ಬೆಂಗಳೂರು : ಕರ್ತವ್ಯನಿರತ ಸರ್ಕಾರಿ ಉದ್ಯೋಗಿಗಳ ಹೆತ್ತರವರು ಮೃತಪಟ್ಟರೇ ಅನುಕಂಪದ ಮೇರೆಗೆ ಸರ್ಕಾರಿ ಉದ್ಯೋಗ ಪಡೆಯುವ ಹಕ್ಕು ವಿವಾಹಿತ ಮಗಳಿಗೂ ಇದೆ ಎಂದು ಹೈಕೊರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ತವ್ಯದಲ್ಲಿದ್ದಾಗ ಹೆತ್ತವರು ಮೃತಪಟ್ಟರೆ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ವಿವಾಹಿತ ಮಹಿಳೆ ಎಂಬ ಕಾರಣಕ್ಕೆ ನಿರಾಕರಿಸಲಾಗುತ್ತಿತ್ತು. ಆದರೆ ಹೈಕೋರ್ಟ್ ಮಹತ್ವದ ತೀರ್ಪು ನೀಡುವುದರ ಮೂಲಕ ವಿವಾಹಿತ ಮಗಳು ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಪಡೆಯಬಹುದು ಎಂದು ತಿಳಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಿವಾಸಿ ಭುವನೇಶ್ವರಿ ವಿ. ಪುರಾಣಿಕ್ ಎಂಬುವವರು ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಮಾಡಿದ್ದ ಮನವಿಯನ್ನು ಮದುವೆ ಆಗಿದೆ ಎಂಬ ಕಾರಣಕ್ಕೆ ಸರಕಾರ ಉದ್ಯೋಗ ನೀಡಲು ನಿರಾಕರಿಸಿತ್ತು.
ತಂದೆಗೆ ಇಬ್ಬರು ಮಕ್ಕಳಿದ್ದು ಮಗ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಸರಕಾರಿ ಕೆಲಸ ಬೇಡ ಎಂದು ತಿರಸ್ಕರಿಸಿದ್ದ. ಈ ಹಿನ್ನೆಲೆಯಲ್ಲಿ ಸೋದರಿ ತಂದೆಯ ನಿಧನದ ಹಿನ್ನೆಲೆಯಲ್ಲಿ ಇರುವ ಅನುಕಂಪದ ಉದ್ಯೋಗ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರಿ ಉದ್ಯೋಗ ನೀಡುವಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಇರುವುದಿಲ್ಲ. ಮಕ್ಕಳಿಗೆ ಕೊಡಬೇಕು ಎಂದು ಇದೆ. ಮಗನಿಗೆ ಮಾತ್ರ ಕೊಡಬೇಕು ಎಂಬ ನಿಯಮ ಸರಿಯಲ್ಲ ಎಂದು ಸರಕಾರಕ್ಕೆ ಛಾಟಿ ಬೀಸಿದೆ.