ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಗನ ಸಾವಿನ ದುಃಖದಲ್ಲಿದ್ದ ತಾಯಿಯ ಕಪಾಳಕ್ಕೆ ಹೊಡೆದ ಪೊಲೀಸ್!

ಮಧ್ಯಪ್ರದೇಶ: ತನ್ನ ಮಗುವಿನ ಸಾವಿನ ದುಃಖದಲ್ಲಿದ್ದ ತಾಯಿಯ ಕಪಾಳಕ್ಕೆ ಹೆಡ್ ಕಾನ್‌ಸ್ಟೇಬಲ್‌ ಒಬ್ಬ ಹೊಡೆದಿರುವ ಘಟನೆ ರಾಜ್ಯದ ಭೋಪಾಲ್‌ನಲ್ಲಿ ನಡೆದಿದೆ. ಹಾವು ಕಚ್ಚಿ ಸಾವಿಗೀಡಾದ ತನ್ನ ಒಂಬತ್ತು ವರ್ಷದ ಮಗನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಬಿಡದೆ ಭಾವನಾತ್ಮಕವಾಗಿ ವರ್ತಿಸಿದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿ ಈ ಕೃತ್ಯ ಎಸಗಿದ್ದಾಗಿ ವರದಿಯಾಗಿದೆ.

ಹೆಡ್ ಕಾನ್‌ಸ್ಟೆಬಲ್ ಅನ್ನು ಸಂತೋಷ್ ಸಿಂಗ್ ಪರಿಹಾರ್ ಎಂದು ಗುರುತಿಸಲಾಗಿದೆ. ಘಟನೆಯು ಭಾರಿ ಆಕ್ರೋಶ ಹುಟ್ಟುಹಾಕಿದ್ದು, ಮಧ್ಯಪ್ರದೇಶದಲ್ಲಿ ಕಾನೂನು ಜಾರಿ ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಇತ್ತೀಚೆಗಷ್ಟೆ ಬಿಜೆಪಿ ನಾಯಕನೊಬ್ಬ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ಸುದ್ದಿಯಾಗಿತ್ತು. ಅಲ್ಲದೆ, ಕ್ರಿಶ್ಚಿಯನ್ ಆಡಳಿತದ ಶಾಲೆಯ ಮೇಲೆ ದಾಳಿ ಮತ್ತು ಅದರ ಪ್ರಾಂಶುಪಾಲರ ಮೇಲೆ ಹಲ್ಲೆ ಕೂಡಾ ಇತ್ತೀಚೆಗೆ ನಡೆಸಲಾಗಿತ್ತು. ಇದೀಗ ದುಃಖದಲ್ಲಿದ್ದ ತಾಯಿಯ ಕಪಾಳಕ್ಕೆ ಹೊಡೆದಿರುವುದು ಸುದ್ದಿಯಾಗಿದೆ.

ಇದನ್ನೂ ಓದಿ: ತೆಲಂಗಾಣ: ಶಿವಾಜಿ ಪ್ರತಿಮೆ ಬಳಿ ಮೂತ್ರ ವಿಸರ್ಜನೆ ಆರೋಪ – ಹಲ್ಲೆ, ಬೆತ್ತಲೆ ಮೆರವಣಿಗೆ!

ಶಹದೋಲ್ ಜಿಲ್ಲೆಯ ಜೈತ್‌ಪುರ ಗ್ರಾಮದಲ್ಲಿ ಹಾವು ಕಚ್ಚಿದ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನ ಜೀವ ಉಳಿಸಲು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದರು. ಇದರ ನಂತರ ಆಸ್ಪತ್ರೆಯ ಹೊರಗೆ ದುಃಖದಿಂದ ಮುಳುಗಿದ್ದ ತಾಯಿ ತನ್ನ ಮಗನ ನಿರ್ಜೀವ ದೇಹವನ್ನು ಹಿಡಿದುಕೊಂಡು ಜೋರಾಗಿ ಅಳುತ್ತಿದ್ದರು.

ಇಂತಹ ಭಾವನಾತ್ಮಕ ಕ್ಷಣದಲ್ಲಿ ಹೆಡ್‌ ಕಾನ್‌ಸ್ಟೆಬಲ್ ಸಂತೋಷ್ ಸಿಂಗ್ ತಾಯಿಯ ಬಳಿಗೆ ಬಂದು ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಕೋರಿದ್ದರು. ಆದರೆ ದುಃಖಿತ ತಾಯಿ ತನ್ನ ಮಗನ ಶವವನ್ನು ನೀಡದೆ, ವಿರೋಧಿಸಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸಂತೋಷ್ ಸಿಂಗ್, ಜನರ ಮುಂದೆಯೆ ಬಾಲಕನ ತಾಯಿಯ ಕಪಾಳಕ್ಕೆ ಹೊಡೆದಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಘಟನೆಯ ಹಿನ್ನಲೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಸಿಂಗ್ ಪರಿಹಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಶಾಹದೋಲ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ವೈಶ್ಯ ದೃಢಪಡಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಕರಣದ ಬಗ್ಗೆ ಆಂತರಿಕ ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧಿ!​

Donate Janashakthi Media

Leave a Reply

Your email address will not be published. Required fields are marked *