ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಶ್ರೀನಗರದ ಬೋಹ್ರಿ ಕಡಲ್ ಪ್ರದೇಶದ ಅಂಗಡಿಯೊಂದರ ಹೊರಭಾಗದಲ್ಲಿ ವ್ಯಕ್ತಿಯೊಬ್ಬನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಆ ವ್ಯಕ್ತಿ ಮೃತಪಟ್ಟಿದ್ದಾನೆ.
ಮೃತ ದುರ್ದೈವಿಯನ್ನು ಮೊಹಮ್ಮದ್ ಇಬ್ರಾಹಿಂ ಖಾನ್ ಎಂದು ಗುರುತಿಸಲಾಗಿದ್ದು, ಇವರು ಬಂಡಿಪೋರಾದ ನಿವಾಸಿಯಾಗಿದ್ದಾರೆ. ಗುಂಡಿನ ದಾಳಿ ನಂತರ ಮೊಹಮ್ಮದ್ ಇಬ್ರಾಹಿಂ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೊಹಮ್ಮದ್ ಇಬ್ರಾಹಿಂ ಖಾನ್ ಅವರು ಫಾರ್ಮಸಿಯೊಂದರ ಸೇಲ್ಸ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 24 ಗಂಟೆಗಳಲ್ಲಿ ಶ್ರೀನಗರದಲ್ಲಿ ಉಗ್ರರು ನಡೆಸಿರುವ ಎರಡನೇ ದಾಳಿ ಇದಾಗಿದೆ. ಈ ಮುನ್ನ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಟಮಾಲೂ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಒಳಗಾಗಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡು ಸಾವನ್ನಪ್ಪಿದ್ದರು. ಮೃತರನ್ನು ಎಸ್‍ಡಿ ಕಾಲೋನಿ ಪ್ರದೇಶದ ಕಾನ್‍ಸ್ಟೆಬಲ್ ತೌಸೀಫ್ ಎಂದು ಗುರುತಿಸಲಾಗಿತ್ತು. ಘಟನೆ ಬಳಿಕ ಆ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಕಳೆದ ತಿಂಗಳು ಕಾಶ್ಮೀರದಾದ್ಯಂತ ಅಲ್ಪಸಂಖ್ಯಾತರು ಮತ್ತು ವಲಸಿಗರು ಸೇರಿದಂತೆ 11 ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು.
ಕಾಶ್ಮೀರದಲ್ಲಿ ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರ ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆಯೇ ಹೊರತು ಇಲ್ಲಿನ ಸಮಸ್ಯೆಯನ್ನು ನಿವಾರಿಸುತ್ತಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.