ನವೆಂಬರ್ 26ರಂದು ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(3), 323, 504, 506, ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳಾದ 5(I), 6 ಮತ್ತು 17ರ ಆರೋಪಗಳಿಂದ ಸ್ವಾಮೀಜಿ ಸೇರಿ ಮೂವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಇದನ್ನೂ ನೋಡಿ: ದಲಿತರ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಬೇಡಿ – ರಾಜಗೋಪಾಲ್. ಡಿ.ಎಸ್ Janashakthi Media
