ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲು: ನಾಪತ್ತೆ?

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ನೇರಪ್ರಸಾರದ ವೇಳೆ ಅವಹೇಳನಕಾರಿ  ಪದ ಬಳಸಿ ಜಾತಿ ನಿಂದನೆ ಮಾಡಿದ ಆರೋಪದಡಿ ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.

ಈ ಹಿಂದೆ ಅವರ ವಿರುದ್ಧ ನಗರದ  ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಅವರು ಬೆಂಗಳೂರಿನ ಹಲಸೂರು ಗೇಟ್‌ ಪೋಲಿಸ್ ಠಾಣೆಯಲ್ಲಿ ಉಪೇಂದ್ರ‌ ಅವರ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 505 (1)(ಸಿ),153ಎ, 295 ಎ ಹಾಗೂ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 3(1)(ಆರ್)(ಎಸ್) ಅಡಿ ಎಫ್ಐಆರ್ ದಾಖಲಿಸಿದ್ದಾರೆ.

 

 

ಇದನ್ನೂ ಓದಿ:ಪರಿಶಿಷ್ಟ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ : ನಟ ಉಪೇಂದ್ರ ವಿರುದ್ಧ ಪ್ರಕರಣ ದಾಖಲು

“ಉಪೇಂದ್ರ ಅವರು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುವಾಗ ಕೆಟ್ಟ ಜನರು ಎಂಬುವುದಕ್ಕೆ ಉದಾಹರಣೆಯಾಗಿ’ ಊರು ಅಂದ್ಮೇಲೆ ಹೊಲಗೇರಿ ಇದ್ದೇ ಇರುತ್ತೆ’ ಎಂದು ಹೇಳಿದ್ದರು. ಉಪೇಂದ್ರ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಸಾಮಾನ್ಯವಾಗಿ ದಲಿತರು ವಾಸಿಸುವ ಪ್ರದೇಶಗಳನ್ನು ಹೊಲಗೇರಿ ಎಂದಿದ್ದಾರೆ. ದಲಿತರು ವಾಸಿಸುವ ಪ್ರದೇಶಗಳನ್ನು ಕೆಟ್ಟ ಪ್ರದೇಶಗಳು ಎಂದು ಬಿಂಬಿಸಿದ್ದಾರೆ. ಜನರು ಕೆಟ್ಟದ್ದರ ವಿರುದ್ಧ ಇರಬೇಕು ಎಂದರೆ ಹೊಲಗೇರಿ ವಿರುದ್ಧ ಇರಬೇಕು ಎಂಬ ಅರ್ಥದಲ್ಲಿ ಉಪೇಂದ್ರ ಮಾತನಾಡಿದ್ದಾರೆ. ಈ ಮೂಲಕ ಸಮುದಾಯಗಳನ್ನು ಹೊಲೆಯರ ವಿರುದ್ಧ ಎತ್ತಿ ಕಟ್ಟಿದ್ದಾರೆ” ಎಂದು ಭೈರಪ್ಪ ಹರೀಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಿಂದ ಎಫ್ಐಆರ್ ದಾಖಲಾಗಿತ್ತು

ಉಪೇಂದ್ರ ಹೇಳಿಕೆ ವಿರುದ್ಧ ಆಗಸ್ಟ್‌-13 ಭಾನುವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಕೆ.ಎನ್.‌ ಅವರು ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಯಾಕೆ ಇಷ್ಟೊಂದು ಧ್ವೇಷ

ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಉಪೇಂದ್ರ ಕ್ಷಮೆ ಕೇಳಿದ್ದರು. ಆದರೂ, ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೂರು ಕೂಡ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪೇಂದ್ರ, ಕ್ಷಮೆ ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ? ಎಂದು ಪೋಸ್ಟ್‌ ಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *