ಹಾಸನ: ಆಗಸ್ಟ್, 9ರ ರಾತ್ರಿ ಬೆಂಗಳೂರು- ಮಂಗಳೂರು ಸಂಪರ್ಕಿಸುವ ರೈಲ್ವೇ ಹಳಿ ಮೇಲೆ ಶಿರಾಡಿ ಘಾಟಿ ಪ್ರದೇಶದಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಇದರಿಂದಾಗಿ ರೈಲುಗಳ ಸಂಚಾರ ಅಸ್ತವ್ಯಸ್ತವಾಗಿದೆ. ರೈಲುಗಳು ರದ್ದಾಗಿದ್ದರಿಂದ ಏರ್ಫೋರ್ಸ್ ಪರೀಕ್ಷೆ ತಪ್ಪಿಸಿಕೊಂಡು ಅಭ್ಯರ್ಥಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ. ರೈಲ್ವೇ
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಹಾಸನ- ಮಂಗಳೂರು ರೈಲು ಮಾರ್ಗದ ಮೇಲೆ ಮರಗಳ ಸಮೇತವಾಗಿ ಭಾರಿ ಪ್ರಮಾಣದ ಮಣ್ಣು ಕುಸಿತವಾಗಿದೆ. ಕಿಲೋಮೀಟರ್ ಸಂಖ್ಯೆ 42/43ರ ಮಧ್ಯೆ ಭೂಕುಸಿತವಾಗಿದ್ದು, ರೈಲುಗಳ ಸಂಚಾರ ಸ್ಥಗಿತವಾಗಿದೆ. ಕಳೆದ ವಾರವಷ್ಟೇ ಈ ಮಾರ್ಗದಲ್ಲಿ ದೊಡ್ಡ ಪರಮಾಣದ ಗುಡ್ಡ ಕುಸಿತವಾಗಿತ್ತು. ಸುಮಾರು 430 ಮಂದಿ ಕಾರ್ಮಿಕರು ಹಗಲು ಇರುಳು ಕೆಲಸ ಮಾಡಿ ಮಾರ್ಗ ತೆರವು ಮಾಡಿದ್ದರು. ರೈಲ್ವೇ
ಮಣ್ಣು ಕುಸಿತದ ಪರಿಣಾಮ ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಸಕಲೇಶಪುರ, ಎಡಕುಮೇರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ಆರು ರೈಲುಗಳು ನಿಂತುಹೋಗಿವೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಟ ಅನುಭವಿಸಿದರು. ನಿನ್ನೆ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರಿಗೆ ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಲಾಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬ್ರೆಜಿಲ್ನಲ್ಲಿ ಆಕಾಶದಿಂದ ನೆಲಕ್ಕೆ ಅಪ್ಪಳಿಸಿದ ವಿಮಾನ: 62 ಮಂದಿ ಸಾವು
ಪರೀಕ್ಷೆ ತಪ್ಪಿದ್ದಕ್ಕೆ ಬೇಸರ
ರೈಲು ವ್ಯತ್ಯಯದಿಂದ ಅಭ್ಯರ್ಥಿಯೊಬ್ಬರಿಗೆ ಏರ್ಫೋರ್ಸ್ ಪರೀಕ್ಷೆಗೆ ಹಾಜರಾಗುವುದು ತಪ್ಪಿಹೋಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ವಿದ್ಯಾರ್ಥಿ ಬೇಸರ ತೋಡಿಕೊಂಡಿದ್ದಾರೆ. ಮಂಗಳೂರಿಗೆ ಏರ್ಫೋರ್ಸ್ ಪರೀಕ್ಷೆಗಾಗಿ ತೆರಳುತ್ತಿದ್ದ ರೋಹಿತ್ ಸಿಂಗ್ ರಾವತ್ ದಾರಿ ಮಧ್ಯೆ ಸಿಲುಕಿಕೊಂಡಿದ್ದಾರೆ.
ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ಮಂಗಳೂರಿಗೆ ಟ್ರೈನ್ನಲ್ಲಿ ರಾವತ್ ಪ್ರಯಾಣಿಸುತ್ತಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಮಂಗಳೂರಿನ ಅಬ್ಬಕ್ಕ ಸರ್ಕಲ್ ಬಳಿಯ ಖಾಸಗಿ ಕಾಲೇಜಿನಲ್ಲಿ ಪರೀಕ್ಷೆ ನಡೆದಿದೆ. ಇದರಲ್ಲಿ ಭಾಗವಹಿಸಲು ರಾವತ್ಗೆ ಸಾಧ್ಯವಾಗಿಲ್ಲ. ʼಬೆಂಗಳೂರು- ಮಂಗಳೂರು ನಡುವಿನ ರೈಲು 4 ಗಂಟೆ ಕಾಲ ತಡವಾಗಿ ಚಲಿಸುತ್ತಿದೆ. ಈ ಕಾರಣದಿಂದಾಗಿ ನನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ನನಗೆ ಸಾಧ್ಯವಾಗುವುದಿಲ್ಲ. ಇದರ ಹೊಣೆ ಹೊರುವವರು ಯಾರು?ʼ ಎಂದು ಪೋಸ್ಟ್ ಹಾಕಿ ಅಭ್ಯರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ನೆಲಕ್ಕೆ ಅಪ್ಪಳಿಸಿದ ವಿಮಾನ – 62 ಮಂದಿ ಸಾವು |Plane crash |BrazilianJanashakthi Media