ಶಿವಮೊಗ್ಗ: ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಎಸ್‌ಸಿಪಿ ಟಿಎಸ್‌ಪಿ) ಅಡಿಯಲ್ಲಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಎಸ್‌ಸಿಪಿ ಟಿಎಸ್‌ಪಿ ಯೋಜನೆಯ ಹಣ ದುರುಪಯೋಗ, ಕಳಪೆ ಕಾಮಗಾರಿಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನೆನ್ನೆ(ಫೆಬ್ರವರಿ 13) ಬೆಳಿಗ್ಗೆ ಆರಂಭವಾದ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಆದರೆ, ಪೊಲೀಸರು ರಾತ್ರೋರಾತ್ರಿ ಪ್ರತಿಭಟನಾಕಾರರನ್ನು ಬಂಧಿಸಿರುವ ಘಟನೆ ನಡೆದಿದೆ.
ಇದನ್ನು ಓದಿ: ಜೈನ್ ವಿವಿಯಲ್ಲಿ ಅಂಬೇಡ್ಕರ್‌ಗೆ ಅವಮಾನ: ವಿದ್ಯಾರ್ಥಿಗಳ ಅಮಾನತು; ಪ್ರಕರಣ ದಾಖಲು
ಪೊಲೀಸ್ ಡಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಲಾಗಿದ್ದು, ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಡಿಎಸ್‌ಎಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಮೈದಾನದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ಏಕಾಏಕಿ ತಮ್ಮನ್ನು ಅಪರಾಧಿಗಳಂತೆ ರಾತ್ರಿಹೊತ್ತು ಬಂಧಿಸಿ ಕರೆ ತಂದು ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಲು ಹೊರಟಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಲೇಶಪ್ಪ ತಿಳಿಸಿದ್ದಾರೆ.
ಇದನ್ನು ಓದಿ: ದಲಿತ ಕೇರಿಯ ನೀರಿನ ಟ್ಯಾಂಕಿಗೆ ಮಲ ಸುರಿದ ದುಷ್ಕರ್ಮಿಗಳು: ಹಲವು ಮಕ್ಕಳು ಅಸ್ವಸ್ಥ
2014ನೇ ಸಾಲಿನಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉಪ ಯೋಜನೆಗಳಿಗಾಗಿ ಸರ್ಕಾರವು ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ ಬಿಡುಗಡೆಯಾದ ಹಣ ಸರಿಯಾಗಿ ದಲಿತರಿಗೆ ತಲುಪಿಸಿಲ್ಲ. ಸರ್ಕಾರ ಅನುದಾನ ಹಣವನ್ನು ಬೇರೆ ಯೋಜನೆಗೆ ದುರುಪಯೋಗ ಪಡಿಸಿಕೊಂಡಿದೆ. ಪರಿಶಿಷ್ಟರ ಕಾಲೋನಿಗಳಿಗೆ ನೀಡುವ ಹಣ ಮೇಲ್ವರ್ಗದ ಕಾಲೋನಿಗೆ ನೀಡಲಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.
ನಿರ್ದಿಷ್ಟವಾಗಿ ಯೋಜನೆಯ ಹಣ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ದುರ್ಬಳಕೆಯಾಗಿದೆ ಎಂದು ಉಲ್ಲೇಖಿಸಿರುವ ಪ್ರತಿಭಟನಾಕಾರರು, ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಲ್ಲದೆ, ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಬೇಕೆಂದು ಅಗ್ರಹಿಸಿ ಅಹೋರಾತ್ರಿ ಧರಣಿ ಮುಂದುವರೆಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ