ಅನುಚಿತ ವರ್ತನೆ ತೋರಿದ ಅರವಿಂದ ಲಿಂಬಾವಳಿ ಕ್ಷಮೆ ಕೇಳಬೇಕು: ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರು ಮಹಿಳೆಯೊಬ್ಬರನ್ನು ಏಕವಚನದಲ್ಲಿ ಮಾತನಾಡಿದಲ್ಲದೆ, ಅವಳನ್ನು ರೇಪ್ ಮಾಡಿದ್ದೇನೆಯೇ ಅಂತ ಹೇಳಿರುವುದು ತೀವ್ರವಾಗಿ ಖಂಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ)ಯು ಶಾಸಕ ರಾಜ್ಯದ ಮಹಿಳೆಯರನ್ನು ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೆಂಗಳೂರು ಪೂರ್ವ ವಲಯ ಸಮಿತಿಯು, ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೆಪ್ಟಂಬರ್‌ 03ರಂದು ಮಹಿಳೆಯೊಬ್ಬರು  ದೂರು ನೀಡಲು ಬಂದ ಸಮಯದಲ್ಲಿ ಅವರೊಂದಿಗೆ ದರ್ಪದಿಂದ ವರ್ತಿಸಿ ಅಕೆಯ ಮೇಲೆ ಮುಗಿಬಿದ್ದಿರುವುದು ಜಗಜ್ಜಾಹೀರಾಗಿದೆ. ಶಾಸಕರ ಈ ರೀತಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ.

ಎಐಡಿಡಬ್ಲ್ಯೂಎ ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಅವರು, ಜನ ಪ್ರತಿನಿಧಿಗಳಿಗೆ ಯಾರೇ ದೂರು ನೀಡಿಲು ಬಂದಲ್ಲಿ ಅದನ್ನು ಪರಿಶೀಲಿಸಿ ನ್ಯಾಯ ದೊರಕಿಸಿಕೊಡಬೇಕಾದದ್ದು ಜವಾಬ್ದಾರಿಯುತ ಕರ್ತವ್ಯ. ಆದರೆ ಶಾಸಕರು ನೆರೆದಿದ್ದ ಜನರ ಮುಂದೆಯೇ ಗೂಂಡಾ ವರ್ತನೆ ತೋರಿದ್ದಲ್ಲದೆ, ದೂರು ನೀಡಲು ಬಂದ ಮಹಿಳೆಯನ್ನು ಅವಳು ಇವಳು ಅಂತ ಏಕವಚನದಲ್ಲಿ ದರ್ಪ ತೋರಿದದ್ದಾರೆ. ನಿನಗೆ ಮಾನ ಮಾರ್ಯಾದೆ ಇದೆಯಾ ಎಂದು ಕೇವಲವಾಗಿ ನಡೆದುಕೊಂಡಿರುವುದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ. ಇದನ್ನು ಪ್ರಶ್ನಿಸಿದ ಮಾಧ್ಯಮದವರೊಂದಿಗೆ ಅವಳನ್ನು ನಾನು ರೇಪ್ ಮಾಡಿದ್ದೇನೆಯೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯ ಕೀಳು ಸಂಸ್ಕೃತಿ ಏನು ಎಂಬುದನ್ನು ಶಾಸಕರು ಸಾಬೀತುಪಡಿಸಿದ್ದಾರೆ ಎಂದರು.

ಎಐಡಿಡಬ್ಲ್ಯೂಎ ಬೆಂಗಳೂರು ಪೂರ್ವ ವಲಯ ಸಮಿತಿ ಅಧ್ಯಕ್ಷೆ ವನಿತ ಅವರು, ಮಹಿಳೆಯರ ಬಗ್ಗೆ ಘನತೆ ಗೌರವವಿಲ್ಲದ ಅರವಿಂದ ಲಿಂಬಾವಳಿ ಅವರಿಗೆ ಶಾಸಕರ ಸ್ಥಾನಕ್ಕೆ ಅನರ್ಹರಾಗಿರುತ್ತಾರೆ. ಇಂತಹ ವ್ಯಕ್ತಿಗಳು ಶಾಸಕರಾಗಿದ್ದರೆ ಕ್ಷೇತ್ರದ ಮಹಿಳೆಯರಿಗೆ ನ್ಯಾಯ ದೊರಕುವುದಿಲ್ಲ. ಹಾಗಾಗಿ ಮಹಿಳೆಯರೊಂದಿಗೆ ಗೂಂಡಾಗಿರಿ ವರ್ತನೆ ಮಾಡಿರುವ ಬಿಜೆಪಿ ಶಾಸಕರು ಕ್ಷೇತ್ರದ ಮಹಿಳೆಯರನ್ನು ಕ್ಷಮೆಯಾಚಿಸಬೇಕು ಹಾಗು ಶಾಸಕರ ಸ್ಥಾನಕ್ಕೆ ನಾಲಾಯಕ್ಕಾಗಿದ್ದು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂತಹ ವ್ಯಕ್ತಿಗಳು ತಮ್ಮ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡದಂತೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರು ಪಣ ತೊಡಬೇಕೆಂದು ಜನವಾದಿ ಮಹಿಳಾ ಸಂಘಟನೆ ಪೂರ್ವ ವಲಯ ಸಮಿತಿಯ ಕಾರ್ಯದರ್ಶಿ ಗಾಯತ್ರಿ, ಖಜಾಂಚಿ ಕಲ್ಪನಾ, ವಲಯ ಸಮಿತಿ ಮುಖಂಡರಾದ ಸರೋಜ, ಶಶಿಕಲಾ, ರತ್ಮಮ್ಮ ವಿನಂತಿಸಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *