ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ । ಯುವಕನಿಗೆ ಹಲ್ಲೆ ನಡೆಸಿ ಕಾಲು ನೆಕ್ಕಿಸಿದ ದುಷ್ಕರ್ಮಿಗಳು

ಮಧ್ಯಪ್ರದೇಶ: ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ, ಕ್ರಿಶ್ಚಿಯನ್ ಶಾಲೆ ಮೇಲೆ ದಾಳಿ, ಮಗ ಸಾವಿಗೀಡಾದ ದುಃಖದಲ್ಲಿದ್ದ ತಾಯಿಗೆ ಪೊಲೀಸ್ ಅಧಿಕಾರಿಯೊಬ್ಬ ಕಪಾಳಕ್ಕೆ ಹೊಡೆದ ಘಟನೆಗಳ ನಂತರ ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ವರದಿಯಾಗಿದೆ. ಗ್ವಾಲಿಯರ್ ಜಿಲ್ಲೆಯಲ್ಲಿ ಮುಸ್ಲಿಂ ಯುವಕನ ಮೇಲೆ ಚಲಿಸುತ್ತಿರುವ ಕಾರಿನೊಳಗೆ ನಿಂದನೆ ಮತ್ತು ಹಲ್ಲೆ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ಹುಟ್ಟುಹಾಕಿದೆ.

ಮುಸ್ಲಿಂ ಯುವಕನಿಗೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊವನ್ನು ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮುಹಮ್ಮದ್ ಜುಬೈರ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಮೊಹ್ಸಿನ್ ಎಂಬ ವ್ಯಕ್ತಿಯನ್ನು ಅಶ್ಲೀಲವಾಗಿ ನಿಂದಿಸುತ್ತಾ ಚಪ್ಪಲಿಯಿಂದ ಥಳಿಸುತ್ತಿರುವುದು ದಾಖಲಾಗಿದೆ. ಅಷ್ಟೆ ಅಲ್ಲದೆ ಯುವಕನಿಗೆ ತೀವ್ರವಾಗಿ ಹಲ್ಲೆ ನಡೆಸುವ ದುಷ್ಕರ್ಮಿಗಳು ತಮ್ಮ ಪಾದವನ್ನು ಬಲವಂತವಾಗಿ ನೆಕ್ಕಿಸುವುದು ಕೂಡಾ ದಾಖಲಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಗನ ಸಾವಿನ ದುಃಖದಲ್ಲಿದ್ದ ತಾಯಿಯ ಕಪಾಳಕ್ಕೆ ಹೊಡೆದ ಪೊಲೀಸ್!

ಜುಬೈರ್ ತಮ್ಮ ಟ್ವೀಟ್‌ನಲ್ಲಿ, “ವಿಡಿಯೋ ಮಧ್ಯಪ್ರದೇಶದ ಗ್ವಾಲಿಯರ್‌ನದ್ದಾಗಿದೆ. ಗೋಲು ಗುರ್ಜರ್ ಮತ್ತು ಅವನ ಸ್ನೇಹಿತರು ಮೊಹ್ಸಿನ್‌ ಅವರನ್ನು ಚಪ್ಪಲಿಯಿಂದ ಥಳಿಸುತ್ತಾ ನಿಂದಿಸುತ್ತಿದ್ದಾರೆ. ಜೊತೆಗೆ ಪಾದಗಳನ್ನು ನೆಕ್ಕುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಬರೆದಿದ್ದಾರೆ.

ವರದಿಗಳ ಪ್ರಕಾರ, ದುಷ್ಕರ್ಮಿಗಳು ಹಳೆಯ ವಿವಾದವನ್ನು ಬಗೆಹರಿಸುವ ನೆಪದಲ್ಲಿ ಯುವಕರನ್ನು ಗ್ವಾಲಿಯರ್ ಕಲೆಕ್ಟರ್ ಕಚೇರಿ ಬಳಿ ಭೇಟಿಯಾಗುವಂತೆ ಆಮಿಷ ಒಡ್ಡಿದ್ದರು. ಯುವಕ ಆಗಮಿಸಿದ ನಂತರ ದುಷ್ಕರ್ಮಿಗಳು ಅವರನ್ನು ಬಲವಂತದಿಂದ ವಾಹನ ಪ್ರವೇಶಿಸುವಂತೆ ಮಾಡಿ, ದಾಬ್ರಾ ಪ್ರದೇಶದ ಕರೆದೊಯ್ದಿದ್ದಾರೆ.

ಚಲಿಸುತ್ತಿದ್ದ ಕಾರಿನೊಳಗೆ ದಾಳಿಕೋರರು ಅಸಹಾಯಕ ಯುವಕನನ್ನು ಅಶ್ಲೀಲ ಪದಗಳನ್ನು ಬಳಸಿದ್ದ ನಿಂದಿಸಿದ್ದಲ್ಲದೆ, ಮನಬಂದಂತೆ ಥಳಿಸಿದ್ದಾರೆ. ವೀಡಿಯೊ ತುಣುಕಿನಲ್ಲಿ ದುಷ್ಕರ್ಮಿಗಳು ಸಂತ್ರಸ್ತ ಯುವಕನಿಂದ ಅವರ ಕಾಲಿನ ಅಡಿಭಾಗವನ್ನು ನೆಕ್ಕುವಂತೆ ಒತ್ತಾಯಿಸುತ್ತಿರುವುದು ಕಾಣಿಸುತ್ತದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ 3000 ಕಿರಿಯ ವೈದ್ಯರು ರಾಜೀನಾಮೆ

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತ್ವರಿತ ಕ್ರಮ ಮತ್ತು ನ್ಯಾಯದ ಭರವಸೆ ನೀಡಿದ್ದಾರೆ. ದೈಹಿಕ ಹಲ್ಲೆ ಮತ್ತು ನಿಂದಸಿದ ವಿಡಿಯೊದಲ್ಲಿ ಕಂಡುಬರುವ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಘಟನೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಮಿಶ್ರಾ, “ಚಲಿಸುವ ವಾಹನದಲ್ಲಿ ವ್ಯಕ್ತಿಯೊಬ್ಬನನ್ನು ನಿಂದಿಸಿದ ಮತ್ತು ಥಳಿಸಿದ ಇಬ್ಬರನ್ನು ಬಂಧಿಸಲಾಗಿದೆ. ಅವರನ್ನು ಕಾನೂನು ಪ್ರಕಾರ ಶಿಕ್ಷಿಸಲಾಗುವುದು” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *