ಮಂಗಳೂರು : ನೈತಿಕ ಪೊಲೀಸ್ಗಿರಿ ಮತ್ತೆ ಮುನ್ನೆಲೆಗೆ ಬಂದಿದ್ದು ಮುಸ್ಲಿಂ ಹುಡುಗನ್ನು ಸಹಪಾಠಿಗಳು ಥಳಿಸಿದ ಘಟನೆ ಜರುಗಿದೆ. ಮೊಹಮ್ಮದ್ ಸನೀಫ್ ಹಲ್ಲೆಗೊಳಗಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಸುಳ್ಯದಲ್ಲಿ ಹಿಂದೂ ಸಮುದಾಯದ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ಮುಸ್ಲಿಂ ಹುಡುಗನನ್ನು ಕಾಲೇಜು ಸಹಪಾಠಿಗಳು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹಿಂದೂ ಸಮುದಾಯದ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿ ಮೊಹಮ್ಮದ್ ಸಾನಿಫ್‌ಗೆ ಕಾಲೇಜು ಸಹಪಾಠಿಗಳು ಥಳಿಸಿದ್ದಾರೆ. ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಮತ್ತು ಇತರರ ವಿರುದ್ಧ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ರಿಷಿಕೇಶ್ ಸೋನಾವಾನೆ ತಿಳಿಸಿದ್ದಾರೆ.
ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರು. ಸುಳ್ಯದ ಕಾಲೇಜು ಗ್ರೌಂಡ್ ನಲ್ಲಿ ಮಂಗಳವಾರ ಘಟನೆ ನಡೆದಿತ್ತು. ಹುಡುಗನ ಬೆನ್ನ ಮೇಲೆ ಬಾಸುಂಡೆ ಬರುವ ಹಾಗೆ ಥಳಿತ ಮಾಡಲಾಗಿದೆ. ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ಥಳಿಸಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.ಹಲ್ಲೆಗೊಳಗಾದ ವಿದ್ಯಾರ್ಥಿ ಮೊಹಮ್ಮದ್ ಸನಿಫ್ ಪೊಲೀಸ್ ಠಾಣೆಗೆ ತೆರಳಿದ್ದು, ಹಿಂದೂ ಸಮುದಾಯಕ್ಕೆ ಸೇರಿದ ಹುಡುಗಿಯೊಂದಿಗೆ ಮಾತನಾಡಿದ್ದಕ್ಕಾಗಿ ಥಳಿಸಿದ ತನ್ನ ಸಹಪಾಠಿಗಳ ವಿರುದ್ಧ ಮಂಗಳವಾರ ದೂರು ದಾಖಲಿಸಿದ್ದಾರೆ.
Karnataka | A Muslim student Mohd Sanif beaten up by college mates for befriending a girl of Hindu community in Sullia, Dakshina Kannada dist. Case registered against accused Deekshith, Dhanush, Prajwal, Thanuj, Akshay, Mokshith, Goutham & others under IPC: Rishikesh Sonawane, SP
— ANI (@ANI) August 31, 2022
ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳು ಕಂಡುಬಂದಿವೆ. ಈ ವರ್ಷದ ಎಪ್ರಿಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿರಿಬಾಗಿಲು ಗ್ರಾಮದಲ್ಲಿ ಹಿಂದೂ ಮಹಿಳೆಯ ಜೊತೆ ಸವಾರಿ ಮಾಡಿದ್ದಕ್ಕೆ ಆಟೋ ರಿಕ್ಷಾ ಚಲಾಯಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಬಲಪಂಥೀಯ ಗುಂಪು ಹಲ್ಲೆ ನಡೆಸಿತ್ತು. ಈ ವರ್ಷದ ಜುಲೈನಲ್ಲಿ ಮತ್ತೊಂದು ಬಲಪಂಥೀಯ ಗುಂಪು ಮಂಗಳೂರಿನ ಪಬ್‌ಗೆ ನುಗ್ಗಿ ವಿದ್ಯಾರ್ಥಿನಿಯರು ತಡರಾತ್ರಿ ಪಾರ್ಟಿ ಮಾಡುವುದನ್ನು ಆಕ್ಷೇಪಿಸಿತ್ತು. ವಿದ್ಯಾರ್ಥಿಗಳು ಪಬ್ ತೊರೆಯುವಂತೆ ಒತ್ತಾಯಿಸಲಾಗಿತ್ತು. ಈಗ ಮತ್ತೆ ಇಂತಹ ದುರ್ಘಟನೆ ನಡೆದಿದೆ. ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಸರಕಾರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.