ಅನುದಾನ-ಶಾಸನಬದ್ಧ ಸೌಲಭ್ಯಗಳಿಗಾಗಿ ಅಂಗನವಾಡಿ ನೌಕರರ ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು: ಐಸಿಡಿಎಸ್‌ ಯೋಜನೆಗೆ ಅಗತ್ಯ ಅನುದಾನ, ಗ್ರಾಚ್ಯುಟಿ(ಉಪಧನ)ಗಾಗಿ, ಮುಷ್ಕರದ ಹಕ್ಕು ಹಾಗೂ ಶಾಸನಬದ್ಧ ಸೌಲಭ್ಯಗಳನ್ನು ಕಲ್ಪಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಇಂದು(ಜುಲೈ 12) ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು.

ಜುಲೈ 26ರ ಪಾರ್ಲಿಮೆಂಟ್‌ ಮುಂಭಾಗ ಹಮ್ಮಿಕೊಂಡಿರುವ ಪ್ರತಿಭಟನೆ ಭಾಗವಾಗಿ ಇಂದು ರಾಜ್ಯದ ಎಲ್ಲಾ ಸಂಸತ್‌ ಸದಸ್ಯರ ಕಛೇರಿ, ಮನೆ ಮುಂಭಾಗ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಶಾಲಾ ಪೂರ್ವ ಶಿಕ್ಷಣದೊಂದಿಗೆ 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಪ್ರಮುಖ ಕೆಲಸಗಳನ್ನು ಅತ್ಯಂತ ಕಡಿಮೆ ಗೌರವ ಧನದಲ್ಲಿ ದುಡಿಮೆ ಮಾಡಿಸಿಕೊಳ್ಳಲಾಗುತ್ತಿದೆ. ಅಲ್ಲದೆ, ಐಸಿಡಿಎಸ್‌ ಯೇತರ ಹಾಗೂ ಇಲಾಖೇತರ ಕೆಲಸಗಳನ್ನು ಸಹ ಮಾಡಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಐಸಿಡಿಎಸ್‌ ಯೋಜನೆಗೆ 40% ಅನುದಾನ ಕಡಿತ ಮಾಡಿ, ಅಧಿಕಾರಿಗಳ ವೇತನಗಳಲ್ಲಿ 75% ಕಡಿತ ಮಾಡಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ಬಿಡುಗಡೆ ಮಾಡದೇ ಇರುವುದರಿಂದ ಐಸಿಡಿಎಸ್‌ ಯೋಜನೆ ಮತ್ತು ಅಂಗನವಾಡಿ ನೌಕರರು ಸತತವಾಗಿ ಕಷ್ಟವನ್ನು ಅನುಭವಿಸಬೇಕಾಗಿದೆ. ಆದ್ದರಿಂದ ಅಗತ್ಯ ಅನುದಾನ, ರಾಜ್ಯ ಸರ್ಕಾರದ ಪಾಲಿನ ಜಿಎಸ್‌ಟಿ ಪಾವತಿ ಮತ್ತು ತನ್ನ ಪಾಲಿನ ವೇತನ ಹೆಚ್ಚಳವನ್ನು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಾನವ ಸಂಪನ್ಮೂಲದ ಬೆಳವಣಿಗೆಗೆ, ಅಪೌಷ್ಠಿಕತೆ ವಿರುದ್ಧ ಸತತ ಹೋರಾಟ ನಡೆಸಿ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿರುವ ಅಂಗನವಾಡಿ ನೌಕರರು ಕೊರೊನಾ ಸಂದರ್ಭದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂತಹ ಅಂಗನವಾಡಿ ಮಹಿಳೆಯರು ಬೆಲೆಯೇರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಇಂದಿಗೂ ಕೇಂದ್ರ ಸರ್ಕಾರ ಕೇವಲ 4500 ರೂ. ಮಾತ್ರ ಕೊಡುತ್ತಿದೆ. ಉಳಿದ ವೇತನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ ಇಷ್ಟು ಅತ್ಯಲ್ಪ ಗೌರವಧನದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಹಾಗಾಗೀ, ಕನಿಷ್ಠ ವೇತನ ರೂ.26 ಸಾವಿರ ಮತ್ತು ನಿವೃತ್ತಿ ವೇತನ ರೂ. 10 ಸಾವಿರ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯು, ತುಮಕೂರು, ಬಳ್ಳಾರಿ, ವಿಜಯನಗರ, ಹಾಸನ, ರಾಮನಗರ, ಚಿತ್ರದುರ್ಗ, ಕೊಪ್ಪಳ, ಚಾಮರಾಜನಗರದಲ್ಲಿ ಪ್ರತಿಭಟನೆ ನಡೆದಿದೆ. ಸಂಸತ್ ಸದಸ್ಯರ ಮನೆ ಮತ್ತು ಕಛೇರಿಗಳ ಮುಂದೆ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಅಂಗನವಾಡಿ ನೌಕರರ ಮತ್ತು ಐಸಿಡಿಎಸ್‌ ಯೋಜನೆ ಬಗ್ಗೆ ಚರ್ಚಿಸಲು ಒತ್ತಾಯಿಸಿದರು. ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸತ್‌ ಸದಸ್ಯರು ಮನವಿ ಸ್ವೀಕರಿಸಿ ಮಾತಾನಾಡಿದರು.

Donate Janashakthi Media

Leave a Reply

Your email address will not be published. Required fields are marked *