ಬೆಳಗಾವಿ : ಬಿಜೆಪಿ ಸದಸ್ಯರ ಕೊರತೆ ಹಾಗೂ ವಿರೋಧ ಪಕ್ಷಗಳ ವಿರೋಧದ ಕಾರಣದಿಂದಾಗಿ ವಿಧಾನಪರಿಷತ್‌ನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಲಿಲ್ಲ. ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಂದು ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರು ಮೊದಲೇ ಹಾಜರಿದ್ದರೂ ಆಡಳಿತ ಪಕ್ಷ ಸದಸ್ಯರು 1 ಗಂಟೆ ತಡವಾಗಿ ಬಂದರು. ಹೀಗಾಗಿ, ವಿಧಾನಸಭೆಯಲ್ಲಿ ಬಿಲ್ ಮಂಡನೆಯಾದ ರೀತಿ ಬಗ್ಗೆ ಆಕ್ಷೇಪ ಕೂಡ ವ್ಯಕ್ತವಾಯಿತು.
ಏಕಾಏಕಿ ಬಿಲ್ ತಂದರೆ ಚರ್ಚೆ ಸಾಧ್ಯವಿಲ್ಲ ಎಂದು ಗಲಾಟೆ ನಡೆಯಿತು. ಚರ್ಚೆಗೆ ಸಮಯ ಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಬೆಳಗ್ಗೆಯಿಂದ ಏಕೆ ಬಿಲ್ ಮಂಡಿಸಿಲ್ಲ. ನಿಮ್ಮ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಸಮಯ ವ್ಯರ್ಥ ಮಾಡಲಾಗಿದೆ. ಸಮಯ ವ್ಯರ್ಥ ಮಾಡಿದ್ದೀರಿ ಎಂದು ಪ್ರತಿಪಕ್ಷ ಆರೋಪ ಮಾಡಿತ್ತು. ಏಕಾಏಕಿ ಬಿಲ್ ಮಂಡನೆಗೆ ಅವಕಾಶ ನೀಡಲ್ಲವೆಂದು ಗಲಾಟೆ ಕೇಳಿಬಂತು. ನಂತರ ಸಭಾಪತಿ ಕೊಠಡಿಯಲ್ಲಿ ನಾಯಕರ ಸಂಧಾನ ಸಭೆ ನಡೆಸಲಾಯಿತು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸಂಧಾನ ಸಭೆಯಲ್ಲಿ ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಬಿಜೆಪಿಗೆ ಸದಸ್ಯ ಬಲದ ಕೊರತೆ : ಬಿಜೆಪಿಗೆ ಸದಸ್ಯ ಬಲದ ಕೊರತೆ ಇದೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರು ಬೆಳಗಾವಿಯಿಂದ ಹೊರಟು ಹೋಗಿದ್ದರು. ಹಾಗಾಗಿ, ಅವರಿಗೆ ವಾಪಸ್ ಸುವರ್ಣ ವಿಧಾನಸೌಧಕ್ಕೆ ಹಿಂದಿರುಗುವಂತೆ ಆಡಳಿತ ಪಕ್ಷದಿಂದ ತುರ್ತು ಸಂದೇಶ ರವಾನಿಸಲಾಗಿತ್ತು. ನೂರಾರು ಕಿಲೋಮೀಟರ್ ದೂರ ಹೋಗಿದ್ದ ಅವರಿಗಾಗಿ ಕಾದು ಕುಳಿತಿದ್ದರು. ಆದರೆ ಅವರು ವಾಪಸ್ ಬರಲಿಲ್ಲ. ಇತ್ತ ಸದಸ್ಯರ ಕೊರತೆ ಹಾಗೂ ವಿಪಕ್ಷಗಳ ಒತ್ತಡಕ್ಕೆ ಮಣಿದ ಸರಕಾರ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುವ ಜಾಣ ನಡೆಯನ್ನು ಅನುಸರಿಸಿದೆ.