-ವಸಂತರಾಜ ಎನ್.ಕೆ
ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ (ಮೇ8-9) ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈಗಲೂ ಈ ಸಂಭ್ರಮಾಚರಣೆ ಏಕೆ? ಫ್ಯಾಸಿಸಂ ನ್ನು ಏಕೆ ವಿರೋಧಿಸಬೇಕು ? ಫ್ಯಾಸಿಸಂ ವಿರುದ್ಧ ವಿಜಯದಲ್ಲಿ ವಿವಿಧ ದೇಶಗಳ ಸರಕಾರಗಳ, ರಾಜಕೀಯ ಶಕ್ತಿಗಳ ಪಾತ್ರವೇನಿತ್ತು ? ಎರಡನೆಯ ಮಹಾಯುದ್ಧ ಏಕೆ ಫ್ಯಾಸಿಸಂ ಜತೆಗೆ ತಳುಕು ಹಾಕಿಕೊಂಡಿದೆ? ಫ್ಯಾಸಿಸಂ ವಿರುದ್ಧ ವಿಜಯದಲ್ಲಿ ಮಿತ್ರಕೂಟದ ಸೈನ್ಯಗಳ ಪಾತ್ರವೇನಿತ್ತು? ಯುರೋಪಿಯನ್ ಜನತಾ ಪ್ರತಿರೋಧ ಗೆರಿಲ್ಲಾ ಸೈನ್ಯದ ಪಾತ್ರವೇನಿತ್ತು? ಆಗಿನ ಫ್ಯಾಸಿಸಂ ವಿರುದ್ಧ ಮಿತ್ರಕೂಟದ ಪಾಶ್ಚಿಮಾತ್ಯ ದೇಶಗಳು ಮತ್ತು ಮಾಜಿ ಸೋವಿಯೆಟ್ ದೇಶಗಳು ಬೇರೆ ಬೇರೆ ದಿನದಂದು ಬೇರೆ ಬೇರೆ ರೀತಿಯಲ್ಲಿ ಬೇರೆಯಾಗಿ ಏಕೆ ಆಚರಿಸುತ್ತಾರೆ? ಈ ಕುರಿತು ಏಳುವ ಈ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು -ಈ ಲೇಖನ ಸರಣಿಯ ಉದ್ದೇಶ. ಈ ಸರಣಿಯ ಭಾಗ-1ರಲ್ಲಿ ಮೊದಲ 3 ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಲಾಗಿದೆ.
ತಲೆಬರಹದ ಫೊಟೊ : ರಶ್ಯಾದ ಲೆನಿನ್ ಗ್ರಾಡ್ (ಸೈಂಟ್ ಪೀಟರ್ಸ್ ಬರ್ಗ್) ನಲ್ಲಿ ಮೇ 9, 2025ರಂದು ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಚಿತ್ರ : ಮಹಾಯುದ್ಧದಲ್ಲಿ ಮಡಿದ ತಮ್ಮ ತಂದೆ/-ತಾಯಿ/ಅಜ್ಜ-ಅಜ್ಜಿಯರು ಮತ್ತಿತರರ ಫೊಟೊ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ (ಕೃಪೆ : AP Photos)
1. ಫ್ಯಾಸಿಸಂ ವಿರುದ್ಧ ವಿಜಯದ 80 ವರ್ಷಗಳ ನಂತರ ಈಗ ಅದನ್ನು ಯಾಕೆ ನೆನಪಿಸಿಕೊಳ್ಳಬೇಕು ?
ಫ್ಯಾಸಿಸಂ ಕಳೆದ ಕೆಲವು ಶತಮಾನಗಳ ಚರಿತ್ರೆಯಲ್ಲಿ ಮನುಕುಲದ ಅಸ್ತಿತ್ವಕ್ಕೆ ಮತ್ತು ಕನಿಷ್ಟ ಮಾನವೀಯತೆಯಿರುವ ಸಮಾಜ ವ್ಯವಸ್ಥೆಗೆ ಸಂಚಕಾರ ತಂದ ಅತ್ಯಂತ ದೊಡ್ಡ ದುರಂತ. ಮನುಕುಲದ ಚರಿತ್ರೆಯಲ್ಲಿ ಜಾಗತಿಕವಾಗಿ ಅತ್ಯಂತ ಹೆಚ್ಚಿನ ಭಾರೀ ಸಾವು-ನೋವುಗಳಿಗೆ ವಿನಾಶಗಳಿಗೆ ಕಾರಣವಾದ ಎರಡನೇ ಮಹಾಯುದ್ಧಕ್ಕೂ ಫ್ಯಾಸಿಸಂ ನ ಉದಯವೇ ಮುಖ್ಯ ಕಾರಣವಾಗಿತ್ತು. ಸಾಮೂಹಿಕ ಮಾರಕಾಸ್ತ್ರಗಳಾದ ಅಣ್ವಸ್ತ್ರ, ರಾಸಾಯನಿಕ ಅಸ್ತ್ರಗಳ ವಿನ್ಯಾಸ, ತಯಾರಿಗೂ ಇದು ಮುಖ್ಯ ಪ್ರಚೋದನೆಯಾಗಿತ್ತು. ‘ಫ್ಯಾಸಿಸಂ ಮತ್ತು ಜಾಗತಿಕ ಮಹಾಯುದ್ಧ ಮತ್ತೆಂದೂ ಬೇಡ’ ಎಂಬ ಸಾಮಾನ್ಯ ಮಾನವೀಯ ಆಶಯ ಈ 80 ವರ್ಷಗಳಲ್ಲಿ ಕುಂದಿದೆ. .ನಮ್ಮ ಭೂಮಿ ಮತ್ತು ಮನುಕುಲವನ್ನು ಹಲವು ಬಾರಿ ನಾಶ ಮಾಡಬಲ್ಲ ಸಾಮೂಹಿಕ ಮಾರಕಾಸ್ತ್ರಗಳ ಪಟ್ಟಿಯಲ್ಲಿ ಅಣ್ವಸ್ತ್ರ, ರಾಸಾಯನಿಕ ಅಸ್ತ್ರಗಳ ಜತೆಗೆ ಜೈವಿಕ ಅಸ್ತ್ರಗಳೂ ಸೇರಿದ್ದು, ಹಲವು ದೇಶಗಳು ಇವನ್ನು ಹೊಂದಿವೆ. ಫ್ಯಾಸಿಸಂ ನ ಹುಟ್ಟು ದೇಶಗಳಾದ ಜರ್ಮನಿ, ಇಟಲಿಗಳಲ್ಲದೆ ಯುರೋಪು, ಅಮೆರಿಕ ಮಾತ್ರವಲ್ಲ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಫ್ಯಾಸಿಸ್ಟ್ ರೀತಿಯ ಧೋರಣೆ ಹೊಂದಿರುವ ರಾಜಕೀಯ ಪಕ್ಷಗಳ ಬೆಂಬಲ ಹೆಚ್ಚುತ್ತಿದೆ. ಸುಮಾರು 77 ವರ್ಷಗಳ ಕಾಲ ಯುರೋಪಿನಲ್ಲಿ ಶಾಂತಿ (ಅಥವಾ ಕನಿಷ್ಟ ಯುದ್ಧ ಆಗದಿರುವುದು) ಉಕ್ರೇನ್ ಯುದ್ಧದ ಮೂಲಕ ಕದಡಿದೆ. ಹಾಗಾಗಿ ಫ್ಯಾಸಿಸಂ ಹೇಗೆ ಯಾಕೆ ಹುಟ್ಟಿತು? ಇದು ಎರಡನೇ ಮಹಾಯುದ್ಧಕ್ಕೆ ಹೇಗೆ ಕಾರಣವಾಯಿತು? ಅದರ ವಿರುದ್ಧ ಯಾರು ಹೇಗೆ ಹೋರಾಡಿದರು ? ಎಂಬುದು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ.
ನಾಜಿಗಳಿಂದ ಸಾಮೂಹಿಕ ಕಗ್ಗೊಲೆಗಳು
2.ಫ್ಯಾಸಿಸಂ ನ್ನು ಏಕೆ ವಿರೋಧಿಸಲಾಗುತ್ತಿದೆ? 1930-40ರ ದಶಕದಲ್ಲಿ ಅದು ಯಾವ ದುರಂತಗಳಿಗೆ ಕಾರಣವಾಯಿತು ?
ಫ್ಯಾಸಿಸಂ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳಿಗೆ ತೀವ್ರ ಕುತ್ತು ತರವುದಲ್ಲದೆ, ಯಾತನಾ ಶಿಬಿರಗಳಲ್ಲಿ ಮತ್ತು ಅದು ಆರಂಭಿಸಿದ ಎರಡನೇ ಮಹಾಯುದ್ಧದಲ್ಲಿ ಕೋಟಿಗಟ್ಟಲೆ ಸಾವು-ನೋವುಗಳಿಗೆ ಕಾರಣವಾಯಿತು.
ಫ್ಯಾಸಿಸ್ಟ್ ಪಕ್ಷಗಳು ಅಧಿಕಾರಕ್ಕೆ ಬಂದ ದೇಶಗಳಲ್ಲಿ – ಪ್ರಮುಖವಾಗಿ ಜರ್ಮನಿ, ಇಟಲಿ, ಸ್ಪೈನ್ – ನಗ್ನ ಸರ್ವಾಧಿಕಾರ ಹೇರಲಾಯಿತು. ಜನತೆಯ ವ್ಯಕ್ತಿಗತ, ರಾಜಕೀಯ ಸಾಮಾಜಿಕ ಸಂಘ ಸಂಸ್ಥೆಗಳ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸರಕಾರದ ಮತ್ತು ಆಳುವ ಪಕ್ಷದ ಎಲ್ಲ ವಿರೋಧಿಗಳನ್ನು ದಮನ ಮಾಡಲಾಯಿತು. ಹಿಟ್ಲರ್ 1933ರಲ್ಲಿ ಅಧಿಕಾರಕ್ಕೆ ಬರುತ್ತಲೇ ನಾಜಿಗಳು ಜರ್ಮನಿಯ ಪಾರ್ಲಿಮೆಂಟರಿ ಭವನಕ್ಕೆ ತಾವೇ ಬೆಂಕಿ ಹಾಕಿ ಅದನ್ನು ಮಾಡಿದ್ದು ಕಮ್ಯುನಿಸ್ಟರು ಎಂದು ಆಪಾದಿಸಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಲಾಯಿತು. ಮುಂದಿನ ಸರದಿ ಸೋಶಲಿಸ್ಟರದಾಗಿತ್ತು. ಮುಂದೆ ಎಲ್ಲ ರಾಜಕೀಯ ವಿರೋಧಿಗಳನ್ನು ಕಗ್ಗೊಲೆ ಮಾಡಲಾಯಿತು ಅಥವಾ ಜೈಲಿಗಟ್ಟಲಾಯಿತು.
ಕಮ್ಯುನಿಸ್ಟರು, ಸೋಶಲಿಸ್ಟರು ಮತ್ತು ರಾಜಕೀಯ ವಿರೋಧಿಗಳು ಹತ್ತಾರು ಸಾವಿರಗಳ ಸಂಖ್ಯೆಯಲ್ಲಿ ಇದ್ದಿದ್ದರಿಂದ ಯಾತನಾ ಶಿಬಿರ (ಕಾನ್ ಸಂಟ್ರೇಶನ್ ಕ್ಯಾಂಪ್) ಗಳನ್ನುಸ್ಥಾಪಿಸಿ ಅವರನ್ನು ಅಲ್ಲಿಗೆ ಅಟ್ಟಲಾಯಿತು. ಈ ಶಿಬಿರಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕಠಿಣ ಬಲವಂತದ ದುಡಿಮೆ ಮಾಡಿಸಲಾಯಿತು. ಮಹಾಯುದ್ಧ ಆರಂಭದ ಮೊದಲು ಜರ್ಮನಿಯೊಳಗೆ ಮಾತ್ರ ಈ ಯಾತನಾ ಶಿಬಿರಗಳಿದ್ದರೆ, ಆ ನಂತರ ಜರ್ಮನಿ ಆಕ್ರಮಿತ ಪ್ರದೇಶಗಳಲ್ಲೂ ಯಾತನಾ ಶಿಬಿರಗಳನ್ನು ಸ್ಥಾಪಿಸಲಾಯಿತು. ಆಕ್ರಮಿತ ಪ್ರದೇಶಗಳ ರಾಜಕೀಯ ವಿರೋಧಿಗಳು, ಬಂಧಿತರಾದ ಆ ದೇಶಗಳ ಗೆರಿಲ್ಲಾ ಹೋರಾಟಗಾರರು, ಪ್ರತಿರೋಧದಲ್ಲಿ ಪಾಲುಗೊಂಡವರು ಮತ್ತು ಬಂಧಿತ ಸೋವಿಯೆಟ್ ಸೈನಿಕರನ್ನೂ (ಜಿನಿವಾ ಒಪ್ಪಂದ ಉಲ್ಲಂಘಿಸಿ) ಈ ಶಿಬಿರಗಳಲ್ಲಿ ಇಡಲಾಯಿತು. ಈ ಶಿಬಿರದ ಕೈದಿಗಳಲ್ಲಿ 1942ರ ಹೊತ್ತಿಗೆ ಮೂರನೇ ಎರಡು ಭಾಗದಷ್ಟು ಕೈದಿಗಳನ್ನು ರಕ್ಷಣಾ ಅಗತ್ಯಗಳ ಉತ್ಪಾದನೆಯಲ್ಲಿ ತೊಡಗಿಸಲಾಗಿತ್ತು. ಹಲವು ಯಾತನಾ ಶಿಬಿರಗಳನ್ನು ಖಾಸಗಿ ಕಂಪನಿಗಳಿಗಾಗಿಯೇ ಮೀಸಲಿಡಲಾಗಿತ್ತು. ಹೀಗೆ ಯಾತನಾ ಶಿಬಿರಗಳಿಗೆ ಆರ್ಥಿಕ ಕಾರಣಗಳೂ ಇದ್ದವು.
ಇದನ್ನೂ ಓದಿ : ಲಕ್ನೋ| ಬಸ್ಗೆ ಇದ್ದಕ್ಕಿದ್ದಂತೆ ಬೆಂಕಿ; ಐವರು ಸಾವು
ಯಾತನಾ ಶಿಬಿರಗಳಲ್ಲಿ ಬಲವಂತದ ಕಷ್ಟಕರ ದುಡಿಮೆ
ಮಹಾಯುದ್ಧದ ಉತ್ತರಾರ್ಧದಲ್ಲಿ ಈ ಶಿಬಿರಗಳ ಮತ್ತು ಅಲ್ಲಿ ಕೂಡಿ ಹಾಕಲ್ಪಟ್ಟ ಜನರ ಸಂಖ್ಯೆ ಭಾರೀ ಜಿಗಿತ ಕಂಡಿತು. ಗರಿಷ್ಟ ಅವಧಿಯಲ್ಲಿ 27 ಮುಖ್ಯ ಶಿಬಿರಗಳು ಮತ್ತು 1000ಕ್ಕೂ ಹೆಚ್ಚು ಉಪ-ಶಿಬಿರಗಳಿದ್ದವು ಮತ್ತು ಒಟ್ಟು 7 ಲಕ್ಷ ಕೈದಿಗಳನ್ನು ಕೂಡಿ ಹಾಕಲಾಗುತ್ತಿತ್ತು. ಈ ಶಿಬಿರಗಳಲ್ಲಿ ದುರ್ಬಲರಾದವರು, ಕಠಿಣ ದುಡಿಮೆ ಮಾಡಲಾಗದವರು, ಪ್ರತಿರೋಧ ತೋರಿದವರ ಮೇಲೆ ಮತ್ತು ಸಾಮಾನ್ಯ ಭಯ ಉಂಟು ಮಾಡಲು ವಿವಿಧ ರೀತಿಯ ಬರ್ಬರ ಚಿತ್ರಹಿಂಸೆಗಳನ್ನು ನೀಡಲಾಯಿತು, ಮತ್ತು ಸಾಮೂಹಿಕವಾಗಿ ಕಗ್ಗೊಲೆ ಮಾಡಲಾಯಿತು. ವಿಭಿನ್ನ ಅವಧಿಗಳಲ್ಲಿ ಒಟ್ಟು 17 ಲಕ್ಷಕ್ಕೂ ಹೆಚ್ಚು ಕೈದಿಗಳು ಈ ಶಿಬಿರಗಳಲ್ಲಿ ಯಾತನೆಗೊಳಗಾದರು ಎಂದು ಅಂದಾಜು ಮಾಡಲಾಗಿದೆ. ಕಗ್ಗೊಲೆಯಾದವರ ಸಂಖ್ಯೆ ಸುಮಾರು 11ಲಕ್ಷವೆಂದು ಅಂದಾಜು ಮಾಡಲಾಗಿದೆ. ಕೈದಿಗಳ ಮೇಲೆ ಅರಿವಳಿಕೆ (ಅನಸ್ತೇಶಿಯಾ) ಔಷಧಿ ಕೊಡದೆ ಹಲವು ಭೀಕರ ವೈದ್ಯಕೀಯ ಪ್ರಯೋಗಗಳನ್ನು ಮಾಡಲಾಯಿತು. ಇವುಗಳಲ್ಲಿ ನಾಜಿ ಡಾಕ್ಟರ್ ಮೆಂಗೆಲ್ ನ ಪ್ರಯೋಗಗಳು ಅತ್ಯಂತ ಕುಪ್ರಸಿದ್ಧವಾದವು. ಅವುಗಳಲ್ಲಿ ಸಾಮೂಹಿಕವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಣ ವಿಲೇವಾರಿಯ ಕಷ್ಟವನ್ನು ಸಹ ಕನಿಷ್ಟಗೊಳಿಸುವ ಹತ್ಯೆ ಮಾಡಲು ಯಾವ ರಾಸಾಯನಿಕಗಳು ‘ದಕ್ಷ ವಿಧಾನ’ ಕಂಡು ಹಿಡಿಯುವುದು ಸಹ ಸೇರಿತ್ತು. ಈ ಪ್ರಯೋಗಗಳ ಫಲವಾಗಿಯೇ ‘ಗ್ಯಾಸ್ ಚೆಂಬರ್’ಗಳು ಅವಿಷ್ಕಾರವಾಗಿದ್ದು. ಮೊದಲಿಗೆ ಶೂಟಿಂಗ್ ಮೂಲಕ ಸಾಮೂಹಿಕ ಕೊಲೆ ಮಾಡುತ್ತಿದ್ದರೆ, ಅಂತಿಮವಾಗಿ ವ್ಯಾಪಕವಾಗಿ ‘ಗ್ಯಾಸ್ ಚೆಂಬರ್’ಗಳನ್ನು ಬಳಸಲಾಯಿತು. ಮಹಾಯುದ್ಧದ ಕೊನೆಯ ಹೊತ್ತಿಗೆ ಕುಪ್ರಸಿದ್ಧವಾದ ಆಶ್ ವಿಟ್ಝ್ ಸೇರಿದಂತೆ 6 ಶಿಬಿರಗಳನ್ನು ಸಾಮೂಹಿಕ ಕೊಲೆಗಳಿಗೆ ಮೀಸಲಾಗಿಡಲಾಗಿತ್ತು.
ಯಾತನಾ ಶಿಬಿರಗಳಲ್ಲಿ ದುರ್ಭರ ಜೀವನ ಸ್ಥಿತಿ
‘ಜ್ಯೂ ಅಲ್ಪಸಂಖ್ಯಾತರೇ ದೇಶಕ್ಕೆ ದೊಡ್ಡ ಅಪಾಯ, ಎಲ್ಲ ಸಮಸ್ಯೆಗಳಿಗೆ ಅವರೇ ಕಾರಣ’ವೆಂದು ಬಿಂಬಿಸಿ ಜರ್ಮನಿಯ ನಾಜಿ ಪಕ್ಷವು, ಅವರ ಮೇಲೆ ಹಿಂಸಾತ್ಮಕ ದಾಳಿಗಳು, ಆರ್ಥಿಕ ನಿಷೇಧಗಳಿಂದ ಆರಂಭಿಸಿ ಕಾನೂನು ಮಾಡಿ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು, ಸಾಮೂಹಿಕ ಕಗ್ಗೊಲೆಗಳ ತನಕ ವ್ಯಾಪಕ ದಮನ ಕ್ರಮಗಳನ್ನು ಕೈಗೊಂಡಿತು. ಮಹಾಯುದ್ಧದ ಉತ್ತರಾರ್ಧದಲ್ಲಿ ‘ಜ್ಯೂ ಸಮಸ್ಯೆಯ ಅಂತಿಮ ಪರಿಹಾರ’ ಎಂಬ ಹೆಸರಿನಲ್ಲಿ ಅವರನ್ನು ಮನೆಗಳಿಂದ ಸಾಮೂಹಿಕವಾಗಿ ಯಾತನಾ ಶಿಬಿರಗಳಿಗೆ ಕಳಿಸಲಾಯಿತು. ಹೆಚ್ಚಿನವರನ್ನು ಹಲವು ರೀತಿಗಳಲ್ಲಿ ಅಲ್ಲಿ ಸಾಮೂಹಿಕ ಕೊಲೆ ಮಾಡಲಾಯಿತು. ಅಂತಿಮ ಘಟ್ಟದಲ್ಲಿ ಶಿಬಿರಗಳಿಗೆ ತಂದ ಕೂಡಲೇ ನೇರವಾಗಿ ‘ಗ್ಯಾಸ್ ಚೆಂಬರ್’ಗಳಿಗೆ ಕಳಿಸಲಾಯಿತು. ಯಾತನಾ ಶಿಬಿರಗಳಲ್ಲಿ ಮತ್ತು ಇತರ ಸಾಮೂಹಿಕ ಕಗ್ಗೊಲೆಗಳು ಸೇರಿ 60 ಲಕ್ಷ ದಷ್ಟು ಜ್ಯೂ ಗಳು ಫ್ಯಾಸಿಸಂ ಗೆ ಬಲಿಯಾದರು.
ದಶಾವ್ ಯಾತನಾ ಶಿಬಿರದಲ್ಲಿ ಐಸ್ ನಲ್ಲಿಟ್ಟು ‘ವೈದ್ಯಕೀಯ ಪ್ರಯೋಗ’
ಎರಡನೇ ಮಹಾಯುದ್ಧದಲ್ಲಿ 2.5 ಕೋಟಿ ಸೈನಿಕರು ಮಡಿದರು. 3.5 ಕೋಟಿ ಸೈನಿಕರು ಗಾಯಗೊಂಡರು. ನಾಜಿಗಳ ಆಕ್ರಮಣಕ್ಕೆ ಒಳಗಾದ ಸೋವಿಯೆತ್ ಒಕ್ಕೂಟ ಸುಮಾರು ಒಂದು ಕೋಟಿ ಸೈನಿಕರನ್ನು ಕಳೆದುಕೊಂಡಿತು. ಜರ್ಮನಿಯ 53 ಲಕ್ಷ ಸೈನಿಕರು ಹತರಾದರು. ಚೀನಾದ 38 ಲಕ್ಷ, ಜಪಾನಿ 14 ಲಕ್ಷ, ಅಮೆರಿಕದ 4.5 ಲಕ್ಷ ಮತ್ತು ಬ್ರಿಟನ್ನಿನ 3.75 ಲಕ್ಷ ಸೈನಿಕರು ಹತರಾದರು. ಒಟ್ಟು 5 ಕೋಟಿ ನಾಗರೀಕರು ಸತ್ತರು. ರಶ್ಯ (1.9 ಕೋಟಿ) ಮತ್ತು ಚೀನಾ (1.6 ಕೋಟಿ) ಅತ್ಯಂತ ಹೆಚ್ಚು ನಾಗರಿಕರ ಜೀವಹಾನಿಯನ್ನು ಅನುಭವಿಸಿತು. ಭಾರೀ ಸಂಖ್ಯೆಯಲ್ಲಿ ನಾಗರೀಕ ಸಾವು-ನೋವುಗಳನ್ನು ಕಂಡ ಉಳಿದ ಪ್ರಮುಖ ದೇಶಗಳೆಂದರೆ – ಪೋಲೆಂಡ್ (50 ಲಕ್ಷ), ಇಂಡೋನೇಶ್ಯಾ (20 ಲಕ್ಷ), ಜರ್ಮನಿ (20 ಲಕ್ಷ). ಈ ಚರಿತ್ರೆಯಲ್ಲೇ ಅತ್ಯಂತ ಭೀಕರ ಯುದ್ಧದ ಸಾವು-ನೋವುಗಳಿಗೆ ಫ್ಯಾಸಿಸಂ ಉದಯವೊಂದು ಪ್ರಮುಖ ಕಾರಣವಾಗಿತ್ತು.
ಆಶ್ ವಿಟ್ಝ್ ನ ಯಾತನಾ ಶಿಬಿರದಲ್ಲಿ ಗ್ಯಾಸ್ ಚೆಂಬರ್ : ನೀರು ಬದಲು ವಿಷ ಗ್ಯಾಸ್ ಬರುವ ಶವರ್
ಹಿಟ್ಲರ್ ಜರ್ಮನಿ ಅಣ್ವಸ್ತ್ರ ತಯಾರಿಗೆ ಯೋಜನೆ ಹಾಕಿದೆ ಎಂಬ ಸುದ್ದಿ ಹರಡಿ, ತರಾತುರಿಯಲ್ಲಿ ಯು.ಎಸ್ ನ ಅಣ್ವಸ್ತ್ರ ತಯಾರಿ ಯೋಜನೆಗೆ ಕಾರಣವಾಯಿತು. ಫ್ಯಾಸಿಸಂ ಮತ್ತು ಯುದ್ಧಗಳಿಗೆ ವಿರೋಧಿಗಳಾಗಿದ್ದ ಹಲವು ವಿಜ್ಞಾನಿಗಳು ಈ ಯೋಜನೆಯಲ್ಲಿ ಭಾಗವಹಿಸಿ ಅದು ಯಶಸ್ಸು ಕಂಡಿತು. ಅವರ ಉದ್ದೇಶ ಹಿಟ್ಲರನ ಅಣ್ವಸ್ತ್ರಕ್ಕೆ ಪ್ರತಿ ಬೆದರಿಕೆ ಹಾಕುವುದಾಗಿದ್ದರೂ, ಅದನ್ನು ಅಮೆರಿಕ ಜಪಾನಿನ ಮೇಲೆ ಬಳಸಿತು. ಜಪಾನ್ ಶರಣಾಗತವಾಗಿ ಮಹಾಯುದ್ಧ ಕೊನೆಗೊಳಿಸಲು ಅಗತ್ಯವಾಗಿತ್ತು ಎಂದು ಅದು ಸಮರ್ಥಿಸಿಕೊಂಡರೂ, ಅದು ಅಗತ್ಯವಿರಲಿಲ್ಲವೆಂದು ಅಭಿಪ್ರಾಯ ಪಡಲಾಗಿದೆ. ಹೀಗೆ ಇಂದೂ ಜಾಗತಿಕ ಶಾಂತಿಗೆ ಪ್ರಮುಖ ಸವಾಲಾಗಿರುವ ಅಣ್ವಸ್ತ್ರಗಳ ಬೆಳವಣಿಗೆಗೆ ಸಹ ಫ್ಯಾಸಿಸಂ ಪ್ರಮುಖ ಕಾರಣವಾಗಿತ್ತು.
3.ಫ್ಯಾಸಿಸಂ ವಿರುದ್ಧ ಜಾಗತಿಕ ಸಮರ ಮತ್ತು ವಿಜಯದಲ್ಲಿ ಸೋವಿಯೆಟ್ ಒಕ್ಕೂಟ, ಯರೋಪಿನ ದೇಶಗಳ ಜನತಾ ಹೋರಾಟಗಾರರ ಮತ್ತು ಪಾಶ್ಚಿಮಾತ್ಯ ದೇಶಗಳ ಸೈನ್ಯಗಳ ಪಾತ್ರವಿದೆ ಎಂದು ಹೇಳಲಾಗುತ್ತದೆ. ಯಾರ ಪಾತ್ರ ಎಷ್ಟಿತ್ತು?
ಫ್ಯಾಸಿಸಂ ವಿರುದ್ಧ ಹೋರಾಟದಲ್ಲಿ ವಿವಿಧ ಶಕ್ತಿಗಳ ಪಾತ್ರ ತಿಳಿಯಬೇಕಾದರೆ, ಫ್ಯಾಸಿಸಂ ನ ಹುಟ್ಟು, ಅದಕ್ಕೆ ವಿರೋಧವಾಗಿದ್ದ ಶಕ್ತಿಗಳ ಮತ್ತು ಎರಡನೇ ಮಹಾಯುದ್ಧದ ಪ್ರಮುಖ ಹಂತಗಳ ಸ್ಥೂಲ ಪರಿಚಯ ಅಗತ್ಯ.
(ಭಾಗ 2 ಮತ್ತು 3ರಲ್ಲಿ ಮುಂದುವರೆಯುವುದು)
ಇದನ್ನೂ ಓದಿ : ಬಿಡದಿ : ಮೂಕ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ Janashakthi Media