ಬೆಂಗಳೂರು: ಆ್ಯಪ್ ಆಧಾರಿತ ಆಟೋ ಪ್ರಯಾಣ ದರ ನಿಗದಿ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಯೂನಿಯನ್ ಗಳ ಜತೆ ನಡೆಸಿದ ಸತತ 3ನೇ ಸಭೆಯೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ಚಾಲಕರ ನಡುವಿನ ಗುದ್ದಾಟಕ್ಕೆ ಇನ್ನೂ ತೆರೆ ಬಿದ್ದಿಲ್ಲ.
ಹೈಕೋರ್ಟ್ ನಿರ್ದೇಶನದಂತೆ ಅಕ್ಟೋಬರ್ 29ರಂದು ಅಗ್ರಿಗೇಟರ್ ಕಂಪೆನಿಗಳ ಮುಖ್ಯಸ್ಥರೊಂದಿಗೆ ಅಧಿಕಾರಿಗಳು ಸಭೆ ನಡೆಸಿದ್ದರು. ಆದರೆ, ದರ ನಿಗದಿ ವಿಚಾರದಲ್ಲಿ ಒಮ್ಮತ ಮೂಡಿರಲಿಲ್ಲ. ನವೆಂಬರ್ 7ರಂದು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮತ್ತಷ್ಟು ಕಾಲಾವಕಾಶ ನೀಡುವಂತೆ ಸಾರಿಗೆ ಇಲಾಖೆ ಕೋರಿತ್ತು. ಅದರಂತೆ ನಾಳೆ(ನವೆಂಬರ್ 16) ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಸಲು ಮತ್ತೊಂದು ಸುತ್ತಿನ ಸಭೆಯನ್ನು ಕರೆದಿದ್ದರು. ಆದರೆ, ಈ ಸಭೆಯಲ್ಲೂ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ.
ಒಂದೆಡೆ ಅಗ್ರಿಗೇಟರ್ ಕಂಪನಿಗಳು ಬೇಡಿಕೆ ಆಧಾರಿತ ದರ ಪರಿಷ್ಕರಣೆಗೆ ಅವಕಾಶ ಕಲ್ಪಿಸುವಂತೆ ಈಗಾಗಲೇ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಅದರಂತೆ ಜಾರಿಗೊಳಿಸಲು ಒತ್ತಾಯಿಸುತ್ತಿದೆ. ಮತ್ತೂಂದೆಡೆ ಆಟೋ ಯೂನಿಯನ್ ಮುಖಂಡರು, ಮೀಟರ್ ದರ ಕನಿಷ್ಠ (2 ಕಿ.ಮೀ.ಗೆ) 30ರಿಂದ 40 ರೂ.ವರೆಗೆ ಹೆಚ್ಚಳ ಮಾಡುವಂತೆ ಬೇಡಿಕೆ ಸಲ್ಲಿಸಿವೆ. ಇನ್ನು ಹಲವರು ಆ್ಯಪ್ ಕಂಪನಿ ದರ ನಿಗದಿ ಬಗ್ಗೆ ಮಾತ್ರ ಸಭೆ ನಡೆಸಲಾಗುತ್ತಿದೆ. ಮೀಟರ್ ದರ ಹೆಚ್ಚಳಕ್ಕೆ ಜಿಲ್ಲಾಡಳಿತದೊಂದಿಗೆ ಚರ್ಚಿಸಬೇಕು, ಜಿಲ್ಲಾಧಿಕಾರಿಗಳು ಉಪಸ್ಥಿತರಿಬೇಕು ಎಂದು ಆಕ್ಷೇಪ ಎತ್ತಿದರು. ಈ ವಾಗ್ವಾದಗಳ ನಡುವೆಯೇ ಸಭೆ ಫಲಪ್ರದ ನೀಡಲಿಲ್ಲ ಎನ್ನಲಾಗಿದೆ.
ಸಭೆಯಲ್ಲಿ ದರ ನಿಗದಿ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಅಗ್ರಿಗೇಟರ್ ಕಂಪನಿಗಳು, “ಈಗಾಗಲೇ ಹೈಕೋರ್ಟ್‌ಗೆ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಮ್ಮ ಅಭಿಪ್ರಾಯವನ್ನು ಹೇಳಿದ್ದೇವೆ. ಅದರಂತೆ ಬೇಡಿಕೆ ಆಧಾರಿತ ದರ ಪರಿಷ್ಕರಣೆಗೆ ಅನುಮತಿ ನೀಡುವಂತೆʼʼ ಮತ್ತೂಮ್ಮೆ ಕೋರಿದರು. ನಂತರ ಸಾರಿಗೆ ಇಲಾಖೆ ಅಧಿಕಾರಿಗಳು ದರ ಇಳಿಕೆ ಕುರಿತು ಮನವಿ ಮಾಡಿದರೂ ತುಟಿಬಿಚ್ಚಲಿಲ್ಲ. ಬಳಿಕ ಅಧಿಕಾರಿಗಳು ಸಭೆಯನ್ನು ಮುಕ್ತಾಯಗೊಳಿಸಿ ಹೈಕೋರ್ಟ್‌ಗೆ ಅಭಿಪ್ರಾಯ ಸಲ್ಲಿಸುವುದಾಗಿ ತಿಳಿಸಿತು ಎನ್ನಲಾಗಿದೆ.
ಸಾರ್ವಜನಿಕರೊಂದಿಗೆ ಸಭೆ
ಈ ಮಧ್ಯೆ ಸಾರಿಗೆ ಇಲಾಖೆ ಸಾರ್ವಜನಿಕರ ಸಭೆ ಕರೆದಿದ್ದು, ಬಳಿಕ ಕಂಪನಿಗಳು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹೈಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಿದೆ. ಹೈಕೋರ್ಟ್ ಸೂಚನೆ ಬಳಿಕವಷ್ಟೇ ಅಂತಿಮ ದರ ಪಟ್ಟಿ ಜಾರಿಯಾಗಲಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, “ಹೈಕೋರ್ಟ್ ಸೂಚನೆ ಮೇರೆಗೆ ದರ ನಿಗದಿ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಓಲಾ, ಉಬರ್ ಸೇರಿದಂತೆ ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಸಾರ್ವಜನಿಕರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗುವುದು. ಸಾರ್ವಜನಿಕವಾಗಿ ಯಾವುದೇ ನಿರ್ಧಾರ ತಿಳಿಸಲ್ಲ. ಹೈಕೋಟ್‌ಗೆ ಮಾಹಿತಿ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಆಟೋ ಯೂನಿಯನ್ ಗಳ ವಾದ: ಮೀಟರ್ ದರದ ಜತೆ ಹೆಚ್ಚುವರಿಯಾಗಿ ಉಬರ್ ಕಂಪನಿ ಶೇ. 10ರಷ್ಟು ಪ್ಲಾಟ್‌ಫಾರಂ ಶುಲ್ಕ, ಶೇ. 5ರಷ್ಟು ಜಿಎಸ್‌ಟಿ, ಶೇ. 25ರಷ್ಟು ಹೆಚ್ಚುವರಿ ದರ ಸೇರಿ 40 ರಷ್ಟು ಹೆಚ್ಚು ದರಕ್ಕೆ, ಓಲಾ ಕಂಪನಿಯು ಮೀಟರ್ ದರಕ್ಕಿಂತ ಶೇ. 20 ಹೆಚ್ಚುವರಿ ದರಕ್ಕೆ, ರ‍್ಯಾಪಿಟೋ ಕಿ.ಮೀ.ಗೆ 50 ರೂ. ನಿಗದಿಗೆ ಬೇಡಿಕೆ ಸಲ್ಲಿಸಿವೆ. ಕಂಪನಿಗಳು ಇದೇ ದರವನ್ನು ಅಂತಿಮಗೊಳಿಸಲು ಪಟ್ಟುಹಿಡಿದವು ಎಂದು ಮೂಲಗಳು ತಿಳಿಸಿವೆ.
ಆಟೋ ಯೂನಿಯನ್‌ಗಳು, ಮೀಟರ್ ದರವನ್ನು ಹಲವು ವರ್ಷಗಳ ಬಳಿಕ ಕಳೆದ ಡಿಸೆಂಬರ್ ನಲ್ಲಿ (2021) ಹೆಚ್ಚಳ ಮಾಡಲಾಗಿತ್ತು. ಸದ್ಯ ಆ್ಯಪ್ ಕಂಪನಿಗಳ ಬೇಡಿಕೆ ಬೆನ್ನೆಲ್ಲೇ ಸಾಮಾನ್ಯ ಆಟೋರಿಕ್ಷಾ ಚಾಲಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.