ನವದೆಹಲಿ: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್ ಚಂದ್ರ ಪಾಂಡೆ ಅವರನ್ನು ನೇಮಿಸಿ ಆದೇಶ ನೀಡಲಾಗಿದೆ.
ಪ್ರಸ್ತಕ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿರುವ ಸುನೀಲ್ ಅರೋರಾ ಅವರು ಏಪ್ರಿಲ್ 12ರಂದು ನಿವೃತ್ತರಾಗಲಿದ್ದಾರೆ. ಆ ಸ್ಥಾನಕ್ಕೆ ಉತ್ತರ ಪ್ರದೇಶದವರಾದ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ.
ಇದನ್ನು ಓದಿ: ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ವಿ ಶಿವದಾಸನ್ ಮತ್ತು ಜಾನ್ ಬ್ರಿಟಾಸ್
ಚುನಾವಣಾ ಆಯೋಗಕ್ಕೆ ಮೂರು ಸದಸ್ಯರ ಆಯೋಗ ಇರಲಿದ್ದು, ಸುಶೀಲ್ ಚಂದ್ರ ಮತ್ತು ರಾಜೀವ್ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಬ್ಬ ಆಯುಕ್ತರ ಹುದ್ದೆ ಖಾಲಿ ಉಳಿದಿತ್ತು. ಇದೀಗ ಆ ಸ್ಥಾನಕ್ಕೆ ಅನೂಪ್ ಚಂದ್ರ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ.
ಉತ್ತರ ಪ್ರದೇಶ ಕೇಡರ್ನ 1984ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಅನೂಪ್ ಚಂದ್ರ ಪಾಂಡೆ ಈ ಹಿಂದೆ ಭಾರತೀಯ ರಕ್ಷಣಾ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2019ರ ಆಗಸ್ಟ್ನಲ್ಲಿ ಉತ್ತರ ಪ್ರದೇಶ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಉತ್ತರ ಪ್ರದೇಶದಲ್ಲಿ ವಿವಿಧ ಸರ್ಕಾರಿ ಹುದ್ದೆಗಳನ್ನು ಸಹ ಅವರು ನಿಭಾಯಿಸಿದ್ದಾರೆ.